ಎಲೆಪೇಟೆಯಲ್ಲಿ ತಲೆ ಎತ್ತಲಿದೆ ಸಮುಚ್ಚಯ

7

ಎಲೆಪೇಟೆಯಲ್ಲಿ ತಲೆ ಎತ್ತಲಿದೆ ಸಮುಚ್ಚಯ

Published:
Updated:
ಎಲೆಪೇಟೆಯಲ್ಲಿ ತಲೆ ಎತ್ತಲಿದೆ ಸಮುಚ್ಚಯ

ಕೋಲಾರ: ನಗರವನ್ನು ಬೆಂಬಿಡದೆ ಕಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆ ಮತ್ತು ವಾಹನ ನಿಲುಗಡೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ನಗರಸಭೆಯು ಬೃಹತ್‌ ವಾಣಿಜ್ಯ ಸಮುಚ್ಚಯ ನಿರ್ಮಿಸಲು ನಿರ್ಧರಿಸಿದೆ.

ನಗರದ ಪ್ರಮುಖ ವಾಣಿಜ್ಯ ಸ್ಥಳಗಳ ಪಾದಚಾರಿ ಮಾರ್ಗದಲ್ಲಿ ಸಣ್ಣಪುಟ್ಟ ಅಂಗಡಿಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ನಗರದಲ್ಲಿ ಸುಮಾರು 1,200 ಬೀದಿ ಬದಿ ವ್ಯಾಪಾರಿಗಳಿದ್ದು, ಇವರು ಸಾರ್ವಜನಿಕರ ಓಡಾಟಕ್ಕಾಗಿ ಮೀಸಲಾದ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡಿದ್ದಾರೆ.

ಟಿ.ಚನ್ನಯ್ಯ ರಂಗಮಂದಿರ ಮುಂಭಾಗದ ರಸ್ತೆ, ಎಂ.ಜಿ.ರಸ್ತೆ, ಎಂ.ಬಿ.ರಸ್ತೆ, ಗೌರಿಪೇಟೆ, ಎಲೆಪೇಟೆ ಸೇರಿದಂತೆ ಬಹುಪಾಲು ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಬೀದಿ ಬದಿ ವ್ಯಾಪಾರಿಗಳದೇ ಕಾರುಬಾರು. ಈ ಹಿಂದೆ ಐಎಎಸ್‌ ಅಧಿಕಾರಿ ಡಿ.ಕೆ.ರವಿ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಹಳೆ ಬಸ್‌ ನಿಲ್ದಾಣ, ಎಂ.ಬಿ. ರಸ್ತೆ, ಹಳೆ ಅಂಚೆ ಕಚೇರಿ ರಸ್ತೆ, ಎಂ.ಜಿ. ರಸ್ತೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸುತ್ತಮುತ್ತ ಪಾದಚಾರಿ ಮಾರ್ಗದಲ್ಲಿನ ಅಂಗಡಿ ಮುಂಗಟ್ಟುತೆರವುಗೊಳಿಸಲಾಗಿತ್ತು.

ಬಳಿಕ ಆ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಅನುಕೂಲವಾಗುವಂತೆ ಬೇರೆಡೆ ಸ್ಥಳಾವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಆ ಭರವಸೆ ಈಡೇರಿಲ್ಲ. ಹೀಗಾಗಿ ವ್ಯಾಪಾರಿಗಳು ಅನ್ಯ ಮಾರ್ಗವಿಲ್ಲದೆ ಪಾದಚಾರಿ ಮಾರ್ಗದಲ್ಲಿ ತಾತ್ಕಾಲಿಕ ಮಳಿಗೆಗಳನ್ನು ಇಟ್ಟುಕೊಂಡು ಮತ್ತು ಕೈಗಾಡಿಗಳಲ್ಲಿ ವಹಿವಾಟು ನಡೆಸುತ್ತಿದ್ದಾರೆ.

ಇದರಿಂದ ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಅಲ್ಲದೇ, ಆಗಾಗ್ಗೆ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಇದು ವಾಹನ ಸವಾರರು ಮತ್ತು ಸಾರ್ವಜನಿಕರ ನಡುವೆ ಸಂಘರ್ಷಕ್ಕೆ ದಾರಿಮಾಡಿ ಕೊಡುತ್ತಿದೆ.

₹ 2.30 ಕೋಟಿ: ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ನಗರಸಭೆಯು ನಗರದ ಎಲೆಪೇಟೆಯ ಮುನ್ಸಿಪಲ್‌ ಆಸ್ಪತ್ರೆ ಹಿಂಭಾಗದ ಜಾಗದಲ್ಲಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿ (ಐಡಿಎಸ್ ಎಂಟಿ) ವಾಣಿಜ್ಯ ಸಮುಚ್ಚಯ ನಿರ್ಮಿಸಲು ಯೋಜನೆ ರೂಪಿಸಿದೆ. ನಗರಸಭೆಗೆ ಸೇರಿದ ಈ ಜಾಗವು 576 ಚದರ ಮೀಟರ್‌ ವಿಸ್ತಾರವಾಗಿದ್ದು, ಸದ್ಯ ನಿರುಪಯುಕ್ತವಾಗಿದೆ.

ಈ ಜಾಗದಲ್ಲಿ ಸುಮಾರು ₹ 2.30 ಕೋಟಿ ಅಂದಾಜು ವೆಚ್ಚದಲ್ಲಿ ಎರಡು ಅಂತಸ್ತಿನ ವಾಣಿಜ್ಯ ಸಮುಚ್ಚಯ ನಿರ್ಮಿಸಲು ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ವಾಣಿಜ್ಯ ಸಮುಚ್ಚಯದ ನೆಲ ಅಂತಸ್ತಿನಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಮೊದಲ ಅಂತಸ್ತಿನಲ್ಲಿ 19 ಮಳಿಗೆಗಳು ಹಾಗೂ ಎರಡನೇ ಅಂತಸ್ತಿನಲ್ಲಿ 3 ವಿಶಾಲ ಮಳಿಗೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ವಾಣಿಜ್ಯ ಪ್ರದೇಶ: ಪ್ರಮುಖ ವಾಣಿಜ್ಯ ಪ್ರದೇಶವಾಗಿರುವ ಎಲೆಪೇಟೆ ಸುತ್ತಮುತ್ತ ತರಕಾರಿ, ಹಣ್ಣು, ಹೂವು, ದಿನಸಿ, ತೆಂಗಿನಕಾಯಿ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ವಹಿವಾಟು ನಡೆಸುತ್ತಿದ್ದಾರೆ. ಜತೆಗೆ ಪಾದರಕ್ಷೆ, ಔಷಧ, ಕೈಗಡಿಯಾರ, ಪುಸ್ತಕ, ಹೋಟೆಲ್‌, ಬಟ್ಟೆ ವ್ಯಾಪಾರಿಗಳು ತಾತ್ಕಾಲಿಕ ಮಳಿಗೆಗಳನ್ನು ಇಟ್ಟುಕೊಂಡಿದ್ದಾರೆ. ಸಮುಚ್ಚಯ ನಿರ್ಮಾಣದ ನಂತರ ಬಹಿರಂಗ ಹರಾಜು ಮೂಲಕ ಮಳಿಗೆಗಳನ್ನು ಬಾಡಿಗೆಗೆ ಕೊಡಲು ನಗರಸಭೆ ತೀರ್ಮಾನಿಸಿದೆ.

ಅಂಕ ಅಂಶ

₹2.30 ವೆಚ್ಚದ ವಾಣಿಜ್ಯ  ಸಮುಚ್ಚಯ

576 ಸಮುಚ್ಚಯ ನಿರ್ಮಾಣ ಜಾಗ

22 ಒಟ್ಟು ಮಳಿಗೆಗಳ ಸಂಖ್ಯೆ

* * 

ಬೀದಿ ಬದಿಯ ಸಣ್ಣಪುಟ್ಟ ವ್ಯಾಪಾರಿಗಳ ಅನುಕೂಲಕ್ಕಾಗಿ ವಾಣಿಜ್ಯ ಸಮುಚ್ಚಯ ನಿರ್ಮಿಸಲಾಗುತ್ತಿದೆ. ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗುವುದು

ಮಹಾಲಕ್ಷ್ಮಿ

ನಗರಸಭೆ ಅಧ್ಯಕ್ಷೆ

* * 

ಪಾದಚಾರಿ ಮಾರ್ಗದಲ್ಲಿನ ಅಂಗಡಿ ತೆರವುಗೊಳಿಸಿದರೆ ವ್ಯಾಪಾರಿಗಳಿಗೆ ನಷ್ಟವಾಗುತ್ತದೆ. ವಾಣಿಜ್ಯ ಸಮುಚ್ಚಯ ನಿರ್ಮಿಸುವುದು ಸ್ವಾಗತಾರ್ಹ

ಗಣೇಶ್‌

ಹೋಟೆಲ್‌ ಮಾಲೀಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry