ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಸಮುದ್ರ: ರಸ್ತೆ ತುಂಬ ಕಲ್ಲಿನ ರಾಶಿ

Last Updated 12 ಜೂನ್ 2017, 5:49 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ರಾಮಸಮುದ್ರ ಒಂದೆಡೆ ದೂಳಿನಲ್ಲಿ ಮುಳುಗಿದ್ದರೆ, ಮತ್ತೊಂದೆಡೆ ಬೃಹತ್‌ ಕಲ್ಲುಗಳ ರಾಶಿ ನಿರ್ಮಾಣವಾಗುತ್ತಿದೆ. ಕಿತ್ತು ಹೋಗಿರುವ ರಸ್ತೆ, ನೀರು ಹರಿಯಲು ಜಾಗವಿಲ್ಲದೆ ಸೊಳ್ಳೆಗಳ ಆವಾಸ ತಾಣವಾಗುತ್ತಿ ರುವ ಗುಂಡಿಗಳು, ದಿನವಿಡೀ ಕಲ್ಲು ಒಡೆಯುವ ಸದ್ದು... ಯುಜಿಡಿ ಕಾಮಗಾರಿಯಿಂದಾಗಿ ಇಲ್ಲಿನ ಜನರು ಪ್ರತಿ ದಿನ ಯಾತನೆ ಅನುಭವಿಸುವಂತಾಗಿದೆ.

ಇಲ್ಲಿನ 27ನೇ ವಾರ್ಡ್‌ನ ಕಾಲೊನಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿಯೇ ಒಳಚರಂಡಿ ಕಾಮಗಾರಿ ನಡೆಯು ತ್ತಿದೆ. ಫೆಬ್ರುವರಿಯಿಂದ ಇಲ್ಲಿಯವರೆಗೆ ಅರ್ಧ ಕಿ.ಮೀ. ಮಾತ್ರ ಕೆಲಸ ನಡೆದಿದೆ. ಇದಕ್ಕೆ ಕಾರಣ ಮೇಲ್ಭಾಗದಲ್ಲಿಯೇ ಬೃಹತ್ ಬಂಡೆ ಇರುವುದು. ಸಂದಿಗೊಂದಿಗಳಲ್ಲಿಯೂ ಮನೆಗಳು ಇರುವುದರಿಂದ ಇಲ್ಲಿ ರಸ್ತೆಯ ಭಾಗದಲ್ಲಿಯೇ ಯುಜಿಡಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.

ಆದರೆ, ಈ ರಸ್ತೆಯುದ್ದಕ್ಕೂ ಬಂಡೆ ಸಾಲು ಎದುರಾಗಿರುವುದು ದೊಡ್ಡ ತಲೆನೋವಾಗಿ ಪರಿಣಮಿ ಸಿದೆ. ಅದನ್ನು ಕೊರೆದು ಕಲ್ಲುಗಳನ್ನು ಹೊರತೆಗೆಯಲು ಸಾಕಷ್ಟು ಸಮಯ ತಗುಲುತ್ತಿದೆ. ‘ಕಾಮಗಾರಿಯಿಂದ ದಿನವೂ ದೂಳು ಸೇವಿಸುವಂತಾ ಗಿದೆ. ಒಗೆದು ಹಾಕಿದ ಬಟ್ಟೆಗಳನ್ನು ಮತ್ತೆ ಒಗೆಯುವಂತಾಗುತ್ತಿದೆ. ಮನೆಯ ಒಳಗೂ ದೂಳು ತುಂಬಿಕೊಳ್ಳುತ್ತದೆ. ಬಂಡೆ ಒಡೆಯುವ ರಭಸಕ್ಕೆ ಕೆಲವು ಮನೆಗಳ ಮಣ್ಣಿನ ಗೋಡೆ ಬಿರುಕುಬಿಟ್ಟಿವೆ’ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಕೃತಕ ಕಲ್ಲಿನ ಬೆಟ್ಟ: ‘ಕಾಮಗಾರಿಗಾಗಿ ಒಡೆದು ಹೊರತೆಗೆದ ದೊಡ್ಡ ಕಲ್ಲುಗಳನ್ನು ರಸ್ತೆ ಪಕ್ಕದಲ್ಲಿಯೇ ಇರಿಸಲಾಗುತ್ತಿದೆ. ಇನ್ನು ಕೆಲವು ಕಲ್ಲುಗಳನ್ನು ಜೋಡಿ ರಸ್ತೆಯ ಬಳಿ ಪೇರಿಸಿಡಲಾಗಿದೆ. ಹೀಗಾಗಿ ಇಲ್ಲಿ ಕೃತಕ ಕಲ್ಲುಬೆಟ್ಟವೇ ನಿರ್ಮಾಣ ವಾಗುತ್ತಿದೆ. ಇದರಿಂದ ಜನರ ಓಡಾಟಕ್ಕೆ ತೊಂದರೆಯಾಗಿದೆ. ಕೆಲವು ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದ ಘಟನೆಗಳೂ ನಡೆದಿವೆ. ಹೀಗಾಗಿ ವಾಹನದಲ್ಲಿ ಬರಬೇಕೆಂದರೆ ಸುತ್ತಿ ಬಳಸಿ ಬರುವಂತಾಗಿದೆ. ಕಲ್ಲುಗಳನ್ನು ನಾವೇ ತೆರವುಗೊಳಿಸಲು ಸಾಧ್ಯವಾಗುವುದೂ ಇಲ್ಲ’ ಎಂದು ನಿವಾಸಿಗಳು ಹೇಳುತ್ತಾರೆ.

‘ನನ್ನ ಮನೆ ನಿರ್ಮಾಣದ ಕೆಲಸ ನಡೆಯುತ್ತಿದೆ. ಇಟ್ಟಿಗೆ, ಮರಳು ಮತ್ತಿತರ ಸಾಮಗ್ರಿಗಳನ್ನು ತರಿಸುವುದೇ ಕಷ್ಟವಾಗಿದೆ. ಕಾಲೊನಿಗೆ ಬರುವ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಅಸಾಧ್ಯ. ಇನ್ನೊಂದು ಭಾಗದಿಂದ ದೊಡ್ಡ ವಾಹನಗಳು ಒಳಗೆ ಬರುವಷ್ಟು ರಸ್ತೆ ಅಗಲವಾಗಿಲ್ಲ’ ಎನ್ನುತ್ತಾರೆ ಆಟೊ ಚಾಲಕ ಪಿ.ಮಹದೇವಸ್ವಾಮಿ.

‘ತೊಂದರೆಯಾಗುತ್ತಿದೆ ಎಂದು ಕಾಮಗಾರಿಯನ್ನು ನಾವು ವಿರೋಧಿಸುತ್ತಿಲ್ಲ. ಚರಂಡಿ ವ್ಯವಸ್ಥೆ ಸರಿಯಾದರೆ ನಮಗೆ ಅನುಕೂಲವಾಗುತ್ತದೆ. ಅದನ್ನು ಸಮರ್ಪಕವಾಗಿ ನಿರ್ವಹಿಸು ತ್ತಿಲ್ಲ ಎನ್ನುವುದಷ್ಟೆ ನಮ್ಮ ಆಕ್ಷೇಪ. ಯುಜಿಡಿಗಾಗಿ ತೆಗೆದ ಗುಂಡಿಗಳನ್ನು ಹಂತಹಂತವಾಗಿ ಕೆಲಸ ಮುಗಿಯುತ್ತಿದ್ದಂತೆಯೇ ಮುಚ್ಚುತ್ತಾ ಬರಬೇಕು.

ಆದರೆ. ತಿಂಗಳ ಹಿಂದೆಯೇ ಕೆಲಸ ಮುಗಿದಿದ್ದರೂ ಹಲವೆಡೆ ಗುಂಡಿಗಳು ಹಾಗೆಯೇ ಇವೆ. ಶಾಲೆಗೆ ಇದೇ ಮಾರ್ಗದಲ್ಲಿ ಮಕ್ಕಳು ನಿತ್ಯ ಓಡಾಡುತ್ತಾರೆ. ಅಪಾಯ ಉಂಟಾದರೆ ಯಾರು ಹೊಣೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಮಸಮುದ್ರದ ಅಂಬೇಡ್ಕರ್‌ ಪ್ರತಿಮೆಯ ಮುಂಭಾಗ ಜೋಡಿ ರಸ್ತೆಯನ್ನು ಮೋರಿ ನಿರ್ಮಾಣಕ್ಕೆಂದು ಅಗೆದು ಇತ್ತೀಚೆಗಷ್ಟೆ ಮುಚ್ಚಲಾಗಿದೆ. ರಸ್ತೆಯ ಡಾಂಬರು ಸಂಪೂರ್ಣ ಕಿತ್ತುಹೋಗಿರುವುದರಿಂದ ವಾಹನ ಸವಾರರು ಪರದಾಡಬೇಕಿದೆ.

ಹರಾಜಿನಲ್ಲಿ ಕಲ್ಲುಗಳ ಮಾರಾಟ
ಚಾಮರಾಜನಗರ: ಯುಜಿಡಿ ಕಾಮಗಾರಿ ವೇಳೆ ಹೊರತೆಗೆದ ಕಲ್ಲುಗಳನ್ನು ಹರಾಜು ಹಾಕಲಾಗುವುದು ಎಂದು ಕಾರ್ಯನಿರ್ವಾಹಕ ಎಂಜಿನಿಯರ್‌ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಇನ್ನು ಸ್ವಲ್ಪ ಕೆಲಸ ಬಾಕಿ ಉಳಿದಿದೆ. ತರಾತುರಿಯಲ್ಲಿ ಕಲ್ಲು ಕೊರೆಯಲು ಸಾಧ್ಯವಿಲ್ಲ. ಇದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಅದು ಪೂರ್ಣಗೊಂಡ ಬಳಿಕ ಎಲ್ಲ ಕಲ್ಲುಗಳನ್ನು ಒಟ್ಟಿಗೆ ಹರಾಜು ಹಾಕಲಾಗುವುದು. ಈ ಸಂಬಂಧ ಸ್ಥಳೀಯ ಕ್ರಷರ್ ಸಂಸ್ಥೆಯೊಂದನ್ನು ಕೂಡ ಸಂಪರ್ಕಿಸಿದ್ದೇವೆ. ಯಾರು ಬೇಕಾದರೂ ಹರಾಜಿನಲ್ಲಿ ಭಾಗವಹಿಸಬಹುದು’ ಎಂದು ಹೇಳಿದರು.

‘ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಪ್ರತಿ ಕ್ಯೂಬಿಕ್‌ ಮೀಟರ್‌ಗೆ ₹600ರಂತೆ ರಾಜಧನ ಪಾವತಿಸಿ ಹರಾಜು ನಡೆಸಲಾಗುತ್ತದೆ. ಒಟ್ಟು ಎಷ್ಟು ಪ್ರಮಾಣದ ಕಲ್ಲುಬಂಡೆ ಸಿಗಬಹುದು ಎಂದು ಇನ್ನೂ ಅಂದಾಜಿಸಿಲ್ಲ’ ಎಂದು ತಿಳಿಸಿದರು.

* * 

ಒಂದು ವಾರವಿಡೀ ಕೆಲಸ ಮಾಡಿದರೆ 10 ಮೀಟರ್‌ ಮಾತ್ರ ಕಲ್ಲು ತೆಗೆಯಬಹುದು. ಸಮತಲಮಟ್ಟದಲ್ಲಿ ಕೊರೆದು, ರೋಪ್‌ ಹಾಕಿ ಕಲ್ಲುಗಳನ್ನು ತುಂಡು ಮಾಡಿ ತೆಗೆಯಲಾಗುತ್ತಿದೆ
ರಮೇಶ್
ಕಾರ್ಯನಿರ್ವಾಹಕ ಎಂಜನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT