ಬರದಲ್ಲೂ ಬಂತು ಉತ್ತಮ ಏಲಕ್ಕಿ ಬಾಳೆ!

7

ಬರದಲ್ಲೂ ಬಂತು ಉತ್ತಮ ಏಲಕ್ಕಿ ಬಾಳೆ!

Published:
Updated:
ಬರದಲ್ಲೂ ಬಂತು ಉತ್ತಮ ಏಲಕ್ಕಿ ಬಾಳೆ!

ಮಳವಳ್ಳಿ: ಮೂರು ವರ್ಷಗಳಿಂದ ಬರ ಪರಿಸ್ಥಿತಿಯಿಂದಾಗಿ ರೈತ ಸಂಕಷ್ಟಕ್ಕೀಡಾಗಿದ್ದಾನೆ. ಆದರೆ, ತಾಲ್ಲೂಕಿನ ಹುಲ್ಲೇಗಾಲ ಗ್ರಾಮದ ರೈತರೊಬ್ಬರು ಬರದಲ್ಲೂ ಏಲಕ್ಕಿ ಬಾಳೆ ಬೆಳೆದು ಮಾದರಿ ಎನಿಸಿಕೊಂಡಿದ್ದಾರೆ.

ನೀರಿಲ್ಲದೆ ಸ್ಥಗಿತಗೊಂಡ ಕೊಳವೆಬಾವಿಗಳಿಗೆ ಲೆಕ್ಕವಿಲ್ಲ. ಕಣ್ಣ ಮುಂದೆಯೇ ಬೆಳೆ ಒಣಗಿದಾಗ ರೈತ ಅನುಭವಿಸಿದ ನೋವಿಗೆ ಕೊನೆ ಇಲ್ಲ. ಮಳೆಗಾಗಿ ಆಕಾಶದತ್ತ ನೋಡುವ ರೈತರಿಗೆ ಬರವಿಲ್ಲ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಹುಲ್ಲೇಗಾಲ ಗ್ರಾಮದ ರೈತ  ಶ್ರೀನಿವಾಸ್ ಪ್ರಸಾದ್ ಉತ್ತಮವಾಗಿ ತರಕಾರಿ ಬೆಳೆ ಬೆಳೆದು ಬೆರಗು ಮೂಡಿಸಿದ್ದಾರೆ. ಪ್ರಸ್ತುತ ಏಲಕ್ಕಿ ಬಾಳೆ ಫಸಲು ಉತ್ತಮವಾಗಿ ಬಂದಿದ್ದು  ಶ್ರೀನಿವಾಸ್‌ ಪ್ರಸಾದ್‌ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಒಟ್ಟು ನಾಲ್ಕು ಎಕರೆ ಜಮೀನಿನಲ್ಲಿ 1.10 ಎಕರೆ ವಿಸ್ತೀರ್ಣದಲ್ಲಿ 1,200 ಬಾಳೆ ಗಿಡ ಹಾಕಿದ್ದಾರೆ. ಬರದ ನಡುವೆಯೂ ವಿಶ್ವಾಸದಿಂದ ವ್ಯವಸಾಯ ಮಾಡಿದ ಪರಿಣಾಮ ಇಂದು ಬಾಳೆಗಿಡಗಳು ಗೊನೆಯನ್ನು ಹೊತ್ತು ಬಾಗಿ ನಿಂತಿವೆ. ಕಳೆದ ಸೆಪ್ಟೆಂಬರ್‌ನಲ್ಲಿ ಬೆಳೆ ಹಾಕಿದ್ದು ಇನ್ನೊಂದು ತಿಂಗಳಲ್ಲಿ ಕಟಾವಿಗೆ ಬರಲಿದೆ.

ಹಲವು ವರ್ಷಗಳ ಹಿಂದೆ ಹಾಕಿಸಿದ್ದ ಕೊಳವೆ ಬಾವಿಯಲ್ಲಿ ನೀರು ಕಡಿಮೆ ಆಯಿತೆಂದು ಹೊಸದಾಗಿ ಮೂರು ಕೊಳವೆಬಾವಿ ಕೊರೆಸಿದರು. ಆದರೆ ಒಂದರಲ್ಲೂ ನೀರು ಬರದೆ ವಿಫಲವಾದವು. ಆದರೆ ಇದ್ದ ಹಳೆಯ ಕೊಳವೆ ಬಾವಿಯೇ ವರವಾಯಿತು.

ಕಡಿಮೆ ನೀರಿದ್ದರೂ ಅದರಿಂದಲೇ ಬಾಳೆ ಹಾಕಿದರು.  ಹನಿ ನೀರಾವರಿ ಪದ್ಧತಿಯಲ್ಲಿ ಕೃಷಿ ಕೈಗೊಂಡು ಇರುವ ಅಲ್ಪ ನೀರನ್ನೇ ಸದುಪಯೋಗ ಮಾಡಿಕೊಂಡರು. ಅದರಲ್ಲೂ ರಾಸಾಯನಿಕ ಗೊಬ್ಬರವನ್ನು ಬಳಸದೆ ಸಾವಯವ ಗೊಬ್ಬರ ಹಾಕಿ ನೈಸರ್ಗಿಕವಾಗಿ ಏಲಕ್ಕಿ ಬೆಳೆದರು. ಇದು ಸುತ್ತಮುತ್ತಲಿನ ಗ್ರಾಮಗಳ ರೈತರಲ್ಲಿ ಬೆರಗು ಮೂಡಿಸಿದೆ.

‘ಏಳು ವರ್ಷಗಳಿಂದ ಕೃಷಿಯನ್ನು ನಂಬಿ ನಷ್ಟದ ಹಾದಿಯನ್ನೇ ಹಿಡಿದಿದ್ದೆ. ಆದರೆ, ಈ ವರ್ಷ ಸ್ನೇಹಿತರ ಸಹಕಾರದಿಂದ ಒಂದೂಕಾಲು ಎಕರೆ ವಿಸ್ತೀರ್ಣದಲ್ಲಿ ಏಲಕ್ಕಿ ಹಾಕಿದೆ. ಈಗ ಉತ್ತಮ ಫಸಲು ಬಂದಿದೆ. ಎರಡು ಲಕ್ಷ ಖರ್ಚು ಮಾಡಿ ಬಾಳೆ ಬೆಳೆದಿದ್ದೇನೆ. ಈಗ ಬಾಳೆಗೆ ಉತ್ತಮ ಬೆಲೆಯೂ ಇದೆ.  ಲಾಭಕ್ಕೇನೂ ಕೊರತೆಯಾಗುವುದಿಲ್ಲ’ ಎಂದು ಶ್ರೀನಿವಾಸ್‌ ಪ್ರಸಾದ್‌ ತಿಳಿಸಿದರು.

ಬಾಳೆ ಜೊತೆಗೆ ಮೆಣಸಿನ ಕಾಯಿ ಬೆಳೆ ಹಾಕಿದ್ದು ಅದರಿಂದಲೂ ಅವರಿಗೆ ಲಾಭ ಸಿಕ್ಕಿದೆ. ‘ಗ್ರೀನ್ ಪ್ಲಾನೆಟ್‌ ನೀಡಿದ ಫಲವತ್ತಾದ ಪೌಷ್ಟಿಕ ಅಂಶವನ್ನು  ಸಮಯಕ್ಕೆ ಸರಿಯಾಗಿ ಬಳಿಸಿಕೊಂಡು ರಾಸಾಯನಿಕ ಗೊಬ್ಬರ ಬಳಸದೆ ಶ್ರೀನಿವಾಸ ಪ್ರಸಾದ್‌ ಉತ್ತಮವಾಗಿ ಬಾಳೆ ಬೆಳೆದಿದ್ದಾರೆ. ಮುಂದಿನ ತಿಂಗಳು ಕಟಾವು ನಡೆಯಲಿದ್ದು ಉತ್ತಮ ಬೆಳೆಗೆ ಉತ್ತಮ ಬೆಲೆಯೂ ಸಿಗಲಿದೆ’ ಎಂದು ಗ್ರೀನ್ ಪ್ಲಾನೆಟ್‌ನ ತಾಂತ್ರಿಕ ಸಲಹೆಗಾರ ಮೂರ್ತಿ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry