ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆ ಕುಸಿತ, ಆತಂಕದಲ್ಲಿ ರೈತರು

Last Updated 12 ಜೂನ್ 2017, 6:46 IST
ಅಕ್ಷರ ಗಾತ್ರ

ಅಜ್ಜಂಪುರ: ಅಜ್ಜಂಪುರ-ಶಿವನಿ ಹೋಬ ಳಿಯ ರೈತರಿಗೆ ಪ್ರಮುಖ ಆದಾಯ ತರುವ ವಾಣಿಜ್ಯ ಬೆಳೆ ಈರುಳ್ಳಿ ಬಿತ್ತನೆ ಮುಂಗಾರು ಮಳೆಯ ವಿಳಂಬ ದಿಂದಾಗಿ ಅರ್ಧದಷ್ಟು ಕುಸಿತ ಕಂಡಿದೆ.

‘ಅವಳಿ ಹೋಬಳಿಯಲ್ಲಿ ಪ್ರತೀ ವರ್ಷ ಸುಮಾರು 5,500 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗುತ್ತದೆ. ಆದರೆ ಈ ಪೈಕಿ  ಇನ್ನೂ 2,500 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯಾಗಬೇಕಿದೆ. ಮೆಕ್ಕೆಜೋಳ ಈವರಗೆ ಬಿತ್ತನೆಯಾಗಿಲ್ಲ ಎನ್ನುತ್ತಾರೆ’ ಅಜ್ಜಂಪುರದ ಕೃಷಿ ಅಧಿಕಾರಿ ಅರುಣ್ ಕುಮಾರ್.

‘ಬಿತ್ತನೆಗೆ ಅಣಿಗೊಳಿಸಲು ಬೇಸಾಯ, ಹಾಗೂ ಬಿತ್ತನೆಗಾಗಿ 6 ಸೇರು ಈರುಳ್ಳಿ ಬೀಜ, 2 ಚೀಲ ರಾಸಾಯಿನಿಕ ಗೊಬ್ಬರ, ಕೂಲಿಯಾಳುಗಳು ಸೇರಿದಂತೆ  ಪ್ರತೀ ಎಕರೆ ಕೃಷಿ ಭೂಮಿಯನ್ನು ಸುಮಾರು 6ರಿಂದ8 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿರುವುದಾಗಿ’ ರೈತ ಅರುಣ್ ಹೇಳುತ್ತಾರೆ.

ಮುಂಗಾರು ಮಳೆ ನಿರೀಕ್ಷೆಯಲ್ಲಿ ಒಣ ಭೂಮಿಗೆ ಬಿತ್ತನೆ ಮಾಡಿದ್ದ ರೈತರು, ಈವರೆಗೂ ಮಳೆ ಆಗದೇ ಇರುವುದರಿಂದ ಬಿತ್ತಿದ್ದ ಬೀಜ  ನಿಷ್ಪ್ರಯೋಜಕವಾಗುತ್ತದೆ ಎಂಬ ಆತಂಕದಲ್ಲಿದ್ದಾರೆ. ಬಿತ್ತಿರುವ ಬೀಜಗಳು ಮೊಳಕೆಯೊಡೆ ಯಲು ಅಗತ್ಯ ಇರುವಷ್ಟು ತೇವಾಂಶ ವಿದ್ದರೂ, ಈರುಳ್ಳಿ ಸಸಿ, ಭೂಮಿಯ ಮೇಲೆ ಬರಲು ಮಳೆ ಬೇಕೆ ಬೇಕು. ಮಳೆಯಾಗದಿದ್ದರೆ ಬಿತ್ತನೆ ಸಸಿ ಒಣಗುತ್ತವೆ ಎನ್ನಲಾಗಿದೆ.

‘ನಮ್ಮ ಎರೆ ಭೂಮಿಗೆ ಹೆಚ್ಚು ಮಳೆ ಬೇಕು. ಮೋಡ ಕಾಣಿಸುತ್ತೆ ಮಳೆ ಮಾತ್ರ ಬರುವುದಿಲ್ಲ. ಆಗಾಗ ಬರುವ ಸೋನೆ ಮಳೆ ಗಾಳಿಗೆ ಒಣಗುತ್ತಿದೆ. ಇದು ಕೃಷಿ ಭೂಮಿಯ ಮೇಲ್ಪದರವನ್ನು ಹದಗೊಳಿ ಸುತ್ತಿಲ್ಲ. ಹೀಗೆ ಆದರೆ ಮುಂಗಾರು ಬೆಳೆ ಕೈತಪ್ಪುವುದರಲ್ಲಿ ಅನುಮಾನವಿಲ್ಲ’ ಎನ್ನುತ್ತಾರೆ ರೈತ ಮಂಜುನಾಥ್.

ಕಳೆದ ಬಾರಿ ಮುಂಗಾರಿನಲ್ಲಿ ಈರುಳ್ಳಿ ಇಳುವರಿ ಕಂಡಿದ್ದರೂ, ಬಳಿಕ ಬೆಲೆ ಕುಸಿತ ರೈತರನ್ನು ಸಂಕಷ್ಟಕ್ಕೆ ದೂಡಿತ್ತು. ಹಿಂಗಾರು ಬೆಳೆ ಕಡಲೆ, ಮಳೆ ಕೊರತೆಯಿಂದ ಇಳುವರಿ ಯಲ್ಲಿ ಕುಸಿತ ಕಂಡು, ರೈತರನ್ನು ನಷ್ಠಕ್ಕೆ ಸಿಲುಕಿಸಿತ್ತು. ಕಳೆದ ವರ್ಷವಿಡೀ ಮಾಡಿದ್ದ ಎರಡೂ ಬೆಳೆಗಳು ಆದಾಯದ ಬದಲಿಗೆ, ಹಾಕಿದ್ದ ಬಂಡವಾಳವೂ ಬರಲಿಲ್ಲ.

‘ಮುಂಗಾರು ಮಳೆ ಬಂದರೆ ಮಾತ್ರ ಈ ಭಾಗದ ರೈತರು ಹಿಂದಿನ ವರ್ಷ ಅನುಭವಿಸಿದ ನಷ್ಟದಿಂದ ಸ್ವಲ್ಪ ಮಟ್ಟಿನ ಚೇತರಿಕೆ ಕಾಣಲಿದ್ದಾರೆ. ಇಲ್ಲವಾದರೆ ಕೃಷಿ ಲಾಭದಾಯಕವಾಗದೇ, ಕೇವಲ ಖರ್ಚುದಾಯಕವಾಗಿಯೇ ಉಳಿದು, ಹೋಬಳಿಯ ರೈತರನ್ನು ಮತ್ತಷ್ಟು ಹೈರಾಣಾಗಿಸುವುದರಲ್ಲಿ ಅನುಮಾ ನವಿಲ್ಲ’ ಎಂಬುದು ರೈತರ ಅಭಿಪ್ರಾಯ

ಬಿತ್ತನೆ ಪ್ರಮಾಣ
ಬೆಳೆ             ಬಿತ್ತನೆ ಪ್ರಮಾಣ    ಆಗಿದ್ದು
ಈರುಳ್ಳಿ            5,500             3000
ಶೇಂಗಾ           1300               800
ಮೆಕ್ಕೆಜೋಳ      2800              100
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT