ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಬಹಿಷ್ಕರಿಸಿದ್ದರೂ ಈಡೇರದ ಬೇಡಿಕೆ

Last Updated 12 ಜೂನ್ 2017, 6:59 IST
ಅಕ್ಷರ ಗಾತ್ರ

ಮುಡಿಪು: ಕೊಣಾಜೆ ಗ್ರಾಮದ ಪುರುಷ ಕೋಡಿ ರಸ್ತೆಯು ಹದಗೆಟ್ಟು ವರ್ಷಗಳೇ ಕಳೆದಿವೆ. ಆದರೆ, ಈ ಭಾಗದ ಜನರ ಕೂಗು ಜನಪ್ರತಿನಿಧಿಗಳಿಗೆ ಕೇಳಿರಲಿಲ್ಲ. ಇದರಿಂದ ಕಂಗಾಲಾದ ಜನರು ಕಳೆದ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ವೇಳೆಯಲ್ಲಿ ಮತದಾನ ಬಹಿಷ್ಕರಿಸಿ ಹೋರಾಟ ಮಾಡಿದ್ದರು.  ಈ ಮಳೆಗಾಲ ಬರುವವರೆಗೂ ರಸ್ತೆ ಸ್ಥಿತಿ ಹಾಗೇ ಇದ್ದು ಜನರು ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲೂ ಪರದಾಡುವಂತಾಗಿದೆ.

ಕೊಣಾಜೆ ಗ್ರಾಮದ ಪುರುಷಕೋಡಿ ಬಳಿ ನೂರಾರು ಮನೆಗಳಿವೆ. ಈ ರಸ್ತೆಯು ಇಲ್ಲಿನ ಮನೆಗಳ ಸಂಪರ್ಕ ಕೊಂಡಿ ಯಾಗಿದೆ. ಆದರೆ, ಈ ರಸ್ತೆಯು ಹಲವು ವರ್ಷದಿಂದ ಪಾಳು ಬಿದ್ದು ಜಲ್ಲಿಕಲ್ಲು ಎದ್ದಿವೆ. ಮಾತ್ರವಲ್ಲದೆ ಈ ರಸ್ತೆಯು ಇಳಿಜಾರು ರಸ್ತೆ ಆಗಿರುವುದರಿಂದ ಇದೀಗ ರಸ್ತೆಯಲ್ಲಿ ನೀರು ಹರಿದು ಅಪಾಯದ ಸ್ಥಿತಿಗೆ ಬಂದು ತಲುಪಿದೆ. ವಾಹನಗಳು ಅಪಘಾತ ಸಂಭವಿಸುವ ಭಯದಲ್ಲಿ ಸಂಚಾರ ಮಾಡುವ ಸ್ಥಿತಿ ಇದೆ. ಇದರಿಂದಾಗಿ ಅಟೋ ಚಾಲಕರು ಕೂಡಾ ಈ ಭಾಗಕ್ಕೆ ಬರುವುದನ್ನು ನಿಲ್ಲಿಸಿದ್ದಾರೆ.

ಚುನಾವಣಾ ವೇಳೆ ಮತದಾನ ಬಹಿಷ್ಕಾರ ನಡೆಸಿದ್ದರು: ರಸ್ತೆಯ ಅವ್ಯವಸ್ಥೆಯಿಂದ ಕಂಗೆಟ್ಟು ಹೋಗಿರುವ ಕೊಣಾಜೆ ಪುರುಷಕೋಡಿ ಜನತೆ ಈ ಭಾಗದ ಜನಪ್ರತಿನಿಧಿಗಳಲ್ಲಿ ರಸ್ತೆ ಸಮಸ್ಯೆ ಬಗ್ಗೆ ಹೇಳಿದರೂ ಯಾವುದೇ ಪರಿಹಾರ ಸಿಗದೇ ಇರುವ ವೇಳೆ ಮತದಾನ ಬಹಿ ಷ್ಕಾರ ಮಾಡಿ ಪ್ರತಿಭಟನೆ ನಡೆಸಿದ್ದರು.

ಆದರೆ, ಕೆಲವರು ರಸ್ತೆ ಆಗುವವರೆಗೆ ಮತ ಹಾಕದೆ ಚುನಾವಣೆ ಬಹಿಷ್ಕರಿಸು ತ್ತೇವೆ ಎಂದು ಪ್ರತಿಭಟನೆ ಮಾಡಿದರೇ, ಇನ್ನು ಕೆಲವರು ಮತದಾನದ ನಮ್ಮ ಹಕ್ಕು ಅದನ್ನು ಚಲಾಯಿಸಿಯೇ ನಾವು ಪ್ರತಿಭಟಿಸುತ್ತೇವೆ ಎಂದು ಹೇಳಿ ಪ್ರತಿಭಟನೆ ಮಾಡಿದರು.

ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳ ಮುಖಂಡರೂ ಸೇರಿ ರಸ್ತೆ ಸರಿಸಡಿಸುವ ಬಗ್ಗೆ ಭರವಸೆ ನೀಡಿ ಚುನಾವಣೆ ಬಹಿಷ್ಕರಿಸದಂತೆ ಮನವಿ ಮಾಡಿದ್ದರು.
ಆದರೆ, ಈ ಮಳೆಗಾಲ ಆರಂಭವಾಗುವ ಮುನ್ನವೇ ಕಾಮಗಾರಿ ನಡೆದು ಸುವ್ಯವಸ್ಥಿತ ರಸ್ತೆಯ ಬಗ್ಗೆ ಕನಸು ಕಂಡಿದ್ದ ಈ ಭಾಗದ ನಾಗರಿಗೆ ನಿರಾಶೆ ಆಗಿದೆ.

ಮಾತ್ರವಲ್ಲದೆ ಮಳೆಗಾಲದಲ್ಲಿ ಸಂಕಷ್ಟದಿಂದಲೇ ರಸ್ತೆಯಲ್ಲಿ ಹೋಗುವ ಅನಿವಾರ್ಯತೆ ಎದುರಾಗಿದೆ. ಅಲ್ಲದೆ ಇಲ್ಲಿ ಲಯನ್ಸ್ ಕ್ಲಬ್‌ನವರು ನಿರ್ಮಿಸಿದ ರುದ್ರಭೂಮಿಯೂ ಇದ್ದು ಈ ರಸ್ತೆಯ ಅವ್ಯವಸ್ಥೆಯಿಂದಾಗಿ ಇಲ್ಲಿಗೆ ಹೆಣ ತರುವವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದ ಬಳಿಕ ಕಾಮಗಾರಿ ಆರಂಭ
ರಸ್ತೆ ಕುರಿತು ಸಚಿವ ಯು.ಟಿ.ಖಾದರ್ ‘ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ’ ಅಡಿ ರಸ್ತೆ ನಿರ್ಮಿಸಲು ಟೆಂಡರ್ ಕರೆದು ಯೋಜನೆಯ ರೂಪುರೇಷೆ ಸಿದ್ಧ ಪಡಿಸಿದ್ದಾರೆ. ಇದು 2017-18 ನೇ ಸಾಲಿನ ಯೋಜನೆಯಾಗಿದೆ. ಮಳೆಗಾಲದ ಬಳಿಕವೇ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಈ ರಸ್ತೆ ಒಂದೂವರೇ ಕಿಲೋ ಮೀಟರ್‌ನಷ್ಟು ವ್ಯಾಪ್ತಿ ಇದ್ದು, ಇದರಲ್ಲಿ ಸುಮಾರು 100 ಮೀಟರ್‌ವರೆಗೆ ಸಂಸದ ನಳಿನ್ ಕುಮಾರ್ ಕಟೀಲ್ ತಮ್ಮ ಅನುದಾನದಿಂದ ಕಾಂಕ್ರಿಟ್ ರಸ್ತೆಯನ್ನು ಕಳೆದು ಹಲವು ವರ್ಷಗಳ ಹಿಂದೆಯೇ ಮಾಡಿದ್ದಾರೆ.

ಈ ಬಾರಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 900 ಮೀಟರ್‌ನಷ್ಟು ಉದ್ದದ ಕಾಂಕ್ರಿಟ್‌ ಕಾಮಗಾರಿ ನಡೆಯ ಲಿದ್ದು, ಉಳಿದ ಅರ್ಧ ಕಿಲೋ ಮೀಟರ್ ರಸ್ತೆಯ ಕಾಮಗಾರಿ ಮತ್ತೆ ಬಾಕಿ ಉಳಿಯಲಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT