ಚಿಕ್ಕಬಳ್ಳಾಪುರ: ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತ

7

ಚಿಕ್ಕಬಳ್ಳಾಪುರ: ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತ

Published:
Updated:
ಚಿಕ್ಕಬಳ್ಳಾಪುರ: ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತ

ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ನಾನಾ ಜನಪರ ಸಂಘಟನೆಗಳು ಇಂದು ನೀಡಿದ್ದ ಕರ್ನಾಟಕ ಬಂದ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಂದ್ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಲ್ಲಿ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟು, ಹೋಟೆಲ್, ಚಿತ್ರಮಂದಿರಗಳು ಮುಚ್ಚಿದ್ದವು. ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರವೂ ಇರಲಿಲ್ಲ. ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪ್ರತಿಭಟನಾ ನಿರತರಾಗಿ ರಸ್ತೆ ತಡೆ ನಡೆಸಲು ಯತ್ನಿಸಿದ ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧಿಸಿ ವಶಕ್ಕೆ ತೆಗೆದುಕೊಂಡರು.

ಬಂದ್ ಶಾಂತಿಯುತವಾಗಿ ಮುಂದುವರೆದಿದ್ದು ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇಂದು ಬೆಳಗ್ಗೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ವೃತ್ತದಲ್ಲಿ ಪ್ರತಿಭಟನಾಕಾರರು ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಬಿ.ಬಿ.ರಸ್ತೆಯಲ್ಲಿರುವ ಬಿಎಸ್ಎನ್ಎಲ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜಿಲ್ಲೆಯ ಚಿಂತಾಮಣಿ, ಬಾಗೇಪಲ್ಲಿ ಮುಂತಾದ ಕಡೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಸ್ಪತ್ರೆ, ಔಷಧಿ ಅಂಗಡಿ, ಹಾಲು, ತರಕಾರಿ ಮುಂತಾದವುಗಳಿಗೆ ಬಂದ್‌ನಿಂದ ರಿಯಾಯಿತಿ ನೀಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry