ನಿಯಮ ಮೀರುವ ಲಾರಿಗಳಿಗೆ ಬ್ರೇಕ್‌ ಹಾಕಿ

7

ನಿಯಮ ಮೀರುವ ಲಾರಿಗಳಿಗೆ ಬ್ರೇಕ್‌ ಹಾಕಿ

Published:
Updated:
ನಿಯಮ ಮೀರುವ ಲಾರಿಗಳಿಗೆ ಬ್ರೇಕ್‌ ಹಾಕಿ

ದಾವಣಗೆರೆ: ಬೇಸಿಗೆ ರಜೆ ಮುಗಿದು ಶಾಲೆಗಳು ಪುನಾರಂಭಗೊಂಡಿವೆ. ಶಾಲಾ ಮಕ್ಕಳನ್ನು ಹೊತ್ತ ವಾಹನಗಳು ರಸ್ತೆಯಲ್ಲಿ ಗಿಜಿಗಿಡುತ್ತವೆ. ಇವುಗಳ ಮಧ್ಯೆಯೇ ದೈತ್ಯಗಾತ್ರದ ಟ್ರಕ್‌ಗಳು ಎಗ್ಗಿಲ್ಲದೆ ಓಡಾಡುತ್ತಿದ್ದು, ಮಕ್ಕಳ ಪ್ರಾಣಕ್ಕೆ ಸಂಚಕಾರ ಉಂಟಾಗುವ ಅಪಾಯ ಎದುರಾಗಿದೆ.

‘ಶಾಲೆಗಳು ಆರಂಭವಾಗುವ ಹಾಗೂ ಶಾಲೆಗಳು ಬಿಡುವ ಸಮಯದಲ್ಲಿ ನಗರದೊಳಗೆ ಸರಕು ಸಾಗಣೆ ಲಾರಿಗಳ ಸಂಚಾರಕ್ಕೆ ನಿಷೇಧವಿದೆ. ಆದರೆ, ಈ ನಿಯಮಗಳು ಪಾಲನೆ ಆಗುತ್ತಿಲ್ಲ. ನಗರದ ಎಲ್ಲ ಮೂಲೆಗಳಲ್ಲೂ ಲಾರಿಗಳು ರಾಜಾರೋಷವಾಗಿ ಓಡಾಡುತ್ತಿವೆ. ಪರಿಣಾಮ ಮಕ್ಕಳು ಜೀವಭಯದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್‌.

ಲಾರಿಗಳ ಅಬ್ಬರ: ಬಹುತೇಕ ಶಾಲೆಗಳು ಬೆಳಿಗ್ಗೆ 9ರಿಂದ 10ಕ್ಕೆ ಆರಂಭವಾಗುತ್ತವೆ. ಸಂಜೆ 4ರಿಂದ 5ರೊಳಗೆ ಮುಕ್ತಾಯವಾಗುತ್ತವೆ. ಈ ಸಮಯದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಇಂತಹ ಹೊತ್ತಿನಲ್ಲೇ ಅಗತ್ಯಕ್ಕಿಂತ ಹೆಚ್ಚು ಭಾರ ಹೊತ್ತು ಸಾಗುವ ಸರಕು ಸಾಗಣೆ ಲಾರಿಗಳು ನಗರದಲ್ಲಿ ಸಂಚರಿಸುತ್ತವೆ. ಇದರಿಂದ ಮಕ್ಕಳಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತದೆ ಎಂಬ ಆರೋಪ ಕೇಳಿಬಂದಿದೆ.

‘ಪುಣೆ–ಬೆಂಗಳೂರು (ಪಿಬಿ) ರಸ್ತೆ, ಶಾಮನೂರು ರಸ್ತೆ, ಹದಡಿ, ಕೊಂಡಜ್ಜಿ, ಆವರಗೆರೆ ರಸ್ತೆ ಹಾಗೂ ಬೇತೂರು ಕಡೆಯಿಂದ ಪ್ರತಿನಿತ್ಯ ನೂರಾರು ಲಾರಿಗಳು ನಗರವನ್ನು ಪ್ರವೇಶಿಸುತ್ತಿವೆ. ಕೆಲವು ಟ್ರಕ್‌ಗಳು ಅತಿವೇಗವಾಗಿ ಸಂಚರಿಸುತ್ತವೆ. ಇಂತಹ ಸಂದರ್ಭ ಮಕ್ಕಳು ರಸ್ತೆ ದಾಟುವುದು ಹೇಗೆ? ಶಾಲಾ ಬಸ್‌ಗಳು, ಆಟೊಗಳು, ಸೈಕಲ್‌ಗಳು ಸಂಚರಿಸುವುದು ಹೇಗೆ’ ಎಂಬ ಆತಂಕ ಸಾರ್ವಜನಿಕರದ್ದು.

‘ನಮ್ಮ ಇಬ್ಬರು ಮಕ್ಕಳು ಶಾಲೆಗೆ ಸೈಕಲ್‌ನಲ್ಲೇ ಹೋಗುತ್ತಾರೆ. ಅವರು ಮರಳಿ ಮನೆಗೆ ಬರುವವರೆಗೂ ಮನಸ್ಸಿಗೆ ಸಮಾಧಾನ ಇರುವುದಿಲ್ಲ. ಶಾಲೆ ಆರಂಭವಾಗುವ ಹಾಗೂ ಬಿಡುವ ಸಮಯದಲ್ಲಾದರೂ ನಗರದಲ್ಲಿ ಲಾರಿಗಳ ಓಡಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಬೇಕಾದ ಅನಿವಾರ್ಯತೆ ಇದೆ’ ಎನ್ನುತ್ತಾರೆ ನಿಜಲಿಂಗಪ್ಪ ಬಡಾವಣೆ

ಯಲ್ಲಿ ವಾಸವಾಗಿರುವ ಶ್ರೀಧರ್ ದಂಪತಿ.

‘ರಸ್ತೆಯಲ್ಲಿ ವೇಗವಾಗಿ ಓಡಾಡುವ ಲಾರಿಗಳು ಮಕ್ಕಳಲ್ಲಿ ಗಾಬರಿ ಹುಟ್ಟಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಅಪಘಾತಗಳಾಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಅನಾಹುತಗಳಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ’ ಎನ್ನುತ್ತಾರೆ ವಿನೋಬನಗರದ ಹನುಮಂತಪ್ಪ.

ಟ್ರಾಫಿಕ್‌ ಸಿಗ್ನಲ್‌ ಸಮಸ್ಯೆ: ನಗರದ ಹಲವೆಡೆ ಟ್ರಾಫಿಕ್‌ ಸಿಗ್ನಲ್‌ಗಳು ಕೆಟ್ಟು ನಿಂತಿವೆ. ಇದರಿಂದ ಸಂಚಾರ ಸಮಸ್ಯೆ ಹೆಚ್ಚಾಗಿದ್ದು, ಅಪಘಾತಗಳು ಸಂಭವಿಸುತ್ತಿವೆ. ಅರುಣಾ ಚಿತ್ರಮಂದಿರ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತಗಳಲ್ಲಿ ಸಿಗ್ನಲ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸಬೇಕು ಎಂಬುದು ನಾಗರಿಕರ ಒತ್ತಾಯ.

‘ಸಂಚಾರ ಸಿಬ್ಬಂದಿ ನಿಯೋಜಿಸಿ’

ನಗರಕ್ಕೆ ಸಂಪರ್ಕ ಕಲ್ಪಿಸುವ ಜಾಗಗಳಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಬೇಕು. ಬೆಳಿಗ್ಗೆ 9ರಿಂದ 11 ಹಾಗೂ ಸಂಜೆ 4ರಿಂದ 6ರವರೆಗೆ ನಗರದೊಳಗೆ ಲಾರಿಗಳ ಸಂಚಾರಕ್ಕೆ ಅವಕಾಶ ನೀಡಬಾರದು. ಈ ಬಗ್ಗೆ ಜಾಗೃತಿ ಫಲಕಗಳನ್ನು ಅಳವಡಿಸಬೇಕು ಎಂಬ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಅವರದ್ದು.

* * 

ನಗರದಲ್ಲಿ ಲಾರಿಗಳ ಓಡಾಟಕ್ಕೆ ಸಮಯ ನಿಗದಿಯಾಗಿರುವ ಬಗ್ಗೆ ಮಾಹಿತಿ ಪಡೆಯುತ್ತೇನೆ.  ಶಾಲಾ ಮಕ್ಕಳ ಓಡಾಟಕ್ಕೆ ತೊಂದರೆ

ಆಗುತ್ತಿದ್ದರೆ ತುರ್ತು ಕ್ರಮ ಕೈಗೊಳ್ಳುತ್ತೇನೆ.

ಡಿ.ಎಸ್‌.ರಮೇಶ್‌, ಜಿಲ್ಲಾಧಿಕಾರಿ

* * 

ನಿಗದಿತ ಸಮಯದಲ್ಲಿ, ನಿಗದಿತ ರಸ್ತೆಯಲ್ಲಿ ಮಾತ್ರ ಸರಕು ಸಾಗಣೆ ಲಾರಿಗಳು ಓಡಾಡಬೇಕು. ಕಾನೂನು ಉಲ್ಲಂಘಿಸುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ.

ಡಾ.ಭೀಮಾಶಂಕರ ಎಸ್‌.ಗುಳೇದ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry