ಕೊತ್ತಂಬರಿ ಸೊಪ್ಪಿನ ಬೆಲೆ ಗಗನಕ್ಕೆ

7

ಕೊತ್ತಂಬರಿ ಸೊಪ್ಪಿನ ಬೆಲೆ ಗಗನಕ್ಕೆ

Published:
Updated:
ಕೊತ್ತಂಬರಿ ಸೊಪ್ಪಿನ ಬೆಲೆ ಗಗನಕ್ಕೆ

ಶ್ರೀನಿವಾಸಪುರ: ಈಗ ಕೊತ್ತಂಬರಿ ಸೊಪ್ಪಿನ ಬೆಲೆ ಗಗನಕ್ಕೇರಿದೆ. ತರಕಾರಿ ಕೊಳ್ಳಲು ಮಾರುಕಟ್ಟೆಗೆ ಹೋದವರು, ಕೊತ್ತಂಬರಿ ಸೊಪ್ಪಿನ ಬೆಲೆ ಕೇಳಿ ಹುಬ್ಬೇರಿಸುವುದು ಸಾಮಾನ್ಯವಾಗಿದೆ.

ಮೂರು ಬೆರಳು ಗಾತ್ರದ ಕೊತ್ತಂಬರಿ ಸೊಪ್ಪಿನ ಕಟ್ಟೊಂದಕ್ಕೆ ₹ 60 ತೆರಬೇಕಾಗಿದೆ. ಹಣ ಕೊಟ್ಟರೂ ಉತ್ತಮ ಗುಣಮಟ್ಟದ ಸೊಪ್ಪು ದೊರೆಯುತ್ತಿಲ್ಲ. ಅಪರೂಪಕ್ಕೆ ಉತ್ತಮ ಗುಣಮಟ್ಟದ ಎಳೆಯ ಸೊಪ್ಪು ಬಂದರೂ, ಸಾಮಾನ್ಯ ಸೊಪ್ಪಿಗಿಂತ ಹೆಚ್ಚು ಹಣ ಕೊಡಬೇಕಾಗಿದೆ. ನಾಟಿ ಸೊಪ್ಪಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಮಾರುಕಟ್ಟೆಗೆ ಆವಕದ ಪ್ರಮಾಣ ಕುಸಿದಿದೆ.

ಇಷ್ಟು ದಿನ ಬಿಸಿಲಿನ ಬೇಗೆಯಿಂದಾಗಿ ಕೊತ್ತಂಬರಿ ಸೊಪ್ಪಿನ ಬೆಳವಣಿಗೆ ಕುಂಠಿತಗೊಂಡಿತ್ತು. ಈಗ ಆಗಾಗ ಸುರಿದ ಮಳೆ ಮೊಳಕೆಯನ್ನು ಬಲಿ ತೆಗೆದುಕೊಂಡಿದೆ. ಆದರೆ ಈಗ ಮದುವೆಗಳು ನಡೆಯುತ್ತಿವೆ. ಜೊತೆಗೆ ರಂಜಾನ್  ಶುರುವಾಗಿದೆ. ಹಾಗಾಗಿ ಈ ಸೊಪ್ಪಿಗೆ ಅಧಿಕ ಬೇಡಿಕೆ ಬಂದಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಡುತ್ತಾರೆ.

ರೈತರು ಕೊತ್ತಂಬರಿ ಸೊಪ್ಪನ್ನು ಅದೃಷ್ಟದ ಬೆಳೆ ಎಂದು ನಂಬಿದ್ದಾರೆ. ಬೇಸಿಗೆಯಲ್ಲಿ ಕೊತ್ತಂಬರಿ ಸೊಪ್ಪು ಬೆಳೆಯವುದು ಸಾಮಾನ್ಯ. ಕೆಲವು ಸಲ ಬೆಲೆ ಕುಸಿತ ಉಂಟಾಗಿ ದನಗಳ ಪಾಲಾದುದುಂಟು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಬೆಳೆಗಾರರಿಗೆ ಒಳ್ಳೆ ಲಾಭವಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ರೈತರಿಗೆ ಅತಿ ಹೆಚ್ಚು ಬೆಲೆ ಸಿಗುತ್ತಿಲ್ಲ. ಆದರೆ ಚಿಲ್ಲರೆ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಮಾರುವುದರ ಮೂಲಕ ಒಳ್ಳೆ ಲಾಭ ಮಾಡಿಕೊಳ್ಳುತ್ತಿದ್ದಾರೆ.

ಸಾಮಾನ್ಯ ಗ್ರಾಹಕ ಗೊಣಗುತ್ತಲೇ ಕೇಳಿದಷ್ಟು ಹಣ ಕೊಟ್ಟು ಖರೀದಿಸಿ ಕೊಂಡೊಯ್ಯಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ತರಕಾರಿಗಳ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಅಧಿಕ ಬೇಡಿಕೆಯ ಹುರಳಿ ಕಾಯಿ ಬೆಲೆ ಗಗನಕ್ಕೇರಿದೆ. ಉಳಿದಂತೆ ಯಾವುದೇ ತರಕಾರಿಯ ಬೆಲೆ ಕೆಜಿಯೊಂದಕ್ಕೆ ₹ 40ಕ್ಕಿಂತ ಕಡಿಮೆ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry