ವರ್ಷದಲ್ಲಿ ದಾಖಲಾಗಿದ್ದು ಎರಡೇ ಪ್ರಕರಣ

7

ವರ್ಷದಲ್ಲಿ ದಾಖಲಾಗಿದ್ದು ಎರಡೇ ಪ್ರಕರಣ

Published:
Updated:
ವರ್ಷದಲ್ಲಿ ದಾಖಲಾಗಿದ್ದು ಎರಡೇ ಪ್ರಕರಣ

ಹಾವೇರಿ: ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಪ್ರತಿ ತಾಲ್ಲೂಕಿನಲ್ಲಿ 11 ಇಲಾಖೆಗಳ 25 ಅಧಿಕಾರಿಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ. ಆದರೆ, ಜಿಲ್ಲೆಯಲ್ಲಿ 2016–17ನೇ ಸಾಲಿನಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 2 ಮಾತ್ರ.

‘ಬಾಲ ಮತ್ತು ಕಿಶೋರ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ’ ಕಲಂ 17ರ ಅಡಿಯಲ್ಲಿ ಪ್ರತಿ ತಾಲ್ಲೂಕು ಮಟ್ಟದೊಳಗಿನ 25 ಅಧಿಕಾರಿಗಳಿಗೆ ದೂರು ದಾಖಲಿಸುವ ಅಧಿಕಾರ ನೀಡಲಾಗಿದೆ. ಆದರೆ, ಮಾಹಿತಿ ಕೊರತೆಯಿಂದ ದೂರು ದಾಖಲಾಗುತ್ತಿಲ್ಲ. ಹಲವು ಅಧಿಕಾರಿಗಳಿಗೇ ಸ್ಪಷ್ಟ ಮಾಹಿತಿ ಇಲ್ಲ’ ಎಂದು ತಿಳಿದು ಬಂದಿದೆ.ವಿಶ್ವ ಸಂಸ್ಥೆಯ (ಯುಎನ್ಓ) ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಓ)ಯು ‘ವಿಶ್ವ ಬಾಲ ಕಾರ್ಮಿಕ ಪದ್ಧತಿ ನಿಷೇಧ ದಿನ’ ಆಚರಣೆಯನ್ನು ಜಾರಿಗೆ ತಂದಿದೆ.

ದಾಳಿಯ ಯೋಜನೆ: ‘ಬಾಲ ಕಾರ್ಮಿಕ ಪದ್ಧತಿ ನಿಷೇಧದ ಕಾಯಿದೆಗೆ ಕೇಂದ್ರ ಸರ್ಕಾರವು 2016ರಲ್ಲಿ  ತಿದ್ದುಪಡಿ ಮಾಡಿದ್ದು, ‘ಅಪಾಯಕಾರಿ’ ಮತ್ತು ‘ಅಪಾಯ ರಹಿತ’ ಎಂದು ಎರಡು ವಲಯಗಳನ್ನು ಗುರುತಿಸಿದೆ. ಈ ವಲಯಗಳ ಅಡಿಯಲ್ಲಿ ಬರುವ ಕೆಲಸಗಳನ್ನು ರಾಜ್ಯ ಸರ್ಕಾರ ಗುರುತಿಸಿ, ನಿಯಮಾವಳಿ ರೂಪಿಸಬೇಕಾಗಿದೆ’ ಎನ್ನುತ್ತಾರೆ ಜಿಲ್ಲಾ ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಜೋಗೂರ.

‘ಆ ಬಳಿಕ ಪ್ರತಿ ತಿಂಗಳು ಒಂದು ತಾಲ್ಲೂಕಿನಲ್ಲಿ ತೀವ್ರ ಕಾರ್ಯಾಚರಣೆ ನಡೆಸಲು ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯು ಯೋಜಿಸಿದೆ. ನಿರಂತರ ಜಾಗೃತಿಗೂ ಯೋಜಿಸಲಾಗಿದ್ದು, ಕರಪತ್ರವನ್ನು ಎಲ್ಲ ತಾಲ್ಲೂಕುಗಳಲ್ಲಿ ಹಂಚಲಾಗುತ್ತಿದೆ’ ಎಂದು ವಿವರಿಸಿದರು.

ಸಾರ್ವಜನಿಕ ಸಹಕಾರ:  ‘ಪ್ರತಿನಿತ್ಯ  ಚಿಂದಿ ಆಯುವವರು, ಕಾರ್ಮಿಕರು, ಭಿಕ್ಷೆ ಬೇಡುವ ಮಕ್ಕಳನ್ನು ಕಾಣುತ್ತಿದ್ದೇವೆ. ಅಧಿಕಾರಿಗಳ ಜೊತೆ ಪೋಷಕರು, ಸಂಘ–ಸಂಸ್ಥೆ ಪ್ರತಿನಿಧಿಗಳು, ಜನಪ್ರತಿನಿಧಿಗಳು ಕೈ ಜೋಡಿಸಿದರೆ ಮಾತ್ರ ಯಶಸ್ಸು ಸಾಧ್ಯ’ ಎನ್ನುತ್ತಾರೆ ಆಶಾಕಿರಣ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿಯ ಅಧ್ಯಕ್ಷ ಮುತ್ತುರಾಜ ಮಾದಾರ.

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಬಾಲ ನ್ಯಾಯ ಕಾಯಿದೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ, ಬಾಲ್ಯ ವಿವಾಹ ಪದ್ಧತಿ ನಿಷೇಧ ಕಾಯಿದೆ, ಫೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯಿದೆ), ಭ್ರೂಣ ಹತ್ಯೆ ನಿಷೇಧ ಕಾಯಿದೆ, ಬಾಲ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ  ಸೇರಿದಂತೆ ಹಲವು ಕಾಯಿದೆಗಳಿವೆ. 

‘ಈ ಕಾಯಿದೆಗಳ ಕುರಿತು ಜನತೆಗೆ ಮಾಹಿತಿಯ ಕೊರತೆಯಿದ್ದು, ಉದ್ದೇಶಗಳು ಸಫಲಗೊಳ್ಳುತ್ತಿಲ್ಲ. ಮಕ್ಕಳು ಶಿಕ್ಷಣದಿಂದ ಹೊರಗೆ ಉಳಿಯುವ ಸಾಧ್ಯತೆ ಹೆಚ್ಚಾಗಿದೆ’ ಎನ್ನುತ್ತಾರೆ ಮುತ್ತುರಾಜ ಮಾದಾರ.

ಮಕ್ಕಳ ನೆರವಿಗೆ ‘1098’ ಕರೆ ಮಾಡಿ

ಕಳೆದು ಹೋದ, ದೌರ್ಜನ್ಯಕ್ಕೆ ಒಳಗಾದ, ಓಡಿ ಹೋದ, ವೈದ್ಯಕೀಯ ನೆರವು ಅಗತ್ಯವಿರುವ, ಪೋಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಎಲ್ಲ ಮಕ್ಕಳ ನೆರವಿಗಾಗಿ ‘ಮಕ್ಕಳ ಸಹಾಯವಾಣಿ (ಚೈಲ್ಡ್‌ಲೈನ್‌)– 1098’ ಕೆಲಸ ಮಾಡುತ್ತಿದೆ. ಈ ತರ್ತು ಸಂಪರ್ಕ ಸೇವೆಯು 24 ಗಂಟೆಗಳೂ ಉಚಿತ. 

‘ಇದು, ಜಿಲ್ಲೆಯಲ್ಲಿ 15 ಜುಲೈ 2015ರಿಂದ ಆರಂಭಗೊಂಡಿದ್ದು, ಈ ತನಕ 27 ದೂರುಗಳು ದಾಖಲಾಗಿವೆ. ಮಕ್ಕಳ ಜೀತ ಪದ್ಧತಿ ಅಡಿಯಲ್ಲಿ 6 ದೂರುಗಳು ದಾಖಲಾಗಿದ್ದು, ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗಿದೆ’ ಎಂದು ಚೈಲ್ಡ್‌ಲೈನ್‌ ಕಚೇರಿ ತಿಳಿಸಿದೆ.

‘ದೂರು ಬಂದ ಗಂಟೆಯೊಳಗೆ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಹೋಗಿ ರಕ್ಷಣೆ ಮಾಡುತ್ತೇವೆ. ಮಾಲೀಕರಿಗೆ ಮಕ್ಕಳ ಕಾಯಿದೆಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಪೋಷಕರು ಮತ್ತು ಮಗುವಿಗೆ ಕೌನ್ಸಿಲಿಂಗ್ ಮಾಡುತ್ತೇವೆ. ಬಡ ಕುಟುಂಬದ ಮಕ್ಕಳನ್ನು ‘ಆರ್‌ಟಿಇ’ ಅಡಿ ಶಾಲೆಗೆ ಸೇರಿಸುತ್ತೇವೆ. ಕೆಲವೊಮ್ಮೆ ನಕಲಿ ಕರೆಗಳೂ ಬರುತ್ತವೆ’ ಎನ್ನುತ್ತಾರೆ ನಿರ್ದೇಶಕ ಮಜೀದ್‌ ಎಸ್. ಎಚ್‌.

* *

ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಜಿಲ್ಲೆಯಲ್ಲಿ ಪೋಷಕರು ಹಾಗೂ ಸಾರ್ವಜನಿಕರಲ್ಲಿ ಗರಿಷ್ಠ ಜಾಗೃತಿ ಮೂಡಬೇಕಾಗಿದೆ

ಮುತ್ತುರಾಜ ಮಾದಾರ

ಆಶಾಕಿರಣ ಸಂಸ್ಥೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry