ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಪಶುವೈದ್ಯಾಧಿಕಾರಿಯ ಪರಿಸರ ಕಾಳಜಿ

Last Updated 12 ಜೂನ್ 2017, 8:55 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಉತ್ತಮವಾದ ಸಮಾಜ ಕಟ್ಟಲು ಹಣ, ಅಂತಸ್ತು ಪ್ರಮುಖವಲ್ಲ.  ಶಿಕ್ಷಣ, ಸಂಸ್ಕಾರ ಜತೆಗೆ ಪರಿಸರದ ಅರಿವನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಈ ಕಾರ್ಯ ಸಾಧ್ಯ ಎನ್ನುವುದಕ್ಕೆ ರಾಣೆಬೆನ್ನೂರಿನ ಚೌಡಯ್ಯದಾನಪುರದ ಒಡೆಯರ್‌ ದಂಪತಿ ಸಾಕ್ಷಿಯಾಗಿದ್ದಾರೆ.

ಇಲ್ಲಿನ ನಿವೃತ್ತ ಪಶುವೈದ್ಯಾಧಿಕಾರಿ ಮುಕ್ತಿನಾಥ ಅಪ್ಪಾಜಿ ಒಡೆಯರ್‌ (96) ಪತ್ನಿ ಸುಶೀಲಾದೇವಿ (87) ತಮ್ಮ ಮನೆಯ ಸುತ್ತಲೂ ಮರ–ಗಿಡಗಳನ್ನು ಬೆಳೆಸಿ ಪ್ರಕೃತಿಯ ಸೊಬಗನ್ನು ಹೆಚ್ಚಿಸಿದ್ದಾರೆ.

ಇವರ ಮನೆಯ ಸುತ್ತಮುತ್ತಲಿನ ಆವರಣದಲ್ಲಿ ತೆಂಗು, ಅಡಿಕೆ, ತೇಗ, ನಿಂಬೆ, ಕರಿಬೇವು, ಅಶೋಕ, ಬಿಲ್ವ ಪತ್ರಿ, ಬನ್ನಿ, ಬೇವು, ಮಾವಿನ ಮರಗಳನ್ನು ಬೆಳೆಸಿದ್ದಾರೆ. ಅಲ್ಲದೆ, ತರಕಾರಿ, ಹಸಿರು ಸೊಪ್ಪು, ಗುಲಾಬಿ, ಎಕ್ಕೆ, ಸೇವಂತಿಗೆ, ಡೇರೆ, ದಾಸವಾಳ, ಮಲ್ಲಿಗೆ, ಸೇವಂತಿಗೆ, ಕನಕಾಂಬರಿ, ಕಣಗಲ ಹೂವಿನ ಗಿಡಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಪೋಷಣೆ ಮಾಡುತ್ತಿದ್ದಾರೆ.

ಚೌಡಯ್ಯದಾನಪುರಕ್ಕೆ ಬಂದು ಈ ಇಳಿವಯಸ್ಸಿನಲ್ಲಿಯೂ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ತೋಟದಲ್ಲಿ ದಿನಕ್ಕೆ ಎರಡು ಮೂರು ತಾಸು ಶ್ರಮದಾನ ಮಾಡುತ್ತಾರೆ.
ಮುಕ್ತಿನಾಥ ಒಡೆಯರ್‌ ಅವರು ಮಹಾರಾಷ್ಟ್ರದ ಸೊಲ್ಲಾಪುರ, ಠಾಣಾ, ಶಹಾಪುರ ವಿವಿಧ ಜಿಲ್ಲೆಗಳಲ್ಲಿ ಪಶು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

‘ಪರಿಸರದ ನಾಶದಿಂದ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಬರಗಾಲದಿಂದ ರೈತರು ಪಡುತ್ತಿರುವ ಯಾತನೆ ಬೇಸರ ತರಿಸುತ್ತದೆ’ ಎನ್ನುತ್ತಾರೆ ಮುಕ್ತಿನಾಥ ಒಡೆಯರ್‌.
‘ಉತ್ತಮ ಪರಿಸರ ಹೊಂದಬೇಕಾದರೆ ಪ್ರತಿಯೊಬ್ಬರೂ ತಮ್ಮ ಮನೆ ಮುಂದೆ ಎರಡು ಗಿಡಗಳನ್ನು ಬೆಳೆಸುವುದು ಅತಿ ಅವಶ್ಯ’ ಎನ್ನುತ್ತಾರೆ ಸುಶೀಲಾದೇವಿ.

‘ನಿತ್ಯ ವ್ಯಾಯಾಮ, ಯೋಗ, ವಾಯುವಿಹಾರವನ್ನು ಮಾಡುತ್ತಾ ಒಡೆಯರ್‌ ದಂಪತಿ ಈ ಇಳಿವಯಸ್ಸಿನಲ್ಲಿಯೂ ಲವಲವಿಕೆಯಿಂದ ಇದ್ದಾರೆ. ಹಳೆಯ ಸಂಪ್ರದಾಯಗಳನ್ನು
ಮೈಗೂಡಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ’ ಎನ್ನುತ್ತಾರೆ ಜಿ.ವಿ. ದೀಪಾವಳಿ. 

‘ಸರ್ಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಪರಿಸರದ ಕಾಳಜಿ, ಅರಿವು ಮೂಡಿಸುವ ಅನೇಕ ಯೋಜನೆಗಳನ್ನು ಜಾರಿಗೆ ತಂದರೂ ಅವು ಸಮರ್ಪಕವಾಗಿ ಅನುಷ್ಠಾನವಾಗುವುದಿಲ್ಲ. ಆದರೆ, ಒಡೆಯರ್‌ ದಂಪತಿಯ ಇಚ್ಛಾಶಕ್ತಿ ಎಲ್ಲರಿಗೂ ಸ್ಫೂರ್ತಿ ತರುವಂತಿದೆ’ ಎನ್ನುತ್ತಾರೆ ನೆರೆ–ಹೊರೆಯ ಜನ.

* *I 

ನಿಸರ್ಗದ ಜತೆಗಿನ ಸಂಪರ್ಕವನ್ನು ಬಲಪಡಿಸುವ ನಮ್ಮ ಪರಂಪರಾಗತ ಆಚರಣೆಗಳನ್ನು ಪುನರುಜ್ಜೀವನಗೊಳಿಸಬೇಕಾದ ಅಗತ್ಯವಿದೆ
ಮುಕ್ತಿನಾಥ ಅಪ್ಪಾಜಿ ಒಡೆಯರ್‌
ನಿವೃತ್ತ ಪಶುವೈದ್ಯಾಧಿಕಾರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT