ಗಡುವು ಮುಗಿದರೂ ಸಿದ್ಧಗೊಳ್ಳದ ಏರ್‌ಪೋರ್ಟ್‌!

7

ಗಡುವು ಮುಗಿದರೂ ಸಿದ್ಧಗೊಳ್ಳದ ಏರ್‌ಪೋರ್ಟ್‌!

Published:
Updated:
ಗಡುವು ಮುಗಿದರೂ ಸಿದ್ಧಗೊಳ್ಳದ ಏರ್‌ಪೋರ್ಟ್‌!

ಬೆಳಗಾವಿ: ಇಲ್ಲಿನ ಸಾಂಬ್ರಾದಲ್ಲಿರುವ ವಿಮಾನನಿಲ್ದಾಣದ ರನ್‌ವೇ ವಿಸ್ತರಣೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿ ಹಂತದಲ್ಲಿಯೇ ಇವೆ. ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದರೆ ಫೆಬ್ರುವರಿ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಮೇಲುಸ್ತುವಾರಿಯ ಕೊರತೆ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದ ಪ್ರಗತಿಯಲ್ಲಿ ವಿಳಂಬ ಉಂಟಾಗಿದೆ.

ಮಾರ್ಚ್‌ 19ರಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ನಗರಕ್ಕೆ ಆಗಮಿಸುತ್ತಿದ್ದು, ಅವರಿಂದ ಉದ್ಘಾಟನೆ ಮಾಡಿಸುವುದಕ್ಕಾಗಿ ವಿಮಾನನಿಲ್ದಾಣ ಸಿದ್ಧಪಡಿಸಬೇಕು ಎಂದು ಸಂಸದ ಸುರೇಶ ಅಂಗಡಿ ಅವರು ಮಾರ್ಚ್‌ ಮೊದಲ ವಾರದಲ್ಲಿ ಅಧಿಕಾರಿಗಳಿಗೆ ಗಡುವು ನೀಡಿದ್ದರು. ಇದಾಗಿ ಎರಡು ತಿಂಗಳು ಕಳೆದಿದ್ದರೂ ನವೀಕೃತ ವಿಮಾನನಿಲ್ದಾಣ ಉದ್ಘಾಟನೆಗೆ ಸಿದ್ಧವಾಗಿಲ್ಲ! ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗುತ್ತಿದೆ.

ಏನೇನು ಕಾಮಗಾರಿ?: ವಿಮಾನನಿಲ್ದಾಣದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ₹ 141 ಕೋಟಿ ಅನುದಾನದ ಯೋಜನೆಗೆ ಒಪ್ಪಿಗೆ ಸೂಚಿಸಿದೆ. ಎರಡು ವರ್ಷಗಳ ಹಿಂದೆ ಕಾಮಗಾರಿ ಆರಂಭವಾಗಿದೆ. ಪ್ರಸ್ತುತ 1830 ಮೀಟರ್‌ ಇರುವ ರನ್‌ವೇಯನ್ನು 2,300 ಮೀಟರ್‌ಗೆ ವಿಸ್ತರಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಏರ್‌ಬಸ್‌ 321 ನಂತಹ ದೊಡ್ಡ ವಿಮಾನಗಳನ್ನು ಲ್ಯಾಂಡಿಂಗ್‌ ಮಾಡುವ ಉದ್ದೇಶದಿಂದ ಈ ರನ್‌ವೇ ಸಿದ್ಧಪಡಿಸಲಾಗಿದೆ. ಭವಿಷ್ಯದಲ್ಲಿ ದೊಡ್ಡ ವಿಮಾನಗಳು ಇಲ್ಲಿಂದ ಹಾರಾಡುವಂತಾಗಬೇಕು ಎನ್ನುವ ಯೋಜನೆ ಇದೆ.

ಇಲ್ಲಿರುವ ಟರ್ಮಿನಲ್‌ ಬಿಲ್ಡಿಂಗ್‌ನಲ್ಲಿ 200 ಮಂದಿ ಕುಳಿತುಕೊಳ್ಳುವುದಕ್ಕೆ ಅವಕಾಶವಿದೆ. ಹೊಸದಾಗಿ ನಿರ್ಮಿಸಲಾಗುತ್ತಿರುವ ಟರ್ಮಿನಲ್‌ನಲ್ಲಿ ಹಳೆಯದಕ್ಕಿಂತ ಎರಡು ಪಟ್ಟು ಹೆಚ್ಚಿನ ಪ್ರಯಾಣಿಕರು ಕೂರಬಹುದಾಗಿದೆ.

‘ವಿಮಾನನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ರನ್‌ವೇ ಪೂರ್ಣಗೊಂಡಿದೆ. ಟರ್ಮಿನಲ್‌ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಒಟ್ಟಾರೆ ಶೇ 93ರಷ್ಟು ಪೂರ್ಣಗೊಂಡಿದೆ. ಇನ್ನೊಂದು ತಿಂಗಳಲ್ಲಿ ಸಿದ್ಧವಾಗುವ ನಿರೀಕ್ಷೆ ಇದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ’ ಎಂದು ಏರ್‌ಪೋರ್ಟ್‌ ಟ್ರಾಫಿಕ್‌ ಕಂಟ್ರೋಲರ್‌ ರಾಜೇಶಕುಮಾರ್‌ ಮೌರ್ಯ ಪ್ರತಿಕ್ರಿಯಿಸಿದರು.

‘ಹೊಸ ಕಟ್ಟಡದಲ್ಲಿ ತಪಾಸಣೆ ಹಾಗೂ ಲಗ್ಗೇಜ್‌ ಪರಿಶೀಲನೆಗೆ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲಾಗಿದೆ. 6 ಕೌಂಟರ್‌ಗಳನ್ನು ತೆರೆಯಲಾಗುವುದು. ಸ್ನಾಕ್‌ಬಾರ್‌, ಐಸ್‌ಕ್ರೀಂ ಪಾರ್ಲರ್‌, ಏರ್‌ಲೈನ್ ಅಧಿಕಾರಿ, ಟೂರ್‌ ಆಪರೇಟರ್‌ ಹಾಗೂ ಟ್ಯಾಕ್ಸಿ ಆಪರೇಟರ್ಸ್‌ಗಳಿಗೆ ಸ್ಥಳಾವಕಾಶ ಒದಗಿಸಲಾಗುವುದು. ವಿಮಾನಗಳ ಸುರಕ್ಷಿತ ಲ್ಯಾಂಡಿಂಗ್‌ ಹಾಗೂ ಟೇಕ್‌ಆಫ್‌ ಪ್ರಕ್ರಿಯೆಯಲ್ಲಿ ನೆರವಾಗುವ ನಿಟ್ಟಿನಲ್ಲಿ ಸುಧಾರಿತ ಸಾಧನಗಳನ್ನು (ಲೋಕಲೈಸರ್‌ ಅಂಡ್‌ ಗ್ಲೈಡ್‌ ಪಾಥ್‌) ಅಳವಡಿಸಲಾಗಿದೆ.

ತಾಂತ್ರಿಕ ದೋಷ ಕಾಣಿಸಿದ ವಿಮಾನನಿಲ್ದಾಣಗಳ ನಿಲುಗಡೆಗಾಗಿ ಪ್ರತ್ಯೇಕ ಜಾಗ ಸಿದ್ಧಪಡಿಸಲಾಗಿದೆ. ಮೂರು ದೊಡ್ಡ ವಿಮಾನಗಳು ನಿಲ್ಲುವುದಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಟವರ್‌ ಎತ್ತರವೂ ಹೆಚ್ಚಳ: ‘ಏರ್‌ಟ್ರಾಫಿಕ್‌ ಕಂಟ್ರೋಲರ್‌ ಟವರ್‌ ಅನ್ನು 18.5 ಮೀಟರ್‌ನಿಂದ 22.5 ಮೀಟರ್‌ಗೆ ಎತ್ತರಿಸಲಾಗಿದೆ. ಪ್ರಸ್ತುತ ಸ್ಪೈಸ್‌ ಜೆಟ್‌ ವಿಮಾನದ ಕಾರ್ಯಾಚರಣೆ ಇಲ್ಲಿಂದ ಆಗುತ್ತಿದೆ. ಬೆಂಗಳೂರು ಹಾಗೂ ಮುಂಬೈಗೆ ವಿಮಾನಗಳು ಓಡಾಡುತ್ತಿವೆ. ಅಭಿವೃದ್ಧಿ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಪೂರ್ಣಗೊಂಡಲ್ಲಿ ಹೆಚ್ಚಿನ ವಿಮಾನಗಳ ಕಾರ್ಯಾಚರಣೆ ನಡೆಸಬಹುದಾಗಿದೆ’ ಎನ್ನುತ್ತಾರೆ ಈಚೆಗಷ್ಟೇ ಅಧಿಕಾರ ವಹಿಸಿಕೊಂಡಿರುವ ಮೌರ್ಯ.

ನೆರೆಯ ಗೋವಾದಲ್ಲಿರುವ ವಿಮಾನನಿಲ್ದಾಣದಲ್ಲಿ ಸ್ಥಳಾಭಾವದ ಕೊರತೆ ಇರುವುದರಿಂದ, ಬೆಳಗಾವಿಯಿಂದ ವಿಮಾನಗಳ ಕಾರ್ಯಾಚರಣೆ ನಡೆಸಲು ಕೆಲ ಏರ್‌ಲೈನ್ಸ್‌ ಕಂಪೆನಿಗಳು ಉತ್ಸುಕವಾಗಿವೆ. ಈ ಸಂಬಂಧ ಸಮೀಕ್ಷೆಯನ್ನೂ ನಡೆಸಿವೆ. ಕಾರ್ಯಾಚರಣೆ ಕುರಿತು ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಇದಕ್ಕಾಗಿ ನಿಲ್ದಾಣದ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳುವುದು ಮಹತ್ವ ಪಡೆದುಕೊಂಡಿದೆ.

‘ವಿದೇಶ ವ್ಯಾಪಾರ ನಿರ್ದೇಶನಾಲ­ಯದ ಕಚೇರಿ (ಡಿಜಿಎಫ್‌ಟಿ) ಬೆಳಗಾವಿಯಲ್ಲಿ ಕಾರ್ಯಾರಂಭ ಮಾಡಿದೆ. ಶೀಘ್ರವೇ ಅಧಿಕೃತವಾಗಿ ಉದ್ಘಾಟನೆ ಆಗಲಿದೆ. ಬೆಳಗಾವಿಯಿಂದ ರಫ್ತು ವಹಿವಾಟು ಹೆಚ್ಚಿಸುವುದಕ್ಕೆ ಅವಕಾಶವಿದೆ. ಕಾರ್ಗೋ ಹಾಗೂ ಬೋಯಿಂಗ್ ವಿಮಾನಗಳು ಇಲ್ಲಿಂದ ಕಾರ್ಯಾಚರಣೆ ಆರಂಭಿಸಲು ಸಾಧ್ಯವಾಗುತ್ತದೆ. ವಿಮಾನನಿಲ್ದಾಣದ ವಿಸ್ತರಣೆ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸಂಸದ ಸುರೇಶ ಅಂಗಡಿ ತಿಳಿಸಿದರು.

‘ಪ್ರಸ್ತುತ ಇಲ್ಲಿಂದ ಪ್ರತಿ ಪ್ಯಾಸೆಂಜರ್ ಟಿಕೆಟ್‌ ದರ ₹ 13ಸಾವಿರದಿಂದ ₹ 14 ಸಾವಿರ­ದಷ್ಟಿದೆ. ₹ 2500ಕ್ಕೆ ಟಿಕೆಟ್‌ ದೊರೆಯು­ವಂತಾಗಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಸಣ್ಣ ವಿಮಾನಗಳು ಹಾರಾಡಿದರೆ, ದರ ಕಡಿಮೆ ಮಾಡ­ಲಾಗದು. ಬೋಯಿಂಗ್ ವಿಮಾನಗಳ ಕಾರ್ಯಾಚರಣೆ ಪ್ರಾರಂಭ­ವಾದಾಗ ದರ ಇಳಿಕೆಗೆ ಅವಕಾಶವಿದೆ. ಇದರಿಂದಾಗಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ’ ಎನ್ನುತ್ತಾರೆ ಅವರು.

* * 

ವಿಮಾನನಿಲ್ದಾಣ ಅಭಿವೃದ್ಧಿ ಕಾರ್ಯ ಪೂರ್ಣಗೊಂಡರೆ ದೊಡ್ಡ ವಿಮಾನಗಳು ಹಾರಾಡುವುದಕ್ಕೆ ಅವಕಾಶವಾಗುತ್ತದೆ. ಪ್ರಯಾಣಿಕರು ಹೆಚ್ಚುವ ಸಾಧ್ಯತೆಗಳಿವೆ

ಸುರೇಶ ಅಂಗಡಿ

ಸಂಸದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry