ಕುಸಿದ ಮನೆಯೆದುರು ಮೂಕರೋದನ

7

ಕುಸಿದ ಮನೆಯೆದುರು ಮೂಕರೋದನ

Published:
Updated:
ಕುಸಿದ ಮನೆಯೆದುರು ಮೂಕರೋದನ

ಕುಮಟಾ: ‘ಶಾಲೆಗೆ ಹೋಗಿದ್ದರೆ ಅಣ್ಣನ ಇಬ್ಬರು ಪುಟ್ಟ ಕಂದಮ್ಮಗಳು ಬಚಾವಾ ಗುತ್ತಿದ್ದರು. ನಮ್ಮ ದುರ್ದೈವ ನೋಡಿ ಏನಾಯಿತೆಂದು ನೋಡುವಷ್ಟರಲ್ಲಿ ಮನೆ, ಮಕ್ಕಳು ಎಲ್ಲವನ್ನೂ ಕಳೆದು ಕೊಂಡೆವು’ ಎಂದು ಒಬ್ಬಂಟಿಯಾಗಿ ರೋದಿಸುತ್ತಿದ್ದರು ದೇವಪ್ಪ ಅಂಬಿಗ.

ತಾಲ್ಲೂಕಿನ ತಂಡ್ರಕುಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದ ಗುಡ್ಡ ಕುಸಿತದಲ್ಲಿ ಮನೆ, ಇಬ್ಬರು ಅಣ್ಣಂದಿರ ಮೂವರು ಮಕ್ಕಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿ ಅವರು ಮೂಲೆ ಹಿಡಿದು ಕೂತಿದ್ದರು. ಸುತ್ತೆಲ್ಲ ನೂರಾರು ಜನರಿದ್ದರೂ ಮನೆ ದಲ್ಲಿ ಒಂಟಿಯಾಗಿದ್ದ ಅವರು ಯಾರೊಡನೆಯೂ ಮಾತನಾಡುತ್ತಿ ರಲಿಲ್ಲ. ಅಣ್ಣಂದಿರು, ಅತ್ತಿಗೆಯರು ಗಾಯಗೊಂಡು ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಇವರು ಮಾತ್ರ ಕುಸಿದ ಮನೆಯೆದರು ಮೌನಿಯಾಗಿದ್ದರು.

ಶಾಲೆಯಲ್ಲಿ ಗಂಜಿ ಕೇಂದ್ರ: ತಂಡ್ರಕುಳಿಯ ಅಂಬಿಗರ ಮನೆಗಳ ಸಾಲಿನಲ್ಲಿ ಸ್ಮಶಾನ ಮೌನ ಆವರಿಸಿದೆ. ಅನಿರೀಕ್ಷಿತವಾಗಿ ನಡೆದ ಅನಾಹುತದಿಂದ ಕಂಗಾಲಾಗಿ ರುವ ಜನರು ಮನೆಯಿಂದ ಹೊರಬಂದಿದ್ದಾರೆ. ಆಂತಕದಲ್ಲಿರುವ ಇವರಿಗೆ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ ‘ತಗ್ಗಿನಲ್ಲಿರುವ ಎಲ್ಲ ಮನೆಗಳ ಜನರನ್ನು ಶಾಲೆಗಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ’ ಎಂದು ಕುಮಟಾ ಉಪವಿಭಾಗಾಧಿಕಾರಿ ರಮೇಶ ಕಳಸದ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಆಸ್ಪತ್ರೆಯಲ್ಲಿ ಆಕ್ರಂದನ:

ಗುಡ್ಡದಿಂದ ಕುಸಿದಿರುವ ಮಣ್ಣು 3–4 ಮನೆಗಳ ಮೇಲೆ ಬಿದ್ದಿದೆ. ಪರಿಣಾಮವಾಗಿ ಎಂಟಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಎಲ್ಲರೂ ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಆವರಣ ದಲ್ಲಿ ಗಾಯಗೊಂಡವರು, ಮಕ್ಕಳನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಪುಟ್ಟ ಮಕ್ಕಳನ್ನು ಕಳೆದುಕೊಂಡ ಅಮ್ಮಂದಿರು, ಅವರ ಸಂಬಂಧಿಕರು ಗೋಳಿಡುತ್ತಿದ್ದ ದೃಶ್ಯ ಎಂಥ ಗಟ್ಟಿಗರ ಮನಸ್ಸನ್ನೂ ತೇವಗೊಳಿಸುವಂತಿತ್ತು.

ಗುಡ್ಡ ಕುಸಿತ ಸಂಭವಿಸಿದ ಬೆಳಗಿನ 10.30ರ ಸುಮಾರಿಗೆ ಅಲ್ಲಿಯೇ ನಿಂತು ಬಸ್ ಕಾಯುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಅಶ್ವಿನಿ ಅಂಬಿಗ ಮಣ್ಣಿನೊಡನೆ ತೂರಿಕೊಂಡು 30 ಅಡಿ ಆಳಕ್ಕೆ ಹೋಗಿ ಬಿದ್ದಿದ್ದಾರೆ. ಅವರ ತಲೆಗೆ ತೀವ್ರ ಗಾಯಗಳಾಗಿವೆ. ಆಸ್ಪತ್ರೆಯಲ್ಲಿದ್ದ ಅಶ್ವಿನಿ ‘ನನ್ನ ಜೊತೆ ಬಸ್ ಕಾಯಲು ನಿಂತಿದ್ದ ರವಿತೇಜ ಎಲ್ಲಿ ಹೋದ’ ಎಂದು ಕನವರಿಸುತ್ತಿದ್ದರು. ಗೋಕರ್ಣದ ಅಶ್ವಿನಿ ಅಜ್ಜನಮನೆ ತಂಡ್ರಕುಳಿಯಲ್ಲಿ ಉಳಿದುಕೊಂಡು ಕಾಲೇಜಿಗೆ ಹೋಗುತ್ತಿದ್ದರು. 

ಬೈಕ್ ಸವಾರ ಎಲ್ಲಿ ?

‘ಗುಡ್ಡ ಕುಸಿಯುವ ಸ್ವಲ್ಪ ಮೊದಲು ಅಲ್ಲಿಯೇ ಒಬ್ಬರು ವ್ಯಕ್ತಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದರು. ಮಣ್ಣಿನ ಜೊತೆ ಸೇರಿ ಬೈಕ್ ಕೆಳಗೆ ಬಿದ್ದಿದೆ. ಆದರೆ ಬೈಕ್ ತನ್ನದೆಂದು ಹೇಳುವ ವ್ಯಕ್ತಿ ಅಲ್ಲಿ ಯಾರೂ ಇಲ್ಲ’ ಎಂದು ಪ್ರತ್ಯಕ್ಷದರ್ಶಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಬೆಳಗಿನಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಸಂಜೆಯವರೆಗೂ ಬಿಡುವು ಕೊಡಲಿಲ್ಲ. ಅದರ ನಡುವೆಯೇ ಅಗ್ನಿಶಾಮಕ, ಪೊಲೀಸರು, ಐಆರ್‌ಬಿ ಕಂಪೆನಿಯ ಕೆಲಸಗಾರರು ತೆರವು ಕಾರ್ಯ ನಡೆಸಿದರು. ಸ್ಥಳದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಎಸ್ಪಿ ವಿನಾಯಕ ಪಾಟೀಲ ಡಿವೈಎಸ್ಪಿ ಶಿವಕುಮಾರ್, ತಹಶೀಲ್ದಾರ್ ಮೇಘರಾಜ ನಾಯ್ಕ ಇದ್ದು ತೆರವು ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡಿದರು.ಗುಡ್ಡ ಕುಸಿತ: ₹ 4ಲಕ್ಷ ಪರಿಹಾರ

ಕಾರವಾರ: ‘ಕುಮಟಾ ತಾಲ್ಲೂಕಿನ ತಂಡ್ರಕುಳಿಯಲ್ಲಿ ಗುಡ್ಡಕುಸಿತದಿಂದ ಮೃತರಾದವರಿಗೆ ತಲಾ ₹ 4ಲಕ್ಷ ಪರಿಹಾರ ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಅವರು ತಿಳಿಸಿದ್ದಾರೆ.

ಭಾನುವಾರ ಮೃತರಿಗೆ ಸಂತಾಪ ವ್ಯಕ್ತಪಡಿಸಿ ಪ್ರಕಟಣೆ ನೀಡಿರುವ ಅವರು, ‘ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿ, ತಕ್ಷಣ ಪರಿಹಾರ ಕಾರ್ಯ ನಡೆಸುವಂತೆ ಸೂಚಿಸಲಾಗಿದೆ. ನಾಲ್ಕು ಮನೆಗಳಿಗೆ ಹಾನಿಯಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದ್ದು, ನಷ್ಟ ಅಂದಾಜಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾನಿಗೆ ಒಳಗಾಗಿರುವ ಕುಟುಂಬಗಳಿಗೆ ಗರಿಷ್ಠ ನೆರವು ಒದಗಿಸಲು ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದ್ದಾರೆ. ‘ಮೃತ ಕಂದಮ್ಮಗಳ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೇವರು ಕರುಣಿಸಲಿ’ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ

ಕಾಲ್ಕಿತ್ತ ಅಧಿಕಾರಿಗಳು

ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪೆನಿಯ ನಿರ್ಲಕ್ಷ್ಯವೇ ದುರ್ಘಟನೆ ಸಂಭವಿಸಲು ಕಾರಣ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಹೆದರಿದ ಕಂಪೆನಿಯ ಪ್ರಮುಖರು ಅನಾಹುತ ಸಂಭವಿಸಿದ ಕೆಲವೇ ಹೊತ್ತಿನಲ್ಲಿ ಸ್ಥಳದಿಂದ ನಾಪತ್ತೆಯಾಗಿದ್ದಾರೆ.

* * 

ತಂಡ್ರಕುಳಿ ಗ್ರಾಮಸ್ಥರಿಗೆ ಅವಶ್ಯವಿರುವಷ್ಟು ದಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಗಂಜಿಕೇಂದ್ರವನ್ನು ಮುಂದುವರಿಸಲಾಗುವುದು

ರಮೇಶ ಕಳಸದ

ಉಪವಿಭಾಗಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry