ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರಿನ ಎರಡು ರೈಲು ನಿಲ್ದಾಣ ಅಭಿವೃದ್ಧಿ

7

ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರಿನ ಎರಡು ರೈಲು ನಿಲ್ದಾಣ ಅಭಿವೃದ್ಧಿ

Published:
Updated:
ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರಿನ ಎರಡು ರೈಲು ನಿಲ್ದಾಣ ಅಭಿವೃದ್ಧಿ

ಬೆಂಗಳೂರು: ದೇಶದ 23 ರೈಲು ನಿಲ್ದಾಣಗಳನ್ನು ಸರ್ಕಾರಿ–ಖಾಸಗಿ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಲು ರೈಲ್ವೆ ಇಲಾಖೆ ಮುಂದಾಗಿದ್ದು ಈಗಾಗಲೇ ಪಟ್ಟಿ ಬಿಡುಗಡೆ ಮಾಡಿದೆ. ಬೆಂಗಳೂರಿನ ಕಂಟೋನ್ಮೆಂಟ್ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳೂ ಪಟ್ಟಿಯಲ್ಲಿ ಒಳಗೊಂಡಿವೆ. ಈ ಎರಡೂ ನಿಲ್ದಾಣಗಳಿಗೆ ಕ್ರಮವಾಗಿ ₹ 80 ಕೋಟಿ, ₹ 100 ಕೋಟಿ ಹೂಡಿಕೆಯಾಗಲಿದೆ.

ಈ ಸಂಬಂಧ ಹರಾಜು ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ. ರೈಲ್ವೆ ಇಲಾಖೆ ವೆಬ್‌ಸೈಟ್ ಮತ್ತು ವಿವಿಧ ಮೂಲಗಳಿಂದ ದೊರೆತ ಮಾಹಿತಿಗಳ ಪ್ರಕಾರ, ರೈಲು ನಿಲ್ದಾಣಗಳ ಒಟ್ಟಾರೆ ಅಭಿವೃದ್ಧಿ ಪ್ರಕ್ರಿಯೆಯ ಹಾದಿ ಹೀಗಿರಲಿದೆ:

ಖಾಸಗಿ ಕಂಪೆನಿಗಳ ಕೆಲಸ: ಒಟ್ಟು 45 ವರ್ಷಗಳ ಅವಧಿಗೆ ರೈಲು ನಿಲ್ದಾಣಗಳನ್ನು ಖಾಸಗಿ ಕ್ಷೇತ್ರದವರಿಗೆ ಭೋಗ್ಯಕ್ಕೆ ನೀಡಲಾಗುತ್ತದೆ. ಗುತ್ತಿಗೆ ಆಧಾರದಲ್ಲಿ ಖಾಸಗಿ ಕ್ಷೇತ್ರದ ‘ನಿಲ್ದಾಣ ಸೌಕರ್ಯ ವ್ಯವಸ್ಥಾಪಕ’ರನ್ನು (ಸ್ಟೇಷನ್ ಫೆಸಿಲಿಟೇಷನ್ ಮ್ಯಾನೇಜರ್ ಅಥವಾ ಎಸ್‌ಎಫ್‌ಎಂ) ನೇಮಿಸುವುದು ಸರ್ಕಾರದ ಉದ್ದೇಶ. ಇದಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಶೀಘ್ರ ಹರಾಜು ಪ್ರಕ್ರಿಯೆ ನಡೆಯಲಿದೆ. ನಿಲ್ದಾಣ ಅಭಿವೃದ್ಧಿ, ಪುನರ್‌ ನಿರ್ಮಾಣ, ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿಯ ಸಂಪೂರ್ಣ ಜವಾಬ್ದಾರಿ ಖಾಸಗಿ ಕ್ಷೇತ್ರದವರದ್ದಾಗಿರಲಿದೆ.

ನಿಲ್ದಾಣದ ವಿವಿಧ ಕಡೆಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಜವಾಬ್ದಾರಿಯನ್ನೂ ಖಾಸಗಿ ಕಂಪೆನಿಗಳು ವಹಿಸಲಿವೆ. ನಿಲ್ದಾಣಗಳಿಗೆ ಬೇಕಾದ ಮೂಲಸೌಕರ್ಯ ಒದಗಿಸುವುದು, ವಿಶ್ವ ದರ್ಜೆಯ ಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸುವ ಮೂಲಕ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯನ್ನೂ ಖಾಸಗಿ ಕಂಪೆನಿಗಳು ಮಾಡಬೇಕಿದೆ.

ಖಾಸಗಿ ಕಂಪೆನಿಗಳ ಇನ್ನಿತರ ಜವಾಬ್ದಾರಿಗಳು:

* ಕ್ಯಾಂಟೀನ್‌ಗಳ ನಿರ್ಮಾಣ, ನಿರ್ವಹಣೆ

* ಆಹಾರ ಮಳಿಗೆಗಳನ್ನು ತೆರೆಯುವುದು

* ವಿಶ್ರಾಂತಿ ಗೃಹ ಸೌಲಭ್ಯ ಒದಗಿಸುವುದು

* ಶುಚಿತ್ವ ಕಾಪಾಡುವುದು ಮತ್ತು ಒಟ್ಟು ನಿಲ್ದಾಣದ ನಿರ್ವಹಣೆ

ಇಲಾಖೆಯ ಹೊಣೆಯೇನು?: ಖಾಸಗಿ ಕಂಪೆನಿಗಳಿಗೆ ಭೋಗ್ಯಕ್ಕೆ ನೀಡಿದ ನಂತರವೂ ರೈಲುಗಳ ಕಾರ್ಯಾಚರಣೆಯಂಥ ಪ್ರಮುಖ ಜವಾಬ್ದಾರಿಗಳನ್ನು ಇಲಾಖೆಯೇ ನಿರ್ವಹಿಸಲಿದೆ.

ರೈಲುಗಳ ಕಾರ್ಯಾಚರಣೆಯನ್ನು ನಿರ್ವಹಿಸುವುದು, ಪಾರ್ಸೆಲ್‌ ಸಾಗಾಟದ ಉಸ್ತುವಾರಿ, ಟಿಕೆಟ್‌ಗಳ ವಿತರಣೆ, ಪ್ಲಾಟ್‌ಫಾರಂ ಟಿಕೆಟ್‌ಗಳ ವಿತರಣೆ, ಪ್ರಯಾಣಿಕರು ಮತ್ತು ಸರಕು ಸಾಗಾಟದ ಮೇಲುಸ್ತುವಾರಿ, ದೂರಸಂಪರ್ಕ ವ್ಯವಸ್ಥೆ, ಹಳಿಗಳ ಸುರಕ್ಷತೆಯ ಬಗ್ಗೆ ನಿಗಾ ಇರಿಸುವುದು ಮತ್ತಿತರ ಜವಾಬ್ದಾರಿಗಳನ್ನು ಇಲಾಖೆಯೇ ನಿರ್ವಹಿಸಲಿದೆ. ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಕೆಲಸವನ್ನು ಇಲಾಖೆಯೂ ಮಾಡಲಿದೆ. ಹೀಗಾಗಿ ಇಲಾಖೆ ಮತ್ತು ಖಾಸಗಿ ಕಂಪೆನಿ, ಎರಡೂ ಕಡೆಯ ಭದ್ರತಾ ಸಿಬ್ಬಂದಿ ನಿಲ್ದಾಣದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ನೌಕರರ ವರ್ಗಾವಣೆ: ಇಲಾಖೆ ನಿರ್ವಹಿಸುವ ಕಾರ್ಯಗಳಿಗೆ ಹೊರತಾದ ಕೆಲಸಗಳಲ್ಲಿ ಸದ್ಯ ತೊಡಗಿಕೊಂಡಿರುವ ಸಿಬ್ಬಂದಿಯನ್ನು ಇತರ ಕೆಲಸಗಳಿಗೆ ವರ್ಗ ಮಾಡಲಾಗುತ್ತದೆ. ಖಾಸಗಿ ಕಂಪೆನಿ ವಹಿಸಿಕೊಂಡಿರುವ ಎಲ್ಲ ಕೆಲಸಗಳಿಗೂ ‘ನಿಲ್ದಾಣ ಸೌಕರ್ಯ ವ್ಯವಸ್ಥಾಪಕ’ರೇ ಖಾಸಗಿ ಸಿಬ್ಬಂದಿಯನ್ನು ನೇಮಿಸುತ್ತಾರೆ.

ಸಮವಸ್ತ್ರ: ಖಾಸಗಿ ಕಂಪೆನಿ ನೇಮಿಸುವ ಸಿಬ್ಬಂದಿಗೆ ಸಮವಸ್ತ್ರ ಮತ್ತು ಗುರುತಿನ ಕಾರ್ಡ್‌ ನೀಡಲಾಗುತ್ತದೆ.

ಕಂಪೆನಿಗಳಿಗೆ ಆದಾಯ ಹೇಗೆ?: ಖಾಸಗಿ ಕಂಪೆನಿಗಳು ರೈಲ್ವೆ ಇಲಾಖೆಗೆ ಹಣ ಪಾವತಿಸಿ ನಿಲ್ದಾಣಗಳನ್ನು ಭೋಗ್ಯಕ್ಕೆ ಪಡೆಯುತ್ತವೆ. ಹೀಗಾಗಿ ರೈಲು ನಿಲ್ದಾಣಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವವರಿಂದ ಪರವಾನಗಿ ಶುಲ್ಕ ಪಡೆಯಲು ಕಂಪೆನಿ ಅರ್ಹವಾಗಿರುತ್ತದೆ. ಅಲ್ಲದೆ, ನಿಲ್ದಾಣದ ಸುತ್ತಮುತ್ತಲಿನ ಪ್ರದೇಶವನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಕಂಪೆನಿಗೆ ಅನುಮತಿ ಇದೆ. ಇದರಿಂದಾಗಿ ಕಂಪೆನಿಗಳಿಗೆ ಆದಾಯ ಹರಿದುಬರಲಿದೆ.

ರೈಲು ನಿಲ್ದಾಣದ ಬಳಿ ಪಂಚತಾರಾ ಹೋಟೆಲ್, ಮಲ್ಟಿಪ್ಲೆಕ್ಸ್‌, ಶಾಪಿಂಗ್ ಮಾಲ್‌ಗಳನ್ನು ನಿರ್ಮಾಣ ಮಾಡಲು ನಿಲ್ದಾಣ ಭೊಗ್ಯಕ್ಕೆ ಪಡೆದ ಖಾಸಗಿ ಕಂಪೆನಿಗಳಿಗೆ ಅವಕಾಶವಿದೆ.

ಜೂನ್ 1ಕ್ಕೇ ಟೆಂಡರ್‌: ಬೆಂಗಳೂರಿನ ಕಂಟೋನ್ಮೆಂಟ್ ಮತ್ತು ಯಶವಂತಪುರ ರೈಲು ನಿಲ್ದಾಣಗಳನ್ನು ಭೋಗ್ಯಕ್ಕೆ ನೀಡಲು ಜೂನ್‌ 1ರಂದೇ ಟೆಂಡರ್‌ ಕರೆಯಲಾಗಿದೆ. ಕಂಟೋನ್ಮೆಂಟ್‌ ರೈಲು ನಿಲ್ದಾಣಕ್ಕೆ ಅಂದಾಜು ₹ 80 ಕೋಟಿ, ಮತ್ತು ಯಶವಂತಪುರ ರೈಲು ನಿಲ್ದಾಣಕ್ಕೆ ಅಂದಾಜು ₹ 100 ಕೋಟಿ ಹೂಡಕೆ ಮಾಡಲು ಉದ್ದೇಶಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry