ಹಣ್ಣು– ತರಕಾರಿ ಬೆಲೆ ಗಗನಮುಖಿ

7

ಹಣ್ಣು– ತರಕಾರಿ ಬೆಲೆ ಗಗನಮುಖಿ

Published:
Updated:
ಹಣ್ಣು– ತರಕಾರಿ ಬೆಲೆ ಗಗನಮುಖಿ

ಕಲಬುರ್ಗಿ: ನಗರದಲ್ಲಿ ಹಣ್ಣು ಮತ್ತು ತರಕಾರಿ ಬೆಲೆ ಗಗನಮುಖಿಯಾಗಿದ್ದು, ಗ್ರಾಹಕರು ಪರದಾಡುವಂತಾಗಿದೆ. 15 ದಿನದಲ್ಲಿ ಕೆಲವು ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ.

ಬೇಸಿಗೆ ಬಿರುಬಿಸಿಲು ಮತ್ತು ನೀರಿನ ಸಮಸ್ಯೆಯಿಂದಾಗಿ ಎರಡು ತಿಂಗಳಿಂದ ತರಕಾರಿ ಬೆಲೆ ನಿರಂತರವಾಗಿ ಏರುಮುಖವಾಗಿಯೇ ಇತ್ತು. ಈ ಬೆಲೆ ಏರುಗತಿ ಈಗ ಬಿಸಿ ಮುಟ್ಟಿಸುವ ಮಟ್ಟಕ್ಕೆ ಬಂದಿದೆ.

ರಂಜಾನ್‌ ಮಾಸದ ಉಪವಾಸ ಆರಂಭವಾದ ನಂತರ ಹಣ್ಣುಗಳ ಬೆಲೆ ಮತ್ತಷ್ಟು ಏರಿಕೆಯಾಗಿದೆ. ಉಪವಾಸ ನಂತರ ಹಣ್ಣುಗಳ ಬಳಕೆ ಹೆಚ್ಚಿದೆ. ಆದರೆ ಬೇಡಿಕೆಗಿಂತ ಪೂರೈಕೆ ಪ್ರಮಾಣ ಕಡಿಮೆ ಇರುವುದರಿಂದ ಬೆಲೆಯಲ್ಲಿ ಹೆಚ್ಚಳವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

15 ದಿನಗಳ ಹಿಂದೆ ಕೆ.ಜಿ.ಗೆ ಕೇವಲ ₹10 ಇದ್ದ ಟೊಮೆಟೊ ಬೆಲೆ ಈಗ ₹40ರಿಂದ 50ರಷ್ಟಾಗಿದೆ. ಕ್ಯಾರೆಟ್‌ ₹50ರಿಂದ 60, ಬೀನ್ಸ್‌  ₹80ರಿಂದ 100, ಬದನೆ ₹40, ಬೀಟ್‌ರೋಟ್‌ ₹60, ಬೆಂಡೆ ಕಾಯಿ ₹50ರಿಂದ 60, ಹಿರೇಕಾಯಿ ₹80ರಿಂದ 100, ಎಲೆಕೋಸು, ಗೆಡ್ಡೆಕೋಸು ಸೇರಿದಂತೆ ಯಾವುದೇ ತರಕಾರಿ ಬೆಲೆ ಕೆ.ಜಿ.ಗೆ ₹40ಕ್ಕಿಂತ ಕಡಿಮೆ ಇಲ್ಲ.

‘ನಗರದ ಸೂಪರ್‌ ಮಾರುಕಟ್ಟೆಯಲ್ಲಿಯೂ ತರಕಾರಿ ಬೆಲೆ ಕಡಿಮೆ ಇಲ್ಲ. ಅಲ್ಲಿಯೂ ಪಾವ್‌ ಕೆ.ಜಿ.ಗೆ (250 ಗ್ರಾಂ) ಬೆಲೆ ಹೇಳುತ್ತಾರೆ. ಅಲ್ಲಿನ ಬೆಲೆ ಕೇಳಿದರೆ ಪಾವ್ ಕೆ.ಜಿ.ಯನ್ನು ಕೊಂಡು ಬರುವಂತಾಗಿದೆ. ಒಂದು ಕೆ.ಜಿ. ತರಕಾರಿ ಕೊಳ್ಳಲು ಸಾಧ್ಯವಾಗುವುದಿಲ್ಲ’ ಎನ್ನುತ್ತಾರೆ ಗ್ರಾಹಕ ವೀರೇಶ್‌.

ಇನ್ನು ಹಣ್ಣುಗಳ ಬೆಲೆಯಂತೂ ಕೇಳುವಂತಿಲ್ಲ. ₹100ಕ್ಕೆ ಉತ್ತಮವಾದ 4ರಿಂದ 5 ಸೇಬಿನ ಹಣ್ಣು ಬರುತ್ತಿತ್ತು. ಈಗ 2ರಿಂದ 3  ಬರುತ್ತಿವೆ. ಬಾಳೆ ಹಣ್ಣು ಡಜನ್‌ಗೆ ₹50ರಿಂದ 60. ಸಪೋಟ ಹಣ್ಣು ಕೆ.ಜಿ.ಗೆ ₹80ರಿಂದ 100ರಷ್ಟಿದೆ. ಸಪೋಟ ಹಣ್ಣಿನ ಬೆಲೆ ದುಪ್ಪಟ್ಟಾಗಿದೆ. ಕರ್ಬುಜ ಕೆ.ಜಿ.ಗೆ ₹60, ಕಲ್ಲಂಗಡಿ ₹20, ದ್ರಾಕ್ಷಿ ಹಣ್ಣು ₹50ರಿಂದ 70ರಷ್ಟಿದೆ.

ಹೊರ ಜಿಲ್ಲೆಗಳಿಂದ ಹಣ್ಣು–ತರಕಾರಿ

ಜಿಲ್ಲೆಯಲ್ಲಿ ಹಣ್ಣು ಮತ್ತು ತರಕಾರಿ ಬೆಳೆಯುವುದು ಕಡಿಮೆ. ಎಲ್ಲವನ್ನೂ ಇತರೆ ಜಿಲ್ಲೆಗಳಿಂದ ಅಥವಾ ಹೊರರಾಜ್ಯದಿಂದ ತರಿಸಲಾಗುತ್ತದೆ. ಹಣ್ಣುಗಳನ್ನು ಸಾಮಾನ್ಯವಾಗಿ ಹೈದರಾಬಾದ್‌ನಿಂದ ತರಿಸಲಾಗುತ್ತದೆ. ತರಕಾರಿಯನ್ನು ಪಕ್ಕದ ಜಿಲ್ಲೆಗಳಿಂದ ಮತ್ತು ಹೂವು ಚಿತ್ರದುರ್ಗ ಜಿಲ್ಲೆಯಿಂದ ಬರುತ್ತಿದೆ ಎಂದು ವ್ಯಾಪಾರಿ ಮಹಮದ್‌ ವಾಸೀಂ ಹೇಳಿದರು.

ಜಿಲ್ಲೆಯಲ್ಲಿ ಸಪೋಟ ಬೆಳೆ

ಜಿಲ್ಲೆಯಲ್ಲಿ ನಿಂಬೆ ಹಣ್ಣು ಮತ್ತು ಸಪೋಟ ಹಣ್ಣನ್ನು ಅತಿ ಹೆಚ್ಚಾಗಿ ಬೆಳೆಯುತ್ತಾರೆ. ಆದರೂ ಬೆಲೆ ಕಡಿಮೆಯೇನೂ ಇಲ್ಲ. ಉತ್ತಮವಾದ ಸಪೋಟ ಹಣ್ಣು ಕೆ.ಜಿ.ಗೆ ₹100ರವರೆಗೂ ಬೆಲೆ ಇದೆ. ದಪ್ಪ ಗಾತ್ರದ ನಿಂಬೆ ಹಣ್ಣು ₹10ಕ್ಕೆ 2ರಿಂದ 3 ಸಿಗುತ್ತದೆ. ನಿಂಬೆ ಹಣ್ಣಿನ ಪೂರೈಕೆ ಉತ್ತಮವಾಗಿದ್ದರೂ ಬೇಸಿಗೆಯ ಕಾರಣಕ್ಕೆ ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹಣ್ಣು ಮತ್ತು ತರಕಾರಿಯ ಬೇಡಿಕೆಗಿಂತ ಪೂರೈಕೆ ಪ್ರಮಾಣ ಕಡಿಮೆ ಇರುವುದರಿಂದ ಬೆಲೆ ಹೆಚ್ಚಳವಾಗಿದೆ. ಮಳೆ ಕಾರಣ ಬೇಗ ಹಾಳಾಗುತ್ತವೆ ಎನ್ನುತ್ತಾರೆ ವ್ಯಾಪಾರಿಗಳು.

ಅಬ್ಬಾ ದರ ದುಬಾರಿ

₹100 ಉತ್ತಮವಾದ ಸಪೋಟ ಹಣ್ಣಿನ ಬೆಲೆ 1ಕೆ.ಜಿಗೆ

ಮಳೆಯೂ ಕಾರಣ! ವಾರದಿಂದ ಮಳೆ ಆಗುತ್ತಿರುವ ಕಾರಣ ಟೊಮೆಟೊ, ಸೊಪ್ಪು ಸೇರಿದಂತೆ ಕೆಲವು ತರಕಾರಿಗಳು ಬೇಗ ಕೊಳೆಯುತ್ತವೆ.

₹80 ನೀಡಿದರೂ ಉತ್ತಮವಾದ ಬೀನ್ಸ್‌ ಸಿಗುತ್ತಿಲ್ಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry