ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಸ್ ನಿಲ್ದಾಣದಲ್ಲಿ ಅಧಿಕ ಶುಲ್ಕ ವಸೂಲಿ

Last Updated 12 ಜೂನ್ 2017, 10:51 IST
ಅಕ್ಷರ ಗಾತ್ರ

ರಾಯಚೂರು: ನಗರದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ) ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಬೈಕ್ ಮತ್ತು ಕಾರ್ ಪಾರ್ಕಿಂಗ್ ಮಾಡುವುದಕ್ಕೆ ಗಂಟೆಗಳ ಲೆಕ್ಕದಲ್ಲಿ ಶುಲ್ಕ ನಿಗದಿ ಮಾಡಲಾಗಿದೆ. ಆದರೆ, ಪಾರ್ಕಿಂಗ್ ಗುತ್ತಿಗೆ ಪಡೆದವರು ನಿಗದಿತ ಶುಲ್ಕಕ್ಕಿಂತ ನಾಲ್ಕು ಪಟ್ಟು ಹೆಚ್ಚು ವಸೂಲಿ ಮಾಡುತ್ತಿದ್ದಾರೆ.

2006 ಫೆಬ್ರುವರಿ ಸುತ್ತೋಲೆ ಆಧರಿಸಿ ಸೈಕಲ್, ಸ್ಕೂಟರ್ ಮತ್ತು ಕಾರುಗಳ ನಿಲುಗಡೆ ಶುಲ್ಕ ನಿಗದಿಪಡಿಸಿದ ಫಲಕವೊಂದನ್ನು ಅಳವಡಿಸಲಾಗಿದೆ. ಫಲಕವು ಸರ್ಕಾರಿ ಲೆಕ್ಕಾಚಾರಕ್ಕೆ ಮಾತ್ರ ಎನ್ನುವಂತೆ ಮರೆಮಾಚಲಾಗಿದೆ. ಚಾಲ್ತಿ ವ್ಯವಹಾರಕ್ಕೂ ಫಲಕದಲ್ಲಿರುವ ಶುಲ್ಕಕ್ಕೂ ಸಂಬಂಧವೇ ಇಲ್ಲ. ಅಧಿಕೃತವಾಗಿ ಶುಲ್ಕ ಪರಿಷ್ಕರಣೆಯನ್ನು ಮಾಡಿಲ್ಲ; ಅದರೆ ಬಾಯಿಲೆಕ್ಕದಲ್ಲಿ ಜನರಿಂದ ಹೆಚ್ಚಿನ ಹಣವನ್ನು ಪಡೆದುಕೊಳ್ಳಲಾಗುತ್ತಿದೆ.

ವಾರ್ಷಿಕ ₹80 ಸಾವಿರ ಮೊತ್ತಕ್ಕೆ ಪಾರ್ಕಿಂಗ್ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಹೇಳುವ ಪ್ರಕಾರ "ಟೆಂಡರ್‍ನಲ್ಲಿ ಉಲ್ಲೇಖಿಸಿದ ಪ್ರಕಾರ ಬೈಕ್ ಪಾರ್ಕಿಂಗ್ ಮಾಡುವ ಜಾಗದಲ್ಲಿ ಸಂಸ್ಥೆಯಿಂದ ಶೆಡ್ ನಿರ್ಮಿಸಿ ಕೊಡಬೇಕಾಗಿತ್ತು. ಅಧಿಕಾರಿಗಳಿಗೆ ಮನವಿ ಮಾಡಿ ಸಾಕಾಗಿದೆ.

ಇನ್ನೆರಡು ತಿಂಗಳಲ್ಲಿ ನಮ್ಮ ಟೆಂಡರ್ ಮುಗಿಯುತ್ತದೆ' ಎಂದರು. ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರಗಳಿಗೆ ಮತ್ತು ವಿವಿಧ ಗ್ರಾಮಗಳಿಗೆ ನೂರಾರು ನೌಕರರು ಬಸ್ ಮೂಲಕ ಪ್ರತಿದಿನ ನೌಕರಿಗೆ ಹೋಗಿ ಬರುತ್ತಾರೆ. ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ ಬೈಕ್ ನಿಲ್ಲಿಸಿ ಸಂಜೆ ವಾಪಸ್ ತೆಗೆದುಕೊಳ್ಳುತ್ತಾರೆ. 

‘ಬೈಕ್ ಪಾರ್ಕಿಂಗ್ ಮಾಡುವುದಕ್ಕೆ ಈಚೆಗೆ ಬಾಯಿಗೆ ಬಂದಂತೆ ಹಣ ಕೇಳುತ್ತಿದ್ದಾರೆ. ಕೇಳಿದಷ್ಟು ಕೊಡೊದಿದ್ರೆ ಬೈಕ್ ಬಿಟ್ಟು ಹೋಗಿ, ಇಲ್ಲಾಂದ್ರೆ ಹೊರಗಡೆ ಎಲ್ಲಿಯಾದ್ರೂ ಬೈಕ್ ನಿಲ್ಲಿಸಿ ಎಂದು ಹೇಳಿ ಬಾಯಿ ಮುಚ್ಚಿಸುತ್ತಾರೆ. ಅನಿವಾರ್ಯವಾಗಿ ಕೇಳಿದಷ್ಟು ಹಣ ಕೊಡಬೇಕು' ಎಂದು ರಾಯಚೂರು ನಗರದಿಂದ ಕಲ್ಲೂರಿಗೆ ಹೋಗುವ ಶಿಕ್ಷಕರೊಬ್ಬರು  ಹೇಳಿದರು.

ಟೆಂಡರ್‌ ಪ್ರಕ್ರಿಯೆ
ಕೇಂದ್ರ ಬಸ್ ನಿಲ್ದಾಣದಲ್ಲಿ ಶೌಚಾಲಯ ಮತ್ತು ಇತರೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಮಾಡುವುದಕ್ಕೆ ₹50 ಲಕ್ಷ ಮೊತ್ತದ ಟೆಂಡರ್ ನೀಡುವ ಪ್ರಕಿಯೆ ನಡೆದಿದೆ. ಬೈಕ್ ಪಾರ್ಕಿಂಗ್ ಶೆಲ್ಟರ್ ನಿರ್ಮಿಸುವ ಉದ್ದೇಶವೇನೂ ಇಲ್ಲ. ಬೈಕ್ ನಿಲುಗಡೆಗಾಗಿ ವರ್ಷಕ್ಕೊಮ್ಮೆ ಮುಕ್ತವಾಗಿ ಟೆಂಡರ್ ಕರೆಯಲಾಗುತ್ತದೆ. ಅದರಲ್ಲಿ ಹೆಚ್ಚಿಗೆ ಬಿಡ್ ಮಾಡಿದ ವರಿಗೆ ಕೊಟ್ಟಿರುತ್ತೇವೆ. ಸದ್ಯ ಗೋಪಿನಾಥ ಎನ್ನುವ ವರು ಟೆಂಡರ್ ಪಡೆದಿದ್ದಾರೆ. ಸಂಸ್ಥೆಗೆ ಅಂದಾಜು ₹80 ಸಾವಿರ ಹಣ ಪಾವತಿಸುತ್ತಿದ್ದಾರೆ ಎಂದು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷಕುಮಾರ ಅವರು ‘ಪ್ರಜಾವಾಣಿ'ಗೆ ತಿಳಿಸಿದರು.

ಗಂಟೆ ಲೆಕ್ಕದಲ್ಲಿ ಹಣ ಪಾವತಿ
ಸೈಕಲ್, ಸ್ಕೂಟರ್ ಮತ್ತು ಕಾರ್ ಪಾರ್ಕಿಂಗ್ ಮಾಡುವುದಕ್ಕೆ ಗಂಟೆಗಳ ಲೆಕ್ಕದಲ್ಲಿ ಜನರು ಎಷ್ಟು ಹಣ ಪಾವತಿಸಬೇಕು ಎನ್ನುವುದಕ್ಕೆ ಒಂದು ಫಲಕ ನೇತುಹಾಕಲಾಗಿದೆ. ಫಲಕದಲ್ಲಿರುವ ದರಗಳಿಗೂ ವಾಸ್ತವವಾಗಿ ವಸೂಲಿಯಾಗುವ ಮೊತ್ತಕ್ಕೂ  ವ್ಯತ್ಯಾಸ ಇದೆ. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ‘ಡಿಪೊ ಮ್ಯಾನೇಜರ್‌ಗಾದ್ರೂ ಹೇಳ್ರಿ, ಡಿಸಿಗಾದ್ರೂ ಹೇಳ್ರಿ’ ಎನ್ನುವ ಮಾತುಗಳು ಕೇಳಿ ಬರುತ್ತವೆ.

ಪಾರ್ಕಿಂಗ್‌ ವಿವರ
₹80 ಸಾವಿರ ಸಾರಿಗೆ ಸಂಸ್ಥೆಗೆ ಪಾವತಿಸುವ ಮೊತ್ತ

ಅನಧಿಕೃತ ಶುಲ್ಕ ವಸೂಲಿ ಒಂದು ತಾಸು ಬೈಕ್ ನಿಲ್ಲಿಸಿದರೆ ₹10,  ಎಂಟು ತಾಸು ನಿಲ್ಲಿಸಿದರೆ ₹15,  ಎಂಟ ರಿಂದ 12 ತಾಸಿಗೆ  ₹20 ಕೊಡಬೇಕು.

250 ಸರಾಸರಿ ಪ್ರತಿದಿನ ಬೈಕ್ ನಿಲುಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT