ರಸ್ತೆ ಬದಿಯಲ್ಲಿದೆ ತೆರೆದ ಆಳದ ಬಾವಿ

7

ರಸ್ತೆ ಬದಿಯಲ್ಲಿದೆ ತೆರೆದ ಆಳದ ಬಾವಿ

Published:
Updated:
ರಸ್ತೆ ಬದಿಯಲ್ಲಿದೆ ತೆರೆದ ಆಳದ ಬಾವಿ

 ಬೀದರ್‌: ನಗರದ ಚೆನ್ನಬಸವನಗರದ ದ್ವಾರ ಕಮಾನಿನ ಬಳಿ ರಸ್ತೆಗೆ ಹೊಂದಿಕೊಂಡು ಇರುವ 50 ಅಡಿ ಆಳದ ಬಾವಿಗೆ ಮುಚ್ಚಳ ಹಾಕದ ಕಾರಣ ಇಲ್ಲಿಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ನಗರಸಭೆಯವರು ಚೆನ್ನಬಸವನಗರದಲ್ಲಿ ಹೊಸದಾಗಿ ರಸ್ತೆ ನಿರ್ಮಾಣ ಮಾಡಿದ್ದಾರೆ.

ಬಾವಿಯ ಅಂಚಿನಲ್ಲಿಯೇ ರಸ್ತೆ ಹಾಯ್ದು ಹೋಗಿದೆ. 50 ಅಡಿ ಆಳದ ಬಾವಿ ಇರುವುದು ಇಲ್ಲಿಯ ನಿವಾಸಿಗಳಿಗೆ ಮಾತ್ರ ತಿಳಿದಿದೆ. ಅಪರಿಚಿತರು ರಾತ್ರಿ ವೇಳೆ ಬಂದರೆ ಅಪಾಯ ತಪ್ಪಿದ್ದಲ್ಲ. ಆದರೆ ಅಧಿಕಾರಿಗಳು ಇವತ್ತಿಗೂ ಎಚ್ಚೆತ್ತುಕೊಂಡಿಲ್ಲ.

‘ಚೆನ್ನಬಸವನಗರದ ನಿವಾಸಿಗಳು ನಾಲ್ಕು ವರ್ಷಗಳಿಂದ ನಗರಸಭೆಯ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಕೊಡುತ್ತಿದ್ದಾರೆ. ಅಧಿಕಾರಿಗಳ ಬಳಿ ಈಗ ಅರ್ಜಿಗಳ ಪ್ರತಿಯೂ ಇಲ್ಲ’ ಎಂದು ಬೇಸರದಿಂದಲೇ ನುಡಿಯುತ್ತಾರೆ ಚನ್ನಬಸವನಗರ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಶಿವರಾಜ ಕೊಡ್ಡೆ.

ನಗರಸಭೆ ಸಿಬ್ಬಂದಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಆಗ ಬಾವಿಯೊಳಗೆ ಕಸ ಸುರಿಯಲು ಆರಂಭಿಸಿದ್ದರು. ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಧೀಶರಾಗಿದ್ದ ಸಂಜೀವಕುಮಾರ ಹಂಚಾಟೆ ಅವರು ಸ್ಥಳಕ್ಕೆ ಭೇಟಿ ನೀಡಿ ಆತಂಕ ವ್ಯಕ್ತಪಡಿಸಿದ್ದರಲ್ಲದೇ ಬಾವಿಯ ಸುತ್ತ ಕಟ್ಟೆ ನಿರ್ಮಿಸಿ ಅದರ ಮೇಲೆ ಮುಚ್ಚಳ ಹಾಕಿಸುವಂತೆ ಸೂಚನೆ ನೀಡಿದ್ದರು.

ಅಂದು ನ್ಯಾಯಾಧೀಶರ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದ  ನಗರಸಭೆಯ ಅಧಿಕಾರಿಗಳು ಬಾವಿಗೆ ಗ್ರಿಲ್‌ ಹಾಕಿಸಲೇ ಇಲ್ಲ. ನಂತರ  ನ್ಯಾಯಾಧೀಶರು ವರ್ಗವಾಗಿ ಹೋದರು. ಕಾಮಗಾರಿ ಮಾತ್ರ ನಡೆಯಲೇ ಇಲ್ಲ. ಹೀಗಾಗಿ ಇಲ್ಲಿಯ ನಿವಾಸಿಗಳ ಆತಂಕ ಮುಂದುವರಿದಿದೆ.

ರಸ್ತೆ ಕಾಮಗಾರಿ ಕಳಪೆ

‘ನಗರದ ಹಾರೂರಗೇರಿ ಕ್ರಾಸ್‌ನಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿವಾಸದ ಕಡೆಗೆ ಹೋಗುವ ಮುಖ್ಯ ರಸ್ತೆಗೆ ಚೆನ್ನಬಸವನಗರದ ಸಂಪರ್ಕ ರಸ್ತೆ ನಿರ್ಮಾಣ ಮಾಡಲಾಗಿದೆ. ರಸ್ತೆ ನಿರ್ಮಾಣ ಮಾಡಿದ ಒಂದು ತಿಂಗಳಲ್ಲೇ ಲಾರಿಯೊಂದು ಮಣ್ಣಿನಲ್ಲಿ ಸಿಕ್ಕಿಕೊಂಡು  ರಸ್ತೆ ಬದಿಗೆ ತಗ್ಗು ಬಿದ್ದಿದೆ’ ಎಂದು ರೇವಣಸಿದ್ದಯ್ಯ ಸ್ವಾಮಿ ಬೇಸರ ವ್ಯಕ್ತಪಡಿಸುತ್ತಾರೆ.

ಎಲ್ಲರೂ ಮೌನ

‘ಬಾವಿಗೆ ಬಿದ್ದ ನಾಯಿಮರಿ ತೆಗೆಸಿದ್ದಾಗ ಜನಪರ ಕಾಳಜಿ ತೋರಿಸಿದ್ದ ಧನರಾಜ ಹಂಗರಗಿ ಅವರೂ ಈಗ ಮೌನಕ್ಕೆ ಶರಣಾಗಿದ್ದಾರೆ.  ನಗರಸಭೆಯ ಆಯುಕ್ತ ಬಸಪ್ಪ ಅವರು ವರ್ಗವಾಗಿ ಹೋಗಿದ್ದಾರೆ. ಮನುಷ್ಯರು ಬಿದ್ದರೆ ಏನು ಗತಿ. ಅಪಾಯದ ಮುನ್ಸೂಚನೆ ಅರಿತು ಇದೀಗ ಪೊಲೀಸರೇ ಬಾವಿಯ ಬದಿಗೆ ಬ್ಯಾರಿಕೇಡ್‌  ಇಟ್ಟಿದ್ದಾರೆ’ ಎಂದು ಚೆನ್ನಬಸವನಗರದ ಅನುಸೂಯಾ ಉದಗಿರೆ ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry