6

ಬರಗಾಲದಲ್ಲೂ ಭರಪೂರ ಲಾಭ ಗಳಿಕೆ

Published:
Updated:
ಬರಗಾಲದಲ್ಲೂ ಭರಪೂರ ಲಾಭ ಗಳಿಕೆ

ಕಕ್ಕೇರಾ: ಸುರಪುರ ತಾಲ್ಲೂಕಿನ ಕಕ್ಕೇರಾ ಸಮೀಪದ ನಿಂಗಾಪೂರ ಗ್ರಾಮದಲ್ಲಿ ನಿಂಗಣ್ಣ ಚಿಂಚೋಡಿ ಅವರು ಬರಗಾಲದಲ್ಲಿಯೂ ಕೃಷಿಹೊಂಡದ ನೀರಿನಿಂದ ಎರಡು ಎಕರೆ ಬಾಳೆತೋಟ ಹಾಗೂ ತರಕಾರಿ ಬೆಳೆದು ಭರಪೂರ ಲಾಭ ಗಳಿಸಿದ್ದಾರೆ.

ನಾಲ್ಕು ವರ್ಷಗಳಿಂದ ಸಮರ್ಪಕವಾಗಿ ಮಳೆಬಾರದೆ ಇಲ್ಲಿಯ ರೈತರು ಸಂಪೂರ್ಣವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಹಾ ಹೋಟೆಲ್ ಹಾಗೂ ಕಿರಾಣಿ ಅಂಗಡಿ ವ್ಯಾಪಾರದ ಜೊತೆಗೆ ಅಂಗಡಿಯ ಪಕ್ಕದಲ್ಲಿಯೇ ಇರುವ ಸ್ವಂತ ಜಮೀನಿನಲ್ಲಿ ನಿಂಗಣ್ಣ ಚಿಂಚೋಡಿ ಕೃಷಿಹೊಂಡ ನಿರ್ಮಿಸಿದ್ದಾರೆ. ಕೃಷಿ ಹೊಂಡದಲ್ಲಿನ ನೀರು ಬಳಸಿ ಎರಡು ಎಕರೆ ಜಮೀನಿನಲ್ಲಿ ಬಾಳೆ ಕೃಷಿಯ ಜತೆಗೆ ವಿವಿಧ ತರಕಾರಿಯನ್ನೂ ಬೆಳೆದಿದ್ದಾರೆ.

‘ಬರಗಾಲದಿಂದ ಈಗ ಒಂದು ಬೆಳೆಯಾದರೂ ಕೈಗೆ ಸಿಗುವ ಪರಿಸ್ಥಿರಿ ಇಲ್ಲ. ಹೀಗಾದರೆ ಬದುಕೋದು ಹೇಗೆ? ಎಂಬ ಆಲೋಚನೆ ಬಂತು. ಆಗ ಕೃಷಿಹೊಂಡ ನಿರ್ಮಾಣಕ್ಕೆ ನಿರ್ಧರಿಸಲಾಯಿತು. 20 ಅಡಿ ಉದ್ದದ ಹೊಂಡ ನಿರ್ಮಿಸಲಾಯಿತು. ಕಾಲುವೆ ನೀರು ಇಂಗಿದ ಮೇಲೆ ಇದೇ ನೀರನ್ನು ಜಮೀನಿಗೆ ಬಳಸಲಾಯಿತು. ಹಿತಮಿತ ನೀರಿನ ಬಳಕೆಯಿಂದ ಕೃಷಿ ಈಗ ಕೈಹಿಡಿದಿದೆ’ ಎಂದು ನಿಂಗಣ್ಣ ಹೇಳುತ್ತಾರೆ.

‘ಕೃಷಿಹೊಂಡ ಮತ್ತು ತೋಗಾರಿಕೆಗೆ ₹80 ಸಾವಿರ ಖರ್ಚಾಗಿದೆ. ಆದರೆ, ಬದನೆ, ಬೆಂಡೆ, ಸವತೆ, ನುಗ್ಗೆಕಾಯಿ ಮತ್ತು ಚೆಂಡು ಹೂ ಕೃಷಿಯಿಂದ ಲಕ್ಷಕ್ಕೂ ಅಧಿಕ ಆದಾಯ ಸಿಕ್ಕಿದೆ. ಇನ್ನು ಬಾಳೆಕೃಷಿಯಿಂದ ₹2.20 ಲಕ್ಷ ಆದಾಯ ಬಂದಿದೆ’ ಎಂದು ಅವರು ಖುಷಿ ಹಂಚಿಕೊಳ್ಳುತ್ತಾರೆ.

‘ಹಿಂದೆ ಶೇಂಗಾ, ಸಜ್ಜೆ ಬೆಳೆಯುತ್ತಿದ್ದೆವು. ಆಗ ಕೃಷಿ ಲಾಭದಾಯಕ ಆಗಿರಲಿಲ್ಲ. ಒಮ್ಮೆ ಕಲಬುರ್ಗಿಗೆ ಹೋದಾಗ ದಾರಿಯಲ್ಲಿ ಒಬ್ಬ ರೈತ ಬೆಳೆದಿದ್ದನ್ನು ನೋಡಿದೆ. ಪ್ರೇರಣೆ ಸಿಕ್ಕಿತು. ಸಹೋದರರ ಜತೆಗೂಡಿ ಬೆಂಗಳೂರಿನಿಂದ ₹46 ಸಾವಿರಕ್ಕೆ ಬಾಳೆ ಸಸಿ ಖರೀದಿಸಿ ನಾಟಿ ಮಾಡಿಸಿದೆ. ಅದರ ಮಧ್ಯೆ ತರಕಾರಿ ಬೆಳೆಯಲು ಯೋಚಿಸಿ ಕಾರ್ಯಪ್ರವೃತ್ತನಾದೆ’ ಎಂದು ತಮ್ಮ ಕೃಷಿ ಸಾಧನೆ ವಿವರಿಸುತ್ತಾರೆ.

‘ಬಾಳೆ ಹಾಗೂ ತರಕಾರಿಗೆ ಸರಿಯಾದ ಸಮಯಕ್ಕೆ ನೀರು ಹಾಗೂ ಗೊಬ್ಬರ ಪೂರೈಸಬೇಕು. ಕೃಷಿಯಲ್ಲಿ ಶ್ರಮದ ಜತೆಗೆ ಉತ್ಸಾಹ ಮತ್ತು ಸ್ವಂತ ಬುದ್ಧಿ ಇದ್ದರೆ ಕೃಷಿ ಎಂದಿಗೂ ನಷ್ಟ ಅಲ್ಲ’ ಎಂದು ನಿಂಗಣ್ಣ ಚಿಂಚೋಡಿ ಹೇಳುತ್ತಾರೆ.

*  * 

ನಿಂಗಣ್ಣ ಚಿಂಚೋಡಿ ಪ್ರಗತಿ ಪರ ರೈತ. ನಿರಂತರ ಶ್ರಮಿಕ. ಇದರಿಂದಾಗಿ ಇಂದು ಬಾಳೆತೋಟ ಹಸಿರಾಗಿದೆ. ಆತ ಇತರರಿಗೆ ಮಾದರಿ.

ಫಕೀರಣ್ಣ

ರೈತ, ಲಿಂಗದಳ್ಳಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry