ದುಡಿಮೆಗೆ ತಿಲಾಂಜಲಿ ಇಟ್ಟ ಮಕ್ಕಳು

7

ದುಡಿಮೆಗೆ ತಿಲಾಂಜಲಿ ಇಟ್ಟ ಮಕ್ಕಳು

Published:
Updated:
ದುಡಿಮೆಗೆ ತಿಲಾಂಜಲಿ ಇಟ್ಟ ಮಕ್ಕಳು

ಯಾದಗಿರಿ: ‘ನಾ ಎರಡನೆಯ ಮಗ. ಮನೆಯಲ್ಲಿ ಮೂವರು ಮಕ್ಕಳು. ಅಣ್ಣ ಕೂಲಿ ಕೆಲ್ಸಕ್ಕೆ ಹೋಗ್ತಾನ್ರಿ. ಬಡತನ ಬೇರೆ. ನಮ್ದೆ ಎರಡು ಎತ್ತು, ಒಂದು ಹಸ ಅದರಿ. ಅಪ್ಪ ದನ ಕಾಯ್ಲಿಕ್ಕ ಹಚ್ಚಿದ. ದಿನಾ ಹೊಲಕ್ಕೆ ಹೋಗಿ ದನ ಕಾಯ್ತಾ ಇದ್ದೆ.

ಇವ್ರು (ಮಕ್ಕಳ ಸಹಾಯವಾಣಿ ಕೇಂದ್ರದವರು) ಒಂದ್‌ ದಿನ ಬಂದು ಶಾಲಿಗೆ ಯಾಕ್ ಹೋಗಾಕಯಿಲ್ಲ ಎಂದು ಕೇಳಿದ್ರು. ಆಮೇಲೆ ಅಪ್ಪನ ಜೋಡಿ ಮಾತಾಡಿದ್ರು. ಈಗ ಇಲ್ಲಿಗೆ ಬಂದು ಎರಡು ವರ್ಷ ಆತ್ರಿ. ಈಗ ಮೂರನೇ ತರಗತಿಯಲ್ಲಿ ಕಲಿಯಾಕ್ಕತ್ತಿನ್ರಿ...’ –ಸೂಗೂರಿನ 9 ವರ್ಷದ ಅಶೋಕ ಮುಗ್ಧವಾಗಿ ಹೇಳುವಾಗ ಆತನ ಮಾತಿನಲ್ಲಿ ಕಲಿಕೆಯ ಹಂಬಲ, ಅದಮ್ಯ ಉತ್ಸಾಹ ಇತ್ತು.

ನಗರದ ಡಾನ್‌ ಬಾಸ್ಕೊ ಸಮಾಜ ಸೇವಾ ಕೇಂದ್ರ ಕಳೆದ ಮೂರು ವರ್ಷಗಳಲ್ಲಿ ನಾನಾ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ 137 ಮಕ್ಕಳನ್ನು ರಕ್ಷಿಸಿದೆ. ಮಕ್ಕಳ ಸಹಾಯವಾಣಿ ಕೇಂದ್ರ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಈ ಮಕ್ಕಳನ್ನು ಪತ್ತೆಹಚ್ಚಿದ್ದು, ಅವರಲ್ಲಿ ಬಾಲಕಿಯರನ್ನು ಬಾಲಮಂದಿರಕ್ಕೆ ಹಸ್ತಾಂತರಿಸಿದೆ. ಜಿಲ್ಲೆಯಲ್ಲಿ ಗಂಡು ಮಕ್ಕಳಿಗೆ ಬಾಲ ಮಂದಿರ ಇಲ್ಲದೇ ಇರುವುದರಿಂದ ಗಂಡು ಮಕ್ಕಳನ್ನು ಅಲ್ಲಲ್ಲಿ ಸರ್ಕಾರಿ ಶಾಲೆಗಳಿಗೆ ಪ್ರವೇಶ ಕೊಡಿಸಿ ಶಿಕ್ಷಣ ಮುಂದುವರಿಸುವ ಕೈಂಕರ್ಯ ಮಾಡಿದೆ.

ಆದರೆ, ತೀರಾ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದ ಮಕ್ಕಳನ್ನು ಶೇ 80ರಷ್ಟು ರಿಯಾಯಿತಿ ಕೊಡಿಸುವ ಮೂಲಕ ಡಾನ್‌ಬಾಸ್ಕೊ ಶಾಲೆಗೆ ಸೇರಿಸಿದ್ದಾರೆ. ಉಳಿದ ಹಣವನ್ನು ಸೇವಾ ಕೇಂದ್ರವೇ ಭರಿಸಿದೆ ಎಂದು ಸೇವಾ ಕೇಂದ್ರದ ನಿರ್ದೇಶಕ ಫಾದರ್ ಜಾನ್ ಜೇಕಬ್ ಹೇಳುತ್ತಾರೆ.

ಉಳಿದಂತೆ 25 ಬಡ ಮಕ್ಕಳಿಗೆ ಆರ್‌ಟಿಇ ಯೋಜನೆ ಅಡಿ ಪ್ರವೇಶ ಕೊಡಿಸಿದ್ದಾರೆ. ಬದುಕಿನಲ್ಲಿ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದ ಮಕ್ಕಳು ಈಗ ಮುಖ್ಯವಾಹಿನಿಗೆ ಬಂದು ಶೈಕ್ಷಣಿಕವಾಗಿಯೂ ಪ್ರಗತಿ ಸಾಧಿಸುತ್ತಿದ್ದಾರೆ ಎನ್ನುತ್ತಾರೆ ಅವರು.

ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕನಾಗಿದ್ದ ನಿಂಗಪ್ಪ 8ನೇ ತರಗತಿ ಅಭ್ಯಾಸದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಗಮನ ಸೆಳೆದಿದ್ದಾನೆ. ರಾಜ್ಯಮಟ್ಟದ ಸಬ್‌ಜ್ಯೂನಿಯರ್‌ ಕರಾಟೆ ವಿಭಾಗದಲ್ಲಿ ‘ಬ್ಲಾಕ್‌ ಬೆಲ್ಟ್’ ಗಳಿಸಿ ಕರಾಟೆಪಟುವಾಗಿ ಹೊರಹೊಮ್ಮಿದ್ದಾನೆ.

ಅಶೋಕನ ಹಾದಿಯಂತೆಯೇ ಬಸವಂತಪುರದ ಶ್ರೀದೇವಿಯ ಕಾರುಣ್ಯದ ಕತೆ ಇದೆ. ಹೊಟ್ಟೆಪಾಡಿಗಾಗಿ ಹತ್ತಿ ಬಿಡಿಸಲು ನಿತ್ಯ ಕೂಲಿ ಹೋಗಬೇಕಾದ ಪರಿಸ್ಥಿತಿ. ‘ದಿನಕ್ಕೆ ₹120 ಕೂಲಿ ಸಿಗುತ್ತಿತ್ತು. ಇದು ಗಂಜಿಗೆ ಆಧಾರ. ಇವ್ರು ಬಂದು ಇಲ್ಲಿಗೆ ಕರಕೊಂಡು ಬಂದಾರಿ’ ಶ್ರೀದೇವಿಯ ಮಾತುಗಳಲ್ಲಿ ನೋವಿತ್ತು.

ಸುಡುವ ಬಿಸಿಲಲ್ಲಿ ಇಡೀ ದಿನ ಹತ್ತಿಬಿಡಿಸುವ ಶ್ರಮದ ಭಯ ಇಣುಕುತ್ತಿತ್ತು. ಈಗ ಬದುಕಿಗೊಂದು ಆಧಾರ ಸಿಕ್ಕಿದೆ. ಕಲಿಕೆಯ ಭಾಗ್ಯದ ಬಾಗಿಲು ತೆರೆದಿದೆ ಎಂಬ ಭಾವದಲ್ಲಿ ಬಾಲಕಿ ನಿಟ್ಟುಸಿರು ಬಿಟ್ಟಂತೆ ತೋರುತ್ತಿತ್ತು.

ನಾವು ಎಳೆಯರು; ನಾವು ಗೆಳೆಯರು

ಸೇವಾ ಕೇಂದ್ರದಲ್ಲಿ ರಾಜು, ಮಹೇಶ್‌, ವೀರೇಶ್, ಸಾಬಣ್ಣ, ಚಂದ್ರಶೇಖರ, ಮಮತಾ, ಭವಾನಿ ಹೀಗೆ 11ಕ್ಕೂ ಹೆಚ್ಚು ಬಾಲಕಾರ್ಮಿಕ ಮಕ್ಕಳು ಬಾಲಕಾರ್ಮಿಕತೆಯಿಂದ ಮುಕ್ತಿ ಹೊಂದಿ ಶೈಕ್ಷಣಿಕ ಪ್ರಗತಿ ತೋರಿದ್ದಾರೆ.

ಒಬ್ಬೊಬ್ಬರದು ಒಂದೊಂದು ಕತೆ. ಚಿಕ್ಕ ವಯಸ್ಸಿನಲ್ಲಿಯೇ ಬದುಕಿನ ಕಾಠಿಣ್ಯ ಅನುಭವಿಸಿರುವ ಈ ಎಳೆಯರು ಸಾಮಾನ್ಯ ಮಕ್ಕಳೊಂದಿಗೆ ಬೆರೆತು ‘ನಾವು ಎಳೆಯರು, ನಾವು ಗೆಳೆಯರು ಹೃದಯ ಹೂವಿನ ಹಂದರ. ನಾಳೆ ನಾವೇ ನಾಡ ಹಿರಿಯರು ನಮ್ಮ ಕನಸದು ಸುಂದರ’ ಎಂಬ ಹಾಡು ಹಾಡುತ್ತಾ ಅಕ್ಷರ ಲೋಕ ಪ್ರವೇಶಿಸಿದ್ದಾರೆ. ಅವರಿಗೆ ಡಾನ್‌ ಬಾಸ್ಕೊ ಸೇವಾಕೇಂದ್ರ ಊರುಗೋಲಿನಂತೆ ಆಸರೆ ನೀಡಿದೆ.

ಮಮತೆಯ ಮಡಿಲು

‘ಈ ಮಕ್ಕಳ ಪಾಲಕರೊಂದಿಗೆ ಸೇವಾಕೇಂದ್ರ ನಿರಂತರ ಸಂಪರ್ಕದಲ್ಲಿರುತ್ತದೆ. ಅದಕ್ಕೂ ಹೆಚ್ಚಾಗಿ ಈ ಎಳೆಯರಿಗೆ ಸೇವಾಕೇಂದ್ರದ ಸಿಬ್ಬಂದಿ ತೋರುವ ಪ್ರೀತಿ, ಮಮತೆಯಲ್ಲಿ ಮಕ್ಕಳು ಹೆತ್ತವರನ್ನೂ ಮರೆತು ಕಲಿಕೆಯಲ್ಲಿ ತೊಡಗುತ್ತಾರೆ’ ಎಂದು ಸೇವಾ ಕೇಂದ್ರದ ಸಂಯೋಜಕ ಶರಣಪ್ಪ ಹೇಳುತ್ತಾರೆ.

* * 

‘ಕ್ರೀಮ್‌’ ಯೋಜನೆ ಅಡಿ ಮಕ್ಕಳ ಹಕ್ಕುಗಳ ಬಗ್ಗೆ ಜಿಲ್ಲೆಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾದಗಿರಿ ಬಾಲಕಾರ್ಮಿಕ ಮುಕ್ತ ಜಿಲ್ಲೆಯಾಗಬೇಕು.

ಫಾದರ್ ಜಾನ್ ಜೇಕಬ್

ನಿರ್ದೇಶಕ, ಡಾನ್‌ ಬಾಸ್ಕೊ ಸೇವಾಕೇಂದ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry