ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಾತ್ಮಕ ಪಾತ್ರಗಳಲ್ಲಿ ಟಾಲಿವುಡ್‌ ನಟರು

Last Updated 12 ಜೂನ್ 2017, 19:30 IST
ಅಕ್ಷರ ಗಾತ್ರ

ತೆಲುಗು ಚಿತ್ರರಂಗದ ನಾಯಕ ನಟರು ಕಲಾತ್ಮಕ ಮತ್ತು ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸುವುದು ತೀರಾ ಅಪರೂಪ. ತಮ್ಮ ಇಮೇಜ್‌ಗೆ ಮತ್ತು ಅಭಿಮಾನಿಗಳ ಅಭಿರುಚಿಗೆ ತಕ್ಕಂತೆ ಕಥೆಗಳನ್ನು ಆಯ್ಕೆಮಾಡಿಕೊಂಡು  ನಟಿಸಿದ್ದಾರೆ.

ಕೆಲವು ವರ್ಷಗಳಿಂದ ತೆಲುಗಿನಲ್ಲಿ ತೆರೆಕಂಡ ಅಗ್ರ ನಾಯಕ ನಟರ ಬಹುತೇಕ ಚಿತ್ರಗಳು, ಫ್ಯಾಮಿಲಿ ಎಂಟರ್‌ಟೈನರ್‌, ಫಿಕ್ಷನ್ ಮತ್ತು ಮಾಫಿಯಾ ಕಥೆಗಳನ್ನೇ ಒಳಗೊಂಡಿವೆ. ಈ ರೀತಿಯ ಕಥೆಗಳೆಲ್ಲಾ ಒಂದೇ ರೀತಿ ಎನಿಸಿ ಟಾಲಿವುಡ್‌ನಲ್ಲಿ ಈಗ ಬದಲಾವಣೆ ಕಂಡುಬರುತ್ತಿದೆ. ಅಗ್ರ ನಾಯಕ ನಟರೇ ಹೊಸ ರೀತಿಯ ಕಥೆಗಳತ್ತ ಒಲವು ತೋರಿಸುತ್ತಿದ್ದಾರೆ.

ಪ್ರಸ್ತುತ ಸೆಟ್ಟೇರಿರುವ ತೆಲುಗಿನ ಅಗ್ರ ನಾಯಕ ನಟರ ಚಿತ್ರಗಳು ಹೊಸ ಕಥೆ, ಹೊಸ ಗೆಟಪ್‌, ಹೊಸ ರೀತಿಯಲ್ಲಿ ತೆರೆಕಾಣಲು ಸಿದ್ಧವಾಗಿವೆ. ಅಂತಹ ಕೆಲವು ಚಿತ್ರಗಳ ಮಾಹಿತಿ ಇಲ್ಲಿದೆ.

**

ಮಹೇಶ್‌ಬಾಬು

ರಾಜಕುಮಾರುಡು, ಮುರಾರಿ, ದೂಕುಡು, ಆಗಡು ಅಂತಹ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರಗಳಲ್ಲಿ ನಟಿಸಿದ್ದ ಮಹೇಶ್‌ಬಾಬು ಮೊದಲ ಬಾರಿಗೆ ಇಂಟೆಲಿಜೆನ್ಸ್ ಬ್ಯೂರೊ ಅಧಿಕಾರಿಯಾಗಿ ‘ಸ್ಪೈಡರ್‌’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರವನ್ನು ಮುರುಗದಾಸ್‌ ನಿರ್ದೇಶಿಸುತ್ತಿದ್ದಾರೆ. ಅವರ ಚಿತ್ರಗಳೆಂದರೆ ನಾಯಕನಟನ ಪಾತ್ರ ತೀರಾ ಭಿನ್ನವಾಗಿರುತ್ತವೆ.  ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿದ್ದು, ಮಹೇಶ್‌ಬಾಬು ಅವರ ಪಾತ್ರ ಅಭಿಮಾನಿಗಳಲ್ಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

***

ಅಲ್ಲು ಅರ್ಜುನ್‌

ಟಾಲಿವುಡ್‌ನ ಸ್ಟೈಲಿಶ್‌ ಸ್ಟಾರ್ ಎಂದೇ ಖ್ಯಾತರಾಗಿರುವ ಅಲ್ಲು ಅರ್ಜುನ್‌ ಮೊದಲ ಬಾರಿಗೆ ಬ್ರಾಹ್ಮಣನಾಗಿ  ಕಾಣಿಸಿಕೊಳ್ಳುತ್ತಿದ್ದಾರೆ.

ಹರೀಶ್ ಶಂಕರ್ ನಿರ್ದೇಶನದ ‘ದುವ್ವಾಡ ಜಗನ್ನಾಥಂ’ ಚಿತ್ರದಲ್ಲಿ ಅವರು ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಪಾತ್ರಕ್ಕೆ ತಕ್ಕಂತೆ ಭಿನ್ನವಾಗಿ ಸಂಭಾಷಣಾ ಶೈಲಿಯನ್ನು ಬದಲಾಯಿಸಿದ್ದಾರೆ.

**

ರಾಮ್‌ ಚರಣ್‌ ತೇಜ

ಮೆಗಾ ಕುಟುಂಬದ ಕುಡಿ ರಾಮ್‌ ಚರಣ್‌ ತೇಜ ಈವರೆಗೆ ನಟಿಸಿದ ಪಾತ್ರಗಳೆಲ್ಲಾ ಸ್ಟೈಲಿಷ್‌ ಲುಕ್‌ನಲ್ಲೇ ಇದ್ದವು. ಆದರೆ ಸುಕುಮಾರ್‌ ನಿರ್ದೇಶನದಲ್ಲಿ ಸೆಟ್ಟೇರಿರುವ ಹೊಸ ಚಿತ್ರವೊಂದರಲ್ಲಿ ಈ ಹಿಂದೆ ಎಂದೂ ಕಾಣದ ರೀತಿಯಲ್ಲಿ ಉದ್ದ ಗಡ್ಡ ಬಿಟ್ಟು ಹಳ್ಳಿ ಹುಡುಗನ ಪಾತ್ರದಲ್ಲಿ ರಾಮ್‌ಚರಣ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಇದು 1980ರ ದಶಕದ ಸನ್ನಿವೇಶದ ಕಥೆಯನ್ನೊಳಗೊಂಡ ಚಿತ್ರ ಎಂದು ಕೃಷ್ಣನಗರದಲ್ಲಿ ಸುದ್ದಿ ಹರಿದಾಡುತ್ತಿದೆ.

***

ಮಂಚು ಮನೋಜ್‌

ಅಜಯ್‌ ಆ್ಯಂಡ್ರೂಸ್‌ ನಿರ್ದೇಶನದಲ್ಲಿ ಮೂಡಿಬಂದಿರುವ ‘ಒಕ್ಕಡು ಮಿಗಾಲಾಡು’ ಚಿತ್ರದಲ್ಲಿ ಮಂಚು ಮನೋಜ್‌ ಅವರು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಒಂದು ಪಾತ್ರದಲ್ಲಿ ವಿದ್ಯಾರ್ಥಿ ನಾಯಕನಾಗಿ ಮತ್ತೊಂದು ಪಾತ್ರದಲ್ಲಿ ಎಲ್‌ಟಿಟಿಇ ನಾಯಕ ವೇಲು ಪಿಳ್ಳೈ ಪ್ರಭಾಕರನ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

***

ಜೂನಿಯರ್‌ ಎನ್‌ಟಿಆರ್

ಜೂ.ಎನ್‌ಟಿಆರ್ ಅವರು ತಮ್ಮ ಮುಂದಿನ ಚಿತ್ರ ‘ಜೈ ಲವಕುಶದಲ್ಲಿ’ ಮೂರು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇದರಲ್ಲಿ ಒಂದು ಪಾತ್ರ ರಾವಣಾಸುರನ ಪಾತ್ರದಂತೆ ಖಳ ಲಕ್ಷಣಗಳಿರುವ ಪಾತ್ರ ಎಂದು ಚಿತ್ರ ತಂಡ ಹೇಳಿದೆ.  ಹೀಗಾಗಿ ಈ ಚಿತ್ರದಲ್ಲಿ ಜೂ.ಎನ್‌ಟಿಆರ್ ಅವರ ಪಾತ್ರ ಯಾವ ರೀತಿ ಇರಲಿದೆ ಎಂಬುದನ್ನು ಕಾದುನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT