ಸೀದಾ ಸಾದಾ ಸಾನ್ವಿ

7

ಸೀದಾ ಸಾದಾ ಸಾನ್ವಿ

Published:
Updated:
ಸೀದಾ ಸಾದಾ ಸಾನ್ವಿ

* ನಿಮ್ಮ ಊರು?

ಹುಟ್ಟಿದ್ದು ಕೋಲಾರ ಜಿಲ್ಲೆಯ ಚಿಂತಾಮಣಿ, ಬೆಳೆದಿದ್ದು ಬೆಂಗಳೂರು.

* ಕುಟುಂಬದ ಬಗ್ಗೆ ಹೇಳಿ?

ನಮ್ಮದು ಅರ್ಚಕರ ಕುಟುಂಬ ಅಪ್ಪ ನಾಗರಾಜ ಶರ್ಮಾ ಪೌರೋಹಿತ್ಯ ಮಾಡುತ್ತಾರೆ. ತಾಯಿ ಭಾಗ್ಯಲಕ್ಷ್ಮಿ ಗೃಹಿಣಿ, ಅಕ್ಕ ಗಾಯಿತ್ರಿಗೆ ಮದುವೆ ಆಗಿದೆ, ತಂಗಿ ಕವಿತಾ ಓದುತ್ತಿದ್ದಾಳೆ.

* ಓದಿದ್ದು?

ಈಗಷ್ಟೇ ಬಿ.ಕಾಂ ಮುಗಿದಿದೆ. ವೃತ್ತಿಯ ಜೊತೆಗೆ ಓದನ್ನೂ ಮುಂದುವರಿಸಿಕೊಂಡು ಹೋಗಬೇಕೆಂಬ ಯೋಚನೆ ಇದೆ.

* ಕುಟುಂಬದ ಬೆಂಬಲ ಹೇಗಿದೆ?

ನಮ್ಮ ಕುಟುಂಬಕ್ಕೂ ನನ್ನ ವೃತ್ತಿಗೂ ಸಂಬಂಧವೇ ಇಲ್ಲ. ಆದರೆ ಕುಟುಂಬದ ಬೆಂಬಲದಿಂದಲೇ ನಾನು ನಟನಾ ವೃತ್ತಿಗೆ ಬಂದಿದ್ದೇನೆ. ಬಹು ಮುಖ್ಯವಾಗಿ ಅಪ್ಪನ ಬೆಂಬಲ ತುಂಬಾ ಇದೆ. ಇದೇ ವೃತ್ತಿಯಲ್ಲಿ ಮುಂದುವರೆಯಬೇಕೆಂಬ ಆಸೆ ಇದೆ. ಅವಕಾಶಗಳೂ ಇವೆ.

* ಸಾನ್ವಿ ಪಾತ್ರದ ಬಗ್ಗೆ ಹೇಳಿ?

ಬಹಳ ಆ್ಯಕ್ಟಿವ್‌ ಪಾತ್ರ, ಸದಾ ಒಳ್ಳೆಯದರ ಕಡೆಯೇ ಸಾನ್ವಿಯ ಬೆಂಬಲ, ದೊಡ್ಡಪ್ಪನ ಅಟ್ಟಹಾಸದ ನಡುವೆಯೂ ಸಾನ್ವಿ ಒಳಗೊಳಗೆ ತನ್ನ ಅಣ್ಣನ ಪರ ನಿಂತು ಅವನಿಗೆ ಸಹಾಯ ಮಾಡುತ್ತಾಳೆ.

* ಇದೇ ಮೊದಲ ಧಾರವಾಹಿಯ?

‘ಓಂ ಶಾಂತಿ ಓಂ’ ಎಂಬ ಧಾರವಾಹಿಯಲ್ಲಿ ನಟಿಸಿದ್ದೆ. ಕೇವಲ ಎರಡು ದಿನ ಮಾತ್ರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ ಕಾರಣಾಂತರಗಳಿಂದ ಆ ಧಾರವಾಹಿ ನಿಂತು ಹೋಯಿತು.

* ‘ಮನೆ ದೇವ್ರು’ ಧಾರವಾಹಿಯಲ್ಲಿ ಅವಕಾಶ ಹೇಗೆ ಸಿಕ್ಕಿತು?

ಧಾರವಾಹಿಗಾಗಿ ಆಡಿಶನ್ ನಡೆಯುತಿತ್ತು, ಮನೆಯವರ ಒಪ್ಪಿಗೆ ಪಡೆದು ಆಡಿಶನ್ ನೀಡಿ ಪಾತ್ರಕ್ಕೆ ಆಯ್ಕೆಯಾದೆ.

* ಮೊದಲ ದಿನ ಕ್ಯಾಮೆರಾ ಎದುರಿಸಿದ ಅನುಭವ ಹೇಗಿತ್ತು?

ಅಯ್ಯೊ ತುಂಬ ಹೆದರಿಬಿಟ್ಟಿದ್ದೆ, ಆದರೆ ಹಿರಿಯ ಕಲಾವಿದರು ಧೈರ್ಯ ತುಂಬಿದರು. ಈಗಲೂ ಅವರ ಮಾರ್ಗದರ್ಶನ ಮಾಡುತ್ತಲೇ ಇರುತ್ತಾರೆ.

* ಸೆಟ್‌ ವಾತಾವರಣ ಹೇಗಿದೆ?

‘ಮನೆ ದೇವ್ರು’  ಸೆಟ್‌ ನನಗೆ ಎರಡನೇ ಮನೆಯಂತೆಯೇ ಆಗಿಬಿಟ್ಟಿದೆ. ನಾವೆಲ್ಲ ಬಹಳ ಅನ್ಯೋನ್ಯವಾಗಿ ಇರುತ್ತೇವೆ. ಸದಾ ತಮಾಷೆ, ಒಬ್ಬರಿಗೊಬ್ಬರು ಬೆಂಬಲ, ಮಾರ್ಗದರ್ಶನ ಮಾಡುತ್ತಾ ಧಾರಾವಾಹಿ ಉತ್ತಮವಾಗಿ ಮೂಡಿಬರಲು ಶ್ರಮಿಸುತ್ತಿದ್ದೇವೆ.

* ನಿಜ ಜೀವನದಲ್ಲಿ ನೀವು ತರಲೇನಾ?

ಹೌದು, ನಾನು ತುಂಬ ತರಲೆ, ಕಾಲೇಜು, ಮನೆಯಲ್ಲೂ ಹಾಗೇನೇ, ಸುಮ್ಮನೆ ಇರಬೇಕೆಂದರೆ ನನ್ನಿಂದಾಗೋದೇ ಇಲ್ಲ.

* ಧಾರಾವಾಹಿಯಲ್ಲಿ ನಿಮ್ಮ ದೊಡ್ಡಪ್ಪನ ವಿರುದ್ಧ ಯಾವಾಗ ತಿರುಗಿ ಬೀಳುತ್ತೀರಾ?

ತಿರುಬಿದ್ದಾಗಲೆಲ್ಲಾ ಒದೆ ತಿನ್ನುತ್ತೇನೆ, ಹಾಗಾಗಿ ಸದ್ಯಕ್ಕಂತೂ ತಿರುಗಿ ಬೀಳುವ ಯೋಚನೆ ಇಲ್ಲ. ನಿರ್ದೇಶಕರು ಹೇಳಿದ್ರೆ ಮತ್ತೆ ತಿರುಮಂತ್ರ ಹಾಕೋದೇ...

* ಸಿನಿಮಾದಲ್ಲಿ ನಟಿಸಲು ಇಷ್ಟವಿದೆಯೆ?

ಈಗಾಗಲೇ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದಲ್ಲಿ ನಟಿಸಿದ್ದೇನೆ ಅದು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಚಿತ್ರೀಕರಣ ನಡೆಯುತ್ತಿದೆ.

* ಧಾರಾವಾಹಿಗೂ ಸಿನಿಮಾಗೂ ಏನು ವ್ಯತ್ಯಾಸ?

ಧಾರಾವಾಹಿಗೆ ಹೋಲಿಸಿದಲ್ಲಿ ಸಿನಿಮಾ ಸುಲಭ ಎನಿಸುತ್ತದೆ. ಧಾರಾವಾಹಿಯಲ್ಲಿ ದಿನಕ್ಕೆ 18–20 ದೃಶ್ಯಗಳನ್ನು ಚಿತ್ರೀಕರಿಸಿದ್ದೂ ಇದೆ. ಸಿನಿಮಾದಲ್ಲಿ ಎರಡು–ಮೂರು ದೃಶ್ಯಗಳಿಗೆ ಪ್ಯಾಕಪ್‌ ಮಾಡಿಬಿಡುತ್ತಾರೆ.

* ನಿಮ್ಮ ಫೇವರಿಟ್‌ ನಾಯಕ?

ನಾನು ಮೆಗಾಸ್ಟಾರ್‌ ಚಿರಂಜೀವಿ ಅವರ ದೊಡ್ಡ ಫ್ಯಾನ್‌. ಸಣ್ಣ ವಯಸ್ಸಿನಲ್ಲಿ ಅವರ ‘ಡ್ಯಾಡಿ’ ಚಿತ್ರ ನೋಡಿ ಅವರ ಅಭಿಮಾನಿಯಾದೆ. ಈಗಲೂ ಅವರ ಚಿತ್ರ ಮಿಸ್ ಮಾಡುವುದೇ ಇಲ್ಲ. ಕನ್ನಡದಲ್ಲಿ ವಿಷ್ಣುವರ್ಧನ್ ಬಹಳ ಇಷ್ಟ.

* ಇಷ್ಟದ ನಾಯಕಿ?

ಸೌಂದರ್ಯ ಮತ್ತು ಶ್ರೀದೇವಿ ಬಹಳ ಇಷ್ಟ.

* ನಿಮ್ಮ ಹವ್ಯಾಸಗಳು?

ಕಾರ್ಟೂನ್‌ ಪುಸ್ತಕ, ನೀಳ ಕಾದಂಬರಿಗಳು ಓದುವುದು ಕಷ್ಟ. ಹಾಡುವುದು ಮತ್ತು ಪ್ರವಾಸ ಇಷ್ಟ.

* ಕೊನೆಯದಾಗಿ ನೋಡಿದ ಸಿನಿಮಾ ಯಾವುದು?

‘ಶುದ್ಧಿ’ ಸಿನಿಮಾ. ಬಹಳ ಇಷ್ಟವಾಯಿತು.

* ಶೂಟಿಂಗ್‌ನಲ್ಲಿ ತುಂಬಾ ಬ್ಯುಸಿನಾ?

ಹೌದು, ಬೆಳಿಗ್ಗೆಯಿಂದ ರಾತ್ರಿವರೆಗೂ ಚಿತ್ರೀಕರಣ ನಡೆಯುತ್ತೆ. ಹಾಗಾಗಿ ಸಮಯ ಸಿಗುವುದೇ ಕಡಿಮೆ. ಗೆಳೆಯರ ಮದುವೆಗೂ ಹೋಗಲಾಗುತ್ತಿಲ್ಲ. ಅವರಿಂದ ಬೈಸಿಕೊಳ್ಳುತ್ತಿದ್ದೇನೆ.

* ನಿಮಗೆ ಅಭಿಮಾನಿಗಳು ಹೆಚ್ಚುತ್ತಿದ್ದಾರಂತೆ?

ಹೌದು, ಸಿನಿಮಾ, ಮಾರ್ಕೆಟ್‌ಗೆ ಹೋದಾಗಲೆಲ್ಲಾ ಗುರುತು ಹಿಡಿದು ಮಾತನಾಡಿಸುತ್ತಾರೆ ಆಗೆಲ್ಲ ಬಹಳ ಖುಷಿಯಾಗುತ್ತೆ.  v

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry