ರಾಗಿ ಗಂಜಿ ಮತ್ತು ‘ರಂಕಲ್‌ ರಾಟೆ’!

7

ರಾಗಿ ಗಂಜಿ ಮತ್ತು ‘ರಂಕಲ್‌ ರಾಟೆ’!

Published:
Updated:
ರಾಗಿ ಗಂಜಿ ಮತ್ತು ‘ರಂಕಲ್‌ ರಾಟೆ’!

ನಿರ್ದೇಶಕ ಆಗಬೇಕೆಂಬ ಕನಸುಗಳ ಮೂಟೆ ಹೊತ್ತು ಮಹಾನಗರಕ್ಕೆ ಬರುವ ಮಂದಿಗೆ ಕೊರತೆ ಇಲ್ಲ. ಆದರೆ ಯಶಸ್ಸು ಗಳಿಸುವವರು ಮಾತ್ರ ಬೆರಳೆಣಿಕೆಯಷ್ಟು. ಯಶಸ್ವಿಯಾದವರ ಸಾಲಿಗೆ ಸೇರಲಿದ್ದಾರೆ ‘ರಂಕಲ್‌ ರಾಟೆ’ ಚಿತ್ರದ ನಿರ್ದೇಶಕ ಗೋಪಿ ಕೆರೂರು.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕು ಕೆರೂರು ಗೋಪಿ ಅವರ ಊರು. ತಂದೆ–ತಾಯಿ ಇಬ್ಬರೂ ರಂಗಕಲಾವಿದರು.  ಗೋಪಿ ಓದಿದ್ದು ಹತ್ತನೇ ತರಗತಿವರೆಗೆ. ಅಮ್ಮನ ಆಸೆಯಂತೆ ನಿರ್ದೇಶಕನಾಗುವ ಗುರಿಯೊಂದಿಗೆ ಬೆಂಗಳೂರು ಬಸ್‌ ಹತ್ತಿದರು. ಮೆಜೆಸ್ಟಿಕ್‌ನಲ್ಲಿ ಕಂಡ ಲೈಂಗಿಕ  ವೃತ್ತಿನಿರತರು, ಅಣ್ಣಮ್ಮ ದೇವಸ್ಥಾನದ ಮುಂಭಾಗದ ಭಿಕ್ಷುಕರು, ಚಿಂದಿ ಆಯುವ ಮಕ್ಕಳ ಬಗ್ಗೆ ಲೇಖನಗಳನ್ನು ಬರೆದರು. 

1999ರಲ್ಲಿ ಆದರ್ಶ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನಲ್ಲಿ ನಿರ್ದೇಶನ, ನಟನೆಗೆ ಸಂಬಂಧಿಸಿದ ಡಿಪ್ಲೊಮಾ ಮಾಡಿದರು. ಅಲ್ಲಿ ಹಲವಾರು ಸಿನಿ ನಿರ್ದೇಶಕರ ಪರಿಚಯವೂ ಆಯಿತು. ಡಿ.ರಾಜೇಂದ್ರ ಬಾಬು ಅವರ ‘ಕೃಷ್ಣಲೀಲೆ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗುವ ಅವಕಾಶ ಸಿಕ್ಕಿತು. ನಂತರ ಎಸ್‌.ನಾರಾಯಣ್‌ ಅವರ ‘ಬಾನಲ್ಲೂ ನೀನೆ ಭುವಿಯಲ್ಲೂ ನೀನೆ’, ಶಿವಮಣಿ ನಿರ್ದೇಶನದ ‘ಲಾ ಅಂಡ್‌ ಆರ್ಡರ್‌’, ಎಂ.ಎಸ್‌.ರಾಜಶೇಖರ್‌ ನಿರ್ದೇಶನದ ‘ಯಾರಿಗೆ ಸಾಲುತ್ತೆ ಸಂಬಳ’ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು.

ಕಥೆ ಹುಟ್ಟಿದ ಬಗೆ: ‘ನನ್ನ ಮಗನಿಗೆ ಸ್ಕೇಟಿಂಗ್‌ ಕಲಿಸಬೇಕೆಂಬ ಆಸೆಯಾಯಿತು. ಮನೆ ಸಮೀಪದ ಚನ್ನಮ್ಮನಕೆರೆ ಆವರಣದಲ್ಲಿ ಸ್ಕೇಟಿಂಗ್‌ ರಿಂಕ್‌ ಇದೆ. ಅಲ್ಲಿಗೆ ಕರೆದುಕೊಂಡು ಹೋದೆ. ಸ್ಕೇಟಿಂಗ್‌ಗೆ ಬಳಸುವ ಶೂಗಳಿಗೆ ಸಾವಿರಾರು ರೂಪಾಯಿ ಬೆಲೆಯಿದೆ. ವ್ಹೀಲ್‌ಗಳೂ ದುಬಾರಿ. ಬಡಮಕ್ಕಳು ಇಂಥ ಆಟಗಳನ್ನು ಹೇಗೆ ಕಲಿಯಲು ಸಾಧ್ಯ ಎನಿಸಿತು. ಅಲ್ಲಿ  ಸಿನಿಮಾ ಕಥೆ ಹುಟ್ಟಿಕೊಂಡಿತು’ ಎನ್ನುತ್ತಾರೆ ನಿರ್ದೇಶಕ ಗೋಪಿ ಕೆರೂರು.

‘ರಂಕಲ್‌ ರಾಟೆ’, ಸ್ಕೇಟಿಂಗ್‌ ಕ್ರೀಡೆಗೆ ಸಂಬಂಧಿಸಿದ ಸಿನಿಮಾವಾಗಿದ್ದು, ಕ್ಲಬ್‌ ಒಂದರ ಶೌಚಾಲಯ ಶುಚಿಗೊಳಿಸುವ ಹುಡುಗ ಹೇಗೆ ಸ್ಕೇಟಿಂಗ್‌ ಕಲಿಯುತ್ತಾನೆ ಎಂಬುದು ಕಥೆ. ಕ್ರೀಡೆಯೊಂದಿಗೆ ಪ್ರೀತಿಯ ಕಥೆಯೊಂದು ಸೇರಿಕೊಂಡಿದೆಯಂತೆ.

‘ಕಥೆ ಸಿದ್ಧವಾಯಿತು ಆದರೆ ನಿರ್ಮಾಪಕರು ಸಿಗಬೇಕಲ್ಲ? ಬನಶಂಕರಿ ಎರಡನೇ ಹಂತದಲ್ಲಿರುವ ಬೃಂದಾವನ ಉದ್ಯಾನದಲ್ಲಿ ಬೆಳಿಗ್ಗೆ 6ರಿಂದ 10 ಗಂಟೆವರೆಗೆ ರಾಗಿ ಗಂಜಿ ಮಾರುತ್ತಿದ್ದೆ. ಬಹಳಷ್ಟು ಮಂದಿ ಪರಿಚಯವಾದರು. ಅದರಲ್ಲಿ ನಿರ್ಮಾಪಕ ಬೈಸಾನಿ ಸತೀಶ್‌ ಕುಮಾರ್ ಒಬ್ಬರು. ನನ್ನ ಕಥೆ ಕೇಳಿ ಸಿನಿಮಾ ಮಾಡಲು ಒಪ್ಪಿದರು. ಸಿನಿಮಾ ಮಾಡುವ ಕನಸು ಚಿಗುರೊಡೆಯಿತು. ಮಂಗಳೂರು, ಮೈಸೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣವಾಯಿತು. ಒಟ್ಟು ₹80 ಲಕ್ಷ ಖರ್ಚು ಮಾಡಿದ್ದಾರೆ’ ಎನ್ನುತ್ತಾರೆ ಅವರು.

‘ಸಿನಿಮಾಕ್ಕಾಗಿ ಮೈಸೂರಿನ ಸ್ಕೇಟಿಂಗ್‌ ತರಬೇತುದಾರ ಶ್ರೀಕಾಂತ್‌ ಅವರನ್ನು ಭೇಟಿ ಮಾಡಿ, ಬಹಳಷ್ಟು ಮಾಹಿತಿ ಪಡೆದೆ. ಒಟ್ಟು ಐದು ಹಾಡುಗಳಿವೆ. ಬಾಲಿವುಡ್‌ನ ಗಾಯಕರಾದ ಸುಖವಿಂದರ್‌ ಸಿಂಗ್‌ ಹಾಗೂ ಕೈಲಾಶ್‌ ಖೇರ್‌ ತಲಾ ಒಂದು ಗೀತೆಗಳನ್ನು ಹಾಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಆಡಿಯೊ ಸೀಡಿ ಹಾಗೂ ಟ್ರೇಲರ್‌ ಬಿಡುಗಡೆ ಆಗಿದ್ದು, ಚಿತ್ರ ಮುಂದಿನ ತಿಂಗಳು ತೆರೆಗೆ ಬರಲಿದೆ’ ಎಂದರು ಗೋಪಿ.

ಗೋಪಿ ಅವರು ‘ರಂಕಲ್‌ ರಾಟೆ’ಯ ನಂತರ ‘ಬ್ರೂಸ್‌ ಲೀ’ ಸಿನಿಮಾ ಮಾಡುತ್ತಿದ್ದಾರೆ. ಸೈಕಲ್‌ ಶಾಪ್‌ನ ಹುಡುಗ ಬ್ರೂಸ್‌ಲೀಯ ಗೋರಿ ನೋಡಲು ಹೋಗುವ ಕಥೆ ಚಿತ್ರದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry