ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿಭೆಯಿಂದಲೇ ಬೆಳಗುವಾಸೆ’

Last Updated 12 ಜೂನ್ 2017, 19:30 IST
ಅಕ್ಷರ ಗಾತ್ರ

ಹಿನ್ನೆಲೆ ಗಾಯಕಿ ಆಗಬೇಕೆಂದು ಸಿನಿಮಾ ಜಗತ್ತು ಪ್ರವೇಶಿಸಿದವರು ಮೈಸೂರಿನ ಅಮೂಲ್ಯ ಗೌಡ.  ಬಾಲ್ಯದಲ್ಲೇ ‘ಚಂದನ’ ವಾಹಿನಿಯ ‘ತಿಪ್ಪಯ್ಯನ ಮದುವೆ’ ಧಾರಾವಾಹಿಗೆ ಬಣ್ಣ ಹಚ್ಚಿದ್ದ ಅವರು, ಓದಿನ ಕಾರಣಕ್ಕೆ ಕೆಲಕಾಲ ಅಭಿನಯವನ್ನು ಬದಿಗಿರಿಸಿದ್ದರು.

ಸೋದರ ಸಂಬಂಧಿ ಅಣ್ಣ, ನಟ ಅಶ್ವತ್ಥ್ ನೀನಾಸಂ ಅವರ ಅಭಿನಯದ ಪಟ್ಟುಗಳನ್ನು ನೋಡುತ್ತಿದ್ದ ಅಮೂಲ್ಯಗೆ  ಅವರಂತೆಯೇ ಬಣ್ಣದ ಲೋಕದಲ್ಲಿ ಮಿಂಚುವಾಸೆ.

ಆ ಆಸೆಗೆ ನೀರೆರೆದವರು ಸಂಗೀತ ನಿರ್ದೇಶಕ ವಿ. ಮನೋಹರ್. ಅಮೂಲ್ಯ ಅವರ ಪ್ರತಿಭೆಯನ್ನು ಗುರುತಿಸಿದ ಮನೋಹರ್, ಹಲವು ಸಿನಿಮಾಗಳಲ್ಲಿ ಟ್ರ್ಯಾಕ್ ಸಿಂಗಿಂಗ್ ಮತ್ತು ಡಬ್ಬಿಂಗ್‌ಗೆ ಅವಕಾಶ ಕೊಟ್ಟರು. ಕೆಲಕಾಲ ಮಾಡೆಲಿಂಗ್ ಕ್ಷೇತ್ರದಲ್ಲೂ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದ ಅಮೂಲ್ಯ, ಅನೇಕ ಜಾಹೀರಾತು ಮತ್ತು ವಿಡಿಯೊ ಶೂಟ್‌ಗಳಲ್ಲೂ ಕಾಣಿಸಿಕೊಂಡಿದ್ದಾರೆ.

2016ರಲ್ಲಿ ನಡೆದ ‘ಸೌತ್ ಇಂಡಿಯಾ ಪ್ರಿನ್ಸೆಸ್‌’ ಸೌಂದರ್ಯ ಸ್ಪರ್ಧೆಯಲ್ಲಿ ‘ಪ್ರಿನ್ಸೆಸ್‌ ಆಫ್ ಕರ್ನಾಟಕ’ ಆಗಿ ಆಯ್ಕೆಯಾದರು. ಜತೆಗೆ ಆರೇಳು ನಾಟಕಗಳಲ್ಲೂ ಅಭಿನಯಿಸಿದ್ದಾರೆ.

ನಟ ಮಂಡ್ಯ ರಮೇಶ್ ಅವರ ‘ನಟನಾ’ ತಂಡ ಮತ್ತು ಮುರಳಿ ಶೃಂಗೇರಿ ಅವರ ಬಳಿ ಅಭಿನಯದ ಪಟ್ಟುಗಳನ್ನು ಅಭ್ಯಾಸ ಮಾಡಿರುವ ಅವರಿಗೆ, ಅಣ್ಣ ಕೂಡಾ ಅಭಿನಯದ ಕುರಿತು ಸಲಹೆ ಕೊಡುತ್ತಾರಂತೆ. 

‘ನೋಡಲು ಚೆನ್ನಾಗಿದ್ದೀಯಾ ಯಾಕೆ ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸಬಾರದು?’ ಎಂದು ಸ್ನೇಹಿತರು ಹುರಿದುಂಬಿಸಿದ್ದರಂತೆ. ಅದೇ ಸಮಯಕ್ಕೆ ಉದಯ ಟಿ.ವಿಯ ‘ಸುಂದರಿ’ ಧಾರಾವಾಹಿಯಲ್ಲಿ ಪ್ರೀತಿ  ಎನ್ನುವ ಪಾತ್ರಕ್ಕೆ ಆಯ್ಕೆಯಾದುದು ಕಾಕತಾಳೀಯ.

ಅಲ್ಲಿಂದ ಹಿಂತಿರುಗಿ ನೋಡದ ಅಮೂಲ್ಯ,  ಕೆಲ ಕಾಲ ಜನತಾ ಕನ್ನಡ ವಾಹಿನಿ ಸೇರಿದಂತೆ ಸ್ಥಳೀಯ ವಾಹಿನಿಗಳಲ್ಲಿ ನಿರೂಪಕಿಯಾಗಿಯೂ ಕೆಲಸ ಮಾಡಿದರು.

‘ಧಾರಾವಾಹಿಯಲ್ಲಿನ ಅಭಿನಯ ನೋಡಿ ಮೆಚ್ಚಿದ ನಟಿ ಪೂಜಾ ಗಾಂಧಿ ತಮ್ಮ ‘ಬ್ಲ್ಯಾಕ್ ವರ್ಸೆಸ್ ವೈಟ್’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಮಾಡಿಕೊಂಡರು. ರಾಮ್ ಗೋಪಾಲ್ ವರ್ಮಾ ಅವರ ಶಿಷ್ಯ ಜೆ.ಡಿ.ಚಕ್ರವರ್ತಿ ಅವರ ನಿರ್ದೇಶನದ ಈ ಚಿತ್ರಕ್ಕೆ ಆಯ್ಕೆಯಾಗಿದ್ದು ಅದೃಷ್ಟ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅಮೂಲ್ಯ.

ಈಗಾಗಲೇ ಅಮೂಲ್ಯ ಹೆಸರಿನ ನಟಿ ಚಂದನವನದಲ್ಲಿದ್ದಾರಲ್ಲ ಎಂದು ಪ್ರಶ್ನಿಸಿದರೆ, ‘ಒಂದೇ ಹೆಸರಿನ ಇಬ್ಬಿಬ್ಬರು ನಟಿಯರು ಬಹಳಷ್ಟಿದ್ದಾರೆ. ಆದರೆ, ಅವರೆಲ್ಲರೂ ಅವರವರ ಪ್ರತಿಭೆಯಿಂದಲೇ ಪ್ರೇಕ್ಷಕರ ಮನದಲ್ಲಿ ನೆಲೆಸುತ್ತಾರೆ. ನಾನೂ ಅದೇ ಹಾದಿಯಲ್ಲಿದ್ದೇನೆ’ ಎಂದು ಜಾಣ್ಮೆಯಿಂದ ಉತ್ತರಿಸುತ್ತಾರೆ ಅಮೂಲ್ಯ.

‘ಮಿನುಗುತಾರೆ ಕಲ್ಪನಾ, ಸೌಂದರ್ಯ, ಜ್ಯೂಲಿ ಲಕ್ಷ್ಮೀ, ಪ್ರೇಮಾ ಅವರ ನಟನೆ ಇಷ್ಟ. ಅವರಂತೆ ನಟಿಸುವಾಸೆ. ನಟನೆಯ ಜತೆಗೆ ಓದನ್ನೂ  ಮುಂದುವರಿಸುವೆ. ಇನ್ನೆರೆಡು ವರ್ಷ ಕಳೆದರೆ ವಕೀಲೆಯಾಗಿ ವಾದವನ್ನೂ ಮಾಡಬಹುದು’ ಎನ್ನುತ್ತಾರೆ ಅವರು.

‘ಸಿನಿಮಾ ಲೋಕದಲ್ಲಿದ್ದರೂ ಅಣ್ಣ ಅಶ್ವತ್ಥ್ ಯಾವತ್ತೂ ಗಾಡ್‌ಫಾದರ್ ರೀತಿ ವರ್ತಿಸಿಲ್ಲ. ನಿನ್ನ ಪ್ರತಿಭೆಯಿಂದಲೇ ಜನ ನಿನ್ನನ್ನು ಗುರುತಿಸಬೇಕು ಎಂದು ಸಲಹೆ  ನೀಡುತ್ತಾರೆ. ಮನೆಯಲ್ಲಿ ಅಪ್ಪ, ಸೋದರತ್ತೆ ನನ್ನ ಪ್ರತಿಭೆಗೆ ಬೆನ್ನುತಟ್ಟಿ ಪ್ರೋತ್ಸಾಹ ನೀಡುತ್ತಾರೆ. ಸಿಗುವ ಅವಕಾಶಗಳಲ್ಲೇ ನನ್ನ ಪ್ರತಿಭೆ ತೋರಿಸಬೇಕು’ ಎನ್ನುವ ಅಮೂಲ್ಯ ಅವರಿಗೆ ಚಂದನವನದಲ್ಲೇ ಹೆಸರು ಮಾಡುವಾಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT