ರಸೆಲ್‌ ಮಾರುಕಟ್ಟೆಯಲ್ಲಿ ಬಗೆ ಬಗೆ ಖರ್ಜೂರ

6

ರಸೆಲ್‌ ಮಾರುಕಟ್ಟೆಯಲ್ಲಿ ಬಗೆ ಬಗೆ ಖರ್ಜೂರ

Published:
Updated:
ರಸೆಲ್‌ ಮಾರುಕಟ್ಟೆಯಲ್ಲಿ ಬಗೆ ಬಗೆ ಖರ್ಜೂರ

ರಂಜಾನ್‌ ಬಂತೆಂದರೆ ಖರ್ಜೂರಕ್ಕೆ ಎಲ್ಲಿಲ್ಲದ ಬೇಡಿಕೆ. ಮುಸ್ಲಿಮರು ದಿನದ ಉಪವಾಸ ಮುರಿಯುವುದೇ ಖರ್ಜೂರ ಸೇವಿಸುವ ಮೂಲಕ.

ಮುಸ್ಲಿಮರು ಖರ್ಜೂರವನ್ನು ಮಹಮ್ಮದ್ದರ ಆಶೀರ್ವಾದವೆಂದೇ ನಂಬುತ್ತಾರೆ. ರಂಜಾನ್‌ ಸಂದರ್ಭದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಉಪವಾಸ ಮಾಡುವುದರಿಂದ ಹೊಟ್ಟೆಯಲ್ಲಿ ಗ್ಯಾಸ್‌ ತುಂಬಿರುತ್ತದೆ. ಇದು ಬೇರೆ ರೀತಿಯ ಆರೋಗ್ಯ ಸಮಸ್ಯೆಗೂ ಕಾರಣವಾಗಬಹದು. ಹಾಗಾಗಿ ಊಟ ಸೇವಿಸುವ ಮುನ್ನ ಖರ್ಜೂರ ಸೇವಿಸಿದರೆ ಹೊಟ್ಟೆ ಒಳಗಿನ ಗ್ಯಾಸ್ ನಿವಾರಣೆಯಾಗಿ ಜೀರ್ಣಾಂಗ ವ್ಯವಸ್ಥೆ ಸರಿಯಾಗುತ್ತದೆ.

ರಂಜಾನ್ ತಿಂಗಳಲ್ಲಿ ನಗರದ ಹಲವೆಡೆ ವಿವಿಧ ಬಗೆಯ ಖರ್ಜೂರಗಳು ದೊರಕುತ್ತವೆ. ಶಿವಾಜಿನಗರದ ರಸೆಲ್ ಮಾರ್ಕೆಟ್‌ನ ಡಿಲೀಶಿಯಸ್ ಖರ್ಜೂರದ ಅಂಗಡಿಯಲ್ಲಿ 52 ವಿಧಗಳ ಖರ್ಜೂರ ಸಿಗುವುದು ವಿಶೇಷ.

ಮಹಮ್ಮದ್ ಇದ್ರೀಸ್‌ ಚೌಧರಿ ಅವರ ಡಿಲೀಶಿಯಸ್ ಖರ್ಜೂರದ ಅಂಗಡಿಯಲ್ಲಿ 7 ದೇಶದ 52 ವಿಧದ ಖರ್ಜೂರಗಳು ದೊರಕುತ್ತವೆ. ಅಂಗಡಿ ಪ್ರವೇಶಿಸಿದರೆ ಖರ್ಜೂರದ ಮೇಳಕ್ಕೆ ಹೊಕ್ಕ ಅನುಭವವಾಗುವಷ್ಟು ಬಗೆಬಗೆಯ ಖರ್ಜೂರಗಳು ಇಲ್ಲಿವೆ. 

ಕೆಲವು ವರ್ಷಗಳ ಹಿಂದೆ ಮೆಕ್ಕಾ–ಮದಿನಾಕ್ಕೆ ಹೋಗಿದ್ದ ಇದ್ರೀಸ್‌ ಅಲ್ಲಿ ಬಗೆಬಗೆಯ ಖರ್ಜೂರಗಳನ್ನು ನೋಡಿ ಈ ರುಚಿಕರ ಖರ್ಜೂರಗಳು ನಗರದಲ್ಲೂ ಸಿಗುವಂತಾಗಬೇಕು ಎಂದು ವಿದೇಶದಿಂದ ಖರ್ಜೂರ ತರಿಸಲು ಪ್ರಾರಂಭಿಸಿದರು. ಅಂದಿನಿಂದ ಇವರ ಅಂಗಡಿ ವಿದೇಶಿ ಖರ್ಜೂರಗಳಿಗೆ ಹೆಸರುವಾಸಿ. ನಗರದ ಹಲವೆಡೆಗಳಿಂದ ಗ್ರಾಹಕರು ಇಲ್ಲಿಗೆ ಖರ್ಜೂರ ಕೊಳ್ಳಲು ಬರುತ್ತಾರೆ.

(ರಸೆಲ್ ಮಾರ್ಕೆಟ್‌ನ ಡಿಲೀಶಿಯಸ್‌ ಖರ್ಜೂರದ ಅಂಗಡಿ)

ಅಜುವಾ ಖರ್ಜೂರ, ಶುಗರ್ ಫ್ರೀ ಮೆಡ್ಜಾಲ್‌ ಕಿಂಗ್ ಖರ್ಜೂರ, ಸಫಾವಿ, ಸುಖ್ರಿ, ಅರ್ಧ ಬಿಳಿ ಬಣ್ಣದ ಸುಗಾಯಿ ಖರ್ಜೂರಗಳು ಇದ್ರೀಸ್‌ ಅವರ ಅಂಗಡಿಯಲ್ಲಿನ ವಿಶೇಷ. ಮೆಕ್ಕಾ–ಮದಿನಾ, ದಕ್ಷಿಣ ಆಫ್ರಿಕಾ, ಇರಾನ್‌, ಜೋರ್ಡಾನ್‌ ದೇಶಗಳಿಂದ ತರಿಸಲಾದ ವಿಶೇಷ ಖರ್ಜೂರಗಳಿವು. 

ಖರ್ಜೂರದ ಜೊತೆ ಜೇನು, ಕೇಸರಿ, ಬಾದಾಮಿಗಳನ್ನು ಹಾಕಿ ಸ್ಟಫ್ ಮಾಡಿದ ಅಸಾರ್ಡೆಟ್ ಖರ್ಜೂರಗಳೂ ಇಲ್ಲಿವೆ. ಅತ್ಯುತ್ತಮ ಗುಣಮಟ್ಟದ ಅಜುವಾ ಅಸಾರ್ಟೆಡ್‌ ಖರ್ಜೂರ ಕೆಜಿಯೊಂದಕ್ಕೆ ₹7,400. ಇದರ ಜೊತೆ ವಿವಿಧ ಫ್ಲೇವರ್ ಸೇರಿಸಿದ ಚಾಕೊಲೇಟ್‌ ಖರ್ಜೂರ, ಬಿಸ್ಕತ್‌ ಫ್ಲೇವರ್‌ ಇರುವ ಖರ್ಜೂರಗಳೂ ಇಲ್ಲಿವೆ.

ಕೆಜಿಗೆ ₹140ರಿಂದ ಪ್ರಾರಂಭವಾಗಿ ₹7,400ವರೆಗಿನ ಮೌಲ್ಯದ ಖರ್ಜೂರಗಳು ಇದ್ರೀಸ್‌ ಅವರ ಅಂಗಡಿಯಲ್ಲಿ ದೊರಕುತ್ತವೆ. ದಿನವೊಂದಕ್ಕೆ ಸುಮಾರು 1 ಟನ್ ಖರ್ಜೂರ ಮಾರಾಟ ಮಾರಾಟವಾಗುತ್ತದೆಯಂತೆ.  ಸ್ಥಳೀಯ ಮಸೀದಿಗಳಿಗೆ ದಿನಕ್ಕೆ 500ರಿಂದ 600 ಕೆಜಿ ಖರ್ಜೂರ ಮಾರುತ್ತಾರಂತೆ.

ಕೇವಲ ಮುಸ್ಲಿಮರಷ್ಟೆ ಅಲ್ಲ ಇತರ ಧರ್ಮೀಯರು ಖರ್ಜೂರ ಕೊಳ್ಳಲು ಇಲ್ಲಿಗೆ ಬರುತ್ತಾರೆ. ‘ನಗರದ ಬಹುತೇಕ ಪ್ರಮುಖ ವ್ಯಕ್ತಿಗಳು ನಮ್ಮ ಗ್ರಾಹಕರು’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಇದ್ರೀಸ್‌.

ಖರ್ಜೂರ ಅತ್ಯಂತ ಆರೋಗ್ಯಕರ. ಇದರಿಂದ ಮೂಳೆಗಳಿಗೆ ಶಕ್ತಿ ಬರುತ್ತದೆ, ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಲೈಂಗಿಕ ನಿಶ್ಯಕ್ತಿ ದೂರಾಗುತ್ತದೆ. ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ದಿನನಿತ್ಯ ಎರಡು ಖರ್ಜೂರ ಒಂದು ಗ್ಲಾಸು ಹಾಲು ಸೇವಿಸುವವರು ಆಸ್ಪತ್ರೆಗಳ ಹತ್ತಿರವೂ ಸುಳಿಯುವಂತಿಲ್ಲ ಎಂದು ಖರ್ಜೂರದ ಗುಣಗಾನ ಮಾಡುತ್ತಾರೆ ಇದ್ರೀಸ್‌.

‘ರಂಜಾನ್ ವಿಶೇಷವೆಂದು ಖರ್ಜೂರದ ಹಲ್ವಾ ಕೂಡ ಮಾರುತ್ತಿದ್ದಾರೆ. ಏಳು ಬಗೆಯ ಖರ್ಜೂರಗಳನ್ನು ಬೆರೆಸಿ ಮಾಡಿದ ಹಲ್ವಾ ಅತ್ಯಂತ ಆರೋಗ್ಯಕರ ತಿನಿಸು’ ಎಂದು ಇದ್ರೀಸ್‌ ವಿವರಿಸುತ್ತಾರೆ. ಖರ್ಜೂರದ ಹೊರತಾಗಿ ಬದಾಮಿ, ಗೋಡಂಬಿ, ದ್ರಾಕ್ಷಿ ಮುಂತಾದ ಒಣಹಣ್ಣುಗಳೂ ಇಲ್ಲಿ ದೊರಕುತ್ತವೆ. ಇವುಗಳ ಜೊತೆಗೆ ವಿದೇಶದಿಂದ ತರಿಸಿದ ಪೈನ್ ಬೀಜ, ಮ್ಯಾಕೆಡಾಮಿಯಾ ಬೀಜಗಳೂ ಇವೆ. ರಂಜಾನ್‌ ಮುಗಿಯುವವರೆಗೂ ಪ್ರತಿ ಭಾನುವಾರದಿಂದ ಗುರುವಾರದವರೆಗೆ ಖರ್ಜೂರವನ್ನು ಶೇ 30 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry