ವ್ಯಂಗ್ಯಚಿತ್ರ ಗ್ಯಾಲರಿಗೆ ದಶಕದ ಸಂಭ್ರಮ

7

ವ್ಯಂಗ್ಯಚಿತ್ರ ಗ್ಯಾಲರಿಗೆ ದಶಕದ ಸಂಭ್ರಮ

Published:
Updated:
ವ್ಯಂಗ್ಯಚಿತ್ರ ಗ್ಯಾಲರಿಗೆ ದಶಕದ ಸಂಭ್ರಮ

ಉದಯೋನ್ಮುಖ ವ್ಯಂಗ್ಯಚಿತ್ರಕಾರರಿಗೆ ಕಲಿಕೆಯ ತಾಣವಾಗಿ, ಮಾಹಿತಿ ಮತ್ತು ಪ್ರದರ್ಶನದ ಸ್ಥಳವಾಗಿ ಭಾರತೀಯ ವ್ಯಂಗ್ಯಚಿತ್ರಕಾರ ಸಂಸ್ಥೆ ದೇಶದ ಪ್ರಥಮ ಗ್ಯಾಲರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದೀಗ ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಗ್ಯಾಲರಿಯಲ್ಲಿ 140 ಪ್ರದರ್ಶನ, ಮಾಯಾ ಕಾಮತ್ ಸ್ಮಾರಕ ಅಂತರರಾಷ್ಟ್ರೀಯ ಮಟ್ಟದ ಒಂಬತ್ತು ವ್ಯಂಗ್ಯಚಿತ್ರ ಸ್ಪರ್ಧೆ ಮತ್ತು 20ಕ್ಕೂ ಹೆಚ್ಚು ಕಾರ್ಯಾಗಾರ ನಡೆದು, ದೇಶ–ವಿದೇಶಗಳಲ್ಲಿ ಹೆಸರು ಗಳಿಸಿದೆ.

2007 ಆಗಸ್ಟ್ 16ರಂದು, ಅಂದಿನ ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರು ವ್ಯಂಗ್ಯಚಿತ್ರ ಗ್ಯಾಲರಿ ಉದ್ಘಾಟಿಸಿದ್ದರು. ಖ್ಯಾತ ವ್ಯಂಗ್ಯಚಿತ್ರಕಾರರಾದ ಆರ್. ಕೆ. ಲಕ್ಷ್ಮಣ್, ಮಾರಿಯೋ ಡಿ ಮಿರಾಂಡಾ ಅವರ ಭೇಟಿಯಿಂದ ಗ್ಯಾಲರಿ ಮುನ್ನಡೆಯಲು ಉತ್ತೇಜನ ಸಿಕ್ಕಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ಹಿನ್ನೋಟ: ಹತ್ತು ವರ್ಷಗಳಲ್ಲಿ ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ ಸಾಧನೆಯನ್ನು ಇಣುಕಿದಾಗ ಬೆಂಗಳೂರು, ಕಾರ್ಟೂನ್ ಕ್ಯಾಪಿಟಲ್ ಆಗಿ ಬದಲಾಗಿದೆ. ಹಲವು ಕಾರ್ಯಾಗಾರಗಳನ್ನು ನಡೆಸುವ ಮೂಲಕ  ಉದಯೋನ್ಮುಖ ಕಲಾವಿದರ ಬೆಳವಣಿಗೆಗೆ ಸಂಸ್ಥೆ ಶ್ರಮಿಸಿದೆ. ಇಲ್ಲಿ ತರಬೇತಿ ಪಡೆದ ವ್ಯಂಗ್ಯಚಿತ್ರಕಾರರು ಉತ್ತಮ ಸಾಧನೆ ಮಾಡಿ, ಸ್ವತಂತ್ರ ಪ್ರದರ್ಶನ ಏರ್ಪಡಿಸುವ ಮೂಲಕ ವೃತ್ತಿಪರ ವ್ಯಂಗ್ಯಚಿತ್ರಕಾರರಾಗಿ ಹೊರ ಹೊಮ್ಮಿದ್ದಾರೆ ಎನ್ನುತ್ತಾರೆ  ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿ.ಜಿ ನರೇಂದ್ರ.

ಕೋರ್ಸ್ ಆರಂಭಿಸುವ ಚಿಂತನೆ: ಇದೊಂದು ತರಬೇತಿ ಕೇಂದ್ರವಾಗಿ ಮಾರ್ಪಾಡಾಗಿದೆ. ದೇಶದಲ್ಲಿ ಮೊದಲ ಬಾರಿಗೆ ವ್ಯಂಗ್ಯಚಿತ್ರ ವಿಷಯ  ಕುರಿತು ಒಂದು ವರ್ಷದ ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್ ಆರಂಭಿಸುವ ಚಿಂತನೆ ನಡೆದಿದೆ. ಅದಕ್ಕೆ ಬೇಕಾದ ಕೊಠಡಿ, ಪೀಠೋಪಕರಣ ಸೇರಿದಂತೆ ಮೂಲ ಸೌಲಭ್ಯ, ಪಠ್ಯ ರಚನೆ ಕುರಿತು ಚರ್ಚೆ ನಡೆದಿದೆ.

ಫೇಸ್‌ಬುಕ್, ಟ್ವಿಟರ್ ಮುಖೇನ ಗ್ಯಾಲರಿಯ ಕಾರ್ಯ ಚಟುವಟಿಕೆಯ ವ್ಯಾಪ್ತಿ ವಿಸ್ತಾರವಾಗಿದೆ. ವಿದೇಶಿ ವ್ಯಂಗ್ಯಚಿತ್ರಕಾರರು ಭಾರತೀಯ ವ್ಯಂಗ್ಯಚಿತ್ರಗಳನ್ನು ಅವಲೋಕಿಸಲು ಮತ್ತು  ತಮ್ಮ ವ್ಯಂಗ್ಯಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲು ಸಾಮಾಜಿಕ ಜಾಲತಾಣಗಳು ನೆರವಾಗಿವೆ.  ಕಾರ್ಟೂನ್  ವಿಷಯಗಳದ್ದೇ ಕುರಿತ ಮಾಸ ಪತ್ರಿಕೆ ಹೊರ ತರುವ ಚಿಂತನೆಯೂ ಸಂಸ್ಥೆಗೆ ಇದ್ದು ಅಗತ್ಯ ಸಿದ್ಧತೆಯೂ ನಡೆದಿದೆ. ವ್ಯಂಗ್ಯಚಿತ್ರಗಳಿಗೆ ಸಂಬಂಧಿಸಿದ 500 ಪುಸ್ತಕಗಳುಳ್ಳ ಪುಟ್ಟ

ಗ್ರಂಥಾಲಯವಿದ್ದು, ಇದನ್ನು ವಿಸ್ತರಿಸುವ ಉದ್ದೇಶಸಂಸ್ಥೆಗಿದೆ.

ಮಾಯಾ ಕಾಮತ್ ಸ್ಮಾರಕ ಸ್ಪರ್ಧೆ: ನಾಡಿನ ಮಹಿಳಾ ವ್ಯಂಗ್ಯಚಿತ್ರಗಾರ್ತಿ ಮಾಯಾ ಕಾಮತ್ ಅವರ ಸ್ಮರಣಾರ್ಥ ಪ್ರತಿ ವರ್ಷ ರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆ ಪ್ರತಿ ನಡೆಯುತ್ತದೆ. ಈ ಬಾರಿಯೂ ರಾಜಕೀಯ ವ್ಯಂಗ್ಯಚಿತ್ರಗಳ ಸ್ಪರ್ಧೆ ಏರ್ಪಡಿಸಲಾಗಿದ್ದು, ಈ ಸ್ಪರ್ಧೆಯ ವಿಜೇತರಿಗೆ ಜೂನ್ 14ರಂದು ನಡೆಯಲಿರುವ

ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಅಲ್ಲದೆ, ಸ್ಪರ್ಧೆಗೆ ಬಂದ ವ್ಯಂಗ್ಯಚಿತ್ರಗಳು ಸೇರಿದಂತೆ 46 ಭಾರತೀಯ, 56 ವಿದೇಶಿ ವ್ಯಂಗ್ಯಚಿತ್ರಕಾರರ ಕಲಾಕೃತಿಗಳು ಜುಲೈ 15ರವರೆಗೆ  ಪ್ರದರ್ಶನಗೊಳ್ಳಲಿವೆ. 

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಗಿರೀಶ್ ಕಾರ್ನಾಡ್ ದಶಕದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷ ಅಶೋಕ್ ಖೇಣಿ, ಕಲಾವಿದ ಎಸ್.ಜಿ. ವಾಸುದೇವ್‌,  ಮಾಯಾ ಕಾಮತ್ ಸ್ಮಾರಕ ಸ್ಪರ್ಧೆ  ಟ್ರಸ್ಟಿ  ಅಮರನಾಥ ಕಾಮತ್, ವ್ಯಂಗ್ಯಚಿತ್ರಕಾರ ಕೇಶವ್ ಮತ್ತಿತರರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

**

ದಶಕದ ಸಂಭ್ರಮದಲ್ಲಿರುವ ಗ್ಯಾಲರಿಯು ಯುವಜನರಿಗೆ ಸ್ಫೂರ್ತಿ ತಾಣವಾಗಿದೆ. ಇದುವರೆಗೂ 500 ಮಂದಿ ಉದಯೋನ್ಮುಖ ವ್ಯಂಗ್ಯಚಿತ್ರಕಾರರು ತರಬೇತಿ ಪಡೆದಿದ್ದಾರೆ. ಇದು ಸಂಸ್ಥೆಗೆ ಖುಷಿ ಸಂಗತಿ

–ವಿ.ಜಿ.ನರೇಂದ್ರ, ವ್ಯವಸ್ಥಾಪಕ ಟ್ರಸ್ಟಿ

**

ಕಲಾಪ

ಕಾರ್ಯಕ್ರಮ: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ 10ನೇ ವರ್ಷದ ವಾರ್ಷಿಕೋತ್ಸವ

ಸ್ಥಳ: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ಎಂ.ಜಿ.ರಸ್ತೆ

ದಿನಾಂಕ, ಸಮಯ: ಜೂನ್ 14 ಬೆಳಿಗ್ಗೆ 11.30

ಪ್ರವೇಶ ದರ: ಉಚಿತ ಪ್ರವೇಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry