ಪುತ್ರಪ್ರೇಮ ಮತ್ತು ಸ್ವಂತ ಪರಿಶ್ರಮ

7

ಪುತ್ರಪ್ರೇಮ ಮತ್ತು ಸ್ವಂತ ಪರಿಶ್ರಮ

Published:
Updated:
ಪುತ್ರಪ್ರೇಮ ಮತ್ತು ಸ್ವಂತ ಪರಿಶ್ರಮ

ಕೆಎಸ್‌ಸಿಎ ಕ್ಲಬ್‌ ಹಾಲ್‌ನಲ್ಲಿ ಆ ಸಂಜೆ ಜಾತ್ರೆಯ ವಾತಾವರಣ ರೂಪುಗೊಂಡಿತ್ತು. ವೇದಿಕೆ ಹಿಂದಿನ ಪರದೆಯ ಮೇಲೆ ಬೆಟ್ಟ ಗುಡ್ಡ, ಹಸಿರು ದಾರಿಗಳಲ್ಲೆಲ್ಲ ನಾಯಕಿ ನಾಯಕನ ಹಿಂದೆ ಹಾಡುತ್ತ ಓಡುತ್ತಿದ್ದರೆ, ಹಾಲ್‌ ಹಿಂದಿನ ಒಂದು ಮೂಲೆಯಲ್ಲಿ ಗ್ಲಾಸ್‌ಗಳ ಸದ್ದು ಆ ಹಾಡಿಗೆ ಹಿನ್ನೆಲೆ ನೀಡುವಂತಿದ್ದವು.

ಅದು ‘ಮಿ. ಪರ್ಫೆಕ್ಟ್‌’ ಸಿನಿಮಾದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ.

ವೇದಿಕೆಯ ಮೇಲೆ ರಾಜಕಾರಣಕ್ಕೂ ಸಿನಿಮಾಗೂ ಇರುವ ಕೊಡುಕೊಳ್ಳುವಿಕೆಯ ಸಂಬಂಧಕ್ಕೆ ರೂಪಕವೆಂಬಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ನಿರ್ಮಾಪಕ ಚಿನ್ನೇಗೌಡರು ಅಕ್ಕಪಕ್ಕ ಕೂತಿದ್ದರು. ಒಂದು ಬದಿ ಕೂತಿದ್ದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮತ್ತೊಂದು ತುದಿಯಲ್ಲಿದ್ದ ತಮ್ಮ ಮಗ ಅನೂಪ್‌ ಅವರನ್ನೇ ಎವೆಯಿಕ್ಕದೇ ನೋಡುತ್ತಿದ್ದರು. ಮಗನ ಕುರಿತ ಪ್ರೀತಿ, ಹೆಮ್ಮೆ ಎಲ್ಲವೂ ಆ ನೋಟದಲ್ಲಿತ್ತು. ನಂತರ ಅವರಾಡಿದ ಮಾತುಗಳಲ್ಲಿಯೂ ಅದು ವ್ಯಕ್ತವಾಯಿತು.

‘ಸಿನಿಮಾ ರಂಗದಲ್ಲಿ ಯಾರೂ ಯಾವ ಗಾಡ್‌ ಫಾದರ್‌ ಸಹಾಯದಿಂದ, ಬೇರೆಯವರ ಹೆಸರು, ಕೀರ್ತಿಯಿಂದ ಮೇಲೆ ಬರಲು ಸಾಧ್ಯವಿಲ್ಲ. ಸ್ವಂತ ಪರಿಶ್ರಮಕ್ಕೆ ಮಾತ್ರ ಇಲ್ಲಿ ಬೆಲೆ. ಹಾಗೆ ನೀನೇ ಸ್ವಂತ ಪರಿಶ್ರಮದಿಂದ ಮೇಲೆ ಬಾ. ಯಾರ ಮೇಲೂ ಅವಲಂಬಿತ ಆಗಬೇಡ’ ಎಂದು ಬುದ್ಧಿಮಾತನ್ನೂ ಅವರು ಮಗನಿಗೆ ಹೇಳಿದರು.

‘ಮಿ. ಪರ್ಫೆಕ್ಟ್‌’ ಅನೂಪ್‌ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಎರಡನೇ ಚಿತ್ರ. ಈ ಚಿತ್ರದ ನಿರ್ದೇಶಕ ರಮೇಶ್‌ ಬಾಬು ಎ., ನಿರ್ಮಾಪಕ ಅವುಲ ಸುಬ್ಬಾರಾಯುಡು, ಛಾಯಾಗ್ರಾಹಕ ಸುಧಾಕರ್‌ ಮೂವರೂ ತೆಲುಗಿನವರು. ಇವರಿಗೆ ಕನ್ನಡದಲ್ಲಿ ಒಂದು ಸಿನಿಮಾ ಮಾಡಬೇಕು ಎಂದು ನಾಯಕ ನಟನಿಗಾಗಿ ಹುಡುಕಾಡುತ್ತಿದ್ದಾಗ ಅನೂಪ್‌ನನ್ನು ನೋಡಿ ಇವನೇ ತಮ್ಮ ಕಥೆಯ ಪಾತ್ರಕ್ಕೆ ‘ಪರ್ಫೆಕ್ಟ್‌’ ಅನಿಸಿದೆ.

‘ಇದೊಂದು ಜವಾಬ್ದಾರಿಯುತ ಮಗನ ಕಥೆ. ಮುಂದಿನ ಕ್ಷಣದಲ್ಲಿ ಏನಾಗುತ್ತದೆ ಎಂದು ಊಹಿಸಲೇ ಸಾಧ್ಯವಿಲ್ಲದಷ್ಟು ತಿರುವುಗಳುಳ್ಳ ಕಥೆ’ ಎಂದು ಸಿನಿಮಾ ಎಳೆಯನ್ನು ಬಿಚ್ಚಿಟ್ಟ ನಿರ್ದೇಶಕ ರಮೇಶ್‌ ಬಾಬು, ‘ಅನೂಪ್‌ ಶಿಸ್ತಿನ ನಟ. ಅವರಿಗೆ ಉಜ್ವಲ ಭವಿಷ್ಯವಿದೆ’ ಎಂದು ಬೆನ್ನುತಟ್ಟಿದರು.

‘ತೆಲುಗು ಮತ್ತು ಕನ್ನಡ ಎರಡೂ ಅವಳಿಗಳು’ ಎಂದ ನಿರ್ಮಾಪಕ ಅವುಲ ಸುಬ್ಬಾರಾಯುಡು, ಕನ್ನಡದ ಮೇಲಿನ ಅಭಿಮಾನದಿಂದಲೇ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ‘ಇದು ಅಪ್ಪಟ ಸ್ವಮೇಕ್‌ ಚಿತ್ರ’ ಎಂದು ಸ್ಪಷ್ಟೀಕರಣ ನೀಡಿಯೇ ಮಾತಿಗಿಳಿದ ಅನೂಪ್‌, ತಮ್ಮ ಮಾತಿನ ಬಹುಪಾಲನ್ನು ಕುಮಾರಸ್ವಾಮಿ ಅವರ ಗುಣಗಾನಕ್ಕೇ ಮೀಸಲಿಟ್ಟರು.

ಅನೂಪ್‌ ಅವರನ್ನು ಹಾರೈಸಲೆಂದೇ ಬಂದಿದ್ದ ಕುಮಾರಸ್ವಾಮಿ, ‘ಯಾವುದೇ ಕಲಾವಿದ ಚಿತ್ರರಸಿಕರ ಮನದಾಳಕ್ಕೆ ತನ್ನ ಪಾತ್ರದ ಭಾವಗಳನ್ನು ತಲುಪಿಸುವ ಶಕ್ತಿ ಗಳಿಸಿಕೊಳ್ಳಬೇಕು. ಅನೂಪ್‌ ಅವರಿಗೂ ಆ ಶಕ್ತಿ ದೊರಕಲಿ’ ಎಂದು ಹಾರೈಸಿದರು.

ಚಿತ್ರದ ನಾಲ್ಕು ಹಾಡುಗಳಿಗೆ ಸತೀಶ್‌ ಬಾಬು ಸಂಗೀತ ಹೊಸೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry