ರುಚಿಗೆ ಪೇರಳೆ; ಅಜೀರ್ಣಕ್ಕೆ ನಿಂಬೆ ಗೊಜ್ಜು!

7

ರುಚಿಗೆ ಪೇರಳೆ; ಅಜೀರ್ಣಕ್ಕೆ ನಿಂಬೆ ಗೊಜ್ಜು!

Published:
Updated:
ರುಚಿಗೆ ಪೇರಳೆ; ಅಜೀರ್ಣಕ್ಕೆ ನಿಂಬೆ ಗೊಜ್ಜು!

ದೊಡ್ಡ ಪತ್ರೆ ಗೊಜ್ಜು

ಬೇಕಾಗುವ ವಸ್ತುಗಳು: 8-10 ದೊಡ್ಡ ಪತ್ರೆ ಎಲೆ, ½ ಕಪ್ ತೆಂಗಿನ ತುರಿ, 1 ಚಮಚ ಉದ್ದಿನ ಬೇಳೆ, ½ ಚಮಚ ಕಡಲೆ ಬೇಳೆ, ಚಿಟಿಕೆ ಇಂಗು, ¼ ಚಮಚ ಬಿಳಿ ಎಳ್ಳು, 5-6 ಒಣಮೆಣಸು, 1 ಚಮಚ ಎಣ್ಣೆ, ½ ಚಮಚ ಸಾಸಿವೆ, ½ ಚಮಚ ಹುಳಿ ರಸ, 1 ಚಮಚ ಬೆಲ್ಲ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಅನುಕ್ರಮವಾಗಿ ಕಡಲೆಬೇಳೆ, ಉದ್ದಿನಬೇಳೆ, ಬಿಳಿ ಎಳ್ಳು, ಒಣಮೆಣಸು ಹಾಕಿ ಕೆಂಪಗೆ ಹುರಿಯಿರಿ. ನಂತರ ಕೆಳಗಿಳಿಸಿ ತೊಳೆದ ದೊಡ್ಡ ಪತ್ರೆ ಎಲೆ ಹಾಕಿ ಸ್ವಲ್ಪ ಬಾಡಿಸಿ. ನಂತರ ಹುರಿದ ಮಸಾಲೆಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿ. ನಂತರ ತೆಂಗಿನತುರಿ, ದೊಡ್ಡಪತ್ರೆ ಎಲೆ, ಸ್ವಲ್ಪ ನೀರು ಹಾಕಿ ರುಬ್ಬಿ. ನಂತರ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು ಎಣ್ಣೆಯಲ್ಲಿ ಒಗ್ಗರಣೆ ಮಾಡಿ. ಒಲೆಯ ಮೇಲಿಟ್ಟು ಹುಳಿ ರಸ, ಬೆಲ್ಲ, ಉಪ್ಪು, ಸ್ವಲ್ಪ ನೀರು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಈಗ ಆರೋಗ್ಯದಾಯಕ ದೊಡ್ಡಪತ್ರೆ ಗೊಜ್ಜು ಸವಿಯಲು ಸಿದ್ಧ.

**

ಹೀರೆಕಾಯಿ ಸಿಪ್ಪೆ ಗೊಜ್ಜು

ಬೇಕಾಗುವ ವಸ್ತುಗಳು: 1 ಕಪ್ ಹೀರೆಕಾಯಿ ಸಿಪ್ಪೆ, ½ ಕಪ್ ತೆಂಗಿನ ತುರಿ, ½ ಚಮಚ ಕಡಲೆ ಬೇಳೆ, 1 ಚಮಚ ಉದ್ದಿನಬೇಳೆ, ¼ ಚಮಚ ಮೆಂತೆ, ¼ ಚಮಚ ಎಳ್ಳು, 3-4 ಕೆಂಪುಮೆ ಣಸು, ½ ಚಮಚ ಹುಳಿರಸ, ಉಪ್ಪು ರುಚಿಗೆ ತಕ್ಕಷ್ಟು, 1 ಚಮಚ ಬೆಲ್ಲ, ¼ ಚಮಚ ಸಾಸಿವೆ, 1 ಎಸಳು ಕರಿಬೇವು, 1 ಚಮಚ ಎಣ್ಣೆ.

ಮಾಡುವ ವಿಧಾನ: ಹೀರೆ ಕಾಯಿ ಸಿಪ್ಪೆ ತೆಗೆದು, ಸಣ್ಣಗೆ ತುಂಡು ಮಾಡಿ ಉಪ್ಪು, ಹುಳಿ ಹಾಕಿ, ಸ್ವಲ್ಪ ನೀರು ಹಾಕಿ ಬೇಯಿಸಿ. ಕಡಲೆ ಬೇಳೆ, ಉದ್ದಿನಬೇಳೆ, ಮೆಂತೆ, ಎಳ್ಳು, ಕೆಂಪುಮೆಣಸು ಸ್ವಲ್ಪ ಎಣ್ಣೆ ಹಾಕಿ ಕೆಂಪಗೆ ಹುರಿದು, ತೆಂಗಿನತುರಿ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬೇಯಿಸಿದ ಹೀರೆಕಾಯಿ ಸಿಪ್ಪೆ ಸೇರಿಸಿ ರುಬ್ಬಿ. ನಂತರ ಪಾತ್ರೆಗೆ ಹಾಕಿ, ಸ್ವಲ್ಪ ನೀರು ಹಾಕಿ ಒಲೆಯ ಮೇಲಿಟ್ಟು ಬೆಲ್ಲ, ಸ್ವಲ್ಪ ನೀರು ಸೇರಿಸಿ ಗೊಜ್ಜಿನ ಹದಕ್ಕೆ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕರಿಬೇವಿನ ಎಲೆ ಹಾಕಿ ಒಗ್ಗರಣೆ ಕೊಡಿ. ರುಚಿಯಾದ ಈ ಗೊಜ್ಜನ್ನು ಅನ್ನ, ಚಪಾತಿ, ದೋಸೆಯೊಂದಿಗೆ ಸವಿಯಿರಿ.

**

ನಿಂಬೆ ಹಣ್ಣು ಗೊಜ್ಜು

ಬೇಕಾಗುವ ವಸ್ತುಗಳು:
1 ಚಮಚ ಉದ್ದಿನ ಬೇಳೆ, ½ ಚಮಚ ಮೆಂತೆ, 2 ಕರಿಮೆಣಸು, ಚಿಟಿಕೆ ಜೀರಿಗೆ, ಚಿಟಿಕೆ ಧನಿಯಾ, ½ ಕಪ್ ತೆಂಗಿನತುರಿ, 1 ಚಮಚ ಬೆಲ್ಲ, 4-5 ಒಣಮೆಣಸು, ¼ ಚಮಚ ಸಾಸಿವೆ, ಚಿಟಿಕೆ ಇಂಗು, 2 ಚಮಚ ಎಣ್ಣೆ, 4-5 ಎಲೆ ಕರಿಬೇವು, ಉಪ್ಪು ರುಚಿ ತಕ್ಕಷ್ಟು, 2 ಚಮಚ ನಿಂಬೆ ಹಣ್ಣಿನ ರಸ.

ಮಾಡುವ ವಿಧಾನ: ಮೇಲಿನ ಎಲ್ಲ ಮಸಾಲೆ ಸಾಮಗ್ರಿಗಳನ್ನು ಕೆಂಪಗೆ ಹುರಿದು, ತೆಂಗಿನ ತುರಿ ಸೇರಿಸಿ ರುಬ್ಬಿ. ಉಪ್ಪು, ಬೆಲ್ಲ, ನೀರು ಸೇರಿಸಿ ಕುದಿಸಿ. ನಂತರ ಸಾಸಿವೆ, ಇಂಗು, ಕರಿಬೇವಿನ ಎಲೆ, ಇಂಗು ಸೇರಿಸಿ ಎಣ್ಣೆಯಲ್ಲಿ ಒಗ್ಗರಣೆ ಕೊಡಿ. ನಿಂಬೆರಸ ಬೆರೆಸಿದ ನಂತರ ಕುದಿಸಬಾರದು. ಅಜೀರ್ಣದ ತೊಂದರೆ ಇರುವವರಿಗೆ ಇದು ಒಳ್ಳೆಯದು.

**

 

ಪೇರಳೆ ಗೊಜ್ಜು (ಸೀಬೆ ಹಣ್ಣು)

ಬೇಕಾಗುವ ವಸ್ತುಗಳು: 1 ಕಪ್ ಬೀಜ ತೆಗೆದು ಸಣ್ಣಗೆ ತುಂಡು ಮಾಡಿದ ಸೀಬೆಹಣ್ಣು, ಕಡಲೆಬೇಳೆ ¼ ಚಮಚ, ½ ಚಮಚ ಉದ್ದಿನಬೇಳೆ, ¼ ಚಮಚ ಧನಿಯಾ, ¼ ಚಮಚ ಜೀರಿಗೆ, ½  ಕಪ್ ಒಣಕೊಬ್ಬರಿ, ¼  ಚಮಚ ಬಿಳಿ ಎಳ್ಳು, ¼ ಚಮಚ ಮೆಂತೆ, 4-5 ಕೆಂಪು ಮೆಣಸು, ಚಿಟಿಕೆ ಇಂಗು, ½ ಚಮಚ ಸಾಸಿವೆ, ½ ಚಮಚ ಹುಳಿ ರಸ, 1 ಚಮಚ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿಸೊಪ್ಪು, 1 ಚಮಚ ಎಣ್ಣೆ.

ಮಾಡುವ ವಿಧಾನ: ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಅನುಕ್ರಮವಾಗಿ ಕಡಲೆಬೇಳೆ, ಉದ್ದಿನ ಬೇಳೆ, ಧನಿಯಾ, ಜೀರಿಗೆ, ಮೆಂತೆ, ಬಿಳಿ ಎಳ್ಳು, ಕೆಂಪುಮೆಣಸು ಹಾಕಿ ಹುರಿಯಿರಿ. ನಂತರ ಇಳಿಸುವಾಗ ಒಣಕೊಬ್ಬರಿ ಹಾಕಿ ಸ್ವಲ್ಪ ಹುರಿದು ಕೆಳಗಿಳಿಸಿ. ನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಿ. ನಂತರ ಅದೇ ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾ ದಾಗ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು, ಪೇರಳೆ ತುಂಡು, ಇಂಗು, ಹುಳಿ ರಸ, ಬೆಲ್ಲ, ಮೇಲಿನ ಮಸಾಲೆ ಪುಡಿ, ಉಪ್ಪು ಸ್ವಲ್ಪ ನೀರು ಹಾಕಿ ತೊಳಸಿ. ಸೀಬೆ ಹಣ್ಣು ಹದವಾಗಿ ಬೆಂದಾಗ ಒಲೆಯಿಂದ ಕೆಳಗಿಳಿಸಿ ಕೊತ್ತಂಬರಿ ಸೊಪ್ಪು ಹಾಕಿ. ವಿಶಿಷ್ಟ ರುಚಿಯ ಈ ಗೊಜ್ಜು ಸವಿಯಲು ಸೊಗಸಾಗಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry