ಎಸ್‌ಸಿಒ ಸದಸ್ಯತ್ವ: ಹೊಸ ಅವಕಾಶಗಳ ಹೆಬ್ಬಾಗಿಲು

7

ಎಸ್‌ಸಿಒ ಸದಸ್ಯತ್ವ: ಹೊಸ ಅವಕಾಶಗಳ ಹೆಬ್ಬಾಗಿಲು

Published:
Updated:
ಎಸ್‌ಸಿಒ ಸದಸ್ಯತ್ವ: ಹೊಸ ಅವಕಾಶಗಳ ಹೆಬ್ಬಾಗಿಲು

ಚೀನಾದ ಪ್ರಭಾವಕ್ಕೆ ಒಳಪಟ್ಟಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಪೂರ್ಣ ಸದಸ್ವತ್ವ ಪಡೆದುಕೊಂಡಿರುವ ಭಾರತದ ನಿರ್ಧಾರವು ಯುರೋಪ್‌ – ಏಷ್ಯಾ ಪ್ರದೇಶದಲ್ಲಿ ದೂರಗಾಮಿ ಪರಿಣಾಮ ಬೀರಲಿದೆ.  ಭಯೋತ್ಪಾದನೆ, ಧರ್ಮಾಂಧತೆ ಮತ್ತು ಪ್ರತ್ಯೇಕತಾವಾದ ವಿರುದ್ಧ ಹೋರಾಟ ನಡೆಸುವುದರ ಜತೆಗೆ ಆರ್ಥಿಕ ಸಹಕಾರ ಕೂಡ ಎಸ್‌ಸಿಒದ ಮುಖ್ಯ ಧ್ಯೇಯವಾಗಿದೆ. 

ರಾಜಕೀಯ, ಆರ್ಥಿಕ ಮತ್ತು ಭದ್ರತಾ ಸಂಘಟನೆಯಾಗಿರುವ ಎಸ್‌ಸಿಒದ ಸದಸ್ಯತ್ವವು ಭಾರತಕ್ಕೆ  ಪ್ರಾದೇಶಿಕವಾಗಿ ಬಹುಬಗೆಯಲ್ಲಿ ಉಪಯುಕ್ತವಾಗಲಿದೆ. ಭಾರತದ ಜತೆ ಪಾಕಿಸ್ತಾನವೂ ಸಂಘಟನೆಗೆ ಸೇರ್ಪಡೆಗೊಂಡಿರುವುದು ಮಹತ್ವದ ವಿದ್ಯಮಾನ. 

ದ್ವಿಪಕ್ಷೀಯ ಬಾಂಧವ್ಯದ ಮೇಲೆ ಇದು ಖಂಡಿತವಾಗಿಯೂ ಪರಿಣಾಮ ಬೀರಲಿದೆ.  ಭಯೋತ್ಪಾದನೆಯನ್ನು ಪರೋಕ್ಷವಾಗಿ ಪೋಷಿಸಿಕೊಂಡು ಬರುತ್ತಿರುವ ಪಾಕಿಸ್ತಾನವು ಪ್ರಾದೇಶಿಕ ಭದ್ರತೆಗೆ ಬೆದರಿಕೆ ಒಡ್ಡುತ್ತಿದೆ. ಭಾರತವು ಈ ಸಂಘಟನೆಯ ನೆರವಿನಿಂದ ಭಯೋತ್ಪಾದನೆಗೆ ಸಂಬಂಧಿಸಿದಂತೆ  ಪಾಕಿಸ್ತಾನವನ್ನು ಹೊಣೆಗಾರಿಕೆಗೆ ಒಳಪಡಿಸಲು ಸಾಧ್ಯವಾಗಬಹುದು.

ತಾಷ್ಕೆಂಟ್‌ನ ‘ಪ್ರಾದೇಶಿಕ ಭಯೋತ್ಪಾದನೆ ವಿರೋಧಿ ನಿಯಮ’ದಡಿ ಭಾರತ ಮತ್ತು ಪಾಕಿಸ್ತಾನಗಳು  ಸಂಘಟನೆಯ ಇತರ ಸದಸ್ಯ ದೇಶಗಳ ಜತೆ ಜಂಟಿ ಸಮರಾಭ್ಯಾಸ ನಡೆಸಬೇಕಾಗುತ್ತದೆ.  ಈ  ಸೇನಾ ಸಹಕಾರವು ಉಭಯ ದೇಶಗಳ ಮಧ್ಯೆ ನೇರ ಸಂವಹನಕ್ಕೂ ಕಾರಣವಾಗಬಲ್ಲದು. ಭಾರತ– ಚೀನಾದ ಹಳಸಿರುವ ಬಾಂಧವ್ಯದ ಮೇಲೂ ಇದು ಸಕಾರಾತ್ಮಕ ಪರಿಣಾಮ ಬೀರುವ ನಿರೀಕ್ಷೆ ಇದೆ.

ಎಸ್‌ಸಿಒ ಅಸ್ತಿತ್ವಕ್ಕೆ ಬಂದದ್ದು 2001ರಲ್ಲಿ. ಈಗ ಭಾರತ ಮತ್ತು ಪಾಕಿಸ್ತಾನಗಳ ಸೇರ್ಪಡೆಯಿಂದ, ವಿಶ್ವದ  ಶೇ 40ರಷ್ಟು ಜನಸಂಖ್ಯೆ ಈ ಸಂಘಟನೆಯ ವ್ಯಾಪ್ತಿಗೆ ಬಂದಂತೆ ಆಗಿದೆ. ಹೀಗಾಗಿ ಜಾಗತಿಕವಾಗಿ ಇದು ಇನ್ನೊಂದು ಪ್ರಭಾವಿ ವೇದಿಕೆಯಾಗಿ ರೂಪುತಳೆದಂತಾಗಿದೆ. ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆ ಕಾಯ್ದುಕೊಳ್ಳುವುದೇ ಈ ಸಂಘಟನೆಯ ಮುಖ್ಯ ಉದ್ದೇಶವೂ ಆಗಿದೆ.  

ಈ ಸಂಘಟನೆಯು ಯುರೋಏಷ್ಯಾ ಪ್ರದೇಶದಲ್ಲಿನ ಸದಸ್ಯ ದೇಶಗಳ ಮಧ್ಯೆ  ಸಂಧಾನ, ಸ್ಥಿರತೆ ಮತ್ತು ಅಭಿವೃದ್ಧಿಗೆ ನೆರವಾಗಲಿದೆ.  ಮಾದಕ ದ್ರವ್ಯಗಳ ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧಗಳಿಗೆ ಕಡಿವಾಣ ಹಾಕುವಂತಹ ಸಂಕೀರ್ಣ ಸ್ವರೂಪದ ಸವಾಲುಗಳನ್ನು ಎದುರಿಸಲು ಸಂಘಟಿತ ಹೋರಾಟ ನಡೆಸಲು ಒತ್ತು ಸಿಗಲಿದೆ.  ಜಾಗತೀಕರಣ ಮತ್ತು ನಗರೀಕರಣವು ವಿಶ್ವದ ಸ್ವರೂಪವನ್ನೇ ಮರು ರೂಪಿಸುತ್ತಿವೆ.

ಇಂತಹ ಸಂದರ್ಭದಲ್ಲಿ ಪ್ರಾದೇಶಿಕ ಸಂಘರ್ಷ ಮತ್ತು ಭಿನ್ನಾಭಿಪ್ರಾಯಗಳನ್ನು ದೂರ ಮಾಡಲೂ ಈ ಸಂಘಟನೆ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಆಶಿಸಬಹುದು.  ಬಲೂಚಿಸ್ತಾನದಲ್ಲಿ ಚೀನಾದ ಇಬ್ಬರು ಪ್ರಜೆಗಳನ್ನು ಉಗ್ರರು ಹತ್ಯೆ ಮಾಡಿರುವುದನ್ನು ನೋಡಿದರೆ, ಯಾವುದೇ ದೇಶವು ಉಗ್ರರ ಹಾವಳಿಯಿಂದ ಮುಕ್ತವಾಗಿಲ್ಲ ಎನ್ನುವುದೂ ವೇದ್ಯವಾಗುತ್ತದೆ.

ಏಷ್ಯಾ– ಪೆಸಿಫಿಕ್‌, ಪೂರ್ವ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಅಟ್ಲಾಂಟಿಕ್‌ ಪ್ರದೇಶದ ದೇಶಗಳ ಜತೆ ವ್ಯಾಪಾರ ಸಂಬಂಧ ಬೆಳೆಸಲೂ   ಈ ಸಂಘಟನೆ ನೆರವಾಗಲಿದೆ.  ಸಮೃದ್ಧ ಪ್ರಮಾಣದಲ್ಲಿ ಇಂಧನ  ಹೊಂದಿರುವ ಮಧ್ಯ ಏಷ್ಯಾ ದೇಶಗಳ ಜತೆಗೆ ಬಾಂಧವ್ಯ ಬೆಸೆಯಲೂ  ಭಾರತಕ್ಕೆ ಸಾಧ್ಯವಾಗಲಿದೆ.

ಈ ದೇಶಗಳ ಜತೆಗೆ ಬಾಂಧವ್ಯ ವೃದ್ಧಿಸಿಕೊಂಡು ಇಂಧನ ಭದ್ರತೆ ಹೆಚ್ಚಿಸಿಕೊಂಡು, ರಷ್ಯಾ ಮತ್ತು ಯುರೋಪ್‌ ದೇಶಗಳ ಜತೆಗೆ ವ್ಯಾಪಾರಕ್ಕೆ ಭೂಮಾರ್ಗಗಳನ್ನು  ಸಮರ್ಥವಾಗಿ ಬಳಸಿಕೊಂಡರೆ ಭಾರತಕ್ಕೆ  ಹೆಚ್ಚಿನ ಪ್ರಯೋಜನ ದೊರೆಯಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry