ಜನರ ಧ್ವನಿ ಹತ್ತಿಕ್ಕುತ್ತಿರುವ ಕೇಂದ್ರ: ರಾಹುಲ್‌

7
‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಗೆ ಮರುಚಾಲನೆ l ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ

ಜನರ ಧ್ವನಿ ಹತ್ತಿಕ್ಕುತ್ತಿರುವ ಕೇಂದ್ರ: ರಾಹುಲ್‌

Published:
Updated:
ಜನರ ಧ್ವನಿ ಹತ್ತಿಕ್ಕುತ್ತಿರುವ ಕೇಂದ್ರ: ರಾಹುಲ್‌

ಬೆಂಗಳೂರು: ದಶಕಗಳಿಂದ ಸ್ಥಗಿತಗೊಂಡಿದ್ದ ಕಾಂಗ್ರೆಸ್ ಪಕ್ಷದ ಮುಖವಾಣಿ ‘ನ್ಯಾಷನಲ್ ಹೆರಾಲ್ಡ್‌’ಗೆ ಉಪ ರಾಷ್ಟ್ರಪತಿ ಹಮೀದ್‌ ಅನ್ಸಾರಿ ಸೋಮವಾರ ಇಲ್ಲಿ ಮರುಚಾಲನೆ ನೀಡಿದರು.

ಅಂಬೇಡ್ಕರ್‌ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ‘ಕೇಂದ್ರ ಸರ್ಕಾರ ಜನರ ಧ್ವನಿಯನ್ನು ಹತ್ತಿಕ್ಕುತ್ತಿದೆ’ ಎಂದು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘ಸತ್ಯ ಗೊತ್ತಿದ್ದರೂ ಅದನ್ನು ಹೇಳಲು  ಭಯ ಪಡಬೇಕಾಗಿದೆ. ಪತ್ರಕರ್ತರೂ ಸ್ವತಂತ್ರವಾಗಿ, ನಿರ್ಭಿಡೆಯಿಂದ ಬರೆಯುವ ಪರಿಸ್ಥಿತಿ ಇಲ್ಲ’ ಎಂದು ಅವರು ದೂರಿದರು.

‘ಭಾರತದಲ್ಲಿ ದಲಿತರು, ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ. ರೈತರ ಕಷ್ಟ ಕೇಳುವವರಿಲ್ಲ.  ಮಧ್ಯಪ್ರದೇಶದಲ್ಲಿ ಪೊಲೀಸರು ರೈತರ ಮೇಲೆ ಗೋಲಿಬಾರ್‌ ಮಾಡಿದರು. ಅಲ್ಲಿಗೆ ತೆರಳಿದ ನನ್ನನ್ನು  ತಡೆದರು. ನಾನು ಭಾರತದ ಪ್ರಜೆ. ಎಲ್ಲಿ ಬೇಕಾದರೂ ಹೋಗಬಹುದು. ಯಾವ ಆಧಾರದಲ್ಲಿ ನನ್ನನ್ನು ತಡೆಯುತ್ತೀರಿ. ಯಾವ ಕಾನೂನಿದೆ ಎಂದು ಪ್ರಶ್ನಿಸಿದೆ. ಪೊಲೀಸರ ಬಳಿ ಉತ್ತರ ಇರಲಿಲ್ಲ. ಅಂಥ ವಾತಾವರಣದಲ್ಲಿ ಬದುಕುತ್ತಿದ್ದೇವೆ’ ಎಂದು ರಾಹುಲ್‌ ಕಿಡಿ ಕಾರಿದರು.

‘ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸತ್ಯವನ್ನೇ ಹೇಳಲಿದೆ. ಯಾವತ್ತಾದರೂ ಕಾಂಗ್ರೆಸ್ ಪಕ್ಷವನ್ನೂ ಟೀಕಿಸಬೇಕೆಂದು ಅನಿಸಿದರೆ ಟೀಕಿಸಿ. ಪತ್ರಿಕೆಗೆ ಒಳ್ಳೆಯದಾಗಲಿ’ ಎಂದು ಸಂಪಾದಕೀಯ ತಂಡಕ್ಕೆ ಶುಭ ಹಾರೈಸಿದರು.

ಮುಕ್ತ ವಾತಾವರಣ ಅಗತ್ಯ: ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ‘ಮಾಧ್ಯಮಗಳಿಗೆ ಮುಕ್ತ ವಾತಾವರಣ ಅಗತ್ಯ. ಯಾವುದೇ ವ್ಯವಸ್ಥೆ ಮಾಧ್ಯಮಗಳನ್ನು ನಿಯಂತ್ರಣ ಮಾಡುವಂತಾಗಬಾರದು’ ಎಂದರು.

‘ಮಾಧ್ಯಮ ವಲಯದಲ್ಲಿ ವೃತ್ತಿ ಬದ್ಧತೆ ಹಾಗೂ ಸುರಕ್ಷತೆಯ ಅಗತ್ಯವಿದೆ. ಈ ಕ್ಷೇತ್ರದಲ್ಲೂ ಗುತ್ತಿಗೆ ವ್ಯವಸ್ಥೆ ಬಂದಿದೆ. ಇದು ಬದಲಾಗಬೇಕು. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಎಲ್ಲ ಹಂತ ದಾಟಿ ವೃತ್ತಿ ಪರ ಕೆಲಸ ಮಾಡಲಿ’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಎಲ್ಲರ ದನಿಯಾಗಲಿದೆ. ಸ್ವಾತಂತ್ರ್ಯ, ಸಮಾನತೆ ಪತ್ರಿಕೆ ನೀತಿಯಾಗಿದ್ದು, ಇದು ಯಾವತ್ತೂ ಚಾಂಪಿಯನ್’ ಎಂದರು.

‘ಕವಲುದಾರಿಯಲ್ಲಿ ಭಾರತ ಸ್ವಾತಂತ್ರ್ಯದ 70 ವರ್ಷಗಳು’ ಹೆಸರಿನ ನೆನಪಿನ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ರಾಜ್ಯಪಾಲ ವಜುಭಾಯಿ ವಾಲಾ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌, ರಾಜ್ಯಸಭೆ ಸದಸ್ಯ ಆಸ್ಕರ್‌ ಫರ್ನಾಂಡಿಸ್‌, ಪತ್ರಿಕೆಯ ಪ್ರಧಾನ ಸಂಪಾದಕ ನೀಲಾಬ್‌ ಮಿಶ್ರಾ ಇದ್ದರು.

ನ್ಯಾಷನಲ್ ಹೆರಾಲ್ಡ್‌ ಸಮಾರಂಭ: ಆಸನ ಇಲ್ಲದೆ ಓಡಾಡಿದ ಸಚಿವರು ಸಚಿವ ಎಚ್.ಕೆ. ಪಾಟೀಲ, ಟಿ.ಬಿ. ಜಯಚಂದ್ರ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಕುಳಿತುಕೊಳ್ಳಲು ಆಸನ ಇಲ್ಲದೆ ವೇದಿಕೆ ಮುಂಭಾಗ ನಿಂತುಕೊಂಡೇ ಕಾರ್ಯಕ್ರಮ ವೀಕ್ಷಿಸಿದರು. ಇನ್ನು ಕೆಲವು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಮೂರನೇ ಮಹಡಿಯ ಗ್ಯಾಲರಿಯಲ್ಲಿ ಅತ್ತಿಂದಿತ್ತ ಓಡಾಡಿ ಕೊನೆಗೂ ಆಸನ ಹುಡುಕಿಕೊಂಡರು.

ಪ್ರವೇಶವಿಲ್ಲ: ಕಪ್ಪು ಜಾಕೆಟ್‌ ಹಾಕಿಕೊಂಡು ಬಂದವರಿಗೆ ಸಮಾರಂಭಕ್ಕೆ ಪ್ರವೇಶ ಇರಲಿಲ್ಲ.

ತಡವಾದ ಕಾರ್ಯಕ್ರಮ: ಕಾರ್ಯಕ್ರಮ ಮಧ್ಯಾಹ್ನ 12.45ಕ್ಕೆ ಆರಂಭವಾಗಿ 1.30ಕ್ಕೆ ಮುಗಿಯುತ್ತದೆ ಎಂದು ಆಹ್ವಾನ ಪತ್ರಿಕೆಯಲ್ಲಿ ಹೇಳಲಾಗಿತ್ತು. ಆದರೆ, ಹಮೀದ್ ಅನ್ಸಾರಿ ಮತ್ತು ರಾಹುಲ್‌ ಅವರಿದ್ದ ವಿಮಾನ ಬೆಂಗಳೂರಿಗೆ ಬರುವುದು ತಡವಾಗಿತ್ತು. ಹೀಗಾಗಿ ಕಾರ್ಯಕ್ರಮ 1.03ಕ್ಕೆ ಆರಂಭವಾಯಿತು.

****

ಮುಖಪುಟದಲ್ಲಿ ಕನ್ನಡ

ಹಲವು ವರ್ಷಗಳ ಬಳಿಕ ಕರ್ನಾಟಕದಲ್ಲಿ ಮರುಚಾಲನೆ ನೀಡಲಾದ ನ್ಯಾಷನಲ್ ಹೆರಾಲ್ಡ್‌ ಪತ್ರಿಕೆಯ ಮುಖಪುಟದಲ್ಲಿ ಕನ್ನಡ ವಿಜೃಂಭಿಸುತ್ತಿದೆ.

‘ಕವಲು ದಾರಿಯಲ್ಲಿ ಭಾರತ ಸ್ವಾತಂತ್ರ್ಯದ 70 ವರ್ಷಗಳು’ ಹೆಸರಿನಲ್ಲಿ ಖ್ಯಾತ ಲೇಖಕರ ಲೇಖನಗಳನ್ನು ಪ್ರಕಟಿಸಲಾಗಿದೆ. ಕೊನೆಯ ಪುಟದಲ್ಲಿ ನ್ಯಾಷನಲ್ ಹೆರಾಲ್ಡ್‌ನ ಹುಟ್ಟು, ಬೆಳೆದುಬಂದ ಹಾದಿ ಮತ್ತು ಪತ್ರಿಕೆ ಮಾಡಿದ ಕಾರ್ಯದ ಬಗ್ಗೆ ವಿವರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry