ಹೂಳು ತೆಗೆಯುವುದು ವೈಜ್ಞಾನಿಕವಾಗಿ ಅಸಾಧ್ಯ

7
ತುಂಗಾಭದ್ರಾ ಜಲಾಶಯ: ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಪ್ರತಿಪಾದನೆ

ಹೂಳು ತೆಗೆಯುವುದು ವೈಜ್ಞಾನಿಕವಾಗಿ ಅಸಾಧ್ಯ

Published:
Updated:
ಹೂಳು ತೆಗೆಯುವುದು ವೈಜ್ಞಾನಿಕವಾಗಿ ಅಸಾಧ್ಯ

ಬೆಂಗಳೂರು: ‘ರೈತರು ತುಂಗಾಭದ್ರಾ ಜಲಾಶಯದ ಹೂಳು ತೆಗೆಯುತ್ತಿರುವುದು ಒಳ್ಳೆಯ ಕೆಲಸ. ಆದರೆ, ವೈಜ್ಞಾನಿಕವಾಗಿ  ಇದು ಅಸಾಧ್ಯ’ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಪ್ರತಿಪಾದಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಪ್ರತಾಪಗೌಡ ಮಸ್ಕಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

‘ಜಲಾಶಯಕ್ಕೆ ಪ್ರತಿವರ್ಷ 0.5 ಟಿಎಂಸಿ ಅಡಿ ಹೂಳು ಸೇರುತ್ತಿದೆ. ಜಲಾಶಯದಲ್ಲಿ ಸದ್ಯ 32 ಟಿಎಂಸಿ ಅಡಿ ಹೂಳು ಇದೆ. ರೈತರು ಇದುವರೆಗೆ 0.01 ಟಿಎಂಸಿ ಅಡಿಯಷ್ಟು ಹೂಳು ತೆಗೆದಿದ್ದಾರೆ’ ಎಂದು ಅವರು ಹೇಳಿದರು.

‘ತೆಗೆದ ಹೂಳನ್ನು ಎಲ್ಲಿ ಹಾಕುವುದು ಎಂಬುದು ದೊಡ್ಡ ಸಮಸ್ಯೆ. ಹೂಳನ್ನು 10 ಅಡಿ ಎತ್ತರ ಹಾಕಿದರೆ 67,984 ಎಕರೆ ಜಾಗ ಬೇಕು. 6 ಅಡಿ ಎತ್ತರ ಸುರಿದರೆ 1.13 ಲಕ್ಷ ಎಕರೆ ಭೂಮಿ ಅಗತ್ಯ ಇದೆ. ಹೀಗಾಗಿ ಹೂಳು ತೆಗೆಯುವುದು ತಾಂತ್ರಿಕ ಹಾಗೂ ಆರ್ಥಿಕವಾಗಿ ಕಾರ್ಯಸಾಧುವಲ್ಲ’ ಎಂದು ಅವರು ವಿವರಿಸಿದರು.

‘ತುಂಗಭದ್ರಾ ಎಡದಂಡೆಗೆ ಸಮಾನಾಂತರವಾಗಿ ನವಿಲೆಯಲ್ಲಿ ಸಮತೋಲನ ಜಲಾಶಯ ನಿರ್ಮಿಸಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ. 40 ಟಿಎಂಸಿ ಅಡಿ ನೀರು ಸಂಗ್ರಹಿಸುವ ಈ ಯೋಜನೆಗೆ ₹5,600 ಕೋಟಿ ಬೇಕು. ಇದಕ್ಕೆ ಶೀಘ್ರದಲ್ಲಿ ತುಂಗಭದ್ರಾ ಮಂಡಳಿಯಲ್ಲಿ ಅನುಮೋದನೆ ಪಡೆಯುತ್ತೇವೆ’ ಎಂದರು.

ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ, ‘ಹೂಳನ್ನು ಕಲ್ಲಿನ ಗಣಿಯಲ್ಲಿ ಸುರಿಯಲು ನಾವು ಯೋಜನೆ ರೂಪಿಸಿದ್ದೆವು. ಈ ಗಣಿಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳು ಖಾಲಿಯಾಗಿಲ್ಲ ಎಂದು ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹೇಳಿದರು. ಹೀಗಾಗಿ ಈ ಯೋಜನೆ ಕೈಬಿಟ್ಟೆವು’ ಎಂದು ನೆನಪಿಸಿದರು.

‘60 ವರ್ಷಗಳಿಂದ ಜಲಾಶಯಕ್ಕೆ ಸೇರಿರುವ ಹೂಳಿನ ರಾಡಿ ಕ್ರಮೇಣ ಕಲ್ಲಾಗಿ ಮಾರ್ಪಟ್ಟಿದೆ.   ಪರ್ಯಾಯ ಜಲಾಶಯ ನಿರ್ಮಾಣ ಉತ್ತಮ ಯೋಜನೆ. ಜತೆಗೆ ಜಲಾಶಯಕ್ಕೆ ಇನ್ನಷ್ಟು ಹೂಳು ಸೇರದಂತೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

****

ಫಲಿಸಿತು ಪರ್ಜನ್ಯ ಪೂಜಾ ಫಲ

ಬೆಂಗಳೂರು: ರಾಜ್ಯದಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಉತ್ತಮ ಮಳೆಗೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ನಡೆಸಿದ ಪರ್ಜನ್ಯ ಜಪ ಕಾರಣವೇ?

ಈ ವಿಷಯದ ಬಗ್ಗೆ ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ವೇಳೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.ತುಂಗಾಭದ್ರಾ ಜಲಾಶಯದ ಹೂಳಿನ ಸಮಸ್ಯೆ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆಯಲ್ಲಿ, ‘ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಎಂ.ಬಿ. ಪಾಟೀಲರಿಗೆ ಅಭಿನಂದನೆಗಳು’ ಎಂದು ಕಾಂಗ್ರೆಸ್‌ ಶಾಸಕರೊಬ್ಬರು ಶುಭಾಶಯ ಹೇಳಿದರು.  ಆಗ ಬಿಜೆಪಿ ಸದಸ್ಯರು, ‘ಫಲಿಸಿತು ಪೂಜಾ ಫಲ’ ಎಂದು ವ್ಯಂಗ್ಯವಾಗಿ ಹೇಳಿದರು.

‘ನಾನು ಮಾಡಿರುವ ಪೂಜೆಯನ್ನು ಟೀಕಿಸಿ ಕೆ.ಜೆ. ಬೋಪಯ್ಯ ಅವರು ಸುಳ್ಳು ಹೇಳಿದ್ದರು’ ಎಂದು ಎಂ.ಬಿ. ಪಾಟೀಲ ತಿರುಗೇಟು ನೀಡಿದರು.

‘ಈಗ ಮಳೆ ಬರುತ್ತಿರುವುದು ಒಳ್ಳೆಯ ವಿಷಯ. ರಾಜ್ಯದಲ್ಲಿ ಎರಡು ವರ್ಷಗಳಿಂದ ಭೀಕರ ಬರಗಾಲ ಇತ್ತು. ಆಗ ಪಾಟೀಲರು ಮೌನವಾಗಿದ್ದು ಏಕೆ’ ಎಂದು ಬಿಜೆಪಿಯ ಸಿ.ಟಿ. ರವಿ ಪ್ರಶ್ನಿಸಿದರು.

‘ಈಗಂತೂ ಪಾಟೀಲರ ತಪೋಶಕ್ತಿಯ ಫಲ ಸಿಕ್ಕಿದೆಯಲ್ಲ’ ಎಂದು ಕಾಂಗ್ರೆಸ್‌ನ ಸದಸ್ಯರು ಸಮರ್ಥಿಸಿಕೊಂಡರು. ‘ಮಳೆ ಬರಲು ಪೂಜೆ ಕಾರಣವಲ್ಲ. ತಲಕಾವೇರಿಯಲ್ಲಿ ಅರ್ಧ ಗಂಟೆಗೊಮ್ಮೆ ಸಣ್ಣಗೆ ಮಳೆ ಬರುತ್ತದೆ.’ ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಕೆಣಕಿದರು. 

‘ಏನೇ ಆಗಲಿ, ರಾಜ್ಯಕ್ಕೆ ಒಳ್ಳೆ ಯದು ಆಗಿದೆ. ನಮ್ಮ ಈ ಸಚಿವರನ್ನು ಪೂಜೆ ಹವನಕ್ಕೆ ಬ್ರ್ಯಾಂಡ್‌ ಅಂಬಾಸಿಡರ್‌ ಮಾಡಬೇಕು’ ಎಂದು ಜಗದೀಶ ಶೆಟ್ಟರ್‌ ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry