ನಿವೃತ್ತಿಯ ದಿನವೂ ಪತ್ತೆಯಾಗದ ಕರ್ಣನ್‌

7

ನಿವೃತ್ತಿಯ ದಿನವೂ ಪತ್ತೆಯಾಗದ ಕರ್ಣನ್‌

Published:
Updated:
ನಿವೃತ್ತಿಯ ದಿನವೂ ಪತ್ತೆಯಾಗದ ಕರ್ಣನ್‌

ಚೆನ್ನೈ: ಕಲ್ಕತ್ತಾ ಹೈಕೋರ್ಟ್‌ನ ವಿವಾದಾತ್ಮಕ ನ್ಯಾಯಮೂರ್ತಿ ಸಿ.ಎಸ್‌. ಕರ್ಣನ್‌ ಅವರು ಸೋಮವಾರ ಸೇವೆಯಿಂದ ನಿವೃತ್ತರಾದರು. ಆದರೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಆರು ತಿಂಗಳು ಶಿಕ್ಷೆಗೆ ಒಳಗಾಗಿರುವ ಅವರು ಈಗ ಎಲ್ಲಿದ್ದಾರೆ ಎಂಬುದು ತಿಳಿದು ಬಂದಿಲ್ಲ.

ಕರ್ಣನ್‌ ಅವರು ಮೇ 9ರಂದು ಚೆನ್ನೈಗೆ ಬಂದಿದ್ದರು. ಸುಪ್ರೀಂ ಕೋರ್ಟ್‌ ಅವರಿಗೆ ಆರು ತಿಂಗಳು ಶಿಕ್ಷೆ ವಿಧಿಸುವ ಮುನ್ನಾದಿನವೇ ಅವರು ಸರ್ಕಾರಿ ಅತಿಥಿ ಗೃಹದಿಂದ ನಾಪತ್ತೆಯಾಗಿದ್ದರು.

ಸುಪ್ರೀಂ ಕೋರ್ಟ್‌ನ ಸೂಚನೆಯಂತೆ ಕರ್ಣನ್‌ ಅವರನ್ನು ಬಂಧಿಸುವುದಕ್ಕಾಗಿ ಚೆನ್ನೈಗೆ ಬಂದ ಪಶ್ಚಿಮ ಬಂಗಾಳ ಪೊಲೀಸರು ಕೆಲವು ದಿನ ಅಲ್ಲಿ ತಂಗಿದ್ದರು. ಚೆನ್ನೈ ಪೊಲೀಸರ ಜತೆಗೂಡಿ ಹುಡುಕಾಡಿದರೂ ಕರ್ಣನ್‌ ಅವರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.

ಪಶ್ಚಿಮ ಬಂಗಾಳ ಪೊಲೀಸರ ತಂಡ ಚೆನ್ನೈಗೆ ಎರಡು ಬಾರಿ ಬಂದಿತ್ತು. ಕರ್ಣನ್‌ ಅವರ ಹುಟ್ಟೂರು ಕಡಲೂರು ಜಿಲ್ಲೆಯ ವಿರುಧಾಚಲಂಗೆ ಕೂಡ ಪೊಲೀಸರು ಹೋಗಿದ್ದರು. ಆದರೆ ಎಲ್ಲಿಯೂ ಅವರು ಸಿಕ್ಕಿರಲಿಲ್ಲ.

2009ರ ಮಾರ್ಚ್‌ನಲ್ಲಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಕರ್ಣನ್‌ ಅವರಿಗೆ ಸೋಮವಾರ (ಜೂನ್‌ 12) ಸೇವೆಯ ಕೊನೆಯ ದಿನವಾಗಿತ್ತು. ಆದರೆ ಅವರು ಹಾಜರಿಲ್ಲದ ಕಾರಣ ನ್ಯಾಯಾಲಯದಲ್ಲಿ ಅವರಿಗೆ ವಿದಾಯ ಸಮಾರಂಭ ಇರಲಿಲ್ಲ.

ನ್ಯಾಯಮೂರ್ತಿಯಾಗಿ ನೇಮಕಗೊಂಡ ಕೆಲವೇ ವರ್ಷಗಳಲ್ಲಿ ಅವರು ನ್ಯಾಯಾಂಗವನ್ನು ಟೀಕಿಸಲು ಆರಂಭಿಸಿದ್ದರು. 2011ರ ನವೆಂಬರ್‌ನಲ್ಲಿ ಅವರು ಸಹ ನ್ಯಾಯಮೂರ್ತಿಗಳ ವಿರುದ್ಧ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ದೂರು ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry