ಮತ್ತೊಂದು ಜಯದತ್ತ ಭಾರತದ ಚಿತ್ತ

7
ಎಎಫ್‌ಸಿ ಏಷ್ಯನ್ ಕಪ್ ಫುಟ್‌ಬಾಲ್ ಅರ್ಹತಾ ಸುತ್ತು: ಕಿರ್ಗಿಸ್ತಾನ ಎದುರು ಪಂದ್ಯ ಇಂದು

ಮತ್ತೊಂದು ಜಯದತ್ತ ಭಾರತದ ಚಿತ್ತ

Published:
Updated:
ಮತ್ತೊಂದು ಜಯದತ್ತ ಭಾರತದ ಚಿತ್ತ

ಬೆಂಗಳೂರು: ಕಳೆದ ಐದು ಅಂತರರಾಷ್ಟ್ರೀಯ  ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿ ಆತ್ಮವಿಶ್ವಾಸದ ಉತ್ತುಂಗದಲ್ಲಿರುವ ಭಾರತ ತಂಡವು ಮಂಗಳವಾರ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ  ಕಿರ್ಗಿಸ್ತಾನವನ್ನು ಎದುರಿಸಲಿದೆ.

ಕಂಠೀರವ ಕ್ರೀಡಾಂಗಣದಲ್ಲಿ ನಡೆ ಯಲಿರುವ ‘ಎ‘ ಗುಂಪಿನ ಪಂದ್ಯದಲ್ಲಿ ಭಾರತ ತಂಡವನ್ನು ಸುನಿಲ್ ಚೆಟ್ರಿ ಮುನ್ನಡೆಸುವರು. ಮುಖ್ಯ ಕೋಚ್ ಸ್ಟೀಫನ್ ಕಾನ್ಸ್‌ಟೆಂಟೈನ್ ಅವರ ಮಾರ್ಗ ದರ್ಶನದಲ್ಲಿ ಭಾರತ ತಂಡವು ಫಿಫಾ ಶ್ರೇಯಾಂಕ ಪಟ್ಟಿಯಲ್ಲಿ 100ನೇ ಸ್ಥಾನ ಪಡೆದ ಸಾಧನೆ ಮಾಡಿದೆ. ಕಿರ್ಗಿಸ್ತಾನ ತಂಡವು 132ನೇ ಸ್ಥಾನದಲ್ಲಿದೆ.

ಹೋದ ತಿಂಗಳು ಗಾಯಗೊಂಡಿದ್ದ ಚೆಟ್ರಿ ಅವರು ಚೇತರಿಸಿಕೊಂಡ ನಂತರ  ಎಎಫ್‌ಸಿ ಲೀಗ್‌ನಲ್ಲಿ ಬಿಎಫ್‌ಸಿ  ತಂಡವನ್ನು ಮುನ್ನಡೆಸಿದ್ದರು.  ಮಾಜಿಯಾ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಅವರು ಗಳಿಸಿದ್ದ ಏಕೈಕ ಗೋಲಿನಿಂದ ತಂಡವು ಗೆದ್ದಿತ್ತು. ಆ ನಂತರ ಮುಂಬೈನಲ್ಲಿ ನೇಪಾಳ ವಿರುದ್ಧ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಭಾರತ ತಂಡವು ಗೆದ್ದಿತ್ತು. ಸಂದೇಶ್ ಜಿಂಗಾನ್ ಅವರ ಅಮೋಘ ಕಾಲ್ಚಳಕದ ಮೋಡಿಯು ಗಮನ ಸೆಳೆದಿತ್ತು.

ಕಳೆದ ಐದು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡವು ಅಮೋಘವಾದ ಗೆಲುವು ಸಾಧಿಸಿದೆ. ಎಲ್ಲ ಸಲವೂ ಕಾನ್ಸ್‌ಟೆಂಟೈನ್ ಅವರ ತಂಡದ ಸಂಯೋಜನೆಯು ಫಲ ಕೊಟ್ಟಿದೆ. ಈ ಬಾರಿಯೂ ಉತ್ತಮ ಸಂಯೋಜನೆಯೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ. ಅದರಲ್ಲೂ ತವರಿನ ಅಂಗಳದಲ್ಲಿ ಸೇರುವ ಫುಟ್‌ಬಾಲ್ ಅಭಿಮಾನಿಗಳ ಮುಂದೆ ಮಿಂಚಲು ಚೆಟ್ರಿ ಬಳಗವು ಸನ್ನದ್ಧವಾಗಿದೆ. ಭಾನುವಾರ ಮತ್ತು  ಸೋಮವಾರ  ಸಂಜೆ ಸುಮಾರು ಮೂರು  ಗಂಟೆಗಳ ಕಾಲ ತಂಡವು ಕಠಿಣ ಅಭ್ಯಾಸ ನಡೆಸಿತು.

2019ರಲ್ಲಿ ನಡೆಯುವ ಏಷ್ಯಾ ಕಪ್ ಟೂರ್ನಿಗೆ ಅರ್ಹತೆ ಗಳಿಸಲು ಈ ಪಂದ್ಯದಲ್ಲಿ ಜಯಿಸಿದರೆ ಹೆಚ್ಚು ಸುಲಭವಾಗಲಿದೆ. ಕಳೆದ ಪಂದ್ಯದಲ್ಲಿ ಭಾರತ ತಂಡವು ಮ್ಯಾನ್ಮಾರ್ ವಿರುದ್ಧ ಜಯಿಸಿತ್ತು. ಈ ಪಂದ್ಯಗಳಲ್ಲಿ ಗೆದ್ದ ಮೂರು ಪಾಯಿಂಟ್‌ಗಳು ಲಭಿಸಲಿವೆ. ಆದರೆ,  ಕಿರ್ಗಿಸ್ತಾನ ತಂಡವನ್ನು ಮಣಿಸುವುದು ಸುಲಭವಲ್ಲ. ತಂಡದ ಆರೂವರೆ ಅಡಿ ಎತ್ತರದ ಗೋಲ್‌ಕೀಪರ್  ಪಾವೆಲ್ ಮಥಿಯಾಶ್ ಅವರನ್ನು ವಂಚಿಸಿ ಗೋಲು ಗಳಿಸುವುದು ಭಾರತದ ಸ್ಟ್ರೈಕರ್‌ಗಳ ಮುಂದೆ ಇರುವ ಕಠಿಣ ಸವಾಲು.

ಸೆಂಟರ್ ಫಾರ್ವರ್ಡ್  ಮಿರ್ಲಾನ್ ಮರ್ಜೇವ್,  ಶಮ್ಸೀವ್ ಇಸ್ಲಾಮ್, ಎಡ್ಜಗರ್ ಬರ್ನಾಡ್, ಪಾವೆಲ್ ಸಿದೊರೆಂಕೊ ಅವರು  ಎದುರಾಳಿಗಳಿಗೆ ಕಠಿಣ ಪೈಪೋಟಿ ಒಡ್ಡಬಲ್ಲ ಸಮರ್ಥರಾಗಿದ್ದಾರೆ. ರಕ್ಷಣೆಯಲ್ಲಿ ಉತ್ತಮವಾಗಿ  ರುವ ಕಿರ್ಗಿಸ್ತಾನವನ್ನು ಮಣಿಸಲು ಚೆಟ್ರಿ ಬಳಗವು ತನ್ನೆಲ್ಲ ಸಾಮರ್ಥ್ಯವನ್ನು ಪಣಕಕೊಡ್ಡಿದರೆ ಮಾತ್ರ ಗೆಲುವಿನ ಸಾಧ್ಯತೆ ಹೆಚ್ಚು. ಸಿ.ಕೆ. ವಿನಿತ್ , ರಾಬಿನ್ ಸಿಂಗ್ , ಜಿಂಗಾನ್ ಮತ್ತು ಸ್ವತಃ ಚೆಟ್ರಿ ಚುರುಕಿನ ಆಟವಾಡಿದರೆ ಕಿರ್ಗಿಸ್ತಾನ ತಂಡವು ನಿರಾಸೆ ಅನುಭವಿಸುವುದು ಖಚಿತ.

ತಂಡಗಳು ಇಂತಿವೆ

ಭಾರತ: ಸುನಿಲ್ ಚೆಟ್ರಿ (ನಾಯಕ),  ಪ್ರೀತಮ್ ಕೊಟಾಲ್(ಗೋಲ್‌ಕೀಪರ್), ಜೆಜೆ ಲಾಲ್‌ಪೆಕ್ಲುವಾ, ರಾಬಿನ್ ಸಿಂಗ್, ಯುಜೇನ್ಸನ್, ಜಾಕಿಚಾಂದ್, ರಾಲಿನ್ ಬೋರ್ಜಸ್, ನಾರಾಯಣದಾಸ್, ಅನಾಸ್ ಎದತೋಡಿಕಾ,  ಸಂದೇಶ್ ಜಿಂಗಾನ್, ಗುರುಪ್ರೀತ್ ಸಿಂಗ್, ಸಿ.ಕೆ. ವಿನೀತ್

ಕಿರ್ಗಿಸ್ತಾನ: ಅಜಾಮತ್ ಬೆಮಟೊವ್  (ನಾಯಕ),   ಪಾವೆಲ್ ಮತಿಯಾಶ್ (ಗೋಲ್‌ಕೀಪರ್), ವಿಟಾಲಿ ಲಕ್ಷ್, ಮಿರ್ಲಿನ್ ಮುರ್ಜೆವ್, ಸಿದೊರೆಂಕೊ, ಮುರೊಲಿಮೊಜನ್, ಅಹ್ಲಿದಿನ್ ಇಸ್ರೆಲೊವ್, ಎಡ್ಗರ್ ಬೆನಾಡ್, ಉಮ್ರಾವ್ ಅಕ್ರಮಜಾನ್, ತಾಹೀರ್ ಅವಚೀವ್ ಕೊಜುಬೇವ್, ವಿಕ್ಟರ್ ಮೇಯರ್, ಇಲಿಯಾಸ್ ಅಲ್ಮೋವ್, ಅಮನಬೆಕ್ ಮೆನಿಬೆಕೊವ್, ವ್ಲಾದಿಮಿರ್ ಕಜಾಕಬೇವ್.

ಪಂದ್ಯ ಆರಂಭ:ರಾತ್ರಿ 8.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry