ಕೋಚ್ ಸ್ಥಾನದಲ್ಲಿ ಕುಂಬ್ಳೆ ಮುಂದುವರಿಕೆ

7
ಜೂ 23ರಿಂದ ವಿಂಡೀಸ್ ಸರಣಿ

ಕೋಚ್ ಸ್ಥಾನದಲ್ಲಿ ಕುಂಬ್ಳೆ ಮುಂದುವರಿಕೆ

Published:
Updated:
ಕೋಚ್ ಸ್ಥಾನದಲ್ಲಿ ಕುಂಬ್ಳೆ ಮುಂದುವರಿಕೆ

ನವದೆಹಲಿ:  ಅನಿಲ್ ಕುಂಬ್ಳೆ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಮುಕ್ತಾಯದವರೆಗೂ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನ ದಲ್ಲಿ ಮುಂದುವರಿಸಲು  ಆಡಳಿತಾಧಿ ಕಾರಿಗಳ ಸಮಿತಿ (ಸಿಒಎ) ನಿರ್ಧರಿಸಿದೆ.

ಸೋಮವಾರ ನಡೆದ ಸಿಒಎ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ‘ಕೋಚ್ ಆಯ್ಕೆಯು ಕ್ರಿಕೆಟ್ ಸಲಹಾ ಸಮಿತಿಗೆ (ಸಿಎಸಿ) ಬಿಟ್ಟ ವಿಚಾರ. ಹೋದ ವರ್ಷ ಅನಿಲ್ ಕುಂಬ್ಳೆ ಅವ ರನ್ನು ಸಿಎಸಿಯೇ ಆಯ್ಕೆ ಮಾಡಿತ್ತು. ಆದರೆ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿ ನಡೆಯುತ್ತಿರುವುದರಿಂದ ಆಯ್ಕೆ ಪ್ರಕ್ರಿಯೆಯು ವಿಳಂಬವಾಗುತ್ತಿದೆ. ಆದ್ದರಿಂದ ಕುಂಬ್ಳೆ ಅವರನ್ನು ವಿಂಡೀಸ್ ಪ್ರವಾಸಕ್ಕೂ ಕೋಚ್ ಆಗಿ ಮುಂದು ರಿಸುವುದು ಸೂಕ್ತ’ ಎಂದು ಸಿಒಎ ಮುಖ್ಯಸ್ಥ ವಿನೋದ್ ರಾಯ್ ಸುದ್ದಿ ಗಾರರಿಗೆ ತಿಳಿಸಿದರು.

ಜೂನ್ 23 ರಿಂದ ಜುಲೈ 9ರವರೆಗೆ ವಿಂಡೀಸ್‌ನಲ್ಲಿ ಭಾರತ ತಂಡವು ಐದು ಏಕದಿನ ಪಂದ್ಯಗಳು ಮತ್ತು ಒಂದು ಟ್ವೆಂಟಿ–20 ಪಂದ್ಯ ಆಡಲಿದೆ.

ಹೋದ ವರ್ಷದ ಜೂನ್‌ನಲ್ಲಿ ಕುಂಬ್ಳೆ ಅವರು ತಂಡಕ್ಕೆ ಮುಖ್ಯ ಕೋಚ್ ಆಗಿದ್ದರು. ಅವರ ಒಂದು ವರ್ಷದ ಒಪ್ಪಂದದ ಅವಧಿಯು  ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ನಂತರ ಮುಕ್ತಾಯವಾಗಲಿದೆ. 

ನೂತನ ಕೋಚ್ ನೇಮಕ ಮಾಡಲು ಹೋದ ತಿಂಗಳು ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ಕರ್ನಾಟಕದ ದೊಡ್ಡಗಣೇಶ್, ಲಾಲ್‌ ಚಂದ್ ರಜಪೂತ್, ಇಂಗ್ಲೆಂಡ್‌ನ ರಿಚರ್ಡ್ ಪೈಬಸ್ ಅವರು ಅರ್ಜಿ ಸಲ್ಲಿಸಿದ್ದರು. ಮರುನೇಮಕ ಬಯಸಿದ್ದ ಕುಂಬ್ಳೆ ಅವರೂ ಅರ್ಜಿ ಹಾಕಿದ್ದರು.

ಹೋದ ವಾರ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಅವರು ಕುಂಬ್ಳೆ ಅವರು ಕೋಚ್ ಸ್ಥಾನದಲ್ಲಿ ಮುಂದು ವರಿಯಬೇಕು ಎಂದು ಜಂಟಿ ಕಾರ್ಯ ದರ್ಶಿ ಅಮಿತಾಭ್ ಚೌಧರಿ ಅವರಿಗೆ ಪತ್ರ ಬರೆದಿದ್ದರು. ‘ಬಿಸಿಸಿಐ ಅಧ್ಯಕ್ಷರೇ ಈ ರೀತಿ ಪತ್ರ ಬರೆಯುವುದಾದರೆ ಕೋಚ್ ಹುದ್ದೆಗೆ ಅರ್ಜಿ ಕರೆಯುವ ಅಗತ್ಯವಾದರೂ ಏನಿತ್ತು’ ಎಂಬ ಟೀಕೆಗಳು ಕೇಳಿ ಬಂದಿದ್ದವು.

ಈ ಕುರಿತು ಪ್ರತಿಕ್ರಿಯಿಸಿದ ವಿನೋದ್ ರಾಯ್, ‘ಒಂದು ವರ್ಷದ ಒಪ್ಪಂದ ಮುಗಿದಿದ್ದರಿಂದ ಅರ್ಜಿ ಆಹ್ವಾನಿಸಲಾಗಿದೆ. ಅದೊಂದು ಪ್ರಕ್ರಿಯೆ. ಅದನ್ನು ವಿವಾದ ಮಾಡುವ ಅಗತ್ಯ ವಾದರೂ ಏನಿತ್ತು’ ಎಂದರು. ‘ಸಿಎಸಿಯ ಸದಸ್ಯರು ಕ್ರಿಕೆಟ್ ಲೋಕದ ದಿಗ್ಗಜರಾಗಿದ್ದಾರೆ. ಭಾರತ ಕ್ರಿಕೆಟ್‌ನ ಹಿತಕ್ಕೆ ಯಾವ ರೀತಿಯ ಹೆಜ್ಜೆ ಇಡಬೇಕು ಎಂಬುದು ಅವರಿಗೆ ಗೊತ್ತು. ಆದ್ದರಿಂದ ಕೋಚ್ ನೇಮಕದ ನಿರ್ಧಾರವವನ್ನು ಅವರಿಗೆ ಬಿಡಲಾಗಿದೆ’ ಎಂದು ರಾಯ್ ಹೇಳಿದರು. ಸಿಎಸಿಯಲ್ಲಿ ಹಿರಿಯ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿ.ವಿ. ಎಸ್. ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry