ಅವಧಿಗೂ ಮುನ್ನ ದತ್ ಬಿಡುಗಡೆ ಯಾಕೆ?

7
ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

ಅವಧಿಗೂ ಮುನ್ನ ದತ್ ಬಿಡುಗಡೆ ಯಾಕೆ?

Published:
Updated:
ಅವಧಿಗೂ ಮುನ್ನ ದತ್ ಬಿಡುಗಡೆ ಯಾಕೆ?

ಮುಂಬೈ: 1993ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಅವಧಿಗಿಂತ ಮೊದಲೇ ಬಿಡುಗಡೆ ಮಾಡಿದ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ.ಪುಣೆಯ ಯೆರವಾಡ ಜೈಲಿನಲ್ಲಿದ್ದ ಸಂಜಯ್ ದತ್ ಸನ್ನಡತೆ ಆಧರಿಸಿ ಅವರನ್ನು ಎಂಟು ತಿಂಗಳು ಮುಂಚಿತವಾಗಿ ಬಿಡುಗಡೆ ಮಾಡಲಾಗಿತ್ತು. 2016ರ ಫೆಬ್ರುವರಿಯಲ್ಲಿ ಅವರು ಹೊರಬಂದಿದ್ದರು.ನ್ಯಾಯಮೂರ್ತಿಗಳಾದ ಆರ್.ಎಂ. ಸಾವಂತ್ ಹಾಗೂ ಸಾಧನಾ ಜಾಧವ್ ಅವರಿದ್ದ ವಿಭಾಗೀಯ ಪೀಠವು, ಪುಣೆಯ ಪ್ರದೀಪ್ ಬಾಲೇಕರ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿತು.ಶಿಕ್ಷೆ ಅನುಭವಿಸುತ್ತಿದ್ದ ಅವಧಿಯಲ್ಲಿ ದತ್ ಅವರಿಗೆ ನಿಯಮಿತವಾಗಿ ನೀಡಲಾದ ಪೆರೋಲ್‌ಗಳನ್ನು ಅವರು ಪ್ರಶ್ನಿಸಿದ್ದರು. ದತ್ ಬಿಡುಗಡೆ ನಿರ್ಧಾರ ಕೈಗೊಳ್ಳುವ ಮುನ್ನ ಪರಿಗಣಿಸಲಾದ ಮಾನದಂಡಗಳು ಹಾಗೂ ಪ್ರಕ್ರಿಯೆಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತು.‘ಈ ಬಗ್ಗೆ ಕಾರಾಗೃಹ ಡಿಐಜಿ ಅವರನ್ನು ಸಂಪರ್ಕಿಸಲಾಗಿತ್ತೇ? ಅಥವಾ ಜೈಲು ಅಧೀಕ್ಷಕರು ತಮ್ಮ ಶಿಫಾರಸನ್ನು ರಾಜ್ಯಪಾಲರಿಗೆ ನೇರವಾಗಿ ಸಲ್ಲಿಸಿದ್ದರೇ? ’ ಎಂದು ನ್ಯಾಯಮೂರ್ತಿ ಸಾವಂತ್ ಪ್ರಶ್ನಿಸಿದ್ದಾರೆ.‘ದತ್ ಅವರ ನಡವಳಿಕೆ ಉತ್ತಮವಾಗಿದೆ ಎಂದು ಅಧಿಕಾರಿಗಳು ಹೇಗೆ ನಿರ್ಣಯಿಸಿದರು?  ಅರ್ಧ ಅವಧಿ ಪೆರೋಲ್ ಮೇಲೆ ಹೊರಗಡೆಯೇ ಇದ್ದ ಅವರ ನಡೆತೆಯನ್ನು ಅಳೆಯಲು ಅವರಿಗೆ ಸಮಯ ಸಿಕ್ಕಿದ್ದು ಯಾವಾಗ’ ಎಂದು ಕೇಳಿದ್ದಾರೆ. ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry