ಸಮಿತಿ ರಚಿಸಿದ ಅಮಿತ್ ಷಾ

7
ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಆಯ್ಕೆ ಕಸರತ್ತು

ಸಮಿತಿ ರಚಿಸಿದ ಅಮಿತ್ ಷಾ

Published:
Updated:
ಸಮಿತಿ ರಚಿಸಿದ ಅಮಿತ್ ಷಾ

ನವದೆಹಲಿ: ಜುಲೈ 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲು ಹಿರಿಯ ಸಚಿವರ ಸಮಿತಿಯೊಂದನ್ನು ಬಿಜೆಪಿ ಅಧ್ಯಕ್ಷ ಅಮಿತ್ ಷಾ ರಚಿಸಿದ್ದಾರೆ. ಸಮಿತಿಯಲ್ಲಿ   ರಾಜನಾಥ ಸಿಂಗ್, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಇದ್ದಾರೆ.ಬಿಜೆಪಿಯ ಮಿತ್ರ ಪಕ್ಷಗಳು ಹಾಗೂ ವಿರೋಧ ಪಕ್ಷಗಳ ನಾಯಕರ ಜತೆ ಸಮಾಲೋಚನೆ ನಡೆಸಿ, ಒಮ್ಮತ ಮೂಡಿಸಲು ಸಮಿತಿ  ಯತ್ನಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.ಪ್ರಮುಖ ಪ್ರತಿಪಕ್ಷಗಳು ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಬಗ್ಗೆ ತಮ್ಮೊಳಗೇ ಸಮಾಲೋಚನೆ ನಡೆಸುತ್ತಿವೆ. ಒಂದು ವೇಳೆ ಹಿಂದುತ್ವದ ಪ್ರಬಲ ಪ್ರತಿಪಾದಕ ವ್ಯಕ್ತಿಯನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಆರಿಸಿದಲ್ಲಿ, ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಅವು ಚಿಂತನೆ ನಡೆಸಿವೆ.ಬಿಜೆಪಿ ಸಮಿತಿಯು ಒಮ್ಮತದ ಅಭ್ಯರ್ಥಿ ಆಯ್ಕೆಗೆ ವಿವಿಧ ರಾಜಕೀಯ ಪಕ್ಷಗಳ ಜತೆ ಸಮಾಲೋಚನೆ ನಡೆಸಲು ಮುಂದಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಬಿಜೆಪಿಯು ತನ್ನ ಅಭ್ಯರ್ಥಿಯನ್ನು ಘೋಷಿಸಿದ ಬಳಿಕ ಕಾಂಗ್ರೆಸ್, ಎಡಪಕ್ಷ ಸೇರಿದಂತೆ ಪ್ರತಿಪಕ್ಷಗಳು ತಮ್ಮ ಅಭ್ಯರ್ಥಿ ಬಗ್ಗೆ ನಿರ್ಧಾರ ಪ್ರಕಟಿಸಲಿವೆ.ಲೋಕಸಭೆ, ರಾಜ್ಯಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆಗಳ ಚುನಾಯಿತ ಪ್ರತಿನಿಧಿಗಳು ರಾಷ್ಟ್ರಪತಿ ಚುನಾವಣೆಯ ಮತದಾರರಾಗಿದ್ದು, ಗೆಲುವಿಗೆ ಬೇಕಾದ ಸಂಖ್ಯಾಬಲದ ವಿಶ್ವಾಸದಲ್ಲಿ ಎನ್‌ಡಿಎ ಇದೆ. ಆದರೆ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಪ್ರಾದೇಶಿಕ ಪಕ್ಷಗಳ ಮನವೊಲಿಸಲು ಪ್ರತಿಪಕ್ಷಗಳು ಯತ್ನಿಸುತ್ತಿವೆ.ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 14ರಿಂದ 28ರವರೆಗೆ ಅವಕಾಶವಿದೆ. ಒಮ್ಮತದ ಅಭ್ಯರ್ಥಿಗಾಗಿ ಪ್ರತಿಪಕ್ಷಗಳು ಬುಧವಾರ ಸಭೆ ಸೇರಲಿವೆ.ಕಾರ್ಯಕ್ರಮ ಮುಂದೂಡಿಕೆ

ರಾಷ್ಟ್ರಪತಿ ಚುನಾವಣೆ ಕಾರಣ ಅಮಿತ್ ಷಾ ಅವರು ತಮ್ಮ ಪೂರ್ವನಿಗದಿತ ಅರುಣಾಚಲ ಪ್ರದೇಶ ಪ್ರವಾಸವನ್ನು ಮುಂದೂಡಿದ್ದಾರೆ.  ಜುಲೈ 15–16ರಂದು ವಿಶಾಖಪಟ್ಟಣದಲ್ಲಿ ನಿಗದಿಯಾಗಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯೂ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry