ಬಂದ್‌ ತುಳಿದ ರಾಜ್ಯ ಸರ್ಕಾರ: ವಾಟಾಳ್‌

7
ಪುರಭವನದ ಎದುರು ಮೆರವಣಿಗೆ l ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ

ಬಂದ್‌ ತುಳಿದ ರಾಜ್ಯ ಸರ್ಕಾರ: ವಾಟಾಳ್‌

Published:
Updated:
ಬಂದ್‌ ತುಳಿದ ರಾಜ್ಯ ಸರ್ಕಾರ: ವಾಟಾಳ್‌

ಬೆಂಗಳೂರು: ‘ಕರ್ನಾಟಕ ಬಂದ್‌ ಅನ್ನು ರಾಜ್ಯ ಸರ್ಕಾರವೇ ತುಳಿದು ಹಾಕಿತು’ ಎಂದು ಕನ್ನಡ ಪರ ಸಂಘಟನೆಗಳ ಒಕ್ಕೂಟದ  ಅಧ್ಯಕ್ಷ ವಾಟಾಳ್‌ ನಾಗರಾಜ್‌ ದೂರಿದರು.

ನಗರದ ಪುರಭವನದ ಎದುರು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಬಂದ್ ಯಶಸ್ವಿಯಾದರೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಭಾಗವಹಿಸುವ ಕಾರ್ಯಕ್ರಮಕ್ಕೆ ಅಡ್ಡಿ ಆಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂಬ  ಸ್ವಾರ್ಥದಿಂದ ಸರ್ಕಾರವು ಹೀಗೆ ನಡೆದುಕೊಂಡಿದೆ. ಇದನ್ನು ಖಂಡಿಸುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಂದ್‌ ಯಶಸ್ವಿ ಆಗಬಾರದು ಎಂಬ ಉದ್ದೇಶದಿಂದ ಕನ್ನಡ ಪರ ಸಂಘಟನೆಗಳ 2,000 ಕಾರ್ಯಕರ್ತರನ್ನು ಪೊಲೀಸರು ಭಾನುವಾರವೇ ಬಂಧಿಸಿದ್ದಾರೆ. 500 ಮಂದಿಗೆ ನೋಟಿಸ್‌ ನೀಡಿದ್ದಾರೆ. ಇದಕ್ಕೆ ನಾವು ಹೆದರುವುದಿಲ್ಲ.  ಮೈಸೂರು ಬ್ಯಾಂಕ್‌್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸುತ್ತೇವೆ’ ಎಂದು ಹೇಳಿದರು.

ಟ್ರಾಫಿಕ್‌ನಲ್ಲಿ ಸಿಲುಕಿದ 3 ಆಂಬುಲೆನ್ಸ್‌ಗಳು: ವಾಟಾಳ್‌ ನಾಗರಾಜ್‌ ಅವರು ಬೆಂಬಲಿಗರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪುರಭವನದಿಂದ ಹೊರಟರು. ಈ ವೇಳೆ  ಕಾರ್ಪೊರೇಷನ್‍ ವೃತ್ತದ ಕಡೆಯಿಂದ ಪುರಭವನದತ್ತ ಬರುವ ವಾಹನಗಳನ್ನು ತಡೆಯಲಾಗಿತ್ತು. ಆಗ ಕಾರ್ಪೊರೇಷನ್‌ ವೃತ್ತದ ಕಡೆಯಿಂದ ಬಂದ ಆಂಬುಲೆನ್ಸ್‌ ವಾಹನಗಳ ಮಧ್ಯೆ ಸಿಲುಕಿತ್ತು.

ಕಾರ್ಪೊರೇಷನ್‌ ವೃತ್ತದ ಬಳಿ ವಾಟಾಳ್‌ ನಾಗರಾಜ್‍ ಹಾಗೂ ಬೆಂಬಲಿಗರನ್ನು ಪೊಲೀಸರು ಬಂಧಿಸಿದರು. ಈ ವೇಳೆ ಮತ್ತಷ್ಟು ಸಂಚಾರ ದಟ್ಟಣೆ ಉಂಟಾಗಿ ಮತ್ತೆ ಎರಡು ಆಂಬುಲೆನ್ಸ್‌ಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದವು.

ಪ್ರವೀಣ್‌ ಶೆಟ್ಟಿ, ಬೆಂಬಲಿಗರು ವಶಕ್ಕೆ: ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‌ಶೆಟ್ಟಿ ನೇತೃತ್ವದಲ್ಲಿ ಜೆ.ಸಿ.ನಗರದಲ್ಲಿರುವ ದಸರಾ ಮೈದಾನದಿಂದ ಪುರಭವನದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೇಖ್ರಿ ವೃತ್ತದ ಬಳಿ ಬರುತ್ತಿದ್ದಂತೆ ಪ್ರವೀಣ್‌ ಶೆಟ್ಟಿ ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದರು.

ಪೊಲೀಸ್‌ ಬಿಗಿ ಭದ್ರತೆ: ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ವಿಧಾನಸೌಧ ಹಾಗೂ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಮೆಜೆಸ್ಟಿಕ್, ರೈಲು ನಿಲ್ದಾಣ, ಸ್ವಾತಂತ್ರ್ಯ ಉದ್ಯಾನ ಹಾಗೂ ನಗರದ ಪ್ರಮುಖ ಬಸ್‌ ತಂಗುದಾಣಗಳ ಬಳಿ ಬೆಳಿಗ್ಗೆ 5 ಗಂಟೆಯಿಂದಲೇ ಪೊಲೀಸರು ಗಸ್ತು ತಿರುಗಲು ಆರಂಭಿಸಿದ್ದರು. ಯಶವಂತಪುರ ಹಾಗೂ ಸುತ್ತಮುತ್ತ ಪ್ರದೇಶಗಳಿಗೆ ನಗರ ಪೊಲೀಸ್‌ ಕಮಿಷನರ್‌ ಪ್ರವೀಣ್‌ ಸೂದ್‌ ಭೇಟಿ ನೀಡಿ, ಭದ್ರತೆ ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಗರದಲ್ಲಿ ಕೆಎಸ್‌ಆರ್‌ಪಿ ಹಾಗೂ ಸಿಎಆರ್‌ ಸೇರಿದಂತೆ  78 ತುಕಡಿಗಳನ್ನು ನಿಯೋಜಿಸಲಾಗಿತ್ತು. ಏಳು ವಿಭಾಗದ ಡಿಸಿಪಿಗಳು ಭದ್ರತೆಯ ಹೊಣೆ ವಹಿಸಿಕೊಂಡಿದ್ದಾರೆ’ ಎಂದರು.

ಕನ್ನಡ ಪರ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ರೈತ ಸಂಘ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಹೊಸಕೋಟೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

****

ಮುತ್ತಿಗೆಗೆ  ಯತ್ನಿಸಿದ  70  ಮಂದಿ  ವಶಕ್ಕೆ

ಪುರಭವನದಿಂದ ಮೆರವಣಿಗೆ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಕನ್ನಡಪರ ಸಂಘಟನೆಗಳ ಒಕ್ಕೂಟದ 70 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು.

ಅವರನ್ನು ಆಡುಗೋಡಿಯ ಸಿಎಆರ್‌ ಮೈದಾನದಲ್ಲಿ ಇರಿಸಿದ್ದ ಪೊಲೀಸರು, ಸಂಜೆ ಬಿಡುಗಡೆ ಮಾಡಿದರು.

‘ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದೆವು. ಸದ್ಯಕ್ಕೆ ಅವರ ವಿರುದ್ಧ ದೂರುಗಳನ್ನು ದಾಖಲಿಸಿಕೊಂಡಿಲ್ಲ’ ಎಂದು ಎಸ್‌.ಜೆ.ಪಾರ್ಕ್‌ ಠಾಣೆ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry