ಅರಬ್‌ ದೇಶಗಳ ಕೆರಳಿಸಿದ ಕತಾರ್‌ ಸ್ವತಂತ್ರ ಮನೋಭಾವ

7

ಅರಬ್‌ ದೇಶಗಳ ಕೆರಳಿಸಿದ ಕತಾರ್‌ ಸ್ವತಂತ್ರ ಮನೋಭಾವ

Published:
Updated:
ಅರಬ್‌ ದೇಶಗಳ ಕೆರಳಿಸಿದ ಕತಾರ್‌ ಸ್ವತಂತ್ರ ಮನೋಭಾವ

ಪುಟ್ಟ ಕತಾರ್‌ ಜಗತ್ತಿನ ಅತ್ಯಂತ ಶ್ರೀಮಂತ ದೇಶ. ಯಥೇಚ್ಛವಾಗಿರುವ ತೈಲ ಮತ್ತು ನೈಸರ್ಗಿಕ ಅನಿಲ ಈ ದೇಶದ ಶ್ರೀಮಂತಿಕೆಗೆ ಕಾರಣ. ಆದರೆ ಮಧ್ಯಪ್ರಾಚ್ಯದ ಇತರ ಶ್ರೀಮಂತ ದೇಶಗಳು ಈಗ ಕತಾರ್‌ನ ಮೇಲೆ ದಿಗ್ಬಂಧನ ಹೇರಿವೆ.ಭಯೋತ್ಪಾದನೆಗೆ ಕತಾರ್‌ ಬೆಂಬಲ ನೀಡುತ್ತಿದೆ ಎಂಬುದು  ಈ ದಿಗ್ಬಂಧನಕ್ಕೆ ಈ ದೇಶಗಳು ನೀಡಿರುವ ಕಾರಣ. ಸುತ್ತಲಿನ ದೇಶಗಳು ಕತಾರ್‌ ಜತೆಗಿನ ವಾಯು, ಜಲ ಮತ್ತು ಭೂಸಂಪರ್ಕವನ್ನು ಸಂಪೂರ್ಣವಾಗಿ ಕಡಿತ ಮಾಡಿವೆ. ಆಹಾರದಿಂದ ಹಿಡಿದು ಜೀವನಾವಶ್ಯಕವಾದ ಎಲ್ಲ ವಸ್ತುಗಳಿಗೂ ನೆರೆಯ ದೇಶಗಳನ್ನೇ ಅವಲಂಬಿಸಿರುವ  ಕತಾರ್‌ನಲ್ಲಿ ಆಹಾರಕ್ಕಾಗಿ ಹಾಹಾಕಾರ ಉಂಟಾಗಲು ಇನ್ನು ಹೆಚ್ಚು ದಿನಗಳು ಬೇಕಿಲ್ಲ.ಇದೇ ಮೊದಲಲ್ಲ: ಉಗ್ರವಾದಕ್ಕೆ ಕತಾರ್‌ ಆರ್ಥಿಕ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ 2014ರಲ್ಲಿಯೂ ಮಧ್ಯಪ್ರಾಚ್ಯದ ಕೆಲವು ದೇಶಗಳು ಕತಾರ್‌ನ ಮೇಲೆ ದಿಗ್ಬಂಧನ ಹೇರಿದ್ದವು.  ಒಂಬತ್ತು ತಿಂಗಳ ಬಳಿಕ ಈ ಬಿಕ್ಕಟ್ಟಿಗೆ ಪರಿಹಾರ ಸಿಕ್ಕಿತು. ಆದರೆ ಸಮಸ್ಯೆ ಹಾಗೆಯೇ ಉಳಿದುಕೊಂಡಿತು.ಸೌದಿ ಅರೇಬಿಯಾದ ಜತೆ ಮಾತ್ರ ಕತಾರ್‌ ಭೂಗಡಿಯನ್ನು ಹೊಂದಿದೆ. ಉಳಿದ ಭಾಗಗಳಲ್ಲಿ ಸಮುದ್ರ ಇದೆ.ದಿಗ್ಬಂಧನ ಹೇರಿರುವ ರಾಷ್ಟ್ರಗಳು: ಸೌದಿ ಆರೇಬಿಯಾ, ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ), ಬಹರೇನ್‌,  ಈಜಿಪ್ಟ್‌, ಯೆಮನ್‌ ಮತ್ತು ಮಾಲ್ಡೀವ್ಸ್‌ಪರಿಣಾಮಗಳೇನು

* ದಿಗ್ಬಂಧನ ಹೇರಿರುವ ದೇಶಗಳು  ಕತಾರ್‌ ಜತೆಗೆ ಜಲ, ವಾಯು ಮತ್ತು ಭೂಮಾರ್ಗದ ಎಲ್ಲ ಸಂಪರ್ಕಗಳನ್ನೂ ಸ್ಥಗಿತಗೊಳಿಸಿವೆ

* ಇದರಿಂದಾಗಿ ಕತಾರ್‌ನಿಂದ ಮತ್ತು ಕತಾರ್‌ ಮೂಲಕ ಯುರೋಪ್‌ಗೆ ಹೋಗುವ ಸಮಯ ಆರು ತಾಸಿನಿಂದ ಒಂಬತ್ತು ತಾಸಿಗೆ ಏರಿಕೆಯಾಗಿದೆ* ಕತಾರ್‌ಗೆ ಸೌದಿ ಅರೇಬಿಯಾದಿಂದ ರಸ್ತೆ ಮೂಲಕ ಪೂರೈಕೆಯಾಗುವ ಆಹಾರದ ಪ್ರಮಾಣ ಶೇ 40ಕ್ಕಿಂತ ಹೆಚ್ಚು. ಇದು ಈಗ ಸಂಪೂರ್ಣವಾಗಿ ನಿಂತಿದೆ* ಆಹಾರ ಪಡೆಯಲು ಕತಾರ್‌ ಜಲ ಮತ್ತು ವಾಯು ಮಾರ್ಗವನ್ನು ಅವಲಂಬಿಸಬೇಕು. ನೆರೆಯ ದೇಶಗಳ ವಾಯುಪ್ರದೇಶದಲ್ಲಿ ಕತಾರ್‌ಗೆ ಬರುವ ವಿಮಾನಗಳು ಹಾರುವಂತಿಲ್ಲ. ಹಾಗಾಗಿ ಆಹಾರದ ಬೆಲೆ ಹೆಚ್ಚಾಗುತ್ತದೆ. ಹಣದುಬ್ಬರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ‘ಸುದ್ದಿ’ ಸೃಷ್ಟಿಸಿದ ವಿಷಮ ಸ್ಥಿತಿ

ಕತಾರ್‌ನ ರಾಜ ತಮೀಮ್‌ ಬಿನ್‌ ಹಮದ್‌ ಅಲ್‌ ಥಾಣಿ ಅವರು ಕಳೆದ ತಿಂಗಳು ಮಾಡಿದ ಭಾಷಣದ ವರದಿಯೊಂದು ಈ ಬಿಕ್ಕಟ್ಟಿನ ಹಿಂದೆ ಇದೆ.

ಈ ಭಾಷಣದಲ್ಲಿ ತಮೀಮ್‌ ಅವರು ‘ಅಮೆರಿಕವನ್ನು ಟೀಕಿಸಿದರು, ಇರಾನ್‌ಗೆ ಬೆಂಬಲ ಘೋಷಿಸಿದರು, ಪ್ಯಾಲೆಸ್ಟೀನ್‌ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವ ಸಂಘಟನೆ ಹಮಸ್‌ ಮತ್ತು ಈಜಿಪ್ಟ್‌ನ ರಾಜಕೀಯ ಸಂಘಟನೆ ಮುಸ್ಲಿಂ ಬ್ರದರ್‌ಹುಡ್‌ಗೆ ನೀಡುತ್ತಿರುವ ಬೆಂಬಲ ಮುಂದುವರಿಸುವುದಾಗಿ ಹೇಳಿದರು’ ಎಂದು ವರದಿಯಾಯಿತು.‘ಕತಾರ್‌ ವಿರುದ್ಧ ಸೌದಿ ಆರೇಬಿಯಾ, ಬಹರೈನ್‌, ಈಜಿಪ್ಟ್‌ ಮತ್ತು ಯುಎಇ ಸಂಚು ನಡೆಸುತ್ತಿರುವುದು ದೃಢಪಟ್ಟಿದೆ. ಹಾಗಾಗಿ ಈ ಎಲ್ಲ ದೇಶಗಳಿಂದ ರಾಯಭಾರಿಗಳನ್ನು ವಾಪಸ್‌ ಕರೆಸಿಕೊಳ್ಳಲಾಗುವುದು’ ಎಂದೂ ಕತಾರ್‌ ಹೇಳಿದ್ದಾಗಿ ಅಲ್ಲಿನ ಅಧಿಕೃತ ವಾರ್ತಾ ಸಂಸ್ಥೆಯೇ ವರದಿ ಮಾಡಿತು.ಈ ವರದಿಗಳಲ್ಲಿ ಸತ್ಯವೇ ಇಲ್ಲ ಎಂದು ತಕ್ಷಣವೇ ಕತಾರ್‌ನ ಅಧಿಕಾರಿಗಳು ಸ್ಪಷ್ಟಪಡಿಸಿದರು. ನಂತರ, ರಷ್ಯಾದ ಹ್ಯಾಕರ್‌ಗಳು ಈ ಸುದ್ದಿ ಸಂಸ್ಥೆಗಳ ಅಂತರ್ಜಾಲ ತಾಣಗಳಿಗೆ ಕನ್ನ ಹಾಕಿ ಇಂತಹ ಸುದ್ದಿ ಪ್ರಕಟವಾಗುವಂತೆ ಮಾಡಿದ್ದಾರೆ ಎಂದು ಹೇಳಲಾಯಿತು. ಆದರೆ ಕತಾರ್‌ನ ನಿಜವಾದ ನಿಲುವು ಇದೇ ಆಗಿದೆ ಎಂದು ಸಂಬಂಧಪಟ್ಟ ಎಲ್ಲರೂ ಅಂದುಕೊಂಡರು.ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹೊಂದಿರುವ ಅತ್ಯಂತ ದೊಡ್ಡ ಸೇನಾ ನೆಲೆ ಕತಾರ್‌ನಲ್ಲಿದೆ. ಈ ಒಂದು ವಿಚಾರ ಹೊರತುಪಡಿಸಿದರೆ ಅಮೆರಿಕ ಮತ್ತು ಕತಾರ್‌ ನಡುವೆ ಬೇರೆ ಯಾವ ವಿಚಾರದಲ್ಲಿಯೂ ಒಮ್ಮತ ಇಲ್ಲ. ಕತಾರ್‌ ಸರ್ಕಾರದ ಮಾಲೀಕತ್ವದ ಅಲ್‌ ಜಝೀರಾ ಸುದ್ದಿ ವಾಹಿನಿಯು ಮಧ್ಯಪ್ರಾಚ್ಯದ ಉಗ್ರಗಾಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ಹಾಗೆಯೇ ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುವುದನ್ನು ತಡೆಯಲು ಕತಾರ್‌ನಲ್ಲಿ ಬಿಗಿ ನಿಯಮವೂ ಇಲ್ಲ  ಎಂಬ ಅಸಮಾಧಾನವನ್ನು ಅಮೆರಿಕ ಹೊಂದಿದೆ.ಇರಾನ್‌ನಿಂದ ಆಹಾರ

ನಾಲ್ಕು ಕಾರ್ಗೊ ವಿಮಾನಗಳಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ಕತಾರ್‌ಗೆ ಇರಾನ್‌ ಪೂರೈಸಿದೆ. ಮುಂದೆ ದಿನವೂ ನೂರು ಟನ್‌ ತರಕಾರಿ ಪೂರೈಸುವುದಾಗಿ ತಿಳಿಸಿದೆ. ಮಾಂಸ ಮತ್ತಿತರ ವಸ್ತುಗಳೂ ಇರಾನ್‌ನಿಂದಲೇ ಪೂರೈಕೆ ಆಗುತ್ತಿವೆ.ಪ್ರತ್ಯೇಕಗೊಂಡ ಕುಟುಂಬಗಳು

ಮಧ್ಯಪ್ರಾಚ್ಯದಲ್ಲಿ ದೇಶಗಳ ಗಡಿ ಮೀರಿ ಮದುವೆ ಸಂಬಂಧ ನಡೆಯುತ್ತದೆ. ಹೀಗಾಗಿ ಬೇರೆ ದೇಶಗಳ ಹಲವು ಜನರು ಕತಾರ್‌ನ ವ್ಯಕ್ತಿಗಳನ್ನು ಮದುವೆಯಾಗಿದ್ದಾರೆ. ಹೀಗೆ ಮದುವೆಯಾಗಿ ಮಧ್ಯಪ್ರಾಚ್ಯದ ಬೇರೆ ದೇಶಗಳಲ್ಲಿ ನೆಲೆಸಿರುವ ಕತಾರ್‌ನ ಜನರು ಬಿಕ್ಕಟ್ಟಿನಿಂದಾಗಿ ತಮ್ಮ ಸಂಗಾತಿಯನ್ನು ಬಿಟ್ಟು ದೇಶಕ್ಕೆ ಮರಳಬೇಕಾದ ಪರಿಸ್ಥಿತಿ ಎದುರಾಗಿದೆ.ತೆರೆಮರೆಯ ಕಾರಣಗಳು

* ಮಧ್ಯಪ್ರಾಚ್ಯದ ದೇಶಗಳು ಒಂದು ದಿಕ್ಕಿನಲ್ಲಿ ಸಾಗುತ್ತಿದ್ದರೆ ಕತಾರ್‌ ತನ್ನದೇ ದಾರಿಯಲ್ಲಿ ಹೋಗುತ್ತಿದೆ

* ಸಾಕಷ್ಟು ಶ್ರೀಮಂತಿಕೆ ಪಡೆದುಕೊಂಡಿರುವ ಕತಾರ್‌ ಈಗ ಸೌದಿ ಅರೇಬಿಯಾದ ನೆರಳಿನಿಂದ ಹೊರಗೆ ಬಂದು ತನ್ನದೇ ಆದ ನೀತಿಗಳನ್ನು ರೂಪಿಸಿಕೊಂಡಿದೆ* ಮಧ್ಯಪ್ರಾಚ್ಯದ ದೇಶಗಳ ಮೇಲೆ ಪ್ರಭಾವ ಬೀರಲು ಸುನ್ನಿ ಪ್ರಾಬಲ್ಯದ ಸೌದಿ ಅರೇಬಿಯಾ ಮತ್ತು ಶಿಯಾ ಪ್ರಾಬಲ್ಯದ ಇರಾನ್‌ ನಡುವೆ ಸ್ಪರ್ಧೆ ಇದೆ. ಇರಾನ್‌ ಪರವಾಗಿ ಕತಾರ್‌ ನಿಂತಿರುವುದು ಸೌದಿ ಅರೇಬಿಯಾವನ್ನು ಕೆರಳಿಸಿದೆ* ಜಗತ್ತಿನ ಅತ್ಯಂತ ದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪದ ಮಾಲೀಕತ್ವವನ್ನು ಕತಾರ್‌ ಮತ್ತು ಇರಾನ್‌ ಜಂಟಿಯಾಗಿ ಹೊಂದಿವೆಟ್ರಂಪ್‌ ಪಾತ್ರ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಇತ್ತೀಚೆಗೆ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು. ಆ ಭೇಟಿಯ ವೇಳೆ ಭಯೋತ್ಪಾದನೆ ಮತ್ತು ಇರಾನ್‌ನ ಪ್ರಾಬಲ್ಯದ ವಿರುದ್ಧ ಹೋರಾಟದ ನೇತೃತ್ವವನ್ನು ಸೌದಿ ವಹಿಸಿಕೊಳ್ಳಬೇಕು ಎಂದು ಹೇಳಿದ್ದರು. ಟ್ರಂಪ್‌ ಅವರ ಈ ಹೇಳಿಕೆಯೇ ಕತಾರ್‌ ಮೇಲೆ ದಿಢೀರ್‌ ಮುಗಿಬೀಳಲು ಮಧ್ಯಪ್ರಾಚ್ಯದ ದೇಶಗಳಿಗೆ ಧೈರ್ಯ ಕೊಟ್ಟಿತು ಎಂದು ಹೇಳಲಾಗುತ್ತಿದೆ.ಕತಾರ್‌ನ ವಿರೋಧಾಭಾಸಗಳು

* ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಅತ್ಯಂತ ದೊಡ್ಡ ವಾಯುನೆಲೆಗೆ ಸ್ಥಳ ಒದಗಿಸಿದೆ. ಜತೆಗೇ ಅಮೆರಿಕದ ವೈರಿ ಇರಾನ್‌ ಜತೆಗೆ ನಿಕಟ ಸಂಬಂಧ ಹೊಂದಿದೆ

* ಇರಾನ್‌ ನಂಟು ಹೊಂದಿರುವ ಹೌತಿ ಬಂಡುಕೋರರ ದಮನಕ್ಕೆ ಯೆಮನ್‌ಗೆ ನೆರವಾಗುತ್ತಿದೆ. ಆದರೆ ಇರಾನ್‌ನ ಮಿತ್ರರಾಷ್ಟ್ರ ಸಿರಿಯಾದಲ್ಲಿನ ಬಂಡುಕೋರರಿಗೆ ನೆರವು ನೀಡುತ್ತಿದೆ* ಅರಬ್‌ ದೇಶಗಳ ಜತೆಗೆ ಹೊಂದಿರುವ ನಂಟಿನ ರೀತಿಯಲ್ಲಿಯೇ ಇಸ್ರೇಲ್‌ ಜತೆಗೂ ಸ್ನೇಹ ಹೊಂದಿದೆ. ಅದೇ ಹೊತ್ತಿಗೆ ಪ್ಯಾಲೆಸ್ಟೀನ್‌ ಹೋರಾಟಗಾರರಿಗೆ ಬೆಂಬಲ ನೀಡುತ್ತಿದೆಅಲ್‌ ಜಝೀರಾ ಸುದ್ದಿವಾಹಿನಿ ಮೇಲೆ ಕಣ್ಣು

ಕತಾರ್‌ನ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಅಲ್‌ ಜಝೀರಾ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದರೆ ಈ ಸುದ್ದಿ ವಾಹಿನಿ ಪ್ರಸಾರ ಮಾಡಿರುವ ಹಲವು ಸುದ್ದಿಗಳು ಅರಬ್‌ ದೇಶಗಳ ಆಕ್ರೋಶಕ್ಕೆ ಕಾರಣವಾಗಿವೆ.

ಅರಬ್‌ ವಸಂತ, ಈಜಿಪ್ಟ್‌ನ ಹೊಸ್ನಿ ಮುಬಾರಕ್‌ ಸರ್ಕಾರದ ಪತನ, ನಂತರ ಚುನಾಯಿತ ಅಧ್ಯಕ್ಷ ಮೊಹಮ್ಮದ್‌ ಮೊರ್ಸಿ ಅವರ ಪದಚ್ಯುತಿಗಳಿಗೆಲ್ಲ ಅಲ್‌ ಜಝೀರಾ ಕಾರಣ ಎಂದು ಅರಬ್‌ ದೇಶಗಳು ಭಾವಿಸಿವೆ.ಅಲ್‌ ಜಝೀರಾದ ಕಚೇರಿ, ಅದಕ್ಕೆ ನೀಡಿದ್ದ ಪ್ರಸಾರದ ಪರವಾನಗಿಯನ್ನು ಸೌದಿ ಅರೇಬಿಯಾ ಈಗಾಗಲೇ ರದ್ದುಪಡಿಸಿದೆ. ಅದರ ವೆಬ್‌ಸೈಟನ್ನು ಮೇಲೆ ಕತಾರ್‌ನ ಮೇಲೆ ನಿರ್ಬಂಧ ಹೇರಿರುವ ಎಲ್ಲ ದೇಶಗಳೂ ನಿಷೇಧಿಸಿವೆ.‘ಸಂಪೂರ್ಣ ನಿಷ್ಪಕ್ಷಪಾತ ಪತ್ರಿಕೋದ್ಯಮ ನಡೆಸುತ್ತಿದ್ದೇವೆ’ ಎಂದು ಅಲ್‌ ಜಝೀರಾ ಆಡಳಿತ ಮಂಡಳಿ ಹೇಳಿದೆ.ಸಂಧಾನಕ್ಕೆ ಸಂಭಾವ್ಯ ಷರತ್ತುಗಳು

* ಭಯೋತ್ಪಾದಕರಿಗೆ ಬೆಂಬಲ ನೀಡಿಕೆ ಸ್ಥಗಿತಗೊಳಿಸುವುದು

* ಇರಾನ್‌ ಜತೆಗಿನ ಸಂಬಂಧ ಕಡಿದುಕೊಳ್ಳುವುದು

* ಅಲ್‌ ಜಝೀರಾ ಸುದ್ದಿ ವಾಹಿನಿ ಬಂದ್‌ ಮಾಡುವುದುಕುವೈತ್‌ನಿಂದ ಸಂಧಾನ

ಕತಾರ್‌ ಮೇಲೆ ಕುವೈತ್‌ ದಿಗ್ಬಂಧನ ಹೇರಿಲ್ಲ. ಈ ದೇಶ ಸೌದಿ ಮತ್ತು ಇತರ ದೇಶಗಳ ಜತೆಗೆ ಸಂಧಾನ ನಡೆಸಿ ದಿಗ್ಬಂಧನ ತೆರವುಗೊಳಿಸಲು ಪ್ರಯತ್ನ ನಡೆಸುತ್ತಿದೆ. ಈತನಕ ಅದು ಯಶಸ್ಸು ಪಡೆದಿಲ್ಲ.2022ರ ವಿಶ್ವಕಪ್‌ ಫುಟ್‌ಬಾಲ್‌ ಕೂಟಕ್ಕೆ ತೊಂದರೆ

2022ರ ಫುಟ್‌ಬಾಲ್‌ ವಿಶ್ವಕಪ್‌ ಕತಾರ್‌ನಲ್ಲಿ ನಡೆಯಲಿದೆ. ಅದಕ್ಕಾಗಿ ಭಾರಿ ತಯಾರಿ ಆರಂಭವಾಗಿದೆ. ಕ್ರೀಡಾಂಗಣಗಳ ನಿರ್ಮಾಣ ಅವುಗಳಲ್ಲಿ ಪ್ರಮುಖವಾದುದು. ಇದಕ್ಕೆ ಬೇಕಾದ ಸಿಮೆಂಟ್‌, ಉಕ್ಕು ಇತ್ಯಾದಿ ಕೂಡ ಸೌದಿ ಮೂಲಕವೇ ಬರುತ್ತಿತ್ತು. ಇನ್ನು ಮುಂದೆ ಅದಕ್ಕೆ ಜಲಮಾರ್ಗವನ್ನು ಅವಲಂಬಿಸಬೇಕಾಗುತ್ತದೆ. ಹಾಗಾದಾಗ ಬೆಲೆ ಏರಿಕೆಯಾಗುತ್ತದೆ. ಜತೆಗೆ ವಿಳಂಬವೂ ಆಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry