ಬೆತ್ತಲಾದ ರೈತ,ವಿಷ ಸೇವನೆಗೆ ಯತ್ನ

7
ಅರಣ್ಯ ಮತ್ತು ಬಗರ್‌ಹುಕುಂ ಸಾಗುವಳಿ ಭೂಮಿಯ ಹಕ್ಕುಪತ್ರ ನೀಡಲು ರೈತರ ಆಗ್ರಹ

ಬೆತ್ತಲಾದ ರೈತ,ವಿಷ ಸೇವನೆಗೆ ಯತ್ನ

Published:
Updated:
ಬೆತ್ತಲಾದ ರೈತ,ವಿಷ ಸೇವನೆಗೆ ಯತ್ನ

ಹಾವೇರಿ: ಜಿಲ್ಲೆಯ ಅರಣ್ಯ ಮತ್ತು ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿಯ ‘ಹಕ್ಕು ಪತ್ರ’ ನೀಡಬೇಕು ಎಂದು ಆಗ್ರಹಿಸಿ ರೈತರು ಸೋಮವಾರ ಇಲ್ಲಿ ನಡೆಸಿದ ಅರೆಬೆತ್ತಲೆ ಮೆರವಣಿಗೆ ವೇಳೆ, ರಾಣೆಬೆನ್ನೂರು ತಾಲ್ಲೂಕಿನ ಹನುಮಾಪುರದ ರೈತ ಕಾಳಪ್ಪ ಲಮಾಣಿ ಸಂಪೂರ್ಣ ಬೆತ್ತಲಾದರು.

ಇದೇ ತಾಲ್ಲೂಕಿನ ಐರಣಿಯ ರೈತ ಚಂದ್ರಪ್ಪ ಗುತ್ತೂರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರೆ,  ಹಿರೇಕೆರೂರಿನ ಆಲದಗೇರಿಯ ರೈತ ಶಿವಪ್ಪ ಹಲಗೇರಿ ಅವರ ಕೈಯಲ್ಲಿದ್ದ ವಿಷದ ಬಾಟಲಿಯನ್ನು ಪೊಲೀಸರು ಕಸಿದುಕೊಂಡರು. ವಿಷ ಸೇವಿಸಿದ್ದ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಕೆಲವರು ಒಳಉಡುಪಿನ ಮೇಲೆಯೇ ಸೊಂಟಕ್ಕೆ ಬೇವಿನ ಸೊಪ್ಪು ಸುತ್ತಿಕೊಂಡರೆ, ಇನ್ನು  ಕೆಲವರು ಕಲ್ಲು ಹೊತ್ತುಕೊಂಡು ಅರೆಬೆತ್ತಲೆಯಾಗಿ ಪ್ರತಿಭಟನಾ ಜಾಥಾ ಆರಂಭಿಸಿದರು. ಕೊನೆಗೆ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಜಮಾಯಿಸಿದರು.  

ಬಳಿಕ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಬ. ದೀವಿಗಿಹಳ್ಳಿ, ‘ಜಿಲ್ಲೆಯಲ್ಲಿ ಮೂರು ತಲೆಮಾರಿನಿಂದ ಸುಮಾರು 25 ಸಾವಿರ ಕುಟುಂಬಗಳು ಅಂದಾಜು 60 ಸಾವಿರ ಎಕರೆ ಅರಣ್ಯ, ಗೋಮಾಳ, ಹುಲ್ಲುಗಾವಲು ಮತ್ತಿತರ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿವೆ. ಈ ಬಡ ರೈತರಿಗೆ ಭೂಮಿಯ ಹಕ್ಕುಪತ್ರ ನೀಡಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನಿರ್ದೇಶನ ನೀಡಿದ್ದಾರೆ.

ಸರ್ಕಾರವು ಕಾಯ್ದೆಗೆ ತಿದ್ದುಪಡಿ ಮಾಡಿದೆ. ಆದರೆ, ಜಿಲ್ಲೆಯ ಅಧಿಕಾರಿಗಳು ಮಾತ್ರ ಹಕ್ಕುಪತ್ರ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ವಂಶಿಕೃಷ್ಣ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಡಿವೈಎಸ್ಪಿ ಡಾ.ಗೋಪಾಲ ಬ್ಯಾಕೋಡ್ ರೈತರ ಮನವೊಲಿಸಿದರು. ಬಳಿಕ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಜೊತೆ ಮಾತುಕತೆ ನಡೆಸಿದ ರೈತರು, ಪ್ರತಿಭಟನೆ ಹಿಂಪಡೆದರು.

25 ಸ್ವಾಧೀನ ಪತ್ರ ಸಿದ್ಧ: ಜಿಲ್ಲಾಧಿಕಾರಿ

ಹಾವೇರಿ:  ‘ಪರಿಶಿಷ್ಟ ಪಂಗಡ ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳ ಗುರುತಿಸುವಿಕೆ) ಕಾಯ್ದೆ’ ಅಡಿಯಲ್ಲಿ ಈಗಾಗಲೇ 25 ಕುಂಟುಂಬಗಳ ‘ಸ್ವಾಧೀನ ಪತ್ರ’ ಸಿದ್ಧಪಡಿಸಲಾಗಿದ್ದು, 11ಕುಟುಂಬಗಳಿಗೆ ನೀಡಲಾಗಿದೆ. ರೈತರಿಂದ ಅರ್ಜಿಗಳು ಬಂದ ಕಾರಣ, ಸರ್ವೆ ಮತ್ತು ಪರಿಶೀಲನೆಯು ಪ್ರಕ್ರಿಯೆಯಲ್ಲಿತ್ತು. ಅಲ್ಲದೇ, ಹಿರೇಕೆರೂರ ತಾಲ್ಲೂಕಿನ ವರಹಾ, ನಿಡನೇಗಿಲು ಮತ್ತಿತರ ಗ್ರಾಮ ವ್ಯಾಪ್ತಿಯ ಭೂಮಿಯ ಜಿಪಿಎಸ್ ಸರ್ವೆಯನ್ನು ಮಂಗಳವಾರದಿಂದಲೇ ಆರಂಭಿಸಲಿದ್ದೇವೆ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry