ಬಿಬಿಎಂಪಿ ವಲಯಗಳ ಸಂಖ್ಯೆ 10ಕ್ಕೆ ಏರಿಕೆ

7

ಬಿಬಿಎಂಪಿ ವಲಯಗಳ ಸಂಖ್ಯೆ 10ಕ್ಕೆ ಏರಿಕೆ

Published:
Updated:
ಬಿಬಿಎಂಪಿ ವಲಯಗಳ ಸಂಖ್ಯೆ 10ಕ್ಕೆ ಏರಿಕೆ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಲಯಗಳನ್ನು  ಮರುವಿಂಗಡಣೆ ಮಾಡಿ ಹಾಗೂ ವಲಯಗಳ ಸಂಖ್ಯೆಯನ್ನು 10ಕ್ಕೆ ಏರಿಸಿ ನಗರಾಭಿವೃದ್ಧಿ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ವಲಯಗಳ ಮರುವಿಂಗಡಣೆ  ಪ್ರಸ್ತಾವಕ್ಕೆ 2016ರ ಮೇ 12ರಂದು ನಡೆದಿದ್ದ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ ಸಿಕ್ಕಿತ್ತು. ಇದನ್ನು ಅನುಮೋದನೆಗಾಗಿ  ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿತ್ತು. ನಿವೃತ್ತ ಮುಖ್ಯ ಕಾರ್ಯದರ್ಶಿ  ಬಿ.ಎಸ್‌.ಪಾಟೀಲ ನೇತೃತ್ವದ ಬಿಬಿಎಂಪಿ ಪುನರ್‌ ರಚನೆ ಸಮಿತಿ ವಲಯಗಳ ಮರುವಿಂಗಡಣೆಗೆ ಶಿಫಾರಸು ಮಾಡಿತ್ತು. ಒಟ್ಟು 10 ವಲಯಗಳನ್ನು ರಚಿಸುವಂತೆ  ಸಮಿತಿ ಸಲಹೆ ನೀಡಿತ್ತು.

ಮರುವಿಂಗಡಣೆ ಏಕೆ?

2008ರಲ್ಲಿ ಪಾಲಿಕೆಯ ವ್ಯಾಪ್ತಿ ವಿಸ್ತಾರವಾದ ಬಳಿಕ ಕೆಲವು ವಲಯ ಕಚೇರಿಗಳಲ್ಲಿ ಕೆಲಸದ ಒತ್ತಡ ಹೆಚ್ಚಿತ್ತು.      ಕೆಲವು ಬಿಬಿಎಂಪಿಯ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಸಮಾನ ಅವಕಾಶ ಕಲ್ಪಿಸುವುದರ ಜತೆಗೆ ಉತ್ತಮ ಆಡಳಿತದ ದೃಷ್ಟಿಯಿಂದ ವಲಯಗಳ ಸಂಖ್ಯೆ ಹೆಚ್ಚಿಸಲಾಗಿದೆ  ಎಂದು ಆದೇಶದಲ್ಲಿ ಹೇಳಲಾಗಿದೆ.

ಬಿಬಿಎಂಪಿಯಲ್ಲಿ ಹಿಂದೆ 8 ವಲಯಗಳಿದ್ದವು. ಐದು ವಲಯಗಳು ಆಯಾ ವಿಧಾನಸಭಾ ಕ್ಷೇತ್ರಗಳ ಹೆಸರಿನಲ್ಲಿದ್ದರೆ,  ಇನ್ನುಳಿದ ವಲಯಗಳನ್ನು ಪಶ್ಚಿಮ, ದಕ್ಷಿಣ ಹಾಗೂ ಪೂರ್ವ  ಎಂದು ಹೆಸರಿಸಲಾಗಿತ್ತು.  ಆ ಮೂರು ವಲಯಗಳಿಗೆ ಈಗ  ಅದರ ವ್ಯಾಪ್ತಿಯಲ್ಲಿರುವ  ವಿಧಾನಸಭಾ ಕ್ಷೇತ್ರವೊಂದರ ಹೆಸರನ್ನೇ ಇಡಲಾಗಿದೆ.  ಸರ್ವಜ್ಞನಗರ,  ಮಲ್ಲೇಶ್ವರ, ವಿಜಯನಗರ, ಗಾಂಧಿನಗರ, ಜಯನಗರ  ವಲಯಗಳು ಈಗ ಸೇರ್ಪಡೆಯಾಗಿವೆ. 

ಸಮತೋಲಿತ ವಲಯ: ಸಮತೋಲಿತ ವಲಯಗಳ ರಚನೆಗೆ ಬಿಬಿಎಂಪಿ ಪುನರ್‌ ರಚನಾ ಸಮಿತಿ ಸಾರ್ವಜನಿಕರಿಂದ ಸಲಹೆ ಪಡೆದಿತ್ತು. ಈ ಉದ್ದೇಶಕ್ಕಾಗಿ ಸಮಿತಿಯಿಂದ ವಿಶೇಷ ಆ್ಯಪ್‌ ಅಭಿವೃದ್ಧಿಪಡಿಸಿತ್ತು. ಪ್ರತಿಯೊಂದು ವಾರ್ಡ್‌ನ ವಿಸ್ತೀರ್ಣ, ಜನಸಂಖ್ಯೆ, ಕಟ್ಟಡಗಳ ಸಂಖ್ಯೆ, ರಸ್ತೆ ಉದ್ದ, ಕೆರೆ, ಆಟದ ಮೈದಾನ, ಪಾರ್ಕ್‌ ಮತ್ತು ಸ್ಮಶಾನಗಳ ವಿವರ, ತೆರಿಗೆ ಸಂಗ್ರಹ ಹಾಗೂ ಆ ವಾರ್ಡ್‌ ಯಾವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದೆ ಎನ್ನುವ ಮಾಹಿತಿಯನ್ನು ಒಳಗೊಂಡ ನಕಾಶೆಯನ್ನು ಅದು ಅಭಿವೃದ್ಧಿಪಡಿಸಿತ್ತು. ಸಾರ್ವಜನಿಕರಿಂದ ಬಂದ  ಪ್ರತಿಕ್ರಿಯೆ ಆಧರಿಸಿ  ಸಮಿತಿ ವಲಯಗಳನ್ನು ಮರುವಿನ್ಯಾಸಗೊಳಿಸಲು ನಿರ್ಧರಿಸಿತ್ತು.

ಆಡಳಿತ ವಿಕೇಂದ್ರೀಕರಣ: ‘ವಲಯಗಳ ಸಂಖ್ಯೆ ಹೆಚ್ಚಳದಿಂದ ಆಡಳಿತ ವಿಕೇಂದ್ರೀಕರಣವಾಗಲಿದೆ.  ಇದೊಂದು ಉತ್ತಮ ನಡೆ’ ಎಂದು ಸಮಿತಿಯ ಸದಸ್ಯರೂ ಆಗಿದ್ದ ನಗರ ಯೋಜನಾ ತಜ್ಞ ವಿ.ರವಿಚಂದರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಯಾವ ವಾರ್ಡ್‌ ಎಷ್ಟು ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ. ಅದರ ಜನಸಂಖ್ಯೆ ಎಷ್ಟು ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂಬ ಎಂಬ ಅಂಶವನ್ನು ಪರಿಗಣಿಸಿ ಮರುವಿಂಗಡಣೆಗೆ ಶಿಫಾರಸು ಮಾಡಲಾಗಿದೆ. ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳು ಆಯಾ ವಲಯದಲ್ಲೇ ಇರುವಂತೆ ನೋಡಿಕೊಳ್ಳಲಾಗಿದೆ’ ಎಂದರು.

‘ಈಗಲೂ ಮಹದೇವಪುರ ವಲಯ ವಾರ್ಡ್‌ನಲ್ಲಿ ಕೇವಲ 8 ವಾರ್ಡ್‌ಗಳಿದ್ದರೆ, ಜಯನಗರ ವಲಯದಲ್ಲಿ 30 ವಾರ್ಡ್‌ಗಳು ಬರುತ್ತವೆ.  ಮಹದೇವಪುರ ವಲಯದ ವಾರ್ಡ್‌ಗಳು ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಇಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಜನಸಂಖ್ಯೆ ದುಪ್ಪಟ್ಟಾಗಲಿದೆ. ಅದೇ ಜಯನಗರ ಆಸುಪಾಸಿನಲ್ಲಿ ಜನಸಂಖ್ಯೆ ಹೆಚ್ಚಳ ಅಷ್ಟಾಗಿ ಆಗುತ್ತಿಲ್ಲ. ನಗರದ ಕೇಂದ್ರ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ಅವಕಾಶ ಕಡಿಮೆ. ಹಾಗಾಗಿ ವಲಯವಾರು ವಾರ್ಡ್‌ಗಳ ಹಂಚಿಕೆಯಲ್ಲಿ ವ್ಯತ್ಯಾಸ ಕಾಣಿಸುತ್ತದೆ’ ಎಂದರು.

‘ಒಂದು ಮಾದರಿ ವಲಯದಲ್ಲಿ 20ಕ್ಕಿಂತ ಹೆಚ್ಚು ವಾರ್ಡ್‌ಗಳಿರಬಾರದು. ಎಲ್ಲ ವಾರ್ಡ್‌ಗಳ ಜನಸಂಖ್ಯೆ ಹೆಚ್ಚೂ ಕಡಿಮೆ ಸಮಾನಾಗಿರಬೇಕು. ಆದರೆ, ಈಗಿನ ವ್ಯವಸ್ಥೆಯಲ್ಲಿ ಈ ರೀತಿ ಮರುವಿಂಗಡಣೆ  ಸಾಧ್ಯವಿಲ್ಲ. ವಾರ್ಡ್‌ಗಳ ಮರುವಿಂಗಡಣೆ ಆಗುವಾಗ ಅವುಗಳ ಜನಸಂಖ್ಯೆ ಒಂದೇ ರೀತಿ ಇರುವಂತೆ ನೋಡಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

ಶೀಘ್ರವೇ ಮೂಲ ಸೌಕರ್ಯ

‘ವಲಯಗಳ ಮರುವಿಂಗಡಣೆ ಬಳಿಕ ಎರಡು ಕಡೆ ಹೊಸತಾಗಿ ವಲಯ ಕಚೇರಿ ಆರಂಭಿಸಬೇಕಾಗುತ್ತದೆ.  ಇವುಗಳಿಗೆ ಇನ್ನೂ ಸ್ಥಳ ಗುರುತಿಸಿಲ್ಲ. ಸದ್ಯಕ್ಕೆ ಆ ವಲಯದಲ್ಲಿರುವ ಯಾವುದಾದರೂ ಒಂದು ವಾರ್ಡ್ ಕಚೇರಿಯಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಿ, ಅದನ್ನೇ ವಲಯ ಕಚೇರಿಯನ್ನಾಗಿ ಬಳಸಿ ಕೊಳ್ಳುತ್ತೇವೆ.  ಶೀಘ್ರವೇ ಹೊಸ ಕಚೇರಿಗಳನ್ನು ನಿರ್ಮಿಸುತ್ತೇವೆ’

ಎನ್‌.ಮಂಜುನಾಥ್‌ ಪ್ರಸಾದ್‌

ಬಿಬಿಎಂಪಿ ಆಯುಕ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry