ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ತುದಿಯಿಂದ ದಕ್ಷಿಣ ತುದಿಗೆ ಸಂಚರಿಸಲಿದೆ ಮೆಟ್ರೊ

24 ಕಿ.ಮೀ. ಮಾರ್ಗದಲ್ಲಿ ಇಂದಿನಿಂದ ಪರೀಕ್ಷಾರ್ಥ ಸಂಚಾರ
Last Updated 12 ಜೂನ್ 2017, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಜಾಲದ ಉತ್ತರದ ತುತ್ತತುದಿಯ ಮೆಟ್ರೊನಿಲ್ದಾಣವಾದ ನಾಗಸಂದ್ರ ಹಾಗೂ ದಕ್ಷಿಣದ ಕೊನೆಯ ನಿಲ್ದಾಣವಾದ  ಯಲಚೇನಹಳ್ಳಿ ನಡುವಿನ  24 ಕಿ.ಮೀ ಉದ್ದದ ಮಾರ್ಗದಲ್ಲಿ ಮಂಗಳವಾರ ಪರೀಕ್ಷಾರ್ಥ ರೈಲು ಸಂಚಾರ ನಡೆಯಲಿದೆ.

ಈ ಪರೀಕ್ಷಾರ್ಥ ಸಂಚಾರವನ್ನು ಸೋಮವಾರದಿಂದಲೇ ಆರಂಭಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ನಿರ್ಧರಿಸಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಕೆಲವೊಂದು ಅಂತಿಮ ಹಂತದ ಕೆಲಸ ಬಾಕಿ ಇದ್ದುದರಿಂದ ಮಂಗಳವಾರದಿಂದ ಪರೀಕ್ಷಾರ್ಥ ಸಂಚಾರ ನಡೆಸಲು ನಿಗಮವು ತೀರ್ಮಾನಿಸಿದೆ.

‘ಕಾಮಗಾರಿ ನಡೆಯುವ ವೇಳೆ ಹಳಿಯಲ್ಲಿ ದೂಳು ಸಂಗ್ರಹವಾಗಿರುತ್ತದೆ. ಪ್ರಯಾಣಿಕರ ಸಂಚಾರ ಆರಂಭಿಸುವ ಮುನ್ನ ಇಡೀ ಹಳಿಯನ್ನು ಒಮ್ಮೆ ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕಾಗುತ್ತದೆ. ಸಂಪಿಗೆ ರಸ್ತೆ– ನ್ಯಾಷನಲ್‌ ಕಾಲೇಜು ನಡುವಿನ ಸುರಂಗ ಮಾರ್ಗದ ಕೆಲವು ನಿಲ್ದಾಣಗಳಲ್ಲಿ ಸ್ವಚ್ಛತಾ ಕಾರ್ಯ ವಿಳಂಬವಾಗಿದ್ದರಿಂದ ಪರೀಕ್ಷಾರ್ಥ ಸಂಚಾರವನ್ನು ಮುಂದೂಡಲಾಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸಂಪೂರ್ಣ ಸನ್ನದ್ಧತೆ ಪರೀಕ್ಷೆ: ‘ಈ ಪರೀಕ್ಷಾರ್ಥ ಸಂಚಾರದ ವೇಳೆ ಪ್ರಯಾಣಿಕ ರೈಲು ಸಂಚಾರಕ್ಕೆ ಅಗತ್ಯವಿರುವ ಸಂಪೂರ್ಣ ಸನ್ನದ್ಧತೆಯನ್ನು ಪರಿಶೀಲಿಸಲಾಗುತ್ತದೆ. ಪೂರ್ಣ ಪ್ರಮಾಣದಲ್ಲಿ ಸಂಚಾರ  ಆರಂಭವಾದಾಗ ಮೆಟ್ರೊ ಕಾರ್ಯಾಚರಣೆ ಯಾವ ರೀತಿ ನಡೆಯುತ್ತದೆಯೋ, ಪರೀಕ್ಷಾರ್ಥ ಸಂಚಾರದ ವೇಳೆಯೂ ಅದೇ ರೀತಿ ಇರುತ್ತದೆ. ಎಲ್ಲ ನಿಲ್ದಾಣಗಳಲ್ಲೂ ಪೂರ್ಣ ಪ್ರಮಾಣದಲ್ಲಿ ನಿರ್ವಹಣಾ ಸಿಬ್ಬಂದಿ ಇರುತ್ತಾರೆ. ಅವರು ವಾಣಿಜ್ಯ ಸಂಚಾರದ ವೇಳೆ ನಡೆದುಕೊಳ್ಳುವಂತೆ ಈ ಪರೀಕ್ಷಾರ್ಥ ಸಂಚಾರದ ಸಂದರ್ಭದಲ್ಲೂ ಕಾರ್ಯ ನಿರ್ವಹಿಸಬೇಕಾಗುತ್ತದೆ. ನಿಲ್ದಾಣದಲ್ಲಿ ರೈಲು ಪ್ರವೇಶಿಸುವಾಗಿನ ಪ್ರಕಟಣೆಗಳು ಮೊಳಗಲಿವೆ’ ಎಂದು ನಿಗಮದ ಅಧಿಕಾರಿಯೊಬ್ಬರು ವಿವರಿಸಿದರು.

‘ಈ ಪರೀಕ್ಷಾರ್ಥ ಸಂಚಾರಕ್ಕಾಗಿ ಅಣಕು ವೇಳಾಪಟ್ಟಿಯನ್ನು ಸಿದ್ಧಪಡಿಸುತ್ತೇವೆ. ರೈಲುಗಳ ಚಾಲಕರು  ಈ ವೇಳಾಪಟ್ಟಿಗೆ ಬದ್ಧರಾಗಿರಬೇಕಾಗುತ್ತದೆ. ಕ್ಲಪ್ತ ಸಮಯಕ್ಕೆ ರೈಲು ನಿಗದಿತ ನಿಲ್ದಾಣ ತಲುಪುವಂತೆ ನೋಡಿಕೊಳ್ಳಬೇಕು’ ಎಂದರು.

‘ಇದೊಂದು ರೀತಿ, ನಮ್ಮ ಸಿಬ್ಬಂದಿಗೂ ಪೂರ್ವ ತಯಾರಿ ಇದ್ದಂತೆ.  ಕನಿಷ್ಠ ಪಕ್ಷ 2 ದಿನವಾದರೂ  ಈ ರೀತಿ ಪರೀಕ್ಷೆ ನಡೆಸಲಾಗುತ್ತದೆ’ ಎಂದರು.

‘ಜೂನ್‌ 13 ಹಾಗೂ 14 ರಂದು  ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಪರೀಕ್ಷಾರ್ಥ ಸಂಚಾರ ನಡೆಯಲಿದೆ.  ನಾಗಸಂದ್ರದಿಂದ ಸಂಪಿಗೆ ರಸ್ತೆವರೆಗೆ  ಪ್ರಯಾಣಿಕರ ಸಂಚಾರಕ್ಕೆ ಅವಕಾಶ ಇರಲಿದೆ. ಸಂಪಿಗೆ ರಸ್ತೆ– ನಾಗಸಂದ್ರದ ನಡುವೆ ಸಂಚರಿಸುವ ರೈಲುಗಳ ವೇಳಾಪಟ್ಟಿಯಲ್ಲೂ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT