ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್‌ ಫಲಿತಾಂಶ ಶೀಘ್ರ

ಮದ್ರಾಸ್‌ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದ ‘ಸುಪ್ರೀಂ’
Last Updated 12 ಜೂನ್ 2017, 20:04 IST
ಅಕ್ಷರ ಗಾತ್ರ

ನವದೆಹಲಿ: ವೈದ್ಯಕೀಯ ಮತ್ತು ದಂತ ವೈದ್ಯ ಕೋರ್ಸ್‌ನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌) ಫಲಿತಾಂಶ ಪ್ರಕಟಣೆಗೆ ಎದುರಾಗಿದ್ದ ಅಡ್ಡಿ ನಿವಾರಣೆಯಾಗಿದೆ.

ಫಲಿತಾಂಶ ಪ್ರಕಟಿಸುವುದಕ್ಕೆ ತಡೆಯಾಜ್ಞೆ ನೀಡಿ ಮದ್ರಾಸ್‌ ಹೈಕೋರ್ಟ್‌ ಹೊರಡಿಸಿದ್ದ ಮಧ್ಯಂತರ ಆದೇಶಕ್ಕೆ ಸೋಮವಾರ ತಡೆ ನೀಡಿರುವ ಸುಪ್ರೀಂ ಕೋರ್ಟ್‌, ಫಲಿತಾಂಶ ಘೋಷಿಸುವಂತೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ನಿರ್ದೇಶನ ನೀಡಿದೆ.

ಶೀಘ್ರ ಫಲಿತಾಂಶ: ಸುಪ್ರೀಂ ಕೋರ್ಟ್‌ ನಿರ್ದಿಷ್ಟ ದಿನಾಂಕ ನಿಗದಿ ಪಡಿಸ­ದಿದ್ದರೂ, ಫಲಿತಾಂಶ ಘೋಷಣೆ ಪ್ರಕ್ರಿಯೆಯನ್ನು ಸಿಬಿಎಸ್‌ಇ ಆರಂಭಿಸಿದೆ. ಎರಡು ವಾರಗಳ ಒಳಗಾಗಿ ಫಲಿತಾಂಶ ಪ್ರಕಟಿಸುವ ವಿಶ್ವಾಸವನ್ನು ಅದು  ವ್ಯಕ್ತಪಡಿಸಿದೆ.

‘ಆದಷ್ಟು ಬೇಗ ಫಲಿತಾಂಶ ಪ್ರಕಟಿ­ಸಲು ನಾವು ಯತ್ನಿಸಲಿದ್ದೇವೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸ್ವಲ್ಪ ಸಮಯ ಬೇಕು’ ಎಂದು ಸಿಬಿಎಸ್‌ಇಯ ಅಧಿಕಾರಿ­ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪರೀಕ್ಷೆ ಸಂದರ್ಭದಲ್ಲಿ ಇಂಗ್ಲಿಷ್‌ ಮತ್ತು ತಮಿಳು ಭಾಷೆಗಳಲ್ಲಿ ಏಕರೂಪದ ಪ್ರಶ್ನೆ ಪತ್ರಿಕೆ ನೀಡಲಾಗಿಲ್ಲ ಎಂದು ಆರೋಪಿಸಿ ತಮಿಳುನಾಡಿನ ಕೆಲವು ಅಭ್ಯರ್ಥಿಗಳು ಮದ್ರಾಸ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇವುಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಮೇ 24ರಂದು  ನೀಟ್‌ ಫಲಿತಾಂಶ ಪ್ರಕಟಣೆಗೆ ತಡೆಯಾಜ್ಞೆ ನೀಡಿತ್ತು.

ಮದ್ರಾಸ್‌ ಹೈಕೋರ್ಟ್‌ನ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಸಿಬಿಎಸ್‌ಇ ಇದೇ 9ರಂದು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

‘ತಡೆಯಾಜ್ಞೆ ನೀಡಿರುವುದರಿಂದ ನೀಟ್‌ ಮೂಲಕ ನಡೆಯಬೇಕಾಗಿರುವ ವೈದ್ಯಕೀಯ, ದಂತವೈದ್ಯಕೀಯ ಕೋರ್ಸ್‌­ಗಳ ಕೌನ್ಸೆಲಿಂಗ್‌ ಮತ್ತು ಪ್ರವೇಶಾ­ತಿಯ ವೇಳಾಪಟ್ಟಿ ಸಂಪೂರ್ಣ­ವಾಗಿ ಅಸ್ತವ್ಯಸ್ತವಾಗಿದೆ’ ಎಂದು ಸಿಬಿಎಸ್‌ಇ ಅರ್ಜಿಯಲ್ಲಿ ಹೇಳಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಸಿ. ಪಂತ್‌ ಮತ್ತು ದೀಪಕ್‌ ಗುಪ್ತಾ ‘ಹೈಕೋರ್ಟ್‌ ಆದೇಶವು ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ ವೇಳಾಪಟ್ಟಿಯ ಪಾಲನೆಗೆ ಪರೋಕ್ಷ ಅಡ್ಡಿ ಉಂಟು ಮಾಡುತ್ತದೆ’ ಎನ್ನುವ ಕಾರಣಕ್ಕೆ ಆ ಆದೇಶಕ್ಕೆ ತಡೆ ನೀಡು­ವುದಾಗಿ ತಿಳಿಸಿದರು.

ಮದ್ರಾಸ್‌ ಹೈಕೋರ್ಟ್‌ನ ಆದೇಶ, ಈ ವರ್ಷದ ನೀಟ್‌ಗಾಗಿ ಸುಪ್ರೀಂ ಕೋರ್ಟ್‌ ನಿಗದಿ ಪಡಿಸಿರುವ ವೇಳಾಪಟ್ಟಿಗೆ ವಿರುದ್ಧವಾದುದು ಎಂಬ   ಸಿಬಿಎಸ್‌ಇ ಹಾಗೂ ಇತರ ಅರ್ಜಿದಾರರ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಮನೀಂದರ್‌ ಸಿಂಗ್‌ ಅವರ ವಾದವನ್ನು ನ್ಯಾಯಪೀಠ ಮಾನ್ಯ ಮಾಡಿದೆ.

ಫಲಿತಾಂಶದ ಘೋಷಣೆ, ನಂತರ ನಡೆಯುವ ಕೌನ್ಸೆಲಿಂಗ್‌ ಮತ್ತು ದಾಖಲಾತಿ ಪ್ರಕ್ರಿಯೆಗಳು, ನೀಟ್‌ ವಿಚಾರವಾಗಿ ಇತ್ಯರ್ಥವಾಗದೇ ಇರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡುವ ತೀರ್ಮಾನಕ್ಕೆ ಬದ್ಧವಾಗಿರುತ್ತವೆ ಎಂದು ಅದು ಸ್ಪಷ್ಟಪಡಿಸಿದೆ. ಅರ್ಜಿ ವಿಚಾರಣೆಯನ್ನು ಮುಂದೂಡಿರುವ ನ್ಯಾಯಪೀಠ, ರಜಾಕಾಲದ ನಂತರ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.

ಅರ್ಜಿ ಪರಿಗಣಿಸದಿರಲು ಸೂಚನೆ: ನೀಟ್‌–2017ಕ್ಕೆ ಸಂಬಂಧಿಸಿದ ಯಾವುದೇ ಅರ್ಜಿಗಳನ್ನು ಪರಿಗಣಿಸದಂತೆ ಸುಪ್ರೀಂಕೋರ್ಟ್‌ ಎಲ್ಲ ಹೈಕೋರ್ಟ್‌ಗಳಿಗೆ ಸೂಚಿಸಿದೆ.

ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ನೀಟ್‌ ಕುರಿತಾದ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುತ್ತಿವೆ ಎಂದು ಮನೀಂದರ್‌ ಸಿಂಗ್‌ ಅವರು ಗಮನಸೆಳೆದಾಗ ನ್ಯಾಯಪೀಠ ಈ ಸೂಚನೆ ನೀಡಿದೆ.

ಇಂಗ್ಲಿಷ್‌ ಮತ್ತು ಗುಜರಾತಿ ಭಾಷೆಗಳಲ್ಲಿ ಬೇರೆ ಬೇರೆ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿದೆ ಎಂದು ಆರೋಪಿಸಿರುವ ಗುಜರಾತ್‌ನ ಕೆಲವು ವಿದ್ಯಾರ್ಥಿಗಳು, ಮತ್ತೆ ಹೊಸದಾಗಿ ನೀಟ್‌ ನಡೆಸಬೇಕು ಎಂದು ಆಗ್ರಹಿಸಿ ಅಲ್ಲಿನ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

12 ಲಕ್ಷ ವಿದ್ಯಾರ್ಥಿಗಳು
ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ದೇಶದಾದ್ಯಂತ ಮೇ 7 ರಂದು ನಡೆಸಿದ್ದ ನೀಟ್‌ಗೆ 12 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT