ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಿಡಿಗಾಸೂ ಕೊಡಲ್ಲ

ಕೃಷಿ ಸಾಲಮನ್ನಾ ಹೊರೆ ರಾಜ್ಯಗಳೇ ಭರಿಸಬೇಕು: ಅರುಣ್‌ ಜೇಟ್ಲಿ ಸ್ಪಷ್ಟ ನುಡಿ
Last Updated 12 ಜೂನ್ 2017, 20:10 IST
ಅಕ್ಷರ ಗಾತ್ರ

ನವದೆಹಲಿ: ‘ಕೃಷಿಸಾಲ ಮನ್ನಾ  ಮಾಡುವ ರಾಜ್ಯಗಳಿಗೆ ಆ ಹೊರೆ ಭರಿಸಲು ಯಾವುದೇ ರೀತಿಯ ನೆರವು ನೀಡಲು ಸಾಧ್ಯವಿಲ್ಲ’ ಎಂದು ಕೇಂದ್ರ ಸರ್ಕಾರ ಸೋಮವಾರ ಕಡ್ಡಿಮುರಿದಂತೆ ಹೇಳಿದೆ.

ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರ ರೈತರ ₹ 30 ಸಾವಿರ ಕೋಟಿ ಮೊತ್ತದ ಸಾಲ ಮನ್ನಾ ನಿರ್ಧಾರ ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ತಾಳಿರುವ ಈ ದೃಢ ನಿಲುವು ಭಾರಿ ಮಹತ್ವ ಪಡೆದುಕೊಂಡಿದೆ. 

‘ಸಾಲ ಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಮೊದಲೇ ಸ್ಪಷ್ಟಪಡಿಸಿದೆ. ಅದನ್ನು ಬಿಟ್ಟು ಹೊಸದಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ರೈತರ ಸಾಲಮನ್ನಾದ ಹೊರೆ ಭರಿಸಲು ಕೇಂದ್ರವು ರಾಜ್ಯಗಳಿಗೆ ಬಿಡಿಗಾಸನ್ನೂ ನೀಡದು’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

ಸಾಲ ಮನ್ನಾಕ್ಕೆ ಒತ್ತಾಯಿಸಿ ರೈತರು ನಡೆಸಿರುವ  ಹೋರಾಟದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲಿದೆಯೇ  ಪ್ರಶ್ನೆಗೆ ಜೇಟ್ಲಿ ಈ ರೀತಿ ಉತ್ತರಿಸಿದರು.

ಭಾನುವಾರ ಮಹಾರಾಷ್ಟ್ರ ಸರ್ಕಾರದ ರೈತರ ಸಾಲ ಮನ್ನಾ ಘೋಷಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರದ ಬೊಕ್ಕಸದಿಂದ ಒಂದು ಪೈಸೆಯ ನೆರವೂ ಸಿಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಾರ್ಷಿಕ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ರೈತರ ಸಾಲ ಮನ್ನಾ ಮಾಡದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕೂಡ ಸರ್ಕಾರಗಳಿಗೆ ಕಿವಿಮಾತು ಹೇಳಿತ್ತು.

‘ರಾಜ್ಯ ಸರ್ಕಾರಗಳ ಸಾಲಮನ್ನಾ ಮಾಡುವ ಪ್ರವೃತ್ತಿ ಇದೇ ರೀತಿ ಮುಂದುವರಿದರೆ ದೇಶದ ಆರ್ಥಿಕ ಸ್ಥಿತಿ ಕೈತಪ್ಪಿ ಹೋಗಲಿದೆ’ ಎಂದು ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್ ಇತ್ತೀಚೆಗೆ  ಎಚ್ಚರಿಕೆ ನೀಡಿದ್ದರು.

ಇಂತಹ ಯೋಜನೆಗಳನ್ನು ಘೋಷಿಸುವ ಮುನ್ನ ಸರ್ಕಾರಗಳು ನೂರು ಬಾರಿ ಯೋಚಿಸಬೇಕು. ಇಂತಹ ನಿರ್ಧಾರಗಳಿಂದ ಹಿಂದೆ ಸರಿಯುವುದು ಒಳಿತು ಎಂದೂ ಅವರು ಸಲಹೆ ಮಾಡಿದ್ದರು.

ನಾಂದಿ ಹಾಡಿದ ಯೋಗಿ
ಮಹಾರಾಷ್ಟ್ರಕ್ಕೂ ಮೊದಲು ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ರೈತರ ₹36,359 ಕೋಟಿಯಷ್ಟು  ಸಾಲ ಮನ್ನಾ ಮಾಡುವ ಮೂಲಕ ಕೃಷಿಸಾಲ ಮನ್ನಾ ಪ್ರವೃತ್ತಿಗೆ ನಾಂದಿ ಹಾಡಿತ್ತು.

ಮಧ್ಯಪ್ರದೇಶದಲ್ಲಿ ಗೋಲಿಬಾರ್‌
ಕಳೆದ ಕೆಲವು ದಿನಗಳಿಂದ ಸಾಲ ಮನ್ನಾಕ್ಕೆ ಒತ್ತಾಯಿಸಿ  ರೈತರು ನಡೆಸಿರುವ ಹೋರಾಟದಿಂದ ಮಧ್ಯ ಪ್ರದೇಶ ಹೊತ್ತಿ ಉರಿದಿತ್ತು.  ಗೋಲಿಬಾರ್‌ಗೆ ಐವರು ರೈತರು ಬಲಿಯಾಗಿದ್ದರು.

ಪ್ಯಾಕೇಜ್‌ಗೆ ತಮಿಳುನಾಡು ಒತ್ತಾಯ
₹ 40,000 ಕೋಟಿ ವಿಶೇಷ ಪ್ಯಾಕೇಜ್‌ಗೆ ಆಗ್ರಹಿಸಿ ತಮಿಳುನಾಡಿನ ಬರ ಪೀಡಿತ ಪ್ರದೇಶದ ರೈತರು  ದೆಹಲಿಯಲ್ಲಿ ಒಂದು ತಿಂಗಳು ಹಲವು ಬಗೆಯ ಪ್ರತಿಭಟನೆ ನಡೆಸಿ ದೇಶದ ಗಮನ ಸೆಳೆದಿದ್ದರು.  ಇದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ ₹1,712 ಕೋಟಿ ಹಣ ಬಿಡುಗಡೆ ಮಾಡಿತ್ತು.

ಮಹಾರಾಷ್ಟ್ರ: ಸಿರಿವಂತರಿಗಿಲ್ಲ ಮನ್ನಾ ಲಾಭ
ಮುಂಬೈ (ಪಿಟಿಐ):
ಮಹಾರಾಷ್ಟ್ರ ಸರ್ಕಾರ ಘೋಷಿಸಿರುವ ಕೃಷಿ ಸಾಲ ಮನ್ನಾ ಯೋಜನೆಯಿಂದ ಶ್ರೀಮಂತ ರೈತರನ್ನು ಹೊರಗಿಡುವ ಸಾಧ್ಯತೆಯ ಸುಳಿವನ್ನು ಕಂದಾಯ ಸಚಿವ ಚಂದ್ರಕಾಂತ್‌ ಪಾಟೀಲ್‌ ನೀಡಿದ್ದಾರೆ.

ಯೋಜನೆ ಅನುಷ್ಠಾನಕ್ಕಾಗಿ ಸರ್ಕಾರ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಿದೆ. ಸಾಲ ಮನ್ನಾ ಮಾಡಲು ಅನುಸರಿಸ ಬೇಕಾದ ಮಾನದಂಡಗಳ ಬಗ್ಗೆ ಈ ಸಮಿತಿ ನಿರ್ಧಾರ ಕೈಗೊಳ್ಳಲಿದೆ. 

‘ಈ ಹಿಂದೆ, 2007–08ರಲ್ಲಿ ಘೋಷಿಸಲಾಗಿದ್ದ ಸಾಲ ಮನ್ನಾ ಯೋಜನೆಯಿಂದ ಶ್ರೀಮಂತ ರೈತರೂ ಲಾಭ ಪಡೆದುಕೊಂಡಿದ್ದರು. ಈ ಬಾರಿ ಹಾಗಾಗದು. ಯೋಜನೆಯ ಫಲಾನುಭವಿಗಳ ಪಟ್ಟಿಯಿಂದ ಸಿರಿವಂತ ರೈತರನ್ನು ಕೈಬಿಡಲು  ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ’  ಎಂದು ಅವರು ಹೇಳಿದ್ದಾರೆ.
*
ಸಾಲ ಮನ್ನಾದಂತಹ ಯೋಜನೆಗಳ ವೆಚ್ಚ ಭರಿಸಲು ರಾಜ್ಯ ಸರ್ಕಾರಗಳು ಸ್ವಂತ ಸಂಪನ್ಮೂಲ ಹುಡುಕಿಕೊಳ್ಳಬೇಕು. ಕೇಂದ್ರದ ಮೇಲೆ ಅವಲಂಬಿತವಾಗಬಾರದು.
ಅರುಣ್‌ ಜೇಟ್ಲಿ,
ಕೇಂದ್ರ ಹಣಕಾಸು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT