ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ

7

ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ

Published:
Updated:
ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ

ದಾವಣಗೆರೆ: ಬಯಲುಸೀಮೆಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಹಾಗೂ ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಲವು ಕನ್ನಡಪರ ಸಂಘಟನೆಗಳು ಸೋಮವಾರ ಕರೆದಿದ್ದ ಕರ್ನಾಟಕ ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಆಟೊ, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ಎಂದಿನಂತೆ ಇತ್ತು. ಮಂಡಿಪೇಟೆ, ಕೆ.ಆರ್‌. ಮಾರ್ಕೆಟ್‌, ಕಾಯಿಪೇಟೆ, ಬಸವರಾಜ ಪೇಟೆ, ಆಜಾದ್‌ ನಗರ, ಪಿಜೆ ಬಡಾವಣೆ, ಜಯದೇವ ವೃತ್ತ, ಅಂಬೇಡ್ಕರ್‌ ವೃತ್ತ, ರಾಂ ಅಂಡ್‌ ಕೋ ಸರ್ಕಲ್‌ ಹಾಗೂ ಎಂಸಿಸಿ ‘ಎ’  ಮತ್ತು ‘ಬಿ’ ಬ್ಲಾಕ್‌ ಸೇರಿದಂತೆ ನಗರದ ಬಹುತೇಕ ಪ್ರದೇಶ ಗಳಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಆದರೆ, ಬೆಳಿಗ್ಗೆಯೇ ತುಂತುರು ಮಳೆ ಆರಂಭ ವಾಗಿದ್ದರಿಂದ ಕೆಲ ಮಾಲೀಕರು ಸ್ವ ಪ್ರೇರಣೆಯಿಂದ ಅಂಗಡಿಗಳನ್ನು ಬಂದ್‌ ಮಾಡಿದ್ದು, ಅಲ್ಲಲ್ಲಿ ಕಂಡು ಬಂತು.

ಶಾಲಾ–ಕಾಲೇಜುಗಳು ಆರಂಭ ವಾಗಿದ್ದವು. ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳುತ್ತಿದ್ದ ದೃಶ್ಯ ಕಂಡುಬಂತು. ಪೆಟ್ರೋಲ್‌ ಬಂಕ್‌ಗಳು ಕಾರ್ಯ ನಿರ್ವಹಿಸಿದವು. ಜೀವನಾವಶ್ಯಕ ವಸ್ತುಗಳಾದ ಹಾಲು, ಔಷಧ ಹಾಗೂ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳಿಗೆ ಯಾವುದೇ ತೊಂದರೆ ಆಗಲಿಲ್ಲ.

ಡಾ.ರಾಜ್‌ಕುಮಾರ್‌ ಸಂಘಟನೆ, ಕನ್ನಡ ಚಳವಳಿ, ಕನ್ನಡ ರಕ್ಷಣಾ ವೇದಿಕೆ, ಕರ್ನಾಟಕ ಯುವ ವೇದಿಕೆ, ಕರ್ನಾಟಕ ಸುವರ್ಣ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ತಾಂಡಾ ರಕ್ಷಣಾ ವೇದಿಕೆಯ ಹಲವು ಕಾರ್ಯಕರ್ತರು ಗಾಂಧಿ ವೃತ್ತ, ಹಂಸಬಾವಿ ಸರ್ಕಲ್‌, ಒಕ್ಕಲಿಗರ ಪೇಟೆ, ಹೊಂಡದ ವೃತ್ತ, ಅರುಣಾ ಚಿತ್ರಮಂದಿರ, ರಾಂ ಅಂಡ್‌ ಕೋ ವೃತ್ತ ಹಾಗೂ ಎಂಸಿಸಿ ‘ಎ’ ಮತ್ತು ‘ಬಿ’ ಬ್ಲಾಕ್‌ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್‌ ರ್‍ಯಾಲಿ ನಡೆಸಿ, ಅಂಗಡಿಗಳನ್ನು ಬಂದ್‌ ಮಾಡುವಂತೆ ಮಾಲೀಕರಲ್ಲಿ ಮನವಿ ಮಾಡಿದರು.ಕರ್ನಾಟಕ ರಕ್ಷಣಾ ವೇದಿಕೆಯು (ನಾರಾಯಣಗೌಡ ಬಣ) ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರಲಿಲ್ಲ.

ಒಗ್ಗಟ್ಟಿನ ಕೊರತೆ: ‘ಕೆಲ ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಲು  ವಿರೋಧ ವ್ಯಕ್ತಪಡಿಸಿದ್ದ ರಿಂದಾಗಿ ನಗರದಲ್ಲಿ ಬಂದ್‌ಗೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ನಾಡು, ನುಡಿ ಹಾಗೂ ಜಲ, ರೈತರ ವಿಷಯ ಬಂದಾಗ ರಾಜ್ಯದ ಎಲ್ಲಾ ಕನ್ನಡಪರ ಸಂಘಟನೆ ಗಳು ಒಗ್ಗೂಡಬೇಕು. ಆದರೆ, ಇದಾಗಿಲ್ಲ. ವ್ಯವಸ್ಥಿತವಾಗಿ ಪ್ರತಿಭಟನೆ ನಡೆಸಿದರೆ, ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ ಹಾಗೂ ರೈತರ ಸಾಲಮನ್ನಾ ಮಾಡಿಸುವುದು ದೊಡ್ಡ ವಿಷಯವೇ ಅಲ್ಲ’ ಎಂದು ಡಾ.ರಾಜ್‌ಕುಮಾರ್‌ ಸಂಘಟನೆಯ ರಾಜ್ಯ ಸಂಚಾಲಕ ಕೆ.ಜಿ.ಶಿವಕುಮಾರ್‌ ಪ್ರತಿಕ್ರಿಯಿಸಿದರು.

ನಗರದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರಾದ ಎಚ್‌.ಜಿ.ಶಿವಕುಮಾರ್‌, ಶಿವಯೋಗಿ ಸ್ವಾಮಿ, ಪಿ.ಶಿವಕುಮಾರ್‌, ಉಮಾ ದೇವಿ, ಶುಭಾ ಮಂಗಳಾ, ಸೋಮ ಶೇಖರ್‌, ಟಾರ್ಗೆಟ್‌ ಅಸ್ಲಾಂ, ನಾಗರಾಜ ಗೌಡ, ಎಸ್‌.ಶ್ರೇಯಸ್‌, ಲಕ್ಷ್ಮಣರಾವ್‌, ಸಾಳಂಕಿ, ಜಮನಹಳ್ಳಿ ನಾಗರಾಜ್‌, ಸಿಕಂದರ್‌, ಸಂತೋಷ್‌ ದೊಡ್ಡಮನಿ, ದಯಾನಂದ್‌, ಗಿರೀಶ್, ರಾಮಣ್ಣ ತೆಲಿಗಿ, ಜ್ಯೋತಿ ವಿನಾಯಕ ಸೇರಿದಂತೆ ಹಲವರು ಪ್ರತಿಭಟನಾ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

‘ನೀರಾವರಿ ಯೋಜನೆ ಜಾರಿಗೊಳಿಸಿ’

ಹೊನ್ನಾಳಿ: ಬಂದ್ ಹಿನ್ನೆಲೆಯಲ್ಲಿ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ಎಸ್.ಎಸ್.ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಕರ್ತರು ಸೋಮವಾರ ಪ್ರಮುಖ ಬೀದಿಗಳಲ್ಲಿ ಬೈಕ್ ಹಾಗೂ ಆಟೊ ರ್‍ಯಾಲಿ ನಡೆಸಿ ತಹಶೀಲ್ದಾರ್ ಎನ್.ಜೆ. ನಾಗರಾಜ್‌ಗೆ ಮನವಿ ಸಲ್ಲಿಸಿದರು.

ಸಾಲಮನ್ನಾಕ್ಕೆ ಆಗ್ರಹ: ರೈತರು ಸಂಕಷ್ಟದಲ್ಲಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದಪ್ಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಜಿಲ್ಲಾ ಉಪಾಧ್ಯಕ್ಷ  ಎಚ್.ಬಸವರಾಜಪ್ಪ ಹಾಗೂ ರೈತರು ಇದ್ದರು.

ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ: ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರ ದಿವ್ಯನಿರ್ಲಕ್ಷ್ಯ ತೋರಿದೆ ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಮನು ವಾಲಜ್ಜಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಮುಖಂಡರಾದ ದೇವರಾಜ್ ಕಲ್ಕೇರಿ, ಅನಂತ, ದಿವಾಕರ್, ಮಂಜು, ಸಂದೀಪ, ಮಂಜು ಕಲ್ಕೇರಿ, ರಾಮಣ್ಣ, ರಾಜಣ್ಣ, ಸನಾವುಲ್ಲಾ, ಕುಮಾರ, ದರ್ಶನ ಹಾಗೂ ರಾಜು ಚೀಲೂರು, ಬಂಗಾರಿ ಇದ್ದರು.

ಕೋಣಗಳ ಮೆರವಣಿಗೆ...

ಕರ್ನಾಟಕ ಬಂದ್‌ ಬೆಂಬಲಿಸಿ ನಗರದ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಂಬೇಡ್ಕರ್‌ ವೃತ್ತದಿಂದ ಜಯದೇವ ವೃತ್ತದವರೆಗೆ ಎರಡು ಕೋಣಗಳ ಮೆರವಣಿಗೆ ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮಹದಾಯಿ ನದಿ ನೀರು ಸಮಪರ್ಕವಾಗಿ ಹಂಚಿಕೆಯಾಗ ಬೇಕು. ಕಳಸಾ ಬಂಡೂರಿ ನಾಲಾ ಜೋಡಣೆ ಆಗಬೇಕು. ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನವಾಗಬೇಕು. ಕಾವೇರಿ ಗಲಭೆಗಳಲ್ಲಿ ರೈತರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ವಾಪಸು ಪಡೆಯಬೇಕು. ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry