ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಾಗ ಕೊರತೆ

7

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಾಗ ಕೊರತೆ

Published:
Updated:
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಾಗ ಕೊರತೆ

ಬಸವಕಲ್ಯಾಣ: ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಜಾಗದ ಕೊರತೆ, ಸೋರುವ ಶಾಲೆ ಕೋಣೆಗಳು, ಮಳೆ ಬಂದರೆ ಕೆಸರು ಗದ್ದೆಯಾಗುವ ಗ್ರಾಮದ ಬೀದಿಗಳು, ಚರಂಡಿ ವ್ಯವಸ್ಥೆ ಇರದ ಕಾರಣ ಸೊಳ್ಳೆಕಾಟ...

ಇವು ತಾಲ್ಲೂಕಿನ ಕೊಹಿನೂರ ಗ್ರಾಮದ ಸಮಸ್ಯೆಗಳು. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಮನೆ ಬಳಕೆ ನೀರು ಮತ್ತು ಮಳೆ ನೀರು ಅಲ್ಲಲ್ಲಿ ಸಂಗ್ರಹಗೊಂಡು ದುರ್ಗಂಧ ಸೂಸುತ್ತಿದೆ. ಮಳೆಗೆ ಗ್ರಾಮದ ಪ್ರಾಥಮಿಕ ಶಾಲೆಯ ಕೋಣೆಗಳು ಸೋರುತ್ತಿವೆ. ಆವರಣದಲ್ಲಿ ನೀರು ನಿಂತಿದೆ.

‘ಗ್ರಾಮದ ಎಲ್ಲ ಓಣಿಗಳಲ್ಲಿ ಸಿ.ಸಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ, ಚರಂಡಿ ನಿರ್ಮಾಣ ಮಾಡಿಲ್ಲ. ಆದ್ದರಿಂದ ಹೊಲಸು ನೀರು ರಸ್ತೆಗಳಲ್ಲಿ ಹರಡಿ ಕೆಸರು ಆಗುತ್ತಿದೆ. ಈಚೆಗೆ ಮಳೆ ಬಂದಿದ್ದರಿಂದ ಮನೆಗಳ ಅಂಗಳದಲ್ಲಿಯೂ ನೀರು ನಿಂತಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಿದೆ. ಸಮಸ್ಯೆ ಪರಿಹರಿಸಲು ಚರಂಡಿ ನಿರ್ಮಿಸಬೇಕು’ ಎಂದು ಹಿರಿಯರಾದ ಶರಣಮ್ಮ ಆಗ್ರಹಿಸುತ್ತಾರೆ.

‘ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಚಿಕ್ಕದಾಗಿದ್ದು ಹೊಸ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಮಂಜೂರಾಗಿದೆ. ಆದರೆ, ಸ್ಥಳದ ಅಭಾವದ ಕಾರಣ ಕಟ್ಟಡ ನಿರ್ಮಾಣ ಆಗಿಲ್ಲ. ಆದ್ದರಿಂದ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ದೊರಕದೆ ಬೇರೆಡೆ ಹೋಗಬೇಕಾಗುತ್ತಿದೆ. ತಾಲ್ಲೂಕು ಕೇಂದ್ರ 40 ಕಿಲೊ ಮೀಟರ್‌ ದೂರದಲ್ಲಿ ಇರುವುದರಿಂದ ತುರ್ತು ಚಿಕಿತ್ಸೆ ಬೇಕಾದಾಗ ಸಮಸ್ಯೆ ಆಗುತ್ತಿದೆ’ ಎಂದು ನಾರಾಯಣ ಭಟಾರೆ ತಿಳಿಸಿದ್ದಾರೆ.

‘ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಸರ್ಕಾರಿ ಬಾವಿ ಇದ್ದು, ಅದರ ಸುತ್ತ ತಿಪ್ಪೆಗುಂಡಿಗಳಿವೆ. ಸುತ್ತಲಿನಲ್ಲಿ ಮಳೆ ನೀರು ಕೂಡ ಸಂಗ್ರಹಗೊಂಡಿದ್ದರಿಂದ ಅದೇ ನೀರು ಬಾವಿಯಲ್ಲಿ ಜಿನುಗುತ್ತಿದೆ. ಆ ನೀರು ಬೇರೆಡೆ ಸಾಗಲು ದಾರಿ ಮಾಡಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

‘ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 280 ವಿದ್ಯಾರ್ಥಿಗಳಿದ್ದಾರೆ. ಆರು ಹಳೆಯ ಕೋಣೆಗಳಿದ್ದು, ಮಳೆ ಬಂದರೆ ಸೋರುತ್ತಿವೆ. ಇಲ್ಲಿ 6 ಶಿಕ್ಷಕರ ಹುದ್ದೆ ಖಾಲಿ ಇವೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅವರೂ ಲಭ್ಯವಾಗುತ್ತಿಲ್ಲ’ ಎಂದು ಮುಖ್ಯಶಿಕ್ಷಕ ಮನೋಹರ ಕಂಟೆಕೂರೆ ತಿಳಿಸಿದ್ದಾರೆ.

‘ಇಲ್ಲಿನ ಸ್ವರಾಜ್ ನಗರ ಓಣಿಯಲ್ಲಿನ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಮಳೆ ನೀರು ಸಂಗ್ರಹಗೊಂಡು ಮಿನಿ ಕೆರೆಯ ರೂಪ ತಾಳುತ್ತಿದೆ. ಆದ್ದರಿಂದ ಇಲ್ಲಿನ ಮಕ್ಕಳನ್ನು ಬೇರೆ ಶಾಲೆಗೆ ಕಳುಹಿಸಬೇಕಾಗುತ್ತಿದೆ. ಇಲ್ಲಿ ನೀರು ಸಂಗ್ರಹಗೊಳ್ಳದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದವರಿಗೆ ಅನೇಕ ಸಲ ವಿನಂತಿಸಿದ್ದರೂ ಪ್ರಯೋಜನ ಆಗಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ರತಿಕಾಂತ ಶಿರ್ಶಿವಾಡಿ ದೂರಿದರು.

‘ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ 4 ಎಕರೆ ಜಮೀನಿನ ಅವಶ್ಯಕತೆ ಇದೆ. ಸರ್ಕಾರಿ ಜಮೀನು ಗ್ರಾಮದಿಂದ ದೂರದಲ್ಲಿದೆ. ಖಾಸಗಿಯವರು ಜಮೀನು ನೀಡುತ್ತಿಲ್ಲ. ಹೀಗಾಗಿ ಸಮಸ್ಯೆ ಬಗೆಹರಿಯುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಗೀತಾ ಸಂತಾಜಿ ಹೇಳಿದ್ದಾರೆ.

‘ಗ್ರಾಮದ ಎಲ್ಲ ಓಣಿಗಳಲ್ಲಿ ಚರಂಡಿ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಗೆ ಜಿಲ್ಲಾ ಪಂಚಾಯಿತಿಯವರಿಗೆ ಮನವಿ ಸಲ್ಲಿಸಲಾಗಿದೆ. ಸೋರುತ್ತಿರುವ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕೋಣೆಗಳನ್ನು ಕೆಡವಿ ಹೊಸದಾಗಿ 12 ಕೋಣೆ ಕಟ್ಟಲು ಅನುದಾನ ಬಿಡುಗಡೆ ಆಗಿದೆ’ ಎಂದು ಅವರು ತಿಳಿಸಿದ್ದಾರೆ.

* * 

ಸ್ವರಾಜ್ ನಗರ ಓಣಿಯಲ್ಲಿನ ಶಾಲೆ ಆವರಣದಲ್ಲಿ ಮಳೆ ನೀರು ನಿಂತ ಕಾರಣ ತರಗತಿಗಳು ನಡೆಯುತ್ತಿಲ್ಲ. ಸೊಳ್ಳೆಗಳು ಉತ್ಪತ್ತಿಯಾಗಿ ದುರ್ಗಂಧ ಸೂಸುತ್ತಿದೆ.

ರತಿಕಾಂತ ಶಿರ್ಶಿವಾಡಿ

ಸದಸ್ಯ, ಗ್ರಾಮ ಪಂಚಾಯಿತಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry