ತೊಗರಿ ಕೇಂದ್ರದಲ್ಲಿ ಅವ್ಯವಹಾರ: ಹೆದ್ದಾರಿ ತಡೆ

7

ತೊಗರಿ ಕೇಂದ್ರದಲ್ಲಿ ಅವ್ಯವಹಾರ: ಹೆದ್ದಾರಿ ತಡೆ

Published:
Updated:
ತೊಗರಿ ಕೇಂದ್ರದಲ್ಲಿ ಅವ್ಯವಹಾರ: ಹೆದ್ದಾರಿ ತಡೆ

ಯಾದಗಿರಿ: ಖರೀದಿ ಕೇಂದ್ರದಲ್ಲಿ ಹೆಸರು ನೋಂದಣಿ ಆಗಿರುವ ರೈತರ ತೊಗರಿ ಖರೀದಿಸದೇ ದಲ್ಲಾಳಿಗಳಿಂದ ತೊಗರಿ ಖರೀದಿ ಮಾಡುವ ಮೂಲಕ ಖರೀದಿ ಕೇಂದ್ರದ ಅಧಿಕಾರಿಗಳು ರೈತರಿಗೆ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕರವೇ ಕಾರ್ಯ ಕರ್ತರು ಸೋಮವಾರ ಯಾದಗಿರಿ–ಹೈದರಾಬಾದ್ ಸಂಪರ್ಕ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಕರವೇ ಜಿಲ್ಲಾ ಘಟಕ ಅಧ್ಯಕ್ಷ ಭೀಮು ನಾಯಕ ಮಾತನಾಡಿ,‘ಎಪಿಎಂಸಿ ಮತ್ತು ಖರೀದಿ ಕೇಂದ್ರದಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಬೆಂಬಲ ಬೆಲೆ ನೀಡಿ ರೈತರ ಕೃಷಿ ಉತ್ಪನ್ನ ಖರೀದಿಸುವಂತೆ ಸರ್ಕಾರ ತೆರೆದಿರುವ ಖರೀದಿ ಕೇಂದ್ರಗಳಲ್ಲೂ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ರೈತರು ಪ್ರಶ್ನಿಸಿದರೆ ಅಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರಿಂದ ಸುಮಾರು ಎರಡು ತಾಸು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ತೊಗರಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿದ್ದ ರೈತರ ತೊಗರಿಯನ್ನು ಮೊದಲು ಖರೀದಿ ಮಾಡಬೇಕು. ಖರೀದಿ ಅವಧಿಯನ್ನು ಜೂನ್ 20 ರವರೆಗೆ ವಿಸ್ತರಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನಂತರ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿ ಕಾರಿ ಸತೀಶ್ ಹಾಗೂ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ನಂತರ ಜಿಲ್ಲಾಧಿಕಾರಿ ಖುಷ್ಬೂ ಗೋಯೆಲ್ ಚೌಧರಿ ಆಗಮಿಸಿ,‘ತೊಗರಿ ಖರೀದಿ ಜೂನ್‌ 10ಕ್ಕೆ ನಿಲ್ಲಿಸಲಾಗಿದೆ. ಅವಧಿ ವಿಸ್ತರಿಸುವಂತೆ ರೈತರಿಂದ ಒತ್ತಡ ಬರುತ್ತಿರುವುದರ ಹಿನ್ನೆಲೆಯಲ್ಲಿ ಸರ್ಕಾರ ಮುಖ್ಯಕಾರ್ಯದರ್ಶಿ ಅವರಿಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ನಿಲ್ಲಿಸಿ, ರಸ್ತೆ ತೆರವುಗೊಳಿಸಿದರು.

ಪ್ರತಿಭಟನೆಯಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ, ಮಹಾವೀರ ಲಿಂಗೇರಿ, ಭೀಮು ಬಸವಂತಪುರ, ಸಾಹೇಬಗೌಡ ನಾಯಕ ಗೌಡಗೇರಾ, ಸೈದಪ್ಪ ನಾಗರಬಂಡಿ, ವೆಂಕಟರೆಡ್ಡಿ ಕೌಳೂರು, ವಿಜಯ ವರ್ಕನಳ್ಳಿ ತಾಂಡಾ, ಹಣಮಂತ ಶೆಟ್ಟಿಕೇರಾ, ಅವಿನಾಶ ನಾಯಕ ಹಾಗೂ ರೈತರು ಭಾಗವಹಿಸಿದ್ದರು.

* *

ದಲ್ಲಾಳಿಗಳು–ಅಧಿಕಾರಿಗಳು ಶಾಮೀಲಾಗಿ ರೈತರ ತೊಗರಿ ಖರೀದಿ ನಡೆಸದಂತೆ ಅನ್ಯಾಯ ಎಸಗಿದ್ದಾರೆ. ಸರ್ಕಾರ ರೈತರ ತೊಗರಿ ಖರೀದಿಸಲು ಕೇಂದ್ರ ತೆರೆದಿದೆಯೇ ಹೊರತು ದಲ್ಲಾಳಿಗಳಿಗಾಗಿ ಅಲ್ಲ.

ಭೀಮುನಾಯಕ, ಅಧ್ಯಕ್ಷ, ಜಿಲ್ಲಾ ಕರವೇ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry