ಆಳಂದದಲ್ಲಿ ಲಕ್ಷ ಸಸಿ ನೆಡುವ ಗುರಿ!

7

ಆಳಂದದಲ್ಲಿ ಲಕ್ಷ ಸಸಿ ನೆಡುವ ಗುರಿ!

Published:
Updated:
ಆಳಂದದಲ್ಲಿ ಲಕ್ಷ ಸಸಿ ನೆಡುವ ಗುರಿ!

ಆಳಂದ: ಮಳೆಗಾಲ ಆರಂಭವಾಗುತ್ತಿದ್ದಂತೆ ಚುರುಕುಗೊಂಡ ಸಾಮಾಜಿಕ ಅರಣ್ಯ ಇಲಾಖೆಯು ತಾಲ್ಲೂಕಿನ ವಿವಿಧೆಡೆ ಸಸಿ ನೆಡುವ ಕಾರ್ಯಾರಂಭದಲ್ಲಿ ತೊಡಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಜುಲೈ 15ರೊಳಗೆ ಒಂದು ಲಕ್ಷ ಸಸಿ ನೆಡುವ ಗುರಿ ಹೊಂದಿದ್ದಾರೆ.

ಒಂದು ವಾರದಲ್ಲಿ ಕಡಗಂಚಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ 1,700, ಕೆರೂರು, ದರ್ಗಾ ಶಿರೂರು, ಹಿರೋಳ್ಳಿ ಗಡಿ ಭಾಗದ ರಸ್ತೆ ಇಕ್ಕೆಲದಲ್ಲಿ 2,700, ಮಾದನ ಹಿಪ್ಪರಗಾ–ಮದಗುಣಕಿ ಮಾರ್ಗ ಮಧ್ಯದಲ್ಲಿ 1,600 ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಗುಂಜ ಬಬಲಾದ ಮತ್ತು ಬಸವನ ಸಂಗೋಳಗಿ ಮಧ್ಯದ ರಸ್ತೆಯಲ್ಲಿ 600 ಸಸಿಗಳು ನೆಡಲಾಗುತ್ತಿದೆ.

ತಾಲ್ಲೂಕಿನ ಬಬಲೇಶ್ವರ ಮತ್ತು ಕೊರಳ್ಳಿ ಗ್ರಾಮದ ಸಸ್ಯೋದ್ಯಾನ(ನರ್ಸರಿ)ದಲ್ಲಿ ಈಗಾಗಲೇ 1.20 ಲಕ್ಷ ಸಸಿ ಬೆಳೆಯಿಸಲಾಗಿದೆ. ಇದರಲ್ಲಿ 89 ಸಾವಿರ ಸಸಿಗಳು ಕೊರಳ್ಳಿ ನರ್ಸರಿಯಲ್ಲಿದ್ದರೆ, ಉಳಿದ ಸಸಿಗಳು ಬಬಲೇಶ್ವರ ನರ್ಸಿರಿಯಲ್ಲಿವೆ. ಇವುಗಳಲ್ಲಿ ಬೇವು, ಹೊಂಗೆ, ತಪಸಿ, ಆಲ, ಬಸರಿ, ಸಾಗವಾನಿ, ಅರಳಿ, ಬುಗರಿ, ಮಾವು, ಹೆಬ್ಬೇವು, ಕಿಸು, ಹತ್ತೆ, ಶ್ರೀಗಂಧ, ಹಿಪ್ಪೆ ನೆಲ್ಲಿ, ಸೀತಾಫಲ ಮತ್ತಿತರ ವೈವಿಧ್ಯಮಯ ಸಸಿಗಳು ಸೇರಿವೆ.

ತಾಲ್ಲೂಕಿನಲ್ಲಿ ಬೇವು, ಹೆಬ್ಬೇವು ಹಾಗೂ ಹೊಂಗೆ ಮರಗಿಡಗಳ ಬೆಳೆಯುವ ಅನುಕೂಲಕರ ವಾತಾವರಣ ಹೊಂದಿರುವದರಿಂದ ಅರಣ್ಯ ಇಲಾಖೆಯು ಸಹ ಹೆಚ್ಚಿನ ಪ್ರಮಾಣದಲ್ಲಿ ಈ ಸಸಿಗಳನ್ನು ನೆಡಲು ನಿರ್ಧರಿಸಿದೆ. ಪ್ರಸಕ್ತ ವರ್ಷ ಜುಲೈ 15ರೊಳಗೆ ವಿವಿಧ ಶಾಲಾ ಕಾಲೇಜುಗಳು, ಸ್ಮಶಾನಭೂಮಿ, ದೇವಸ್ಥಾನ ಆವರಣ, ಕ್ರಿಡಾಂಗಣ, ಆಸ್ಪತ್ರೆ ಹಾಗೂ ಸಂಪರ್ಕ ರಸ್ತೆಗಳ ಬದಿಗೆ ಸಸಿ ನೆಡುವ ಕಾರ್ಯ ಕೈಗೊಳ್ಳುವ ಯೋಜನೆ ಅರಣ್ಯ ಇಲಾಖೆ ಹಾಕಿಕೊಂಡಿದೆ.

‘ತಾಲ್ಲೂಕಿನ ಭೂಸನೂರು, ಧುತ್ತರಗಾಂವ, ಹೊಡಲ್, ಸೂಂಟನೂರು ಗ್ರಾಮದಲ್ಲಿನ ಸರ್ಕಾರಿ ಭೂಮಿಯುಳ್ಳ ಬೆಟ್ಟಗುಡ್ಡದಲ್ಲಿ ನಿರ್ಮಿಸಲಾದ ಟ್ರೆಂಚ್‌ಗಳಲ್ಲಿ ಅಂದಾಜು 50 ಸಾವಿರಕ್ಕೂ ಹೆಚ್ಚು ಸಸಿ ನೆಡುವ ಸಿದ್ಧತೆಯು ನಡೆದಿದೆ’ ಎಂದು ಸಾಮಾಜಿಕ ಅರಣ್ಯ ಇಲಾಖೆ ತಾಲ್ಲೂಕು ಅಧಿಕಾರಿ ರೇವಣಸಿದ್ದ ತಾವರಕೇರಾ ‘ಪ್ರಜಾವಾಣಿ’ಗೆ ತಿಳಿಸಿದರು.

ಅರಣ್ಯ ಇಲಾಖೆಯು ನೆಟ್ಟ ಸಸಿಗಳನ್ನು ರೈತರು, ಸಾರ್ವಜನಿಕರು ಸಂರಕ್ಷಣೆಗೆ ಮಾಡುವುದು ಅವಶ್ಯ. ಜಾನುವಾರುಗಳು, ಬೆಂಕಿ ಮತ್ತಿತರ ಕಾರಣಕ್ಕೆ ಆರಂಭದಲ್ಲಿ ಸಸಿಗಳನ್ನು ಹಾಳು ಮಾಡುವ ಘಟನೆ ಮರುಕಳಿಸಬಾರದು. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾಡುವದರಿಂದ ಎಲ್ಲಡೆ ಅರಣ್ಯ ಇಲಾಖೆಯು ನಿರ್ವಹಣೆ ಮಾಡಲು ಕಷ್ಟವಾಗಲಿದೆ. ನಮ್ಮ ಸುತ್ತಲಿನ ಸಸಿ,ಮರಗಿಡಗಳನ್ನು ಬೆಳೆಸುವ ಹೊಣೆಗಾರಿಕೆಯು ಮೂಡಿಸಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಇಲಾಖೆ ಉದ್ದೇಶಿಸಿದೆ.

 * * 

ಪರಿಶಿಷ್ಟ ಜಾತಿ, ಪಂಗಡದ ರೈತರ ಹೊಲದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಉಚಿತ ಸಸಿ ನೆಟ್ಟು ಬೆಳೆಸಲು ಪ್ರೋತ್ಸಾಹಧನ ನೀಡಲಾಗುವುದು.

ರೇವಣಸಿದ್ದ ತಾವರಕೇರಾ

ಅರಣ್ಯ ಅಧಿಕಾರಿ


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry