ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

7

ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

Published:
Updated:
ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ತುಮಕೂರು: ಬಯಲು ಸೀಮೆ ಪ್ರದೇಶಕ್ಕೆ ಶಾಶ್ವತ ನೀರಾವರಿ ಕಲ್ಪಿಸಲು ಒತ್ತಾಯಿಸಿ ಕನ್ನಡ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್ ಕರೆಗೆ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾ ಕೇಂದ್ರವಾದ ತುಮಕೂರು ನಗರ ಸೇರಿ ತಾಲ್ಲೂಕು ಕೇಂದ್ರಗಳಲ್ಲೂ ಬಂದ್ ಬಿಸಿ ತಟ್ಟಲಿಲ್ಲ.

ಶಾಲಾ, ಕಾಲೇಜಿಗೆ ಎಂದಿನಂತೆಯೇ ವಿದ್ಯಾರ್ಥಿಗಳು ತೆರಳಿದರು. ಸಾರಿಗೆ ನಿಗಮದ ಬಸ್, ಖಾಸಗಿ ಬಸ್, ಆಟೋ, ನಗರ ಸಾರಿಗೆ ಬಸ್, ಸರಕು ವಾಹನಗಳು ಸಂಚಾರಕ್ಕೆ ಅಡಚಣೆಯಾಗಲಿಲ್ಲ. ಬೆಳಿಗ್ಗೆ ಶಾಲಾ, ಕಾಲೇಜು ಶುರುವಾಗುವ ಹೊತ್ತಿಗೆ ಚಿಕ್ಕಮಕ್ಕಳನ್ನು ಪೋಷಕರು ಮುನ್ನೆಚ್ಚರಿಕೆ ವಹಿಸಿ ತಾವೇ ಶಾಲೆಗಳಿಗೆ ಬಿಟ್ಟು ಹೋಗುತ್ತಿದ್ದು ಕಂಡು ಬಂದಿತು.

ಹೋಟೆಲ್, ಆಸ್ಪತ್ರೆ, ಚಿತ್ರಮಂದಿರಗಳು ತೆರೆದಿದ್ದವು. ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣದಿಂದ ನಿಗದಿತ ಮಾರ್ಗದಲ್ಲಿ ಬಸ್‌ಗಳು ಸಂಚರಿಸಿದವು. ನಗರ ಸಾರಿಗೆ ಬಸ್ ಸಂಚಾರ ಅಬಾಧಿತವಾಗಿತ್ತು.

ಕನ್ನಡ ಸಂಘಟನೆಗಳ ಪ್ರತಿಭಟನೆ: ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಕನ್ನಡ ಸೇನೆ, ಕರವೇ, ದಲಿತ ಸಂಘರ್ಷ ಸಮಿತಿ ಸೇರಿ ಕೆಲ ಸಂಘಟನೆ ಮುಖಂಡರು ಮತ್ತು ಕಾರ್ಯಕರ್ತರು ಶಿವಕುಮಾರ ಸ್ವಾಮೀಜಿ ವೃತ್ತ, ಬಿಜಿಎಸ್ ವೃತ್ತದಲ್ಲಿ ಸ್ವಲ್ಪ ಹೊತ್ತು ರಸ್ತೆ ತಡೆ ನಡೆಸಿ ಬಂದ್‌ಗೆ ಬೆಂಬಲ ಸೂಚಿಸಿದರು.

ಪೊಲೀಸ್ ಬಂದೋಬಸ್ತ್: ಮುನ್ನೆಚ್ಚರಿಕೆ ಕ್ರಮವಾಗಿ ಬಿ.ಎಚ್.ರಸ್ತೆ, ಅಶೋಕ ರಸ್ತೆ, ಕುಣಿಗಲ್, ಗುಬ್ಬಿ ರಸ್ತೆ, ಹೆದ್ದಾರಿಯಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್‌ನ್ನು ಪೊಲೀಸ್ ಇಲಾಖೆ ಕೈಗೊಂಡಿತ್ತು. ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಅವರೇ ನಗರದ ವಿವಿಧ ಕಡೆ ಸಂಚರಿಸಿ ಅಧಿಕಾರಿಗಳಿಗೆ ಎಚ್ಚರ ವಹಿಸಲು ಆದೇಶಿಸಿದ್ದರು.

ಮಧುಗಿರಿ ನೀರಸ: ಬಂದ್‌ಗೆ ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಪಟ್ಟಣದಲ್ಲಿ ಸಾರಿಗೆ ಸಂಸ್ಥೆ , ಖಾಸಗಿ ಬಸ್ , ಆಟೊ ಸಂಚಾರ, ಅಂಗಡಿಗಳು , ಪೆಟ್ರೋಲ್ ಬಂಕ್, ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಹಾಗೂ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ರಾಘವೇಂದ್ರ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ್ ಕನಕದಾಸ್, ಕನ್ನಡ ಜಾಗೃತಿ ವೇದಿಕೆ ಪದಾಧಿಕಾರಿಗಳಾದ ಗಿರೀಶ್, ಆನಂದ್, ಹರೀಶ್, ವಿನೇಶ್, ನರೇಂದ್ರ , ರಮೇಶ್, ಶಿವಕುಮಾರ್ ಇದ್ದರು.

ಹುಳಿಯಾರು ವರದಿ: ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಎಂದಿನಂತೆ ಶಾಲಾ–ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು ಕಾರ್ಯನಿರ್ವಹಿಸಿದವು. ಬಸ್ ಸಂಚಾರ ಕೂಡ ಎಂದಿನಂತಿತ್ತು. ರೈತಸಂಘ ಹೊರೆತುಪಡಿಸಿ ಮತ್ತಾವುದೇ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿಲ್ಲ. ಯಾವುದೇ ತೊಂದರೆಯಿಲ್ಲದೆ ಅಂಗಡಿಗಳ ಮಾಲೀಕರು ವ್ಯಾಪಾರ ವಹಿವಾಟು ನಡೆಸಿದರು.

ರೈತಸಂಘ ಬೆಂಬಲ: ಹುಳಿಯಾರು: ‘ಕರ್ನಾಟಕ ಬಂದ್’ಗೆ ಬೆಂಬಲಿಸಿದ ಜಿಲ್ಲಾ ರೈತಸಂಘದ (ಹೊಸಹಳ್ಳಿ ಚಂದ್ರಣ್ಣ ಬಣ) ಸದಸ್ಯರು ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ರಾಮಗೋಪಾಲ್ ಸರ್ಕಲ್ ನಲ್ಲಿ ಸಮಾವೇಶಗೊಂಡ ರೈತಸಂಘದ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬಂದ್ ಬೆಂಬಲಿಸಿದರು. ಹೊಸಹಳ್ಳಿ ಚಂದ್ರಣ್ಣ, ಕಾರ್ಯದರ್ಶಿ ಎಸ್.ಸಿ.ಬೀರಲಿಂಗಯ್ಯ ಮಾತನಾಡಿದರು.

ನಂತರ ನಾಡಕಚೇರಿ ಅಧಿಕಾರಿಗಳ ಪರವಾಗಿ ಗ್ರಾಮಲೆಕ್ಕಾಧಿಕಾರಿ ಮಂಜುನಾಥ್ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಸುಮಾರು ಅರ್ಧ ಗಂಟೆ ಪ್ರತಿಭಟನೆ ನಡೆಸಿದರು. ತಾಲ್ಲೂಕು ರೈತಸಂಘದ ಅಧ್ಯಕ್ಷ ಈಶ್ವರಯ್ಯ, ಹನುಮಂತಯ್ಯ, ನೀರಾ ಈರಣ್ಣ, ಮಾಳಿಗೆ ಕರಿಯಪ್ಪ, ಎಸ್.ಎನ್.ಹುಳಿಯಾರಯ್ಯ, ಮಹೇಶ್, ಷೇಕ್ ಮಹಮದ್, ಧರಣೇಶ್, ಕೃಷ್ಣಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry