ನೀರಾವರಿಗಾಗಿ ನಿಗಿ ನಿಗಿ ಕೆಂಡವಾದ ಜಿಲ್ಲೆ

7

ನೀರಾವರಿಗಾಗಿ ನಿಗಿ ನಿಗಿ ಕೆಂಡವಾದ ಜಿಲ್ಲೆ

Published:
Updated:
ನೀರಾವರಿಗಾಗಿ ನಿಗಿ ನಿಗಿ ಕೆಂಡವಾದ ಜಿಲ್ಲೆ

ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಕನ್ನಡ ಒಕ್ಕೂಟ ಕರೆ ನೀಡಿದ್ದ ‘ಕರ್ನಾಟಕ ಬಂದ್‌’ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

ಜಿಲ್ಲಾ ಕೇಂದ್ರವಾದ ನಗರದಲ್ಲಿ ವರ್ತಕರು ಸ್ವಯಂ ಪ್ರೇರಣೆಯಿಂದ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಹೀಗಾಗಿ ಔಷಧಿ ಮಳಿಗೆಗಳನ್ನು ಹೊರತುಪಡಿಸಿದಂತೆ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆಯಲಿಲ್ಲ. ಹೋಟೆಲ್, ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು. ಕೆಎಸ್‌ಆರ್‌ಟಿಸಿ ಬಸ್‌, ಆಟೊ ಸೇರಿದಂತೆ ಸಾರಿಗೆ ವಾಹನಗಳು ರಸ್ತೆಗಿಳಿಯಲಿಲ್ಲ. ಜನ ಸಂಚಾರ ವಿರಳವಾಗಿತ್ತು. ನಿತ್ಯ ಬಸ್‌ಗಳು, ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ಬಸ್‌ ನಿಲ್ದಾಣಗಳು ಭಣಗುಡುತ್ತಿದ್ದವು.

ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ನಸುಕಿನ 4 ಗಂಟೆಯಿಂದಲೇ ನಗರದಲ್ಲಿ ಪ್ರತಿಭಟನೆ ಆರಂಭಿಸಿದವು. ಪ್ರತಿಭಟನಾಕಾರರು ಅಂಬೇಡ್ಕರ್ ವೃತ್ತದಲ್ಲಿ ರಾಜ್ಯ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್‌ ರ್‌್ಯಾಲಿ ನಡೆಸಿದರು.

ಮುಂಜಾಗ್ರತಾ ಕ್ರಮವಾಗಿ ನಗರ ದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. ಮಧ್ಯಾಹ್ನ 3 ಗಂಟೆಯ ಬಳಿಕ ನಗರ ಸಹಜ ಸ್ಥಿತಿಗೆ ಮರಳಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ, ‘ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ಹಲವಾರು ವರ್ಷಗಳಿಂದ ನಡೆಸಿದ ಹೋರಾಟಗಳಿಗೆ ನ್ಯಾಯ ಸಿಕ್ಕಲ್ಲ. ನಮಗೆ ಆಗಿರುವ ಅನ್ಯಾಯ ಸರಿಪಡಿಸಿಕೊಳ್ಳಲು ಅನೇಕ ಹೋರಾಟಗಳನ್ನು ನಡೆಸಿದರೂ ಬಯಲು ಸೀಮೆಗೆ ನೀರು ಬಂದಿಲ್ಲ. ಮುಖ್ಯಮಂತ್ರಿ ಅವರು ಕೊಟ್ಟ ಮಾತು ಉಳಿಸಿಕೊಂಡಿಲ್ಲ. ನೀರಾವರಿ ಸಚಿವ ರಂತೂ ಈ ಭಾಗ ರಾಜ್ಯದ ಅಂಗವೇ ಅಲ್ಲ ಎಂದು ಭಾವಿಸಿಕೊಂಡಿದ್ದಾರೆ’ ಎಂದು ಕಿಡಿಕಾರಿದರು.

‘ಶಾಶ್ವತ ನೀರಾವರಿಗಾಗಿ ಚಿಕ್ಕಬಳ್ಳಾಪುರದಲ್ಲಿ 169 ದಿನ, ಕೋಲಾರದಲ್ಲಿ ಒಂದು ವರ್ಷದ ಧರಣಿ ಸತ್ಯಾಗ್ರಹ ನಡೆಸಿದರೂ ಯಾವುದಕ್ಕೂ ಬೆಲೆ ಇಲ್ಲದಂತಾದ ಸಂದರ್ಭದಲ್ಲಿ ಕನ್ನಡ ಒಕ್ಕೂಟ ಈ ಬಂದ್‌ಗೆ ಕರೆ ಕೊಟ್ಟಿದೆ. ಸರ್ಕಾರ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಕೊಡದೆ ಹಲವಾರು ರೈತ ಕುಟುಂಬಗಳು ಆತ್ಮಹತ್ಯೆ ಮಾಡಿಕೊಂಡಿವೆ.

ಸಾವಿರಾರು ಕುಟುಂಬ ಗಳು ಸಾಲದ ಶೂಲಕ್ಕೆ ನರಳುತ್ತಿವೆ. ಲಕ್ಷಾಂತರ ಕುಟುಂಬಗಳು ಶುದ್ಧ ಕುಡಿಯುವ ನೀರು ಸಿಗದೆ ಮಾರಣಾ ಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿವೆ. ಸರ್ಕಾರ ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಬಿಟ್ಟು, ನಿರಂತ ವಾಗಿ ಹೋರಾಟ ನಡೆದರೂ ನೀವು ಹೋರಾಟ ಮಾಡಿಕೊಳ್ಳಿ ನಮಗೆ ಸಂಬಂಧವಿಲ್ಲ ಎನ್ನುವ ಧೋರಣೆ ಯಿಂದ ಹೋರಾಟಕ್ಕೆ ಪ್ರಚೋದನೆ ಮಾಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಹಿಂದೆ ಟ್ರ್ಯಾಕ್ಟರ್ ಚಳವಳಿ ನಡೆಸಿದಾಗ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಬಯಲು ಸೀಮೆಗೆ ಪ್ರತ್ಯೇಕ ನೀರಾವರಿ ನಿಗಮ, ತಜ್ಞರ ಸಮಿತಿ, ಉಸ್ತವಾರಿ ಸಮಿತಿ ರಚಿಸುವುದಾಗಿ ಭರವಸೆ ಕೊಟ್ಟು, ವರ್ಷ ಕಳೆದರೂ ಈವರೆಗೆ ಅವು ಕಾರ್ಯ ರೂಪಕ್ಕೆ ಬಂದಿಲ್ಲ. ಇದೀಗ ಸರ್ಕಾರ ವೋಟ್‌ ಬ್‌್ಯಾಂಕ್‌ಗಾಗಿ ದಿನಕ್ಕೊಂದು ಯೋಜನೆ ಹೆಸರಿನಲ್ಲಿ ಬಯಲು ಸೀಮೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಯಲು ಸೀಮೆಯನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಬೆಲೆ ತೆರೆಯಬೇಕಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೋರಾಟಗಾರರಾದ ಲಕ್ಷ್ಮಯ್ಯ, ರಾಮೇಗೌಡ, ಸುಷ್ಮಾ ಶ್ರೀನಿವಾಸ್, ಉಷಾ ಆಂಜನೇಯರೆಡ್ಡಿ, ಆನಂದಪ್ಪ, ಅಗಲಗುರ್ಕಿ ಚಲಪತಿ, ಮಂಚನಬಲೆ ಶ್ರೀನಿವಾಸ್ ಪ್ರತಿಭಟನೆಯಲ್ಲಿ ಇದ್ದರು.

ಮುತ್ತಿಗೆ ಹಾಕಿದವರ ಬಂಧನ, ಬಿಡುಗಡೆ

ನಗರದ ಬಿ.ಬಿ.ರಸ್ತೆಯಲ್ಲಿರುವ ಬಿಎಸ್‌ಎನ್‌ಎಲ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ನಗರ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಲು ಮುಂದಾದರು. ಈ ವೇಳೆ ಆಂಜನೇಯ ರೆಡ್ಡಿ ಅವರು ಪೊಲೀಸ್ ವಾಹನದ ಎದುರು ಕುಳಿತು ಪ್ರತಿಭಟಿಸಿದರು. ಅದಕ್ಕೂ ಪೊಲೀಸರು ಜಗ್ಗದಿದ್ದಾಗ ಬಂಧಿತರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಹೋರಾಟಗಾರರು ನಗರ ಠಾಣೆ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಆಂಜನೇಯ ರೆಡ್ಡಿ, ‘ಬಿಎಸ್‌ಎನ್‌ಎಲ್‌ ಕಚೇರಿಗೆ ತೆರಳಿದ ನೀರಾವರಿ ಹೋರಾಟಗಾರರು ಅಲ್ಲಿನ ಸಿಬ್ಬಂದಿಗೆ ಕಚೇರಿ ಮುಚ್ಚಿ ಹೋರಾಟಕ್ಕೆ ಕೈಜೋಡಿಸಿ ಎಂದು ವಿನಂತಿಸಿಕೊಂಡಿದ್ದಾರೆ. ಆದರೆ ಪೊಲೀಸರು ಕೇಂದ್ರ ಸರ್ಕಾರದ ಕಚೇರಿ ಪ್ರವೇಶಿಸುವುದೇ ದೊಡ್ಡ ಅಪರಾಧ, ದೇಶದ್ರೋಹ ಎನ್ನುವ ರೀತಿಯಲ್ಲಿ ಹೋರಾಟಗಾರರನ್ನು ಠಾಣೆಯಲ್ಲಿ ಕೂರಿಸಿಕೊಂಡಿದ್ದಾರೆ’ ಎಂದು ಕಿಡಿಕಾರಿದರು.

‘ನಾವೇನು ದೇಶದ್ರೋಹ ಮಾಡಿಲ್ಲ, ನಮಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೇಳುತ್ತಿದ್ದೇವೆ. ಒಂದು ಗಂಟೆಯೊಳಗೆ ಯಾವುದೇ ಮೊಕದ್ದಮೆ ದಾಖಲಿಸದೆ ಹೋರಾಟಗಾರರನ್ನು ಗೌರವದಿಂದ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಪರಿಣಾಮ ಬೇರೆಯಾಗುತ್ತದೆ. ಇಂತಹ ಹಿಟ್ಲರ್‌ ಸಂಸ್ಕೃತಿ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹೋರಾಟಗಾರರ ಧ್ವನಿ ಅಡಗಿಸುವ ಕೆಲಸ ಶೋಭೆ ತರುವಂತಹದ್ದಲ್ಲ’ ಎಂದು ಗುಡುಗಿದರು. ಒಂದೂವರೆ ಗಂಟೆಯ ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದ ಪ್ರತಿಭಟನಾಕಾರರನ್ನು ಬಿಡುಗಡೆಗೊಳಿಸಿದರು.

* * 

ಶಾಶ್ವತ ನೀರಾವರಿಗಾಗಿ ನಿರಂತರ ಚಳವಳಿ ನಡೆದರೂ ಸರ್ಕಾರ ಹೋರಾಟಕ್ಕೂ ನಮಗೂ ಸಂಬಂಧವಿಲ್ಲ ಎನ್ನುವ ಧೋರಣೆಯಿಂದ ಹೋರಾಟಕ್ಕೆ ಪ್ರಚೋದನೆ ನೀಡುತ್ತಿದೆ.

ಆರ್.ಆಂಜನೇಯರೆಡ್ಡಿ ಹೋರಾಟಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry