ರಾಜ್ಯ ಬಂದ್‌ಗೆ ಜಿಲ್ಲೆಯಲ್ಲಿ ವ್ಯಕ್ತವಾಗದ ಬೆಂಬಲ

7

ರಾಜ್ಯ ಬಂದ್‌ಗೆ ಜಿಲ್ಲೆಯಲ್ಲಿ ವ್ಯಕ್ತವಾಗದ ಬೆಂಬಲ

Published:
Updated:
ರಾಜ್ಯ ಬಂದ್‌ಗೆ ಜಿಲ್ಲೆಯಲ್ಲಿ ವ್ಯಕ್ತವಾಗದ ಬೆಂಬಲ

ಉಡುಪಿ: ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ಬೆಂಬಲ ವ್ಯಕ್ತವಾಗಲಿಲ್ಲ. ಸೋಮವಾರ ಜನ ಜೀವನ ಎಂದಿನಂತೆಯೇ ಇತ್ತು. ಖಾಸಗಿ ಬಸ್‌ಗಳು ಸಂಚರಿಸಿದವು, ವಾಣಿಜ್ಯ ವಹಿವಾಟು ಸಹ ಸಹಜವಾಗಿತ್ತು.

ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ನಗರದ ಸರವಿಸ್ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು. ರಸ್ತೆ ತಡೆ ನಡೆಸಲು ಮುಂದಾದ ಅವರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಬಯಲು ಸೀಮೆಯ ಜನರ ಬಹುದಿನಗಳ ಬೇಡಿಕೆಯಾದ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ಮೇಕೆದಾಟು ಯೋಜನೆಯನ್ನು ಈ ಕೂಡಲೇ ಆರಂಭಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಎಂಇಎಸ್‌ ಕಾರ್ಯಕರ್ತರು ಬೆಳಗಾವಿಯಲ್ಲಿ ನಡೆಸುತ್ತಿರುವ ಪುಂಡಾಟಿಕೆಗೆ ಕಡಿವಾಣ ಹಾಕಬೇಕು. ಗೂಂಡಾ ಕಾಯ್ದೆಯಡಿ ಅವರನ್ನು ಬಂಧಿಸಬೇಕು. ಕಾಸರಗೋಡಿನ ಕನ್ನಡಿಗರ ಮೇಲೆ ಬಲವಂತವಾಗಿ ಮಲಯಾಳ ಹೇರುವ ಪ್ರಯತ್ನವನ್ನು ಕೇರಳ ಸರ್ಕಾರ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅನ್ಸಾರ್ ಅಹಮ್ಮದ್ ಮಾತನಾಡಿ, ಮಹದಾಯಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕು. ಎಂಇಎಸ್‌ ಕಾರ್ಯಕರ್ತರನ್ನು ಗಡೀಪಾರು ಮಾಡಬೇಕು. ಕೇರಳ ಸರ್ಕಾರ ಕನ್ನಡ ಶಾಲೆಗಳಲ್ಲಿ ಮಲಯಾಳ ಭಾಷೆಯನ್ನು ಕಡ್ಡಾಯ ಮಾಡಿರುವ ಆದೇಶವನ್ನು ಈ ಕೂಡಲೇ ಹಿಂದಕ್ಕೆ ಪಡೆಯಬೇಕು, ಇಲ್ಲಿದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಮರಳುಗಾರಿಕೆ ಬಂದ್ ಆಗಿ ಒಂದು ವರ್ಷ ಕಳೆದರೂ ಅದನ್ನು ಮತ್ತೆ ಆರಂಭಿಸಲು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಸಾವಿರಾರು ಜನರ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು.

ವೇದಿಕೆಯ ರಾಜ್ಯ ಸಂಚಾಲಕ ಪ್ರಸನ್ನ ಕುಮಾರ್ ಶೆಟ್ಟಿ ಮಾತನಾಡಿ, ಕೇರಳ ಸರ್ಕಾರ ಮಲಯಾಳ ಭಾಷೆಯನ್ನು ಕಡ್ಡಾಯ ಮಾಡಿರುವ ಕ್ರಮ ಖಂಡನೀಯ. ಈ ಬಗ್ಗೆ ಈಗಾಗಲೇ ಒಂದು ಸುತ್ತಿನ ಹೋರಾಟ ನಡೆಸಲಾಗಿದೆ. ಈಗಲೂ ಕೇರಳ ಸರ್ಕಾರ ತನ್ನ ನಿಲುವು ಬದಲಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.

ಮರಳಿಗಾರಿ ಹೋರಾಟ ಸಮಿತಿಯ ಸಂಚಾಲಕ ಎಂ.ಜಿ. ನಾಗೇಂದ್ರ, ವೇದಿಕೆ ಮುಖಂಡರಾದ ಶಾಹಿಲ್ ರೆಹಮತ್‌ಉಲ್ಲಾ, ಅರವಿಂದ್ ಪಡುಬಿದ್ರಿ, ಪ್ರವೀಣ್ ಬಾರ್ಕೂರು, ಆಸೀಫ್ ಪಡುಬಿದ್ರಿ, ಮಧುಕರ್ ಪೂಜಾರಿ ಇದ್ದರು.

* * 

ಜಿಲ್ಲೆಯ ಮರಳು ಸಮಸ್ಯೆಯನ್ನು ಇನ್ನೊಂದು ತಿಂಗಳಿನಲ್ಲಿ ಬಗೆಹರಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಅವರಿಗೆ ದಿಗ್ಭಂಧನ ವಿಧಿಸಬೇಕಾಗುತ್ತದೆ.

ಅನ್ಸಾರ್ ಅಹಮ್ಮದ್‌,

ವೇದಿಕೆ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry