ಶಿಕ್ಷಣದಿಂದ ಬಾಲಕಾರ್ಮಿಕ ಪಿಡುಗು ನಿವಾರಣೆ ಸಾಧ್ಯ

7

ಶಿಕ್ಷಣದಿಂದ ಬಾಲಕಾರ್ಮಿಕ ಪಿಡುಗು ನಿವಾರಣೆ ಸಾಧ್ಯ

Published:
Updated:
ಶಿಕ್ಷಣದಿಂದ ಬಾಲಕಾರ್ಮಿಕ ಪಿಡುಗು ನಿವಾರಣೆ ಸಾಧ್ಯ

ಹಾಸನ: ‘ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಬಹುದು’ ಎಂದು ಜಿಲ್ಲಾಧಿಕಾರಿ ವಿ.ಚೈತ್ರಾ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು.

ಬಾಲಕಾರ್ಮಿಕ ಪದ್ಧತಿ ಸಮಾಜದ ದೊಡ್ಡ ಪಿಡುಗು. ಇದನ್ನು ತೊಲಗಿಸಲು ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದೆ. ಶೈಕ್ಷಣಿಕ ಸುಧಾರಣೆ ಉದ್ದೇಶದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಹಾಲು, ಮಧ್ಯಾಹ್ನ ಬಿಸಿಯೂಟ, ಸಮವಸ್ತ್ರ, ಪಠ್ಯ ಪುಸ್ತಕ, ಬೈಸಿಕಲ್‌ ಹಾಗೂ ಶೂ ಸೇರಿದಂತೆ ಎಲ್ಲವನ್ನೂ ಉಚಿತವಾಗಿ ನೀಡುತ್ತಿದೆ ಎಂದು ಹೇಳಿದರು.

ಕುಟುಂಬದಲ್ಲಿ ಹೆಚ್ಚಿರುವ ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಕೆಲಸಕ್ಕೆ ಸೇರಿಸದೆ ಶಿಕ್ಷಣದ ಅವಕಾಶ ಕೊಡಬೇಕು. ಹೋಟೆಲ್, ಕಾರ್ಖಾನೆ, ವರ್ಕ್‌ಶಾಪ್, ಹೊಲಗದ್ದೆ ಹಾಗೂ ಮನೆ ಕೆಲಸಗಳಿಗೆ ಮಕ್ಕಳ ಶ್ರಮ ನಿರೀಕ್ಷಿಸುವುದನ್ನು ನಿಲ್ಲಬೇಕು. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸಲಹೆ ನೀಡಿದರು.

ಕಾರ್ಮಿಕ  ಅಧಿಕಾರಿ  ಎ.ಎಚ್.ಉಮೇಶ್ ಮಾತನಾಡಿ, ‘ಅರಳುವ ಮಕ್ಕಳನ್ನು ದುಡಿಮೆಗೆ ತಳ್ಳಿದರೇ ಅವರ ವ್ಯಕ್ತಿತ್ವ ವಿಕಸನ ಆಗುವುದಿಲ್ಲ. ಬಾಲಕಾರ್ಮಿಕ ಪದ್ಧತಿಗೆ ಬಡತನವು ಬರುವುದಿಲ್ಲ. ಶಿಕ್ಷಣ ಇಲ್ಲದೆ ಅರಿವಿನ ಕೊರತೆಯಿಂದ ಇಂತಹ ನಿರ್ಧಾರ ಕೈಗೊಳ್ಳುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಸಾಮಾಜಿಕ ಪಿಡುಗು ತೊಡೆದು ಹಾಕಲು ಸಂದೇಶ ಕೊಡುವ ನಿಟ್ಟಿನಲ್ಲಿ ಇಂತಹ ಸಮಾರಂಭ ಆಯೋಜಿಸಲಾಗುತ್ತಿದೆ. ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಾಲಕಾರ್ಮಿಕ ಪದ್ಧತಿ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈ ಪದ್ಧತಿ ನಿರ್ಮೂಲನೆಯಾಗದೆ ಇನ್ನೂ ಜೀವಂತವಾಗಿದೆ. ಇದರಿಂದ ದೇಶದ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. 

ಜಿಲ್ಲಾಧಿಕಾರಿ ವಿ.ಚೈತ್ರಾ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕುರಿತು ಪ್ರತಿಜ್ಞಾ ವಿಧಿ  ಬೋಧಿಸಿದರು. ದಿನಾಚರಣೆಯ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ಆರ್.ಪುರುಷೋತ್ತಮ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಅಧಿಕಾರಿ ಎಚ್.ಎನ್.ರಮೇಶ್, ಪೌಲಸ್, ಶಂಕರ್, ವಿ.ಎಸ್.ಹೆಗಡೆ, ಸಿದ್ದರಾಜು ಇದ್ದರು.

* * 

ಸಮಾಜದಲ್ಲಿ ಸುಶಿಕ್ಷ್ಷಿತರು ಮತ್ತು ಶ್ರೀಮಂತರು ಮಕ್ಕಳಿಂದ ದುಡಿಸಿಕೊಳ್ಳುತ್ತಿದ್ದು ,ಇದು ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು

ವಿ.ಚೈತ್ರಾ

ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry