ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಅಧಿಕಾರ ಬಿಡಿ

7

ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಅಧಿಕಾರ ಬಿಡಿ

Published:
Updated:
ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಅಧಿಕಾರ ಬಿಡಿ

ಚಾಮರಾಜನಗರ: ‘ಸಿದ್ದರಾಮಯ್ಯ ಅವರೇ ನಿಮಗೆ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯವಾಗದಿದ್ದರೆ ಅಧಿಕಾರ ಬಿಟ್ಟು ತೊಲಗಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು. ತಾಲ್ಲೂಕಿನ ಅಮಚವಾಡಿ ಗ್ರಾಮದಲ್ಲಿ ಸೋಮವಾರ ರೈತರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಜವಾಬ್ದಾರಿ ಯಿಂದ ವರ್ತಿಸುತ್ತಿದ್ದಾರೆ. ಮೈಸೂರು ಹಾಗೂ ಚಾಮರಾಜ ನಗರ ಅವರದೇ ಜಿಲ್ಲೆಯಾಗಿದೆ. ಈ ಜಿಲ್ಲೆಗಳಿಗೆ ಒಮ್ಮೆಯಾ ದರೂ ಭೇಟಿ ನೀಡಿದರೆ ಅವರಿಗೆ ರೈತರ ಸಂಕಷ್ಟದ ಅರಿವಾಗುತ್ತದೆ ಎಂದರು.

ಮುಖ್ಯಮಂತ್ರಿಯಾದವನು ಆ ರಾಜ್ಯದ ಎಲ್ಲ ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಅದಕ್ಕಾಗಿಯೇ ಅವರನ್ನು ಆ ಕುರ್ಚಿಯ ಮೇಲೆ ಕೂರಿಸಿರುವುದು. ಆದರೆ, ಸಿದ್ದರಾಮಯ್ಯ ಅಥವಾ ಅವರ ಸಹೋದ್ಯೋಗಿಗಳಾಗಲಿ ವಾಸ್ತವ ಸ್ಥಿತಿಯನ್ನು ಅರಿಯದೇ ಜನರ ಸಂಕಷ್ಟದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಟೀಕಿಸಿದರು.

‘ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರ ಸರ್ಕಾರಗಳು ರೈತರ ಸಾಲಮನ್ನಾ ಮಾಡಿವೆ. ನಾನು ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಎರಡು ಬಾರಿ ಸಹಕಾರ ಸಂಘಗಳ ರೈತರ ಸಾಲ ಮನ್ನಾ ಮಾಡಿದ್ದೇನೆ. ನಾವು ಕೇಂದ್ರ ಸರ್ಕಾರವನ್ನು ಬೊಟ್ಟು ಮಾಡಿ ತೊರಿಸಲಿಲ್ಲ. ಆದರೆ, ಸಿದ್ದರಾಮಯ್ಯ ಅವರು ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಮೊಂಡುತನದ ವಿರುದ್ಧ ಜುಲೈ 10ರಂದು ಬೆಂಗಳೂರಿನಲ್ಲಿ 4 ಲಕ್ಷ ರೈತರೊಂದಿಗೆ ಪಕ್ಷಾತೀತ ವಾಗಿ ಹೋರಾಟ ನಡೆಸಲಾಗುವುದು. ಇದು ಬಿಜೆಪಿ ಹೋರಾಟವಲ್ಲ. ರೈತರ ಹೋರಾಟವಾಗಿರಲಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಂತೆ ಕಾಂಗ್ರೆಸ್‌ ಮುಕ್ತ ಭಾರತ ಮಾಡಲು ಎಲ್ಲರೂ ಶ್ರಮಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್‌ ಅಸ್ತಿತ್ವ ಕೊನೆಗಾಣಿಸಬೇಕು. ಈ ಪುಣ್ಯಾತ್ಮ ಅಧಿಕಾರ ಬಿಟ್ಟು ತೊಲಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ರೈತರ ಸಾಲ ಮನ್ನಾ ಮಾಡಲಾಗುವುದು. ರಾಜ್ಯದ ಎಲ್ಲ ಕೆರೆಗಳನ್ನು ಭರ್ತಿ ಮಾಡಲಾಗುವುದು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಗೊಳಿಸಲಾಗುವುದು. ರೈತರಿಗಾಗಿ ಆವರ್ತ ನಿಧಿ ಸ್ಥಾಪಿಸಿ ಬೆಳೆ ನಷ್ಟ ಸಂಭವಿಸಿದಾಗ ಪರಿಹಾರ ನೀಡಲಾಗುವುದು. ಕರ್ನಾಟಕವನ್ನು ಮಾದರಿ ರಾಜ್ಯ ಮಾಡುವ ಕನಸು ಹೊಂದಲಾಗಿದೆ ಎಂದು ತಿಳಿಸಿದರು.

ಬರ ಪರಿಶೀಲನೆಯೇ ಇಲ್ಲ: ಬರದಿಂದ ಒಣಗಿದ ತೆಂಗಿನ ತೋಟಗಳಿಗೆ ಮತ್ತು ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸು ವುದು ಯಡಿಯೂರಪ್ಪ ಅವರ ಪ್ರವಾಸದ ಭಾಗವಾಗಿತ್ತು. ಆದರೆ, ತಾಲ್ಲೂಕಿನ ಹರದನಹಳ್ಳಿ ಗ್ರಾಮದಿಂದ ಅಮಚ ವಾಡಿ ಗ್ರಾಮದವರೆಗೆ ತೆರಳಿದ ಅವರು, ಯಾವ ತೋಟಕ್ಕೂ ಹೋಗಲಿಲ್ಲ. ದಾರಿಯುದ್ದಕ್ಕೂ ಎಲ್ಲ ಪ್ರಮುಖ ದೇವಸ್ಥಾನ ಗಳಿಗೆ ಭೇಟಿ ನೀಡಿದರು. ಬಳಿಕ ಅಮಚವಾಡಿ ಕೆರೆಯನ್ನು ವೀಕ್ಷಿಸಿದರು.

ಕೊಂಗಳಶೆಟ್ಟರ ಮನೆಯಲ್ಲಿ ಭೋಜನ: ಯಡಿಯೂರಪ್ಪ ಅವರು ಅಮಚವಾಡಿ ಗ್ರಾಮದ ಉಪ್ಪಾರ ಜನಾಂಗದ ಕೊಂಗಳಶೆಟ್ಟರ ಮನೆಯಲ್ಲಿ ಮಧ್ಯಾಹ್ನ ರಾಗಿ ಮುದ್ದೆ, ಉಪ್ಪುಸಾರು, ರಾಗಿರೊಟ್ಟಿ, ಅಕ್ಕಿರೊಟ್ಟಿ, ಚಟ್ನಿ, ಹಪ್ಪಳ, ಪಲ್ಯ, ಚಿತ್ರಾನ್ನ ಸವಿದರು.

ಬೆಳಿಗ್ಗೆ ಜಿಲ್ಲಾ ಕೇಂದ್ರಕ್ಕೆ ಬಂದ ಯಡಿಯೂರಪ್ಪ ಅವರು ಸರ್ಕಾರಿ ಪಾಲಿಟೆಕ್ನಿಕ್ ಮುಂಭಾಗ ಗಿಡ ನೆಟ್ಟರು. ಬಳಿಕ ರಾಮಸಮುದ್ರದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ, ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ನಗರಸಭೆ ಸದಸ್ಯ ಮಹದೇವಯ್ಯ ಅವರ ಮನೆಯಲ್ಲಿ ಹಣ್ಣು ತಿಂದು, ಬಿಜೆಪಿ ಮುಖಂಡ ನಂಜುಂಡಸ್ವಾಮಿ ಅವರ ಮನೆಯಲ್ಲಿ ತಿಂಡಿ ಸೇವಿಸಿದರು.

ಬಿಜೆಪಿ ಮುಖಂಡರಾದ ಎಂ.ಶಿವಣ್ಣ, ಎ.ಎಸ್‌. ರಾಮದಾಸ್‌, ಎ.ಆರ್.ಕೃಷ್ಣಮೂರ್ತಿ, ಆರ್‌.ಬಾಲರಾಜು, ಸಿ.ಗುರುಸ್ವಾಮಿ, ಪರಿಮಳಾ ನಾಗಪ್ಪ, ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಕೆ.ಶಿವರಾಂ, ಸಿ.ಎಸ್‌. ನಿರಂಜನ ಕುಮಾರ್‌, ರವಿಕುಮಾರ್, ನಿಜಗುಣ ರಾಜು, ನಾಗಶ್ರೀ ಪ್ರತಾಪ್ ಹಾಜರಿದ್ದರು.

‘ರಾಘವೇಂದ್ರ ಅಭ್ಯರ್ಥಿ ಅಲ್ಲ’

ಚಾಮರಾಜನಗರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಬಿ.ವೈ. ರಾಘವೇಂದ್ರ ಅವರು ಜಿಲ್ಲೆಯಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಸತ್ಯಕ್ಕೆ ದೂರ ಎಂದು ಬಿ.ಎಸ್‌. ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಯ ಶಕ್ತಿ ಕುಂದಿಲ್ಲ. ದಿನೇ ದಿನೇ ವಾತಾವರಣ ಸುಧಾರಣೆ ಆಗುತ್ತಿದೆ. ನಿಶ್ಚಿತವಾಗಿ ಇಲ್ಲಿ ನಾಲ್ಕೂ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಕೇಂದ್ರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ದೈವ ಮತ್ತು ಜನ ಬಲವಿದ್ದರೆ ಯಾರೂ ಏನು ಮಾಡಲೂ ಆಗುವುದಿಲ್ಲ. ನನಗೆ ದೈವ ಮತ್ತು ಜನಬಲದ ಬಗ್ಗೆ ವಿಶ್ವಾಸವಿದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry